ಮನುಷ್ಯ ಒಂದು ನಾಜೂಕು ಹೂವು. ಯಾವುದೇ ಕಲ್ಲು ಈ ಹೂವನ್ನು ಹೊಸಕಿ ಹಾಕಿ ಬಿಡಬಹುದು. ಯಾವ ಅಪಘಾತವಾದರೂ ಉಳಿದುಕೊಳ್ಳುವುದು ಮೂಳೆಗಳು ಮಾತ್ರ, ಒಮ್ಮೆ ಇದನ್ನು ನೀವು ಅರ್ಥಮಾಡಿಕೊಂಡರೆ…~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
ಹಿಂದೆ, ನನಗೊಬ್ಬ ಶಿಷ್ಯನಿದ್ದ.
ರಾತ್ರಿಯಾಯಿತೆಂದರೆ ಸಾಕು
ಭಯ ಮತ್ತು ಆತಂಕದಿಂದ ನಡುಗುತ್ತಿದ್ದ.
ಮರುದಿನ ಬೆಳಿಗ್ಗೆ ನೋಡಿದರೆ
ದೆವ್ವವೊಂದರಿಂದ ಮಾನಭಂಗಗೊಂಡವನಂತೆ
ಬಿಳಚಿಕೊಂಡಿರುತ್ತಿದ್ದ.
ನಂತರ ನನ್ನ ಮಮತೆಗೆ
ಅವನ ಮೇಲೆ ಕರುಣೆ ಬಂತು,
ನನ್ನ ದಿವ್ಯ ಖಡ್ಗದಿಂದ
ಅವನಿಗೊಂದು ಚೂರಿ ತಯಾರಿಸಲಾಯಿತು.
ಅಮೇಲಿಂದ ನನಗೆ
ಅವನ ಮೇಲೆ ಅಭಿಮಾನ ಹೆಚ್ಚಾಗಿದೆ
ಈಗ ಅವನು ನನ್ನ ಪಟ್ಟ ಶಿಷ್ಯ.
ಈಗ ಆತ ತನ್ನ ಭಯವನ್ನೆಲ್ಲ ಕಳೆದುಕೊಂಡುಬಿಟ್ಟಿದ್ದಾನೆ.
ಅಷ್ಟೇ ಅಲ್ಲ, ರಾತ್ರಿಯಾಯಿತೆಂದರೆ ತಾನೇ
ಹೊರಟುಬಿಡುತ್ತಾನೆ
ಸಮಸ್ಯೆಗಳನ್ನು ಹುಡುಕಿಕೊಂಡು.
- ಹಾಫಿಜ್
ಯಾವಾಗಲಾದರೂ ನಿಮಗೆ ಭಯವಾಗುತ್ತಿದೆಯಾದರೆ , ಏನು ಮಾಡುವುದು? ರಾತ್ರಿ ಅಂಧಕಾರಮಯ, ದಾರಿ ಅಪರಿಚಿತ, ದಾರಿ ಯನ್ನು ಬೆಳಗಿಸಲು ಯಾವ ದೀಪವೂ ಇಲ್ಲ, ನಿಮ್ಮನ್ನು ಗೈಡ್ ಮಾಡಲು ಯಾರೂ ಇಲ್ಲ, ಯಾವ ನಕಾಶೆಯೂ ಇಲ್ಲ, ಆದ್ದರಿಂದ ಏನು ಮಾಡುವುದು? ನಿಮಗೆ ಜೋರಾಗಿ ಅಳುವುದು ಇಷ್ಟವಾದರೆ ಹಾಗೆಯೇ ಮಾಡಿ, ಆದರೆ ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಪರಿಸ್ಥಿತಿಯನ್ನು ಒಪ್ಪಿಕೊಂಡು ಕತ್ತಲೆಯಲ್ಲಿ ತಡಕಾಡುವುದು ಒಳ್ಳೆಯದು. ಬದುಕಿರುವಾಗ ಸಂತೋಷದಿಂದಿರುವುದು ಒಳ್ಳೆಯದು. ಸುರಕ್ಷತೆ ಸಾಧ್ಯವಿಲ್ಲದಾಗ, ಸುರಕ್ಷತೆಗಾಗಿ ಹಾತೊರೆಯುವುದು ಸಮಯ ವ್ಯರ್ಥ ಮಾಡಿದಂತೆ. ಇದು ಅಸುರಕ್ಷತೆಯ ಬಗೆಗಿನ ವಿವೇಕ. ಒಮ್ಮೆ ಇದನ್ನು ಅರ್ಥ ಮಾಡಿಕೊಂಡು ನೀವು ಒಪ್ಪಿಕೊಂಡು ಬಿಟ್ಟಿರೆಂದರೆ , ನೀವು ಭಯದಿಂದ ಮುಕ್ತರಾಗಿಬಿಡುತ್ತೀರಿ.
ಸಾವು ತಮಗಾಗಿ ಕಾಯುತ್ತಿರುವ ಯುದ್ಧಕ್ಕೆ ಹೋಗುವಾಗ ಭಯಗ್ರಸ್ಥ ಸೈನಿಕರು ಈ ಪರಿಸ್ಥಿತಿಯನ್ನು ಅನುಭವಿಸುತ್ತಾರೆ. ಅವರು ಬಹುಶಃ ವಾಪಸ್ಸು ಬರಲಿಕ್ಕಿಲ್ಲ. ಅವರು ನಡಗುತ್ತಾರೆ, ಅವರಿಗೆ ನಿದ್ದೆ ಬರುವುದಿಲ್ಲ, ಅವರಿಗೆ ಕೆಟ್ಟ ಕನಸುಗಳು ಬೀಳುತ್ತವೆ. ಅವರಿಗೆ ಯಾರೋ ತಮ್ಮನ್ನು ಕೊಲೆ ಮಾಡಿದಂತೆ ಮತ್ತೆ ಮತ್ತೆ ಕನಸುಗಳು ಬೀಳುತ್ತವೆ. ಆದರೆ ಒಮ್ಮೆ ಯುದ್ಧ ಭೂಮಿಯನ್ನು ತಲುಪಿದಾಗ ಅವರ ಎಲ್ಲ ಭಯಗಳು ಮಾಯವಾಗುತ್ತವೆ. ಒಮ್ಮೆ ಅವರು ಸಾವನ್ನು ತಮ್ಮ ಕಣ್ಣಾರೆ ನೋಡಿದಾಗ, ಜನ ಸಾಯುವುದನ್ನು ನೋಡಿದಾಗ, ತಮ್ಮ ಸಹ ಸೈನಿಕರು ಸಾಯುವುದನ್ನು ನೋಡಿದಾಗ, ಬಾಂಬ್ ಗಳು ಬೀಳುವುದನ್ನು ನೋಡಿದಾಗ, ಬುಲೆಟ್ ಗಳು ತಮ್ಮ ಸುತ್ತ ಮುತ್ತ ಓಡಾಡುವುದನ್ನು ಕಂಡಾಗ, ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅವರ ಎಲ್ಲ ಭಯ ಮಾಯವಾಗುತ್ತದೆ. ಅವರು ವಾಸ್ತವವನ್ನು ಸ್ವೀಕಾರ ಮಾಡುತ್ತಾರೆ. ಅವರು ಬುಲೆಟ್ ಗಳ ಜೊತೆ, ಬಾಂಬ್ ಗಳ ಜೊತೆ ಹೊಂದಿಕೊಳ್ಳ ತೊಡಗುತ್ತಾರೆ. ಆಗ ಅವರು ಚಹಾ ಗುಟಕರಿಸುತ್ತ ಹಿಂದೆಂದೂ ಅನುಭವಿಸದ ಹಾಗೆ ಯುದ್ಧವನ್ನು ಆನಂದಿಸತೊಡಗುತ್ತಾರೆ, ಏಕೆಂದರೆ ಇದು ಅವರ ಕೊನೆಯ ಚಹಾದ ಕಪ್ ಆಗಿರಬಹುದು, ಅವರು ಜೋಕ್ ಮಾಡುತ್ತಾರೆ, ಹಾಡುತ್ತಾರೆ, ಕುಣಿಯುತ್ತಾರೆ, ನಗಾಡುತ್ತಾರೆ. ಅವರು ಬೇರೆ ಏನು ಮಾಡಬಹುದಿತ್ತು? ಸಾವು ಅವರ ಕಣ್ಣ ಮುಂದಿರುವಾಗ.
ಇದು ಅನಿಶ್ಚಿತತೆ, ಸ್ವೀಕಾರ ಮಾಡಿದಾಗ ಮಾಯವಾಗಿ ಬಿಡುತ್ತದೆ.
ಒಮ್ಮೆ, ಒಬ್ಬ ಹೆಣ್ಣುಮಗಳು ತನ್ನ ಮಗನೊಂದಿಗೆ ಮುಲ್ಲಾ ನಸ್ರುದ್ದೀನನ ಹತ್ತಿರ ಬಂದಳು.
“ ಹಿರಿಯರೇ, ಈ ನನ್ನ ಮಗ ತುಂಬಾ ಹಟಮಾರಿಯಾಗುತ್ತಿದ್ದಾನೆ, ಒರಟನಾಗುತ್ತಿದಿದ್ದಾನೆ ಏನಾದರೂ ಮಾಡಿ ಅವನೊಳಗೆ ಸ್ವಲ್ಪ ಹೆದರಿಕೆಯನ್ನು ಹುಟ್ಟಿಸಿ, ಇಲ್ಲವಾದರೆ ಅವನು ನನ್ನ ಕೈಮೀರಿ ಹೋಗುತ್ತಾನೆ “
ಮುಲ್ಲಾ ಕ್ರೂರವಾಗಿ ಆ ಮಗನ ಕಣ್ಣಲ್ಲೊಮ್ಮೆ ದಿಟ್ಟಿಸಿ ನೋಡಿ ಅಮ್ಮನ ಮಾತು ಕೇಳುವಂತೆ ಆದೇಶ ಮಾಡಿದ. ಆಮೇಲೆ ತನ್ನ ಮುಖವನ್ನು ಭಯಂಕರವಾಗಿ ಕಿವಿಚಿ, ಕಣ್ಣುಗುಡ್ಡೆಗಳನ್ನು ತಿರುಗಿಸುತ್ತ ಆ ಮಗನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ. ಅವನು ಎಷ್ಟು ಭೀಕರವಾಗಿ ಕಾಣಿಸುತ್ತಿದ್ದನೆಂದರೆ ತಾಯಿ ಹೆದರಿ ಮೂರ್ಛೆ ಹೋಗಿಬಿಟ್ಟಳು. ಮುಲ್ಲಾ ಕೋಣೆಯಿಂದ ಹೊರಗೆ ಓಡಿ ಹೋಗಿಬಿಟ್ಟ.
ತಾಯಿ ಮೂರ್ಛೆಯಿಂದ ಹೊರಗೆ ಬಂದ ಮೇಲೆ ನಸ್ರುದ್ದೀನ್ ನನ್ನು ತರಾಟೆಗೆ ತೆಗೆದುಕೊಂಡಳು, “ ನಿಮಗೆ ನನ್ನ ಮಗನಲ್ಲಿ ಹೆದರಿಕೆ ತುಂಬುವಂತೆ ಕೇಳಿಕೊಂಡಿದ್ದೆ ನನ್ನಲ್ಲಲ್ಲ “
ತಾಯಿಯ ಮಾತಿಗೆ ಮುಲ್ಲಾ ಉತ್ತರಿಸತೊಡಗಿದ “ ಅಮ್ಮಾ ಒಮ್ಮೆ ಭಯವನ್ನು ಹುಟ್ಟಿಸಿದ ಮೇಲೆ ಅದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಭಯಕ್ಕೆ ವಿಶೇಷ ಪ್ರೀತಿ ಪಾತ್ರರು ಯಾರೂ ಇಲ್ಲ. ನೀವು ನೋಡಲಿಲ್ಲ ಅನಿಸತ್ತೆ ನಾನೂ ಕೋಣೆ ಬಿಟ್ಟು ಓಡಿ ಹೊಗಿದ್ದೆ “

