ಬದುಕಿಗೆ Yes ಹೇಳಿ; ಸಾಧ್ಯವಾದಷ್ಟು No ಗಳನ್ನು ಅವಾಯ್ಡ್ ಮಾಡಿ. No ಹೇಳಲೇ ಬೇಕಾಗಿ ಬಂದಲ್ಲಿ, ಹೇಳಿ ಅಡಿಯಿಲ್ಲ ಆದರೆ ಹಾಗೆ ಹೇಳುವುದನ್ನು ಆನಂದಿಸಬೇಡಿ. ಮತ್ತು ಸಾಧ್ಯವಾದರೆ ಅದನ್ನು Yes ಹೇಳುವ ರೀತಿಯಲ್ಲಿಯೇ ಹೇಳಿ. ಬದುಕಿಗೆ Yes ಹೇಳುವ ಯಾವ ಅವಕಾಶಗಳನ್ನೂ ತಪ್ಪಿಸಿಕೊಳ್ಳಬೇಡಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆವರಿಸಿಕೊಳ್ಳುತ್ತಿರುವ
ಬದಲಾವಣೆಯ ಹೊಸ ಗಾಳಿಯನ್ನು
ತಡೆದು ನಿಲ್ಲಿಸಬಯಸುವ
ನಿಮ್ಮ ಉತ್ಸಾಹವನ್ನ
ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಬದಲಾಗಿ ಬದುಕಿಗೆ,
ನಿಮ್ಮ ಮೂಲಕ
ಬಾಳುವ ಅವಕಾಶ ಮಾಡಿಕೊಡಿ.
ಬದಲಾವಣೆ ಎಂದರೆ
ಚಿಮ್ಮಲಾಗಿರುವ ಬದುಕಿನ ನಾಣ್ಯ.
ನಿಮ್ಮ ಬದುಕು
ತಲೆಕೆಳಗಾಗಿ ಬಿಡಬಹುದೆಂದು
ಗಾಬರಿಯಾಗಬೇಡಿ.
ಯಾರಿಗೆ ಗೊತ್ತು,
ಈಗ ನಿಮ್ಮೆಡೆ ಮುಖ ಮಾಡಿರುವ
ಬದುಕಿನ ಭಾಗ
ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ
ಅದ್ಭುತವಾಗಿರಬಹುದು.
~ ಶಮ್ಸ್
ಯಾವಾಗ ನೀವು Yes ಹೇಳುತ್ತಿರೋ, ಅದನ್ನು ಅತ್ಯಂತ ಖುಶಿಯಿಂದ, ಸಂಭ್ರಮದಿಂದ ಹೇಳಿ. ಅದನ್ನು ಪೋಷಣೆ ಮಾಡಿ ; ಅದನ್ನು ಅನ್ಯಮನಸ್ಕತೆಯಿಂದ ಹೇಳಬೇಡಿ. ಅದನ್ನ ಪ್ರೀತಿಯಿಂದ ಹೇಳಿ, ಉತ್ಸಾಹದಿಂದ ಹೇಳಿ, ಅದರೊಳಗೆ ನಿಮ್ಮನ್ನ ಪೂರ್ತಿಯಾಗಿ ಸುರಿದುಕೊಳ್ಳಿ. ಯಾವಾಗ ನೀವು Yes ಹೇಳಬೇಕೋ ಆಗ ನೀವೂ Yes ಆಗಿರಿ!
ನಿಮಗೆ ಆಶ್ಚರ್ಯವಾಗಬಹುದು, ನೂರಕ್ಕೆ ತೊಂಭತ್ತೊಂಭತ್ತು No ಗಳನ್ನ ಬಹಳ ಸುಲಭವಾಗಿ ಡ್ರಾಪ್ ಮಾಡಬಹುದು. ನಾವು ಅದನ್ನು ಕೇವಲ ನಮ್ಮ ಅಹಂ ನ ಭಾಗವಾಗಿ ಹೇಳುತ್ತೇವೆ; ಅದು ಬೇಕಿರಲಿಲ್ಲ, ಅದು ಅನಿವಾರ್ಯ ಕೂಡ ಆಗಿರಲಿಲ್ಲ. ಒಂದು No ಯಾವುದು ಕೊನೆಗೂ ಉಳಿದುಕೊಳ್ಳುತ್ತದೆಯೋ, ಅದನ್ನು ಡ್ರಾಪ್ ಮಾಡಬೇಕಿಲ್ಲ. ಆದರೆ ಯಾವಾಗ No ಹೇಳುವುದು ತುಂಬ ಅವಶ್ಯಕವಾಗಿರುತ್ತದೆಯೋ ಆಗ ಕೂಡ ನೀವು ಅನ್ಯಮನಸ್ಕರಾಗಿರಬೇಕು, ತುಂಬ ಹಿಂಜರಿಯಬೇಕು. ಏಕೆಂದರೆ No ಎನ್ನುವುದು ಸಾವು, ಮತ್ತು Yes ಎನ್ನುವುದು ಬದುಕು.
ಒಂದು ಹಳ್ಳಿಯಲ್ಲಿ, ಮದುವೆಯಾಗದ ಒಬ್ಬ ಸುಂದರ ಯುವತಿ ಗರ್ಭಿಣಿಯಾದಳು. ಅವಳ ತಂದೆ ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಮಗುವಿನ ತಂದೆ ಯಾರೆಂದು ಕೇಳಿದಾಗ, ಗಲಿಬಿಲಿಗೊಳಗಾದ ಯುವತಿ ಗಾಬರಿಯಲ್ಲಿ, ಅದೇ ಊರಿನಲ್ಲಿ ವಾಸವಾಗಿದ್ದ ಝೆನ್ ಮಾಸ್ಟರ್ ಹಕುಯಿನ್ ನ ಹೆಸರು ಹೇಳಿಬಿಟ್ಟಳು.
ತಂದೆ ತಾಯಿ ಮಾಸ್ಟರ್ ಮನೆ ಬಾಗಲಿಗೆ ಬಂದು ಗಲಾಟೆ ಮಾಡತೊಡಗಿದರು. ವಿಷಯ ತಿಳಿದುಕೊಂಡ ಮಾಸ್ಟರ್ “ಹೌದಾ” ಎಂದು ಉತ್ತರಿಸಿ ಸುಮ್ಮನಾದ.
ಈ ಘಟನೆಯಿಂದ ಊರಲ್ಲಿ ಮಾಸ್ಟರ್ ನ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು. ಊರ ಜನರೆಲ್ಲ ಅವನನ್ನು ದೂಷಿಸತೊಡಗಿದರು.
ಕೆಲ ತಿಂಗಳುಗಳ ನಂತರ ಆ ಯುವತಿ ಹೆಣ್ಣು ಮಗುವನ್ನು ಹೆತ್ತಳು. ತಂದೆ ತಾಯಿ ಆ ಮಗುವನ್ನು ಎತ್ತಿಕೊಂಡು ಮಾಸ್ಟರ್ ಮನೆಗೆ ಬಂದರು. ಮಗುವನ್ನು ಅವನೇ ಸಾಕಬೇಕು ಎಂದು ಒತ್ತಾಯ ಮಾಡತೊಡಗಿದರು. ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡ.
ಎಷ್ಟೋ ತಿಂಗಳು ಮಾಸ್ಟರ್ ಮಗುವನ್ನು ಅಕ್ಕರೆಯಿಂದ ಬೆಳೆಸಿದ. ಆ ಯುವತಿ ಸುಳ್ಳು ಹೇಳಿದ ಪಾಪಪ್ರಜ್ಞೆ ಸಹಿಸಲಾಗದೇ, ತನ್ನ ತಂದೆ ತಾಯಿಯರಿಗೆ, ಅದೇ ಊರಿನ ಒಬ್ಬ ಯುವಕ ಇದಕ್ಕೆ ಕಾರಣ ಎಂದು ನಿಜ ಹೇಳಿದಳು.
ಕೂಡಲೇ ಯುವತಿಯ ತಂದೆ ತಾಯಿ, ಮಾಸ್ಟರ್ ಮನೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿ, ಅವನ ಕ್ಷಮೆ ಕೇಳಿ ಮಗುವನ್ನು ವಾಪಸ್ಸು ಕೊಡಬೇಕೆಂದು ಬೇಡಿಕೊಂಡರು.
ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ಅವರಿಗೆ ಒಪ್ಪಿಸಿದ.
******************************

