ಅಸ್ತಿತ್ವದೊಂದಿಗೆ ಸಾಧ್ಯವಾದಷ್ಟು ಸಂಪರ್ಕಗಳನ್ನು ಸಾಧಿಸಲು ಶುರುಮಾಡಿ. ಮರದ ಪಕ್ಕ ಕುಳಿತಿರುವಾಗ, ಮರವನ್ನು ಅಪ್ಪಿಕೊಳ್ಳಿ ಮತ್ತು ನೀವು ಮರದೊಂದಿಗೆ ಒಂದಾಗುತ್ತಿರುವ ಅನುಭವವನ್ನ ಫೀಲ್ ಮಾಡಿ. ನೀವು ಈಜುವಾಗ, ಕಣ್ಣು ಮುಚ್ಚಿಕೊಂಡು ನೀವು ನೀರಿನಲ್ಲಿ ಕರಗಿ ಹೋಗುತ್ತಿರುವ ಅನುಭವವನ್ನ ಫೀಲ್ ಮಾಡಿ ; ಅಸ್ತಿತ್ವದೊಂದಿಗೆ ಒಂದಾಗುವಿಕೆ ನಿಮಗೆ ಸಾಧ್ಯವಾಗಲಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜಿಡ್ಡು ಕೃಷ್ಣಮೂರ್ತಿ
ಒಂದು ಸುಂದರ ವಿಷಯ ಹೇಳುತ್ತಾರೆ.
“ ಆಳ ಧ್ಯಾನದಲ್ಲಿ,
ಗಮನಿಸುವವ ಸ್ವತಃ ತಾನೇ ಗಮನಿಸಲ್ಪಡುವ ಸಂಗತಿಯಾಗುತ್ತಾನೆ”
ಇದು ಅಸಂಗತ ಅಲ್ಲ, ಹದಿನಾರಾಣೆ ಸತ್ಯ.
ಜಿಡ್ಡು ಏನು ಹೇಳುತ್ತಿದ್ದಾರೆ?
ಅಕಸ್ಮಾತ್, ನೀವು ಧ್ಯಾನದಲ್ಲಿ
ಹೂವನ್ನು ಗಮನಿಸುತ್ತಿದ್ದರೆ
ನೀವೂ ಹೂವಾಗುತ್ತೀರ ಎಂದೆ?
ಹಾಗಲ್ಲ. ಆದರೆ ಒಂದರ್ಥದಲ್ಲಿ ಹೌದು,
ಭೌತಿಕವಾಗಿ ನೀವು ಹೂವಾಗುವುದಿಲ್ಲ,
ನೋಡುವ ಬುದ್ಧಿ-ಮನಸ್ಸು ಇಲ್ಲದಾಗ
ನಿಮ್ಮ ಮತ್ತು ಹೂವಿನ ನಡುವಿನ ಗಡಿ ಮಾಯವಾಗುತ್ತದೆ,
ಚಿತ್ರ ಹಿನ್ನಲೆಯೊಂದಿಗೆ ಒಂದಾಗುತ್ತದೆ,
ಆಗ ನಿಮ್ಮೊಳಗೆ ಹೂವು ಮತ್ತು ಹೂವಿನೊಳಗೆ ನೀವು.
ನಿಜ ಜೀವನದಲ್ಲಿಯೂ
ಕೆಲ ಕ್ಷಣಗಳಮಟ್ಟಿಗಾದರೂ
ನಿಮಗೆ ಈ ಅನುಭವ ಸಾಧ್ಯವಾಗುವುದು.
ಯಾರನ್ನಾದರೂ ನೀವು ತೀವ್ರವಾಗಿ ಪ್ರೀತಿಸಿದಾಗ
ನಿಮ್ಮಿಬ್ಬರ ನಡುವಿನ ಗಡಿ ನಾಶವಾಗಿ,
ಅಂತರ ಇಲ್ಲವಾಗಿ,
ನೀವಿಬ್ಬರೂ ಒಂದಾಗಿ ಅಖಂಡವಾಗುವ ಭಾವ.
~ Hsin Hsin Ming
ನೀವು ಏನೇ ಮಾಡಿದರೂ ಅದರೊಂದಿಗೆ ರಿಲ್ಯಾಕ್ಸ್ ಆಗುವ ಮತ್ತು ಒಂದಾಗುವ ಎಲ್ಲ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಿ. ನೀವು ಹೆಚ್ಚು ಹೆಚ್ಚು ನಿಮ್ಮ ಎನರ್ಜಿಯನ್ನು ಬೇರೆ ಎನರ್ಜಿಯೊಂದಿಗೆ, ಅದು ಬೆಕ್ಕು, ನಾಯಿ, ಗಂಡು, ಹೆಣ್ಣು ಏನೇ ಆಗಿರಬಹುದು, ಒಂದಾಗಿಸಿದಷ್ಟು ನೀವು ಹೆಚ್ಚು ಹೆಚ್ಚು ನಿಮ್ಮ ಮೂಲ ನೆಲೆಗೆ ಹತ್ತಿರವಾಗುತ್ತೀರಿ. ಇದು ಆಹ್ಲಾದಕರ ಕೆಲಸ; ಅಷ್ಟೇ ಅಲ್ಲ ಇದು ಆನಂದದಾಯಕ ಕೆಲಸ.
ಒಮ್ಮೆ ನಿಮಗೆ ಈ ಅನುಭವಿಸುವಿಕೆ ಸಾಧ್ಯವಾದರೆ, ಒಮ್ಮೆ ನಿಮಗೆ ಇದರ ಚಾತುರ್ಯ ಗೊತ್ತಾದರೆ, ಎಷ್ಟು ಬದುಕನ್ನು ನೀವು ಮಿಸ್ ಮಾಡಿಕೊಂಡಿರೆನ್ನುವುದರ ಬಗ್ಗೆ ನಿಮಗೆ ಆಶ್ಚರ್ಯವಾಗುತ್ತದೆ. ನೀವು ದಾಟಿ ಹೋದ ಪ್ರತಿ ಮರ ನಿಮಗೆ ನಿಮಗೆ ಸುಖದ ಉತ್ಕರ್ಷವನ್ನು ಕೊಡಬಹುದಾಗಿತ್ತು, ಮತ್ತು ಪ್ರತಿ ಅನುಭವ – ಸೂರ್ಯೋದಯ, ಸೂರ್ಯಾಸ್ತ, ಚಂದ್ರ , ಆಗಸದಲ್ಲಿಯ ಮೋಡಗಳು, ನೆಲದ ಮೇಲಿನ ಹುಲ್ಲು ಹಾಸು ನಿಮಗೆ ಸುಖೋತ್ಕರ್ಷದ ಅನುಭವ ನೀಡಬಹುದಾಗಿತ್ತು. ನೆಲದ ಹುಲ್ಲು ಹಾಸಿನ ಮೇಲೆ ಒರಗಿಕೊಂಡು ಭೂಮಿಯ ಜೊತೆ ಒಂದಾಗುವ ಅನುಭವವನ್ನು ಫೀಲ್ ಮಾಡಿ, ನೆಲದೊಳಗೆ ಕರಗಿ ಹೋಗಿ, ಮಾಯವಾಗಿ; ಭೂಮಿ ನಿಮ್ಮನ್ನು ಪೆನಿಟ್ರೇಟ್ ಮಾಡಲಿ.
ಇದು ಧ್ಯಾನ : ಎಷ್ಟು ಸಾಧ್ಯವೋ ಅಷ್ಟು ವಿಧದಲ್ಲಿ ಒಂದಾಗುವಿಕೆಯನ್ನು ಸಾಧ್ಯಮಾಡಿಕೊಳ್ಳಿ. ದೇವರಿಗೆ ಹತ್ತು ಸಾವಿರ ಬಾಗಿಲುಗಳು, ಮತ್ತು ನೀವು ಯಾವ ಬಾಗಿಲ ಮೂಲಕ ಪ್ರವೇಶ ಮಾಡಿದರೂ ಅವನು ನಿಮಗೆ ಲಭ್ಯವಾಗುತ್ತಾನೆ. ಆದರೆ ಅವನು ನಿಮಗೆ ಲಭ್ಯವಾಗುವುದು ಒಂದಾಗುವಿಕೆಯ ಸ್ಥಿತಿಯಲ್ಲಿ ಮಾತ್ರ. ಆದ್ದರಿಂದಲೇ ಪ್ರೇಮಿಗಳು ಒಮ್ಮೊಮ್ಮೆ ತಮ್ಮ ಸುಖೋತ್ಕರ್ಷದ (orgasm) ಸ್ಥಿತಿಯಲ್ಲಿ ಧ್ಯಾನದ ಅನುಭವವನ್ನು ಹೊಂದುವುದು. ಅದು ಒಂದಾಗಿಸುವಿಕೆಯನ್ನು ಸಾಧ್ಯ ಮಾಡುವ ಒಂದು ವಿಧ, ಆದರೆ ಅದು ಲಕ್ಷಾಂತರ ವಿಧಗಳಲ್ಲಿ ಒಂದು ವಿಧ ಮಾತ್ರ. ನೀವು ಹುಡುಕುತ್ತ ಹೋದರೆ ಇಂಥ ಸಾಧ್ಯತೆಗಳಿಗೆ ಕೊನೆಯೇ ಇಲ್ಲ.

