ಆತ್ಮಕ್ಕೆ ತರೆದುಕೊಂಡಿರುವ ವ್ಯಕ್ತಿ, ವ್ಯಕ್ತಿತ್ವ ರಹಿತನಾಗಿರುತ್ತಾನೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮೊಳಗಿನ ದಿವ್ಯ ಶಕ್ತಿಗಳನ್ನು
ಹೇಗೆ ಕಂಡುಕೊಳ್ಳುವುದು?
ಪ್ರತಿಮೆ, ರೂಪಕಗಳ ಮೂಲಕ
ಉತ್ತರ ಹುಡುಕುವ ಪ್ರಯತ್ನ
ವ್ಯರ್ಥ ಎಂಬುದು ಸಿದ್ಧವಾಗಿ ಹೋಗಿದೆ.
ಕಾಮ ಹೇಗಿರತ್ತೆ ಎಂಬ ಮಗುವಿನ ಪ್ರಶ್ನೆಗೆ
ಸಿಹಿಯಾಗಿರತ್ತೆ, ಸಕ್ಕರೆಯ ಬೊಂಬೆಯಂತೆ
ಎಂದು ಉತ್ತರಿಸಿದರೆ ಹೇಗೆ?
ಇಂಥ ನಿಗೂಢಗಳ ಬಗ್ಗೆ ನೀವು ಏನೇ ಹೇಳಿ
ನನಗೆ ಗೊತ್ತು ಎಂಬ ಉತ್ತರ
ಮತ್ತು
ನನಗೆ ಗೊತ್ತಿಲ್ಲ ಎಂಬ ಉತ್ತರ ಮಾತ್ರ
ಸತ್ಯಕ್ಕೆ ಹತ್ತಿರವಾದ ಉತ್ತರಗಳು
ಎರಡೂ ಉತ್ತರಗಳಲ್ಲಿ ಅಂಥ ಸುಳ್ಳೆನಿಲ್ಲ.
– ರೂಮಿ.
ವ್ಯಕ್ತಿ ಅವಕಾಶಕ್ಕೆ ತೆರೆದುಕೊಂಡಿರುತ್ತಾನೆ. ನಾಳೆ ನೀವು ಯಾರಾಗಿರುತ್ತೀರಿ ಎಂದು ಯಾರಿಗೆ ಗೊತ್ತು? ನಾಳೆ ನೀವು ಯಾರಾಗಿರಬಹುದೆಂದು ನೀವು ಕೂಡ ಹೇಳಲಾರಿರಿ ಏಕೆಂದರೆ ನಿಮಗೆ ಇನ್ನೂ ನಾಳೆಯ ಬಗ್ಗೆ ಮತ್ತು ನಾಳೆ ಏನು ತರಬಹುದು ಎನ್ನುವ ಬಗ್ಗೆ ಗೊತ್ತಿಲ್ಲ. ಆದ್ದರಿಂದಲೇ ಸದಾ ಜಾಗೃತವಾಗಿರುವ ಮನುಷ್ಯರು ಏನನ್ನೂ ಪ್ರಾಮಿಸ್ ಮಾಡುವುದಿಲ್ಲ; ಏಕೆಂದರೆ ನೀವು ಹೇಗೆ ತಾನೇ ಪ್ರಾಮಿಸ್ ಮಾಡಬಲ್ಲಿರಿ? “ನಾನು ನಿನ್ನನ್ನು ನಾಳೆಯೂ ಪ್ರೀತಿಸುತ್ತೇನೆ” ಎಂದು ನೀವು ಇನ್ನೊಬ್ಬರಿಗೆ ಹೇಳಲಾರಿರಿ. ಏಕೆಂದರೆ ನಾಳೆ ಹೇಗೆನ್ನುವುದು ಯಾರಿಗೆ ಗೊತ್ತು.
“ನಾಳೆಯ ಬಗ್ಗೆ ನಾನು ಏನೂ ಹೇಳಲಾರೆ. ನಾಳೆ ಬರಲಿ ಆಗ ನೋಡೋಣ. ಬಹುತೇಕ ನಿನ್ನನ್ನು ನಾನು ಪ್ರೀತಿಸುತ್ತೇನೆ. ಆದರೆ ಯಾವುದೂ ಖಚಿತವಲ್ಲ”. ಇದು ಸುಂದರ. ನಿಜವಾದ ಅರಿವು ಮಾತ್ರ ಇಂಥ ಅರಿವನ್ನು ಸಾಧ್ಯಮಾಡಬಲ್ಲದು.
ನಿಮಗೆ ವ್ಯಕ್ತಿತ್ವ ( character) ಎನ್ನುವುದೊಂದು ಇದ್ದರೆ , ನಿಮಗೆ ಎಲ್ಲವೂ ಸ್ಪಷ್ಟವಾಗಿರಬಹುದು; ಆದರೆ ಮುಕ್ತವಾಗಿ ಬದುಕುತ್ತಿರುವಾಗ ನಿಮಗಷ್ಟೇ ಅಲ್ಲ ಇನ್ನೊಬ್ಬರಿಗೂ ಇದು ಗೊಂದಲಮಯ. ಆದರೆ ಈ ಗೊಂದಲದಲ್ಲಿ ಒಂದು ಚೆಲುವು ಇದೆ ಏಕೆಂದರೆ ಇದೊಂದು ಜೀವಂತಿಕೆಯ ಸ್ಥಿತಿ, ಸದಾ ಹೊಸ ಸಾಧ್ಯತೆಗಳಿಗಾಗಿ ಮಿಡಿಯುತ್ತಿರುವಂಥದು.
ಅದು ಸಂತೆಯ ದಿನ, ಊರಿನ ಮಾರುಕಟ್ಟೆ ಗಿಜಿಗುಡುತ್ತಿತ್ತು.
ಆಗ ಅಚಾನಕ್ ಆಗಿ ಅಲ್ಲಿಗೆ ಎಲ್ಲಿಂದಲೋ ಬಂತು ನಾಗಾಲೋಟದಲ್ಲಿ ನಸ್ರುದ್ದೀನ್ ನ ಸವಾರಿ. ನಸ್ರುದ್ದೀನ್ ಸವಾರಿ ಮಾಡುತ್ತಿದ್ದ ಕತ್ತೆ ಸಿಕ್ಕಾಪಟ್ಟೆ ವೇಗದಿಂದ ಓಡುತ್ತಿತ್ತು. ನಸ್ರುದ್ದೀನ್ ಕತ್ತೆಯನ್ನು ನಿಯಂತ್ರಣದಲ್ಲಿಡಲು ಬಹಳ ಕಷ್ಟಪಡುತ್ತಿದ್ದ.
ನಸ್ರುದ್ದೀನ್ ನನ್ನಾಗಲೀ ಅಥವಾ ಅವನ ಕತ್ತೆಯನ್ನಾಗಲೀ ಇಷ್ಟು ವೇಗದ ಚಲನೆಯಲ್ಲಿ ಹಿಂದೆ ಯಾರೂ ನೋಡಿರಲಿಲ್ಲ.
“ಏಯ್ ನಸ್ರುದ್ದೀನ್” ಗೆಳೆಯನೊಬ್ಬ ಕೂಗಿದ, “ಇಷ್ಟು ಅವಸರದಲ್ಲಿ ಎಲ್ಲಿಗೆ ಹೊರಟಿದ್ದೀ?”.
ಕತ್ತೆಯ ಸವಾರಿ ಮುಂದುವರೆಸುತ್ತಲೇ ನಸ್ರುದ್ದೀನ್ ಕೂಗಿ ಉತ್ತರಿಸಿದ, “ಖಂಡಿತ ನನಗೆ ಗೊತ್ತಿಲ್ಲ, ನೀನು ಕತ್ತೆಯನ್ನೇ ಕೇಳಬೇಕು”.

