“ಇದು ಮಾತ್ರ” ಎನ್ನುವುದು ಧ್ಯಾನದ ತಿರುಳು. ಧ್ಯಾನ ಎನ್ನುವುದು “ಇದು ಮಾತ್ರ” ಎನ್ನುವುದರ ಬಗ್ಗೆ ಅರಿವು ಹೊಂದುವುದು-ಸಾಕ್ಷಿಯಾಗುವುದು, ಅದನ್ನು ಗಮನಿಸುವುದು, ಯಾವ ಖಂಡನೆ ಇಲ್ಲದೆ , ಯಾವ ಮೌಲ್ಯ ಮಾಪನವಿಲ್ಲದೆ, ಕೇವಲ ಕನ್ನಡಿಯಂತೆ ಇರುವ ಮೂಲಕ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮೈಂಡ್ ನ ನೆಲೆ ಇರುವುದು ಭೂತ ಕಾಲದಲ್ಲಿ ಮತ್ತು ಭೂತ ಕಾಲದ ಮೂಲಕ, ಅಥವಾ ಭವಿಷ್ಯದಲ್ಲಿ ಮತ್ತು ಭವಿಷ್ಯದ ಮೂಲಕ. ಮೈಂಡ್ ಗೆ ಸಧ್ಯದ ಕ್ಷಣ ಎನ್ನುವುದು ಗೋರಿ ಇದ್ದಂತೆ: ಮೈಂಡ್ ಗೆ this-ness ನಲ್ಲಿ ಇರುವುದು ಸಾಧ್ಯವಾಗುವುದಿಲ್ಲ. ಮತ್ತು no mind ಸ್ಥಿತಿಯಲ್ಲಿ ಇರುವುದೆಂದರೆ ಧ್ಯಾನದಲ್ಲಿ ನೆಲೆಯಾಗುವುದು.
ಇದು ಒಂದು ಮಹಾ ರಹಸ್ಯವಾಗಬಹುದು. ಇದು ದೈವಿಕ ಲೋಕದ ಬಾಗಿಲನ್ನು ತೆರೆಯುವ ಕೀಲಿ ಕೈ ಆಗಬಹುದು. ಯಾವಾಗ ಮೈಂಡ್ ನ ಮೂಲಕ ಏನಾದರೂ ಹಾಯ್ದು ಹೋಗುತ್ತಿದೆಯೆಂದರೆ, ನೆನಪಿರಲಿ : just this. ಅದು ಒಳ್ಳೆಯದು ಎಂದು ಹೇಳಬೇಡಿ, ಕೆಟ್ಟದ್ದು ಎಂದು ಹೇಳಬೇಡಿ ; ಅದನ್ನು ಹೋಲಿಕೆ ಮಾಡಲು ಹೋಗಬೇಡಿ. ಅದು ಇನ್ನೊಂದು ರೀತಿಯಲ್ಲಿ ಇರಬೇಕಿತ್ತು ಎಂದು ಬಯಸಬೇಡಿ. ಅದು ಏನೇ ಇದೆಯೋ, ಇದೆ, ಏನು ಇಲ್ಲವೋ, ಇಲ್ಲ.
ಈ ಒತ್ತಡದಲ್ಲಿ ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಸಂಕಟಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಜನ ಯಾವುದು ಬೇಡವೋ ಅದನ್ನು ಸಾಧಿಸಲು ಪ್ರಯತ್ನಿಸುತ್ತಾರೆ ಮತ್ತು ಯಾವುದು ಬೇಕೋ ಅದನ್ನು ಮರೆಯಲು.
ಉದಾಹರಣೆಗೆ, ಯಾವಾಗ ನೀವು ನಿಮ್ಮ ಆಳದಿಂದ ಅಳುತ್ತೀರೋ ಅದನ್ನು ಧ್ಯಾನವಾಗಿಸಿ. ನಿಮ್ಮ ಆಳದಲ್ಲಿ ಹೇಳಿಕೊಳ್ಳಿ just this. ಅದರ ಮೌಲ್ಯಮಾಪನ ಮಾಡಲು ಹೋಗಬೇಡಿ, ಅದು ಹಾಗಿರಬಾರದಿತ್ತು ಎಂದು ಯೋಚಿಸಲೂ ಹೋಗಬೇಡಿ. ಬೇರೆಯವರು ಏನೆನ್ನಬಹುದು ಎಂದು ಸೋಚಿಸಬೇಡಿ, let it be, ಸುಮ್ಮನೇ ದೂರದಿಂದ ಗಮನಿಸಿ ಸಮಾಧಾನವಾಗಿ. ಅಳುವುದು ಒಳ್ಳೆಯದೂ ಅಲ್ಲ ಕೆಟ್ಟದ್ದೂ ಅಲ್ಲ, ಹಾಗೆ ನೋಡಿದರೆ ಯಾವುದೂ ಒಳ್ಳೆಯದಲ್ಲ ಹಾಗೆಯೇ ಕೆಟ್ಟದ್ದೂ; ಅವು ಹೇಗಿರಬೇಕೋ ಸುಮ್ಮನೇ ಹಾಗಿವೆ ಅಷ್ಟೆ. ನಾವು ಜಡ್ಜ್ ಮಾಡದೇ ಹೋದಾಗ ನಿಧಾನವಾಗಿ ಮೈಂಡ್ ಮಾಯವಾಗುತ್ತ ಹೋಗುತ್ತದೆ. ಮತ್ತು ಮೈಂಡ್ ರಹಿತವಾಗಿ ವಾಸ್ತವಕ್ಕೆ ಸಾಕ್ಷಿಯಾಗುವುದೆಂದರೆ, ಸತ್ಯಕ್ಕೆ ಸಾಕ್ಷಿಯಾಗುವುದು.
ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.
ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.
ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.
ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.
ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.
“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.
“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ” ಮೊದಲ ಶಿಷ್ಯ ಕೇಳಿದ.
“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ ಉತ್ತರಿಸಿದ.
“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.

