ಪ್ರಾಬಲ್ಯ ( Domination) : ಓಶೋ 365 #Day 208

ಪ್ರಾಬಲ್ಯದ ಐಡಿಯಾ ಹುಟ್ಟಿಕೊಳ್ಳುವುದು ಕೀಳರಿಮೆಯ ಕಾರಣವಾಗಿ ; ಜನ ಪ್ರಾಬಲ್ಯ ಸಾಧಿಸಲು ಹಾತೊರೆಯುವುದು ಭಯದ ಕಾರಣವಾಗಿ, ಏಕೆಂದರೆ ಅವರು ತಮ್ಮ ಬಗ್ಗೆಯೇ ಅನಿಶ್ಚಿತರಾಗಿದ್ದಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ತಾವೋ ಮಾರ್ಗದಲ್ಲಿ
ಹತೋಟಿಗೆ ಬಲಪ್ರಯೋಗ ,
ಗೆಲುವಿಗೆ ಆಯುಧ,  ನಿಷಿದ್ಧ.
ಸೈನಿಕರು ಓಡಾಡಿದಲ್ಲೆಲ್ಲ
ಬೆಳೆದು ನಿಂತಿವೆ ಮುಳ್ಳಿನ ಪೊದೆಗಳು.
ಹಿಂಸೆ ಅಂಟು ರೋಗ
ಉದ್ದೇಶ ಎಷ್ಟೇ ಒಳ್ಳೆಯದಾದರೂ.

ನಿಜದ ನಾಯಕ
ಯುದ್ಧದ ನಂತರ ನೆಲೆಗೊಳ್ಳುವ
ಶಾಂತಿಯ ಬುಡದಲ್ಲಿ ಜ್ವಾಲಾಮುಖಿ ಕಾಣಬಲ್ಲ.
ಅದಕ್ಕೇ ಅವನಿಗೆ ಯುದ್ಧದ ಬಗ್ಗೆ  ಹೆಮ್ಮೆಯಿಲ್ಲ.

ಅವನಿಗೆ ತನ್ನ ಬಗ್ಗೆ ನಂಬಿಕೆ
ಆದ್ದರಿಂದ ಬೇರೆಯವರ ಮನ ಒಲಿಸುವುದಿಲ್ಲ,

ಅವನಿಗೆ ತನ್ನ ಬಗ್ಗೆ  ಸಮಾಧಾನ
ಆದ್ದರಿಂದ ಬೇರೆಯವರ ಒಪ್ಪಿಗೆ ಬೇಕಿಲ್ಲ,

ಅವನು ತನ್ನನ್ನು ಒಪ್ಪಿಕೊಂಡಿರುವದರಿಂದ
ಜಗತ್ತು ಅವನನ್ನು ಒಪ್ಪಿಕೊಂಡಿದೆ.

~ ಲಾವೋತ್ಸೇ

ಪೂರ್ವ ದೇಶಗಳಲ್ಲಿ ಒಂದು ಕತೆ ಜನಜನಿತವಾಗಿದೆ. ಒಬ್ಬ ಕುರುಡು ಮನುಷ್ಯ ಮರದ ಕೆಳಗೆ ಕುಳಿತಿದ್ದ. ಆಗ ಅಲ್ಲಿಗೆ ರಾಜನೊಬ್ಬನ ಸವಾರಿಯ ಆಗಮನವಾಯಿತು. ರಾಜ ಬಂದು ಕುರುಡನ ಕಾಲು ಮುಟ್ಟಿ ನಮಸ್ಕಾರ ಮಾಡಿ ಪ್ರಶ್ನೆ ಮಾಡಿದ, “ ಹಿರಿಯರೇ ರಾಜಧಾನಿಗೆ ದಾರಿ ಯಾವುದು?”. ಕುರುಡ ಸುಮ್ಮನೇ ಕುಳಿತಿದ್ದ. ನಂತರ ರಾಜನ ಪ್ರಧಾನ ಮಂತ್ರಿ ಅಲ್ಲಿಗೆ ಬಂದು, ಕುರುಡನಿಗೆ ನಮಸ್ಕರಿಸದೇ, ಅವನ ಭುಜ ಹಿಡಿದು ಅಲ್ಲಾಡಿಸಿ ಪ್ರಶ್ನೆ ಮಾಡಿದ, “ ದೊಡ್ಡ ಮನುಷ್ಯ, ನಿನಗೆ ರಾಜಧಾನಿಯ ದಾರಿ ಗೊತ್ತಾ?” ಆಗಲೂ ಕುರುಡ ಉತ್ತರಿಸದಿದ್ದಾಗ ರಾಜನ ಸೇವಕ ಮುಂದೆ ಬಂದು ಕುರುಡನ ತಲೆಗೆ ಒಂದೇಟು ಹೊಡೆದು ಪ್ರಶ್ನೆ ಮಾಡಿದ, “ ಏಯ್ ಮುದುಕ, ರಾಜಧಾನಿಯ ದಾರಿ ಯಾವುದು?”  ಕುರುಡ ಆಗಲೂ ಉತ್ತರ ನೀಡಲಿಲ್ಲ.

ರಾಜನ ಸವಾರಿ ಅಲ್ಲಿಂದ ಹೊರಟು ಹೋದ ಮೇಲೆ, ಕುರುಡ ಜೋರು ಜೋರಾಗಿ ನಗುತ್ತಿರುವುದನ್ನ ಗಮನಿಸಿದ ಅಲ್ಲಿಯೇ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ, ಕುರುಡನನ್ನು ಕೇಳಿದ, “ ಯಾಕೆ ಏನಾಯಿತು? ಯಾಕೆ ನಗುತ್ತಿದ್ದೀಯ?”

ಆಗ ಕುರುಡು ಮನುಷ್ಯ ಮಾತನಾಡಿದ, “ನೋಡು ಮೊದಲು ನನ್ನ ಮಾತನಾಡಿಸಿದ ಮನುಷ್ಯ ರಾಜನಾಗಿರಬಹುದು, ಎರಡನೇಯವ ಅವನ ಮಂತ್ರಿ ಮತ್ತು ಮೂರನೇಯವ ರಾಜನ ಸೇವಕ”.

“ ನಿನಗೆ ಕಣ್ಣು ಕಾಣುವುದಿಲ್ಲವಲ್ಲ, ಹೇಗೆ ಗೊತ್ತಾಯ್ತು ಅವರು ಯಾರೆಂದು?” ಆ ವ್ಯಕ್ತಿ ಪ್ರಶ್ನೆ ಮಾಡಿದಾಗ, ಕುರುಡ ಮನುಷ್ಯ ಉತ್ತರಿಸಿದ, “ ಸುಮ್ಮನೇ ಅವರ ಮಾತು, ವರ್ತನೆ ಗಮನಿಸಿ ಅವರು ಯಾರೆಂದು ಊಹೆ ಮಾಡಿದೆ. ರಾಜನಿಗೆ ತನ್ನ ಸುಪೀರಿಯಾರಿಟಿಯ ಬಗ್ಗೆ ಖಚಿತತೆ ಇತ್ತು, ಆದ್ದರಿಂದ ಅವನಿಗೆ ನನ್ನನ್ನು ಡಾಮಿನೇಟ್ ಮಾಡುವ ಅವಶ್ಯಕತೆ ಇರಲಿಲ್ಲ. ಹಾಗಾಗಿ ಅವನು ನನ್ನ ಕಾಲು ಮುಟ್ಟಿ ಮಾತನಾಡಿದ. ಆದರೆ ಆ ಸೇವಕ ಎಷ್ಟು ಕೀಳರಿಮೆಯ ಮನುಷ್ಯನೆಂದರೆ ಅವನಿಗೆ ನನ್ನ ಹೊಡೆದು ತನ್ನ ಶ್ರೇಷ್ಠತೆಯನ್ನು ಸಾಬೀತು ಮಾಡಿಕೊಳ್ಳಬೇಕಿತ್ತು. ಹಾಗಾಗಿ ನನಗೆ ಗೊತ್ತಾಯಿತು ಅವ ರಾಜನ ಸೇವಕ ಇರಬಹುದೆಂದು”.

ಆದ್ದರಿಂದ ನೀವು ನಿಮ್ಮ ಬಗ್ಗೆ ಖಚಿತರಾಗಿರುವಾಗ ನಿಮಗೆ ಯಾರನ್ನೂ ಡಾಮಿನೇಟ್ ಮಾಡುವ ಅವಶ್ಯಕತೆಯಿಲ್ಲ”.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.