ಸ್ಪಷ್ಟತೆ ಎನ್ನುವುದು ಕೇವಲ ಮೈಂಡ್ ಗೆ ಸಂಬಂಧಿಸಿದ್ದಾದರೆ, ಖುಶಿ ಎಲ್ಲಕ್ಕೂ. ಜೀವಂತವಾಗಿರುವ ಎಲ್ಲವೂ ಗೊಂದಲಮಯ, ಕೇವಲ ಮೃತವಾದದ್ದು ಮಾತ್ರ ಸ್ಪಷ್ಟ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸ್ಪಷ್ಟತೆಗಾಗಿ ಚಡಪಡಿಸಬೇಡಿ, ಹಾಗೇನಾದರೂ ಆದರೆ ನೀವು ನಿಮ್ಮ ಸಂಕಟಗಳಿಗೆ ಅಂಟಿಕೊಂಡುಬಿಡುತ್ತೀರಿ, ಏಕೆಂದರೆ ಸಂಕಟಗಳು ಬಹಳ ಸ್ಪಷ್ಟ. ನಿಮಗೇನಾದರೂ ಕಾಯಿಲೆ ಇದ್ದರೆ ನೀವು ಡಾಕ್ಟರ್ ಬಳಿ ಹೋಗುತ್ತೀರಿ, ಅವರು ನಿಮ್ಮ ಕಾಯಿಲೆಯನ್ನು ಸ್ಪಷ್ಚವಾಗಿ ಡೈಗ್ನೋಸ್ ಮಾಡಿ ಕಾಯಿಲೆಯ ಕಾರಣಗಳನ್ನು ತಿಳಿಸುತ್ತಾರೆ. ನಿಮ್ಮ ಕಾಯಿಲೆ ಕ್ಯಾನ್ಸರ್ ಆಗಿರಬಹುದು ಅಥವಾ ಇತರ ಸಾವಿರಾರು ಬಗೆಗಳಲ್ಲಿ ಯಾವುದೋ ಒಂದು ಕಾಯಿಲೆ ಆಗಿರಬಹುದು, ಡಾಕ್ಟರ್ ನಿಮ್ಮ ಕಾಯಿಲೆಯನ್ನು ಖಚಿತವಾಗಿ ಡೈಗ್ನೋಸ್ ಮಾಡಿ ಹೇಳುತ್ತಾರೆ. ಆದರೆ ನೀವು ಆರೋಗ್ಯವಾಗಿದ್ದರೆ, ಡಾಕ್ಟರ್ ಡೈಗ್ನೋಸ್ ಮಾಡುವುದು ಏನೂ ಇಲ್ಲ. ಹಾಗೆ ನೋಡಿದರೆ ಇಡೀ ವೈದ್ಯಕೀಯ ಕ್ಷೇತ್ರಕ್ಕೆ ಆರೋಗ್ಯವನ್ನು ಡಿಫೈನ್ ಮಾಡುವುದು ಸಾಧ್ಯವಾಗುವುದಿಲ್ಲ. ಬಹಳ ಮಾಡಿ ಅವರು ನಿಮಗೆ ಯಾವ ಕಾಯಿಲೆಯೂ ಇಲ್ಲ ಎಂದು ಹೇಳಬಹುದಷ್ಟೇ, ಆದರೆ ಅವರಿಗೆ ನಿಮ್ಮ ಆರೋಗ್ಯದ ಬಗ್ಗೆ ಖಚಿತವಾಗಿ ಹೇಳುವುದು ಸಾಧ್ಯವಾಗುವುದಿಲ್ಲ. ಆರೋಗ್ಯವನ್ನು ನಿರ್ದಿಷ್ಟ ಕ್ಯಾಟಗರಿಗೆ ಸೇರಿಸುವುದು ಸಾಧ್ಯವಾಗುವುದಿಲ್ಲ.
ಖುಶಿ, ಆರೋಗ್ಯಕ್ಕಿಂತಲೂ ದೊಡ್ಡದು. ಆರೋಗ್ಯ, ದೇಹದ ಸಂತೋಷವಾದರೆ ಸಂತೋಷ, ಆತ್ಮದ ಆರೋಗ್ಯ. ಆದ್ದರಿಂದ ಸ್ಪಷ್ಟತೆಯ ಬಗ್ಗೆ ತಲೆಕೆಡೆಸಿಕೊಳ್ಳಬೇಡಿ. ನಾವು ಇಲ್ಲಿ ಅಂಕಗಣಿತದ ಸಮಸ್ಯೆಯನ್ನು ಬಿಡಿಸುತ್ತಿಲ್ಲ; ಈ ಎಲ್ಲವನ್ನೂ ಮರೆತುಬಿಡಿ. ಗೊಂದಲ, ಅವ್ಯವಸ್ಥಿತವಾದದ್ದು, ಖಂಡಿತ ಮತ್ತು ಬಹುತೇಕ ಭಯಾನಕವಾದದ್ದು – ನಿಮ್ಮ ಎದುರು ಇರುವುದು ಸಾಹಸ ಮತ್ತು ಸವಾಲು. ಸವಾಲನ್ನು ಸ್ವೀಕರಿಸಿ.
ಖುಶಿಯ ಮೇಲೆ ನಿಮ್ಮ ಗಮನವನ್ನು ಹೆಚ್ಚು ಕೇಂದ್ರೀಕರಿಸಿ ಮತ್ತು ಗೊಂದಲವನ್ನು ಮರೆತುಬಿಡಿ. ನೀವು ಹಿಂದೆಂದೂ ಪ್ರವೇಶಿಸದ ಹೊಸ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದೀರಾದರೆ, ನಿಮ್ಮ ಹಳೆಯ ಅನುಭವಗಳು ಗೊಂದಲಕ್ಕೊಳಗಾಗುತ್ತವೆ. ಖುಶಿಯ ಮಾತು ಕೇಳಿ; ಅದು ನಿಮ್ಮ ಸೂಚಕವಾಗಲಿ. ಖುಶಿ ನಿಮ್ಮ ಪ್ರಯಾಣದ ದಿಕ್ಕನ್ನು ನಿರ್ದೇಶಿಸಲಿ, ನೀವು ಆ ದಿಕ್ಕಿನಲ್ಲಿಯೇ ಮುಂದುವರೆಯಿರಿ.

