ಯಾವಾಗ ನೀವು ನಿಮ್ಮ ಬಗ್ಗೆ ಜವಾಬ್ದಾರಿಯನ್ನು ಬೆಳೆಸಿಕೊಳ್ಳತೊಡಗುತ್ತೀರೋ ಆಗ ನೀವು ನಿಮ್ಮ ಸುಳ್ಳು ಮುಖವಾಡಗಳನ್ನು ಕಳಚಿಕೊಳ್ಳಲು ಶುರು ಮಾಡುತ್ತೀರಿ. ಆಗ ಇತರರು ಡಿಸ್ಟರ್ಬ ಆಗಲು ಶುರು ಮಾಡುತ್ತಾರೆ ಏಕೆಂದರೆ ಅವರಿಗೆ ನಿಮ್ಮ ಬಗ್ಗೆ ಇದ್ದ ನಿರೀಕ್ಷೆಗಳನ್ನು ನೀವು ಯಾವಾಗಲೂ ಪೂರ್ಣ ಮಾಡುತ್ತಿದ್ದಿರಿ. ಈಗ ಅವರಿಗೆ ನೀವು ಬೇಜವಾಬ್ದಾರರಾಗಿದ್ದೀರಿ ಎಂದು ಅನಿಸತೊಡಗಿದೆ~ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ದಾರಿ ಎಲ್ಲಿಗೆ ಕರದೊಯ್ಯಬಹುದು
ಎನ್ನುವ ಆತಂಕದಿಂದ ದೂರವಿರಿ.
ಬದಲಾಗಿ ನೀವು ಇಡಲು ಮುಂದಾಗುತ್ತಿರುವ
ಮೂದಲ ಹೆಜ್ಜೆಯ ಮೇಲೆ ಮಾತ್ರ
ಧ್ಯಾನವನ್ನು ಕೇಂದ್ರೀಕರಿಸಿ.
ಬದುಕಿನ ಪ್ರಯಾಣದಲ್ಲಿ
ಮೊದಲ ಹೆಜ್ಜೆ ಮಾತ್ರ ಅತ್ಯಂತ ಕಠಿಣ ಭಾಗ
ಅದನ್ನು ಸರಿಯಾಗಿ ನಿಭಾಯಿಸುವುದೊಂದೆ
ನಿಮ್ಮ ಮುಂದಿರುವ ಜವಾಬ್ದಾರಿ.
ಈ ಹೆಜ್ಜೆ ಇಟ್ಟಾದ ಮೇಲೆ
ಎಲ್ಲವನ್ನೂ
ಪ್ರಯಾಣದ ಸಹಜತೆಗೆ ಬಿಟ್ಟು ಬಿಡಿ
ಬಾಕಿ ಎಲ್ಲ ನಿಮ್ಮನ್ನು ಹಿಂಬಾಲಿಸುತ್ತದೆ.
ಹರಿವಿನ ಜೊತೆ ಹರಿಯಬೇಡಿ
ನೀವೇ ಹರಿವಾಗಿ.
~ ಶಮ್ಸ್
ನೀವು ಬೇಜವಾಬ್ದಾರರಾಗುತ್ತಿದ್ದೀರಿ ಎನ್ನುವ ಅವರ ಮಾತಿನ ಅರ್ಥವೆಂದರೆ, ನೀವು ಅವರ ಪ್ರಾಬಲ್ಯದಿಂದ ಹೊರಗುಳಿಯುತ್ತಿದ್ದೀರಿ ಎಂದು. ನೀವು ಹೆಚ್ಚು ಸ್ವತಂತ್ರರಾಗುತ್ತಿದ್ದೀರಿ. ನಿಮ್ಮನ್ನು ಖಂಡಿಸುವ ಸಲುವಾಗಿಯೇ ಅವರು ನಿಮ್ಮನ್ನು ಬೇಜವಾಬ್ದಾರ ಎಂದು ದೂರುತ್ತಿದ್ದಾರೆ.
ಬದಲಾಗಿ ನೀವು ಹೆಚ್ಚು ಸ್ವತಂತ್ರರಾಗುತ್ತಿದ್ದೀರಿ. ಹೆಚ್ಚು ಜವಾಬ್ದಾರರಾಗುತ್ತಿದ್ದೀರಿ, ಆದರೆ ಜವಾಬ್ದಾರಿ ಎಂದರೆ ಪ್ರತಿಕ್ರಿಯಿಸುವ ಸಾಮರ್ಥ್ಯ. ಸಾಧಾರಣ ರೀತಿಯಲ್ಲಿ ನಾವು ಅರ್ಥೈಸಿಕೊಳ್ಳುವಂತೆ ಅದು, ಯಾವುದೋ ಒಂದು ಕರ್ತವ್ಯವವನ್ನು ಪೂರೈಸುವುದು ಮಾತ್ರವಲ್ಲ. ಅದು ಪ್ರತಿಕ್ರಿಯೆ ನೀಡುವ ಸಾಮರ್ಥ್ಯ, ಸಂವೇದನಾಶೀಲರಾಗುವ ಸಾಮರ್ಥ್ಯ.
ಆದರೆ ನೀವು ಹೆಚ್ಚು ಸಂವೇದನಾಶೀಲರಾದಂತೆಲ್ಲ, ಹೆಚ್ಚು ಹೆಚ್ಚು ಜನ ನಿಮ್ಮನ್ನು ಬೇಜವಾಬ್ದಾರರು ಎಂದು ತಿಳಿದುಕೊಳ್ಳಲು ಶುರು ಮಾಡುತ್ತಾರೆ, ಇದನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ ಏಕೆಂದರೆ ಅವರ ಹೊಡಿಕೆಗಳು ( investments) ಮತ್ತು ಆಸಕ್ತಿಗಳು ಈಗ ಪೂರ್ಣಗೊಳ್ಳುತ್ತಿಲ್ಲ. ಬಹಳಷ್ಟುಬಾರಿ ನಿಮಗೆ ಅವರ ಬೇಡಿಕೆಗಳನ್ನು ಪೂರ್ತಿಗೊಳಿಸುವುದು ಸಾಧ್ಯವಾಗುವುದಿಲ್ಲ, ಆದರೆ ಯಾರಿಗೂ ಇನ್ನೊಬ್ಬರ ನಿರೀಕ್ಷೆಗಳನ್ನು ಪೂರ್ತಿ ಮಾಡುವ ಅವಶ್ಯಕತೆ ಇಲ್ಲ.
ನಿಮ್ಮ ಮೂಲ ಜವಾಬ್ದಾರಿ ನಿಮ್ಮ ಕುರಿತಾದದ್ದೇ ಆಗಿದೆ. ಆದ್ದರಿಂದಲೇ ಧ್ಯಾನಿ ಮೊದಲು ಹೆಚ್ಚು ಹೆಚ್ಚು ಸ್ವಾರ್ಥಿಯಾಗಿರುತ್ತಾನೆ. ಆದರೆ ನಂತರ ಯಾವಾಗ ಅವನು ತನ್ನ ಕೇಂದ್ರವನ್ನು ಕಂಡುಕೊಳ್ಳುತ್ತಾನೋ, ತನ್ನ ಅಸ್ತಿತ್ವದ ಬೇರುಗಳನ್ನು ಕಂಡುಕೊಳ್ಳುತ್ತಾನೋ, ಆಗ ಅವನ ಎನರ್ಜಿ ಉಕ್ಕಿ ಹರಿಯತೊಡಗುತ್ತದೆ. ಆದರೆ ಇದು ಕರ್ತವ್ಯವಲ್ಲ. ಇದು ಒಬ್ಬರ ಪೂರೈಸಲೇಬೇಕಾದ ಜವಾಬ್ದಾರಿ ಅಲ್ಲ. ಇದು ಪ್ರೀತಿಯಿಂದ ಮಾಡಬೇಕಾದದ್ದು ; ಇದು ಹಂಚಿಕೊಳ್ಳಬೇಕಾಗಿರುವುದು.
ಒಮ್ಮೆ ಒಂದು ಗುರು ಶಿಷ್ಯರ ಜೋಡಿ ತಮ್ಮ ಒಂಟೆಯೊಡನೆ ಮರುಭೂಮಿಯೊಂದರ ಮೂಲಕ ಪ್ರಯಾಣ ಮಾಡುತ್ತಿತ್ತು.
ರಾತ್ರಿಯಾಗುತ್ತಿದ್ದಂತೆಯೇ ಗುರುಗಳು ಊಟ ಮುಗಿಸಿ ನಿದ್ದೆ ಹೋದರು. ಒಂಟೆಯನ್ನು ರಾತ್ರಿಯಿಡಿ ಕಾಯುವ ಜವಾಬ್ದಾರಿ ಶಿಷ್ಯನ ಮೇಲೆ ಇತ್ತು.
ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಒಂಟೆಯನ್ನು ನೋಡಿಕೊಂಡ ಶಿಷ್ಯನಿಗೆ ನಿದ್ದೆ ತಡೆಯಲಾಗಲಿಲ್ಲ. ಅವನು ದೇವರನ್ನು ಕುರಿತು ಪ್ರಾರ್ಥನೆ ಮಾಡಿದ, “ಪ್ರೀತಿಯ ಭಗವಂತ ನಿನ್ನ ಕರುಣೆ ಅಪಾರ, ದಯವಿಟ್ಟು ಈ ರಾತ್ರಿ ಒಂಟೆಯನ್ನು ನೋಡಿಕೋ, ಅದು ದೂರ ಹೋಗದಂತೆ ಕಾವಲು ಮಾಡು”. ಹೀಗೆ ಪ್ರಾರ್ಥನೆ ಮಾಡಿ ಶಿಷ್ಯನೂ ನಿದ್ದೆಗಿಳಿದ.
ಮರುದಿನ ಮುಂಜಾನೆ ನಿದ್ದೆಯಿಂದೆದ್ದ ಗುರು, ಅಲ್ಲಿ ಒಂಟೆ ಕಾಣಿಸದ ಕಾರಣ ಶಿಷ್ಯನನ್ನು ಪ್ರಶ್ನೆ ಮಾಡಿದರು, “ಒಂಟೆ ಎಲ್ಲಿ ಕಾಣಿಸುತ್ತಿಲ್ಲವಲ್ಲ? ರಾತ್ರಿ ನೀನೂ ನಿದ್ದೆ ಹೋಗಿಬಿಟ್ಟೆಯ?”
“ನೀವೇ ಹೇಳಿದ್ದಿರಲ್ಲ ಗುರುಗಳೇ ದೇವರನ್ನು ನಂಬು ಅಂತ. ರಾತ್ರಿ ನಾನು ದೇವರನ್ನು ಪ್ರಾರ್ಥನೆ ಮಾಡಿ, ಒಂಟೆಯನ್ನು ನೋಡಿಕೊಳ್ಳುವಂತೆ ಹೇಳಿದ್ದೆ” ಶಿಷ್ಯ ಉತ್ತರಿಸಿದ.
ಗುರು ಶಿಷ್ಯರು ಸುತ್ತಮುತ್ತ ಹುಡುಕಿದರು ಒಂಟೆ ಸಿಗಲಿಲ್ಲ. ಆಗ ಗುರುಗಳು ಶಿಷ್ಯನಿಗೆ ಹೇಳಿದರು,
“ಖಂಡಿತವಾಗಿ ನೀವು ದೇವರನ್ನು ನಂಬು, ಆದರೆ ಮೊದಲು ನಿನ್ನ ಒಂಟೆಯನ್ನು ಕಟ್ಟಿಹಾಕು. ದೇವರಿಗೆ ವಿಶೇಷ ಶಕ್ತಿ ಇರುವುದು ನಿಜ ಆದರೆ ಆ ಶಕ್ತಿ ಇರುವುದು ನಿನ್ನ ಕೈಗಳ ಮೂಲಕ”.
ಹೌದು ದೇವರು ಕರುಣಾಮಯಿ ಮತ್ತು ಅವನಿಗೆ ವಿಶೇಷ ಶಕ್ತಿಗಳು ಇರುವುದು ನಿಜ, ಆದರೆ ಆತ ಆ ಶಕ್ತಿಯನ್ನು ಜನರ ಮೂಲಕವೇ ಬಳಸುತ್ತಾನೆ ಹಾಗಾಗಿ ದೇವರನ್ನು ಎಷ್ಟು ನಂಬುತ್ತೇವೆಯೋ ಅಷ್ಟೇ ನಾವು ಜನರನ್ನು ಕೂಡ ನಂಬಬೇಕು. ದೇವರ ಯೋಜನೆಗಳು ಅನುಷ್ಠಾನಗೊಳ್ಳುವುದು ಜನರ ಮೂಲಕವೇ. ಅವನು ತಾನೇ ಏನೂ ಮಾಡುವುದಿಲ್ಲ. ಎಲ್ಲವನ್ನು ಅವನು ನಮ್ಮ ಮೂಲಕವೇ ನಡೆಯುವಂತೆ ನೋಡಿಕೊಳ್ಳುತ್ತಾನೆ.

