ಮಕ್ಕಳನ್ನು ಒಂದು ಪವಾಡದಂತೆ ಗಮನಿಸಿರಿ. ಮಕ್ಕಳನ್ನು ಗೌರವದಿಂದ, ಭಯ ಭಕ್ತಿಗಳಿಂದ ಕಾಣಿರಿ; ಅವರನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳ ಬೇಡಿ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮ ಮಕ್ಕಳು ನಿಮ್ಮವರಲ್ಲ.
ತನ್ನ ಬಗ್ಗೆ ಸದಾ ಚಡಪಡಿಸುವ
ಬದುಕಿನ ತುಡಿತಕ್ಕೆ ಹುಟ್ಟಿದವರು ಇವರು.
ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು
ನಿಮ್ಮಿಂದಾಗಿ ಅಲ್ಲ.
ನಿಮ್ಮ ಜೊತೆ ಇರಬಹುದು
ಆದರೆ ನಿಮ್ಮ ಆಸ್ತಿಯಾಗುವುದು ಸಾಧ್ಯವಿಲ್ಲ.
ನೀವು ಪ್ರೀತಿ ವಿಶ್ವಾಸಗಳನ್ನು ತೋರಬಹುದು
ಆದರೆ ದಾರಿಯನ್ನಲ್ಲ.
ಅವರು ಕಂಡುಕೊಂಡ ದಾರಿಗಳಲ್ಲಿ
ನಿಶ್ಚಯವಾಗಿದೆ ಅವರ ಪ್ರಯಾಣ.
ಅವರ ದಾರಿಯಲ್ಲಿ ನೀವು
ನಡೆದು ನೋಡಬಹುದು,
ಆದರೆ ಅವರನ್ನು ನಿಮ್ಮ ದಾರಿಗೆ ನೂಕದಿರಿ.
ಬದುಕಿಗೆ ಹಿಂದೆ ನಡೆದು ಗೊತ್ತಿಲ್ಲ
ನಿನ್ನೆಯ ಜೊತೆ ವ್ಯವಹಾರ ಮಾಡಿ ಗೊತ್ತಿಲ್ಲ.
ನೀವು ಬಿಲ್ಲಾದರೆ, ಮಕ್ಕಳು
ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು.
~ ಖಲೀಲ್ ಜಿಬ್ರಾನ್
ಪ್ರತಿ ಮಗುವೂ ಆಕಾಶ ಮತ್ತು ಭೂಮಿ ಒಂದುಗೂಡುವ ಜಾಗೆಯಂತೆ. ಪ್ರತಿಯೊಂದು ಮಗುವೂ ಪವಾಡ. ಸಾಧಾರಣವಾಗಿ ಸಂಭವಿಸದಂಥ ಸಂಗತಿಯೊಂದು ಇಲ್ಲಿ ಸಂಭವಿಸುತ್ತಿದೆ : ಪ್ರಜ್ಞೆ (consciousness) ಮತ್ತು ಭೌತಿಕತೆ ( matter) ಒಂದುಗೂಡುತ್ತಿವೆ, ಗೋಚರ ಮತ್ತು ಅಗೋಚರಗಳು ಒಂದುಗೂಡುತ್ತಿವೆ. ಆದ್ದರಿಂದ ಮಗುವನ್ನು ಒಂದು ಪವಾಡವೆಂಬಂತೆ ಸ್ವೀಕರಿಸಿ. ಮಕ್ಕಳನ್ನು ಗೌರವದಿಂದ, ಭಯ ಭಕ್ತಿಗಳಿಂದ ಕಾಣಿರಿ; ಅವರನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳ ಬೇಡಿ.
ಮಗುವನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡ ಗಳಿಗೆಯಿಂದಲೇ ನಾವು ಮಗುವಿನ ಕೊಲೆಯನ್ನು ಶುರು ಮಾಡುತ್ತೇವೆ. ಮತ್ತು ಪ್ರತೀ ಮಗುವೂ ಕೊಲ್ಲಲ್ಪಡುತ್ತದೆ; ಜಗತ್ತಿನ ತುಂಬ ಇದೇ ಆಗುತ್ತಿದೆ ಮತ್ತು ಎಷ್ಟೋ ವರ್ಷಗಳಿಂದ ಆಗುತ್ತಿದೆ : ಇದು ಒಂದು ಮಹಾ ಹತ್ಯಾಕಾಂಡ. ಇಸ್ರೇಲಿನ Herod ಮಾತ್ರ ಮಕ್ಕಳ ಮಾರಣ ಹೋಮ ಮಾಡಲಿಲ್ಲ , ಇದು ನಮ್ಮ ಸುತ್ತಲೂ ಪ್ರತಿ ದಿನ ನಡೆಯುತ್ತಿದೆ. ಇದು Herod ನಿಗಿಂತ ಮುಂಚೆಯೂ ನಡೆದಿತ್ತು ಮತ್ತು Herod ನ ನಂತರವೂ ನಡೆಯುತ್ತಿದೆ.
ಪ್ರತಿ ಮಗುವೂ ಮಾನಸಿಕ ಕೊಲೆಯನ್ನು ಅನುಭವಿಸುತ್ತದೆ; ಮಗುವನ್ನು ಗೌರವಿಸದೇ ಇರುವಾಗ ಮತ್ತು ಅದನ್ನು ತಮ್ಮ ಆಸ್ತಿ ಎಂದು ಪರಿಗಣಿಸುವಾಗ, ಮಗುವನ್ನು ಕೊಲ್ಲಲಾಗಿದೆ, ಮತ್ತು ಅದರ ಅಸ್ತಿತ್ವವನ್ನು ನಿರಾಕರಿಸಲಾಗಿದೆ. ಪ್ರತಿ ಮಗುವು, ದೇವರು ತಾನು ಇನ್ನೂ ಪರೀಕ್ಷಿಸದ ಅವನ ಹೇಳಿಕೆ, ಆದ್ದರಿಂದ ಮಗುವನ್ನು ದೇವರ ಆದೇಶವೆಂಬಂತೆ ಗೌರವಿಸಬೇಕು. ಅದನ್ನು ನಾವು ಸಂತನಾಗಿಸ ಬಹುದು ಅಥವಾ ಪಾಪಿಯಾಗಿಸಬಹುದು ಆದರೆ ದೇವರಿಗೆ ತಾನು ನಿಜದ ಮನುಷ್ಯನನ್ನು ಸೃಷ್ಟಿಸುತ್ತಿರುವುದರ ಕುರಿತು ಭರವಸೆಯಿದೆ. ಮತ್ತು ಇನ್ನೂ ತನಕ ದೇವರು ವಿಫಲನಾಗಿಲ್ಲ! ಮತ್ತು ಇದು, ಮಗು ಈ ಅಸ್ತಿತ್ವವನ್ನು ಪ್ರವೇಶಿಸುತ್ತಿರುವುದರ ಕುರಿತಾದ ಘೋಷಣೆ.

