ಸತ್ಯ, ಅರಿವಿನ ಮೂಲಕ ಮಾತ್ರ ಸಾಧ್ಯವಾಗುವಂಥದು. ಇದು ಬುದ್ಧಿಯ ( mind) ಮೂಲಕ ಕಂಡುಕೊಳ್ಳುವ ಸಂಗತಿಯಂತೂ ಅಲ್ಲವೇ ಅಲ್ಲ. ಸತ್ಯ, ಥಿಂಕ್ ಮಾಡಬೇಕಾದ ಸಂಗತಿಯಲ್ಲ, ಬದಲಾಗಿ ಎಲ್ಲ ಥಿಂಕಿಂಗ್ ನಿಂತಾಗಲೇ ಸತ್ಯದ ಅನಾವರಣವಾಗುತ್ತದೆ. ಸತ್ಯವನ್ನು ಕಂಡುಕೊಳ್ಳಬೇಕಾದರೆ, ಸತ್ಯದ ಕುರಿತಾದ ಎಲ್ಲ ವಿಷಯಗಳನ್ನು ಮರೆತು ಬಿಡಬೇಕು ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಕಲಿತದ್ದನ್ನು ಬಸಿದು ಖಾಲಿ ಮಾಡಿದಾಗ
ಎದೆ ತಿಳಿಯಾಗುವುದು.
ಸುತ್ತ ಬದುಕಿಗೆ ಸಾಕ್ಷಿಯಾದಾಗ
ಪ್ರಕ್ಷುಬ್ದತೆ ಹೂವಾಗಿ, ಹಣ್ಣಾಗಿ, ಕಳಚಿಕೊಂಡು
ಬೇರಿಗೆ ಶರಣಾಗುವುದು.
ಜಗತ್ತಿನ ಪ್ರತಿ ಬದುಕು ಮೂಲಕ್ಕೆ ಮರಳುತ್ತದೆ
ಮರಳಿದಾಗಲೆ ಅರಳುವುದು ಸಾಧ್ಯ.
ಎಡವಿ ಬಿದ್ದಿದ್ದಾರೆ ಮರಳುವ ಹಾದಿ ಮರೆತವರು,
ನೆನಪಿದ್ದವರು ಮಾತ್ರ
ಸಹಜವಾಗಿ ಸಹಿಷ್ಣುಗಳು, ನಿರಾಸಕ್ತರು,
ಹಿರಿಯಜ್ಜಿಯಂತೆ ಅಂತಃಕರುಣಿಗಳು
ಮಹಾ ರಾಜರಂತೆ ಘನ ಗಂಭೀರರು.
ಅಪರೂಪದ ತಾವೋದಲ್ಲಿ ಮುಳುಗಿದವರು ಮಾತ್ರ
ಬದುಕಿನ ಯಾವ ಸವಾಲಿಗೂ ಸಿದ್ಧರು
ಎದುರಾದರೆ ಸಾವಿಗೂ.
~ ಲಾವೋತ್ಸೇ
ನಿಮ್ಮನ್ನು ನೀವು ಎಲ್ಲ ಥಿಯರಿಗಳ, ಸಿದ್ಧಾಂತಗಳ, ಫಿಲಾಸೊಫಿಗಳ ಭಾರದಿಂದ ಮುಕ್ತರಾಗಿಸಿಕೊಳ್ಳಬೇಕು. ಸತ್ಯವನ್ನು ಕಂಡುಕೊಳ್ಳುವ ವಿಧಾನವೆಂದರೆ, ಈಗಾಗಲೇ ಕಲಿತಿರುವುದನ್ನ ಅನ್ಲರ್ನ ಮಾಡುವ ವಿಧಾನ, ಎಲ್ಲ ಕಂಡಿಷನಿಂಗ್ ಗಳಿಂದ ಹೊರತಾಗುವ ವಿಧಾನ. ನಿಧಾನವಾಗಿ ಮೈಂಡ್ ನಿಂದ ಹೊರತಾಗಲು, ಶುದ್ಧ ಅರಿವು, ತುಂಬು ಪ್ರಜ್ಞೆಯಾಗುವ ದಾರಿಯಲ್ಲಿ ಪ್ರಯಾಣ ಮಾಡಬೇಕು. ಕೇವಲ ಶುದ್ಧ ಸಾಕ್ಷಿ ಪ್ರಜ್ಞೆ : ಮಾಡುವುದು, ಮಾಡದೇ ಇರುವುದು ಏನೂ ಇಲ್ಲ, ಸುಮ್ಮನೇ ಸಾಕ್ಷಿಯಾಗುವುದು, ಹೊರಗೆ ಮತ್ತು ಒಳಗೆ ನಡೆಯುತ್ತಿರುವ ಎಲ್ಲ ವಿದ್ಯಮಾನಗಳಿಗೆ ಸುಮ್ಮನೇ ಸಾಕ್ಷಿಯಾಗುವುದು.
ಯಾವ ಮಧ್ಯ ಪ್ರವೇಶ, ಯಾವ ಜಡ್ಜಮೆಂಟ್, ಯಾವ ಐಡಿಯಾಗಳ ಹಸ್ತಕ್ಷೇಪ ಇಲ್ಲದೇ ಸುಮ್ಮನೇ ಸಾಕ್ಷಿಯಾಗುವುದು ಸಾಧ್ಯವಾಗುವುದಾದರೆ ಅವರಿಗೆ ಸತ್ಯ ಅನಾವರಣವಾಗುತ್ತದೆ. ಪವಾಡ ಎಂದರೆ, ಈ ಸತ್ಯ ಎನ್ನುವುದು ಎಲ್ಲೋ ಹೊರಗಿನಿಂದ, ಎಲ್ಲೋ ಮೇಲಿನಿಂದ ಬಂದು ನಿಮಗೆ ಸಂಭವಿಸುವ ಸಂಗತಿಯಲ್ಲ; ಇದು ನಿಮ್ಮೊಳಗೇ ಇರುವಂಥದು, ಇದು ನಿಮ್ಮ ಅಂತರ್ಗತ ಸಹಜ ಪ್ರಕೃತಿಯೇ ಹೌದು, ಈಗ ಕೇವಲ ನಿಮ್ಮೆದುರು ಅನಾವರಣಗೊಳ್ಳುತ್ತಿದೆ ಅಷ್ಟೇ. ಸತ್ಯ ನಿಮ್ಮೊಳಗೆಯೇ ಇತ್ತು, ಮತ್ತು ಅದನ್ನು ನೀವು ಯಾವತ್ತು ಕಳೆದುಕೊಂಡಿರಲಿಲ್ಲ ಎನ್ನುವ ಅರಿವು ನಿಮಗೆ ಲಭ್ಯವಾಗುವುದು ಒಂದು ಮಹಾ ತಿಳುವಳಿಕೆ. ನೀವು ಯಾವತ್ತೂ ಸತ್ಯವೇ ಆಗಿದ್ದಿರಿ ಮತ್ತು ಸತ್ಯ ನಿಮ್ಮಿಂದ ಹೊರತಾಗುವುದು ಸಾಧ್ಯವೇ ಇಲ್ಲ ಏಕೆಂದರೆ ಇದು ನಿಮ್ಮ ಸಹಜ ಪ್ರಕೃತಿ ಮತ್ತು ಪ್ರಕೃತಿಯನ್ನು ಕಳೆದುಕೊಳ್ಳುವುದು ಸಾಧ್ಯವೇ ಇಲ್ಲ. ಪ್ರಕೃತಿಯ ವ್ಯಾಖ್ಯಾನವೇ ಅದು ಕಳೆದು ಹೋಗದಂಥದು ಎನ್ನುವುದು. ಸತ್ಯ ನಿಮ್ಮ ಪ್ರಕೃತಿ, ನಿಮ್ಮ ಇರುವಿಕೆ, ನಿಮ್ಮ ಅಸ್ತಿತ್ವ , ನಿಮ್ಮ ಕೇಂದ್ರ.
ದೇವಸ್ಥಾನದಲ್ಲಿ ಕಸಗುಡಿಸುತ್ತಿದ್ದ ಝೆನ್ ಮಾಸ್ಟರ್ ನನ್ನು ಸನ್ಯಾಸಿ ಪ್ರಶ್ನಿಸಿದ.
ಸನ್ಯಾಸಿ : ಮಾಸ್ಟರ್, ನಿಮ್ಮಂಥ ಮಹಾಜ್ಞಾನಿ ಕಸಗುಡಿಸುವಂಥ ತುಚ್ಛ ಕೆಲಸದಲ್ಲಿ ಸಮಯ ವ್ಯರ್ಥ ಮಾಡೋದು ಸರಿಯೇ?
ಮಾಸ್ಟರ್ : ಏನು ಮಾಡೋದು? ಹೊರಗಿಂದ ಕಸ ಬಂದಿತ್ತು ಅದಕ್ಕೇ ಸ್ವಚ್ಛ ಮಾಡುತ್ತಿದ್ದೆ.
ಸನ್ಯಾಸಿ : ಇದು ಅತ್ಯಂತ ಸ್ವಚ್ಛ ದೇವಾಲಯ, ಇಲ್ಲೆಲ್ಲಿದೆ ಕಸ ಮಾಸ್ಟರ್,
ಮಾಸ್ಟರ್ : ಆಹ್! ನೋಡು ಮತ್ತಷ್ಟು ಕಸ.

