ನೀವು ಮಾಡುತ್ತಿರುವುದು ಮೂರ್ಖತನ ಎಂದು ನಿಮಗೆ ಅನಿಸಿದ ಕ್ಷಣಗಳು, ನಿಮಗೆ ಒದಗಿ ಬಂದಿರುವ ಅಪರೂಪದ ಜ್ಞಾನದ ಕ್ಷಣಗಳು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ಏನನ್ನಾದರೂ ಬಯಸುತ್ತಿರುವಿರಾದರೆ ಅದು ಮೂರ್ಖತನ, ಏಕೆಂದರೆ ಅದು ಈಗಾಗಲೇ ನಿಮ್ಮ ಬಳಿ ಇರುವಂಥದು. ಧ್ಯಾನಿಸುವುದು ಮೂರ್ಖತನ, ಏಕೆಂದರೆ ಧ್ಯಾನ ಎನ್ನುವುದು ಏನೂ ಮಾಡದಿರುವಂಥ ( non doing) ಸ್ಥಿತಿ. ಉತ್ತರಕ್ಕಾಗಿ ಹುಡುಕಾಡುವುದು ಮೂರ್ಖತನ, ಏಕೆಂದರೆ ಉತ್ತರ ಹೊರಗಿನಿಂದ ಬರುವಂಥದ್ದಲ್ಲ, ಅದು ನಿಮ್ಮ ಹೃದಯದೊಳಗೆಯೇ ಹುಟ್ಟಿಕೊಳ್ಳುವಂಥದು. ಅದು ಉತ್ತರದ ರೂಪದಲ್ಲಿ ಬರುವುದಿಲ್ಲ, ಅದು ಬರುವುದು ಬೆಳವಣಿಗೆಯ ರೂಪದಲ್ಲಿ. ಅದು ಅರಳುವ ಸ್ಥಿತಿ, ನಿಮ್ಮ ಅಸ್ತಿತ್ವ ಅರಳುವ ಸ್ಥಿತಿ. ನೀವು ಮಾಡುತ್ತಿರುವುದು ಮೂರ್ಖತನ ಎಂದು ನಿಮಗೆ ಅನಿಸಿದ ಕ್ಷಣಗಳು, ನಿಮಗೆ ಒದಗಿ ಬಂದಿರುವ ಅಪರೂಪದ ಜ್ಞಾನದ ಕ್ಷಣಗಳು.
ಮೂರ್ಖತನ ನಿಮಗೆ ಯಾವತ್ತೂ ಅನುಭವವಾಗುವ ಸಂಗತಿಯಲ್ಲ, ಇಲ್ಲದೇ ಹೋದರೆ ನಿಮಗೆ ಈಗಾಗಲೇ ಜ್ಞಾನೋದಯವಾಗಿಬಿಟ್ಟಿರುತ್ತಿತ್ತು! ಝೆನ್ ಸಂಪ್ರದಾಯದಲ್ಲಿ ಇಂಥ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತವೆ, ಆಯುಷ್ಯದ ಪ್ರತೀ ಕಾಲಮಾನದಲ್ಲಿ, ಪ್ರತೀ ಮಾಸ್ಟರ್ ನ ಜೊತೆ. ಯಾರೋ ಒಬ್ಬರು ಬಂದು ಮಾಸ್ಟರ್ ನ ಕೇಳುತ್ತಾರೆ ಬುದ್ಧ ಆಗುವುದು ಹೇಗೆಂದು. ಆಗ ಮಾಸ್ಟರ್ ಪ್ರಶ್ನೆ ಕೇಳಿದ ಆ ವ್ಯಕ್ತಿಯ ತಲೆಗೆ ಜೋರಾಗಿ ಹೊಡೆಯುತ್ತಾನೆ. ಏಕೆಂದರೆ ಈ ಪ್ರಶ್ನೆ ಮೂರ್ಖತನದ್ದು. ಕೆಲವೊಮ್ಮೆ ಆ ವ್ಯಕ್ತಿ ತನ್ನ ಸಾಧನೆಯ ಕೊನೆಯ ಹಂತದಲ್ಲಿದ್ದರೆ, ಮಾಸ್ಟರ್ ನ ಮೊದಲ ಹೊಡೆತಕ್ಕೆಯೇ ಅವನಿಗೆ ಜ್ಞಾನೋದಯವಾಗುತ್ತದೆ. ಆ ಒಂದು ಹೊಡೆತದಲ್ಲಿ ಅವನಿಗೆ ಬುದ್ಧ ಆಗುವುದು ಹೇಗೆ ಎನ್ನುವ ತನ್ನ ಪ್ರಶ್ನೆ ಮೂರ್ಖತನದ್ದು ಎನ್ನುವುದು ಗೊತ್ತಾಗುತ್ತದೆ, ಏಕೆಂದರೆ ಅವನು ಈಗಾಗಲೇ ಬುದ್ಧ !
ಮೇಲಿಂದ ಮೇಲೆ ಸಾಧಕನ ಬದುಕಿನಲ್ಲಿ ಇಂಥ ಘಟನೆಗಳು ನಡೆಯುತ್ತವೆ. ನೀವು ಧ್ಯಾನ ಮಾಡುವಾಗ, ಥಟ್ಟನೇ ಬೆಳಕಿನ ಕಿರಣವೊಂದು ಕಾಣಿಸಿಕೊಳ್ಳುವುದು ಮೂರ್ಖತನ ಎನ್ನುವುದು ನಿಮ್ಮ ಅರಿವಿಗೆ ಬರುತ್ತದೆ. ಆದರೆ ಇಂಥವು ಅಪರೂಪದ ಜ್ಞಾನದ ಕ್ಷಣಗಳು. ಜ್ಞಾನಿ ಮನುಷ್ಯನಿಗೆ ಮಾತ್ರ ಮೂರ್ಖತನದ ಅನುಭವವಾಗುತ್ತದೆ. ಮೂರ್ಖರಿಗೆ ಯಾವತ್ತೂ ಮೂರ್ಖತನದ ಅನುಭವವಾಗುವುದಿಲ್ಲ; ಏಕೆಂದರೆ ಅವರು ಸದಾ ತಮ್ಮನ್ನು ಜ್ಞಾನಿಗಳೆಂದುಕೊಂಡಿರುತ್ತಾರೆ. ಮೂರ್ಖ ಮನುಷ್ಯನ ಡೆಫನೀಷನ್ ಇದು : ಅವನು ತನ್ನನ್ನು ತಾನು ಯಾವಾಗಲೂ ಜ್ಞಾನಿಯೆಂದುಕೊಂಡಿರುತ್ತಾನೆ. ಮತ್ತು ಜ್ಞಾನಿ ಮನುಷ್ಯ ಯಾರೆಂದರೆ, ಅವನು ಎಲ್ಲವೂ ಮೂರ್ಖತನ ಎನ್ನುವುದು ಗೊತ್ತಿರುವವನು.
ಝೆನ್ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಇಬ್ಬರು ಸನ್ಯಾಸಿಗಳು ತಮ್ಮ ಮುಂದಿನ ಸಾಧನೆಗಾಗಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಬೇರೆ ಬೇರೆ ದಿಕ್ಕುಗಳಲ್ಲಿ ಪ್ರಯಾಣ ಬೆಳೆಸಿದರು.
ಹಿರಿಯ ಸನ್ಯಾಸಿ, ತಂತ್ರ ಸಾಧನೆಯಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡು ವಿಶೇಷ ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಂಡ.
ಕಿರಿಯ ಸನ್ಯಾಸಿ ಸಹಜ ಕೃಷಿಯಲ್ಲಿ ತೊಡಗಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ.
ಇಬ್ಬರೂ ಸನ್ಯಾಸಿಗಳು ಹಳೆಯ ಆಶ್ರಮಕ್ಕೆ ಹೋಗಿ ಗುರುಗಳನ್ನು ಭೇಟಿಯಾಗಿ ತಮ್ಮ ತಮ್ಮ ಸಾಧನೆಗಳ ಬಗ್ಗೆ ಗುರುಗಳಿಗೆ ತಿಳಿಸಬೇಕೆಂದು ನಿಶ್ಚಯಿಸಿದರು.
ಆಶ್ರಮ ಮಾರ್ಗವಾಗಿ ಹೋಗುತ್ತಿದ್ದಾಗ, ಸನ್ಯಾಸಿಗಳಿಗೆ ಒಂದು ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ನದಿ ದಾಟುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ದೋಣಿಯೊಂದು ದಂಡೆಗೆ ಬಂತು.
ಹಿರಿಯ ಸನ್ಯಾಸಿ ತನ್ನ ತಂತ್ರ ಶಕ್ತಿಯನ್ನು ಬಳಸಿ, ನಾವಿಕನಿಗೆ ಮಂಕು ಕವಿಸಿ ದೋಣಿ ಎತ್ತಿಕೊಂಡು ಕ್ಷಣಾರ್ಧದಲ್ಲಿ ಆಚೆ ದಡ ಸೇರಿದ.
ಕಿರಿಯ ಸನ್ಯಾಸಿ, ಕೊಂಚ ಹೊತ್ತು ಕಾಯ್ದು, ಇನ್ನೊಂದು ದೋಣಿಯಲ್ಲಿ ಆಚೆ ದಡ ಸೇರಿದ. ದಡ ಸೇರಿದ ಮೇಲೆ ನಾವಿಕನಿಗೆ ಒಂದು ರೂಪಾಯಿ ಬಾಡಿಗೆ ಕೊಟ್ಟ.
ಸನ್ಯಾಸಿಗಳು ಮಾತನಾಡಿಕೊಳ್ಳುತ್ತ ತಮ್ಮ ಮುಂದಿನ ದಾರಿ ಕ್ರಮಿಸತೊಡಗಿದರು.
ಹಿರಿಯ ಸನ್ಯಾಸಿ : ನೀನು ಸಮಯವನ್ನೆಲ್ಲ ಹಾಳು ಮಾಡಿಕೊಂಡುಬಿಟ್ಟೆ. ನಿನ್ನ ಕಂಡರೆ ನನಗೆ ಅನುಕಂಪ. ನಾನು ನೋಡು ತಂತ್ರ ಸಾಧನೆ ಮಾಡಿ ಎಷ್ಟು ಅತೀಂದ್ರಿಯ ಶಕ್ತಿಗಳನ್ನು ಗಳಿಸಿದ್ದೇನೆ.
ಕಿರಿಯ ಸನ್ಯಾಸಿ : ಅಯ್ಯೋ ! ನಾನು ನೋಡಲಿಲ್ವಾ, ಒಂದು ರೂಪಾಯಿ ಬೆಲೆ ಬಾಳುವ ತಂತ್ರ ಶಕ್ತಿಗಳಿಗಾಗಿ ನೀನು ಇಷ್ಟು ಸಮಯ ವ್ಯರ್ಥ ಮಾಡಿದ್ದೀಯಲ್ಲಾ ನನಗೆ ಆಶ್ಚರ್ಯವಾಗುತ್ತಿದೆ.

