ಶಕ್ತಿ (Energy) : ಓಶೋ 365 #Day 215



ಮರ, ಜೀವಶಕ್ತಿಯಿಂದ ತುಂಬಿ ತುಳುಕುತ್ತಿರುವಾಗ ಮಾತ್ರ ಅರಳುತ್ತದೆ, ಹೂ ಬಿಡುತ್ತದೆ. ಹೂವುಗಳು ಐಷಾರಾಮಿ (luxury).  ಯಾವಾಗ ನಿಮ್ಮ ಬಳಿ ಇರುವುದನ್ನ ನಿಮಗೆ ತಾಳಿಕೊಳ್ಳುವುದು ಸಾಧ್ಯವಾಗುವುದಿಲ್ಲವೋ ಆಗ ಮಾತ್ರ ನೀವು ಸ್ಫೋಟಗೊಳ್ಳುತ್ತೀರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಆಧ್ಯಾತ್ಮಿಕತೆ ಒಂದು ರೀತಿಯ ಹೂವಾಗುವಿಕೆ – ಇದು ಆತ್ಯಂತಿಕ ಐಷಾರಾಮಿ. ನೀವು ಜೀವಶಕ್ತಿಯಿಂದ ತುಂಬಿತುಳುಕುತ್ತಿರುವಾಗ ಮಾತ್ರ ನಿಮ್ಮೊಳಗೆ ಅರಳುತ್ತದೆ ಬಂಗಾರದ ಹೂವು. “Energy is delight” ಎಂದು ವಿಲಿಯಂ ಬ್ಲೇಕ್ ಹೇಳಿರುವುದು ಸರಿ. ನೀವು ಹೆಚ್ಚು ಜೀವಶಕ್ತಿಯನ್ನು ಹೊಂದಿದಂತೆಲ್ಲ ಹೆಚ್ಚು ಹೆಚ್ಚು ಆನಂದವನ್ನು ಹೊಂದುವಿರಿ.

ನಿಮ್ಮ ಜೀವಶಕ್ತಿ ಸೋರತೊಡಗಿದಂತೆಲ್ಲ ದುಗುಡ ಕಾಣಿಸಿಕೊಳ್ಳತೊಡಗುತ್ತದೆ ಮತ್ತು ಜನ ಜೀವಶಕ್ತಿಯನ್ನು ಸೋರದಂತೆ ತಡೆಹಿಡಿಯುವುದನ್ನ ಮರೆತುಬಿಟ್ಟಿದ್ದಾರೆ. ನಿಮ್ಮ ಸಾವಿರಾರು ಯೋಚನೆಗಳಲ್ಲಿ, ಚಿಂತೆಗಳಲ್ಲಿ, ಬಯಕೆಗಳಲ್ಲಿ, ಕಲ್ಪನೆಗಳಲ್ಲಿ, ಕನಸುಗಳಲ್ಲಿ, ನೆನಪುಗಳಲ್ಲಿ, ನಿಮ್ಮ ಜೀವಶಕ್ತಿ ಸೋರಿಹೋಗುತ್ತಿದೆ. ಮತ್ತು ಅನವಶ್ಯಕವಾದ ಈ ಸೋರುವಿಕೆಯನ್ನು ತಡೆಗಟ್ಟಬಹುದು. ಯಾವಾಗ ಮಾತಿನ ಅವಶ್ಯಕತೆಯಿಲ್ಲವೋ ಆಗಲೂ ಜನ ಮಾತನಾಡುತ್ತಾರೆ. ಯಾವಾಗ ಏನೂ ಮಾಡುವ ಅವಶ್ಯಕತೆಯಿಲ್ಲವೋ ಆಗಲೂ ಜನರಿಗೆ ಸುಮ್ಮನೇ ಕೂಡವುದು ಸಾಧ್ಯವಾಗುವುದಿಲ್ಲ ; ಅವರು ಏನಾದರೂ ಮಾಡಲೇಬೇಕು.

ಏನಾದರೂ ಮಾಡುವ ಬಗ್ಗೆ ಜನರಿಗೆ ಅತೀ ಉತ್ಸಾಹ. ಅವರಿಗೆ ಏನಾದರೂ ಮಾಡುವುದು ನಶೆಯಂತೆ. ಅದು ಅವರನ್ನು ಮತ್ತರನ್ನಾಗಿಸುತ್ತದೆ. ಅವರು ಇಂಥ ಸಂಗತಿಗಳಲ್ಲಿ ತಮ್ಮನ್ನು ತಾವು ಎಷ್ಟು ಆಳವಾಗಿ ಕೊಡಗಿಸಿಕೊಂಡಿರುತ್ತಾರೆಂದರೆ ಅವರಿಗೆ, ಬದುಕಿನ ವಾಸ್ತವದ ಸಂಗತಿಗಳ ಬಗ್ಗೆ ಆಲೋಚಿಸಲು ಸಮಯವೇ ಇರುವುದಿಲ್ಲ. ಅವರು ತಮ್ಮನ್ನು ತಾವು ಎದುರಿಸಲು ಹೆದರಿ ಇತರ ಸಂಗತಿಗಳಲ್ಲಿ ಬ್ಯುಸಿ ಆಗಿರುತ್ತಾರೆ. ಅವರು ತಮ್ಮೊಳಗೆ ಆಕಳಿಸುತ್ತಿರುವ ಕೊನೆಯಿಲ್ಲದ ಪ್ರಪಾತದ ಬಗ್ಗೆ ಆತಂಕಿತರಾಗಿದ್ದಾರೆ. ಜೀವಶಕ್ತಿ ಸೋರಿ ಹೋಗುವುದು ಹೀಗೆ, ಆದ್ದರಿಂದಲೇ ನೀವು ಯಾವಾಗಲೂ ಸೂಕ್ತ ಜೀವಶಕ್ತಿಯ ಕೊರತೆಯನ್ನು ಅನುಭವಿಸುತ್ತಿರುತ್ತೀರಿ.

ಅನವಶ್ಯಕವಾದದ್ದನ್ನು ಬಿಟ್ಟುಬಿಡುವುದನ್ನು ನಾವು ಮೊದಲು ಕಲಿಯಬೇಕು. ಮತ್ತು ಬಹುತೇಕ ತೊಂಭತ್ತರಷ್ಟು ನಮ್ಮ ಸಾಮಾನ್ಯ ಬದುಕು ಅನವಶ್ಯಕ; ಅದನ್ನು ಸುಲಭವಾಗಿ ನಾವು ಅವಾಯ್ಡ್ ಮಾಡಿಬಿಡಬಹುದು. ಆದ್ದರಿಂದ ಟೆಲಿಗ್ರಾಫಿಕ್ ಬರಹದಷ್ಟು ಸಂಕ್ಷಿಪ್ತವಾಗಿರಿ, ಏಷ್ಟು ಬೇಕೋ ಅಷ್ಟು ಮಾತ್ರ . ಇದರಿಂದಾಗಿ ನೀವು ಸಾಕಷ್ಟು ಜೀವಶಕ್ತಿಯನ್ನು ಉಳಿಸಿಕೊಳ್ಳುವಿರಿ ಮತ್ತು ಆದ್ದರಿಂದ ನೀವು ವಿನಾಕಾರಣವಾಗಿ ಥಟ್ಟನೇ ಅರಳಲು ಶುರು ಮಾಡುತ್ತೀರಿ.

ಝೆನ್,  ಜಪಾನ್ ಪ್ರವೇಶಿಸುವುದಕ್ಕಿಂತ ಮುಂಚೆ ಅಲ್ಲಿನ ಅಧ್ಯಾತ್ಮಿಕ ಆಶ್ರಮವೊಂದರಲ್ಲಿ ಶಿಷ್ಯರು ಧ್ಯಾನ ಕಲಿಯುತ್ತಿದ್ದರು. ಆ ಶಿಷ್ಯರಲ್ಲಿ ನಾಲ್ವರು ಅತ್ಯಂತ ಆತ್ಮೀಯ ಗೆಳೆಯರಿದ್ದರು.

ಒಮ್ಮೆ ಆ ನಾಲ್ವರು ಗೆಳೆಯರು ಏಳು ದಿನ ಮೌನ ಧ್ಯಾನ ಮಾಡಬೇಕೆಂದು ತೀರ್ಮಾನ ಮಾಡಿ, ಧ್ಯಾನಕ್ಕೆ ಮೊದಲಾದರು.

ಮೊದಲ ದಿನ ಧ್ಯಾನ ಸುಸೂತ್ರವಾಗಿ ಸಂಪನ್ನವಾಯಿತು. ಎರಡನೇಯ ದಿನ ಸಂಜೆ ಕತ್ತಲಾಗುತ್ತಿದ್ದಂತೆ ಒಬ್ಬ ಶಿಷ್ಯ ಅಲ್ಲೆ ಹಚ್ಚಿಟ್ಟಿದ್ದ ದೀಪವನ್ನು ಗಮನಿಸಿದ. ದೀಪ ಕ್ಷೀಣಿಸತೊಡಗಿತ್ತು. ಅವನಿಗೆ ಆತಂಕವಾಗಿ “ಯಾರಾದರೂ ದೀಪ ಸರಿ ಮಾಡಿ “ ಎಂದು ಕೂಗಿ ಬಿಟ್ಟ.

ಎರಡನೇ ಶಿಷ್ಯನಿಗೆ ಮೊದಲನೇಯವ ಮಾತಾಡಿದ್ದನ್ನು ಕೇಳಿ ಆಶ್ಚರ್ಯವಾಯಿತು.
“ ನಾವು ಒಂದು ಮಾತೂ ಆಡಬಾರದು, ಗೊತ್ತಿಲ್ವಾ” ಎಂದು ಆಕ್ಷೇಪ ಮಾಡಿದ.

“ ನೀವಿಬ್ಬರೂ ಮೂರ್ಖರು, ಯಾಕೆ ಮಾತಾಡುತ್ತಿದ್ದೀರಿ” ಎಂದ ಮೂರನೇಯವ.

“ ನಾನೊಬ್ಬನೇ ಮಾತಾಡಲಿಲ್ಲ “ ನಾಲ್ಕನೇಯವ ಸಮಾಧಾನದಿಂದ ಘೋಷಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.