ಪದಗಳು ಕೇವಲ ಪದಗಳಲ್ಲ, ಅವುಗಳಿಗೆ ತಮ್ಮದೇ ಆದ ಮೂಡ್ ಇದೆ, ಹವಾಮಾನವಿದೆ ~ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಬಹಳಷ್ಟು ಸಮಸ್ಯೆಗಳು
ಶುರುವಾಗೋದೇ
ಭಾಷಾ ಶಾಸ್ತ್ರದಲ್ಲಿನ ಗೊಂದಲಗಳಿಂದಾಗಿ
ಮತ್ತು ಕೆಲವು
ಸಾಮಾನ್ಯ ತಪ್ಪು ತಿಳುವಳಿಕೆಗಳಿಂದಾಗಿ.
ಶಬ್ದಗಳನ್ನು
ಕೇವಲ ಅರ್ಥದ ಮುಖ ನೋಡಿ ಬಳಸಬೇಡಿ.
ಪ್ರೇಮದ ಅಖಾಡಾದಲ್ಲಿ ಕಾಲಿಟ್ಟಾಗ
ನಾವು ಕಲಿತಿರುವ ಭಾಷೆ
ಕಳೆದುಕೊಳ್ಳುತ್ತದೆ ತನ್ನ ಅಸ್ತಿತ್ವವನ್ನು.
ಯಾವುದನ್ನ ಶಬ್ದಗಳ ಮೂಲಕ
ಹೇಳಲಾಗುವುದಿಲ್ಲವೋ
ಅವನ್ನೆಲ್ಲ ಅರ್ಥಮಾಡಿಕೊಳ್ಳಲಾಗುತ್ತದೆ
ಮೌನದ ಮೂಲಕ.
~ ಶಮ್ಸ್
ಯಾವುದಾದರೊಂದು ಪದ ನಿಮ್ಮೊಳಗೆ ನೆಲೆಯಾಯಿತೆಂದರೆ, ಅದು ನಿಮ್ಮ ಮೈಂಡ್ ಗೆ ವಿಭಿನ್ನ ಹವಾಮಾನವನ್ನು, ವಿಭಿನ್ನ ಅಪ್ರೋಚ್ ನ, ವಿಭಿನ್ನ ದೃಷ್ಟಿಕೋನವನ್ನ ನೀಡುತ್ತದೆ. ಅದೇ ಸಂಗತಿಯನ್ನು ಇನ್ನೊಂದು ಹೆಸರಿನಿಂದ ಕೂಗಿ : ನೋಡಿ ಹೇಗೆ ತಕ್ಷಣ ಎಲ್ಲವೂ ವಿಭಿನ್ನ.
ಕೆಲವು ಭಾವನಾತ್ಮಕ ಪದಗಳಾದರೆ, ಕೆಲವು ಬೌದ್ಧಿಕ ಪದಗಳು. ಹೆಚ್ಚು ಹೆಚ್ಚು ಬೌದ್ಧಿಕ ಪದಗಳನ್ನು ನಿರಾಕರಿಸಿ. ಹೆಚ್ಚು ಹೆಚ್ಚು ಭಾವನಾತ್ಮಕ ಪದಗಳನ್ನು ಬಳಸಿ. ಕೆಲವು ರಾಜಕೀಯ ಪದಗಳು ಕೆಲವು ಧಾರ್ಮಿಕ ಪದಗಳು. ರಾಜಕೀಯ ಪದಗಳನ್ನು ಬಿಟ್ಟುಬಿಡಿ. ತಕ್ಷಣ ಬಿಕ್ಕಟ್ಟನ್ನು ಸೃಷ್ಟಿಸುತ್ತವೆ ಕೆಲವು ಪದಗಳು. ಆ ಪದಗಳನ್ನು ಬಳಸಿದ ಕ್ಷಣದಲ್ಲಿಯೇ ವಾದ ವಿವಾದಗಳು ಶುರುವಾಗುತ್ತವೆ. ಹಾಗಾಗಿ ಯಾವತ್ತೂ ತಾರ್ಕಿಕ, ವಿವಾದಾತ್ಮಕ ಪದಗಳನ್ನು ಬಳಸಬೇಡಿ. ಪ್ರೇಮದ, ಕಾಳಜಿಯ, ಅಂತಃಕರಣದ ಪದಗಳನ್ನು ಬಳಸಿ, ಆಗ ಯಾವ ವಿವಾದಕ್ಕೂ ಆಸ್ಪದವಿರುವುದಿಲ್ಲ.
ಈ ವಿಧಾನದ ಬಗ್ಗೆ ಜಾಗೃತವಾಗಿದ್ದರೆ, ಪ್ರಚಂಡ ಬದಲಾವಣೆಯನ್ನು ನೀವು ಎದುರು ನೋಡುವಿರಿ. ಬದುಕಿನಲ್ಲಿ ಕೊಂಚ ಎಚ್ಚರವಾಗಿದ್ದರೆ ಸಾಕಷ್ಟು ಸಂಕಟಗಳನ್ನು ಅವೊಯಿಡ್ ಮಾಡಬಹುದು. ಅಪ್ರಜ್ಞೆಯಲ್ಲಿ ಆಡಿದ ಒಂದೇ ಒಂದು ಪದ ಸಂಕಟಗಳ ಸರಮಾಲೆಯನ್ನೇ ಹುಟ್ಟುಹಾಕುತ್ತದೆ. ಒಂದು ಸಣ್ಣ ಬದಲಾವಣೆ, ಕೇವಲ ಕೊಂಚ ಪದ ತಿರುವು ಮಾತ್ರ ಬಹಳಷ್ಟು ಬದಲಾವಣೆಗಳಿಗೆ ಕಾರಣವಾಗುತ್ತದೆ. ಪದಗಳನ್ನು ಬಹಳ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ, ಪೂರ್ಣ ಅಗತ್ಯ ಇದ್ದಾಗ ಮಾತ್ರ ಬಳಸಬೇಕು. ಕಲುಷಿತ ಪದಗಳನ್ನು ಬಳಸಬೇಡಿ. ತಾಜಾ ಆದ, ಅವಿವಾದಾತ್ಮಕ ಪದಗಳನ್ನ ಉಪಯೋಗಿಸಿ, ಇಲ್ಲಿ ವಿವಾದವಿಲ್ಲ, ಕೇವಲ ಅನುಭವಗಳು, ಭಾವನೆಗಳು.
ಇಬ್ಬರು ಝೆನ್ ಸನ್ಯಾಸಿಗಳು, ತಮ್ಮ ಮಾಸ್ಟರ್ ಹೇಳಿದ ಒಂದು ಮಾತಿನ ಬಗ್ಗೆ ವಾದ ಮಾಡುತ್ತಿದ್ದರು. ಒಬ್ಬ , ಮಾಸ್ಟರ್ ಮಾತು ಸರಿ ಎಂದೂ, ಇನ್ನೊಬ್ಬ ತಪ್ಪು ಎಂದು. ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ಇಬ್ಬರೂ ಮಾಸ್ಟರ್ ಹತ್ತಿರ ಬಂದು ತಮ್ಮ ವಾದಗಳಿಗೆ ಸಮರ್ಥನೆ ಕೊಟ್ಟರು.
ಮೊದಲ ಸನ್ಯಾಸಿ, ಮಾಸ್ಟರ್ ಮಾತು ಯಾಕೆ ಸರಿ ಅಂತ ವಾದ ಮಂಡಿಸಿದ. ಸ್ವಲ್ಪ ಹೊತ್ತು ಯೋಚಿಸಿದ ಮಾಸ್ಟರ್ “ ನೀನು ಹೇಳಿದ್ದು ಸರಿ “ ಎಂದು ಗೋಣು ಹಾಕಿದ.
ಆಮೇಲೆ ಎರಡನೇ ಸನ್ಯಾಸಿ, ವಾದ ಮಾಡಿದ. ಮಾಸ್ಟರ್ ಮಾತು ಯಾಕೆ ತಪ್ಪು ಎಂಬುದನ್ನ ವಿವರವಾಗಿ ಚರ್ಚಿಸಿದ. ಮಾಸ್ಟರ್ ಮತ್ತೆ ಯೋಚನೆ ಮಾಡಿ ಹೇಳಿದ, “ ನೀನು ಹೇಳೋದೂ ಸರಿ”
ಈ ವಾದ ವಿವಾದವನ್ನು ನೋಡುತ್ತಿದ್ದ ಕಿರಿಯ ಸನ್ಯಾಸಿ ಕುತೂಹಲದಿಂದ ಕೇಳಿದ, “ ಇದು ಹೇಗೆ ಮಾಸ್ಟರ್, ಇಬ್ಬರಿಗೂ ನೀವು ಸರಿ ಎಂದು ಹೇಳಿದಿರಿ? ಯಾರೋ ಒಬ್ಬರದು ತಪ್ಪು ಇರಲೇಬೇಕಲ್ವಾ? “
ಮಾಸ್ಟರ್ ಮತ್ತೆ ಧ್ಯಾನ ಮಗ್ನನಾಗಿ ಯೋಚಿಸಿ ಕಿರಿಯ ಸನ್ಯಾಸಿಗೆ ಉತ್ತರಿಸಿದ.
“ ಹೌದು, ನೀನು ಹೇಳೋದೂ ಸರಿನೇ “

