ಸುಮ್ಮನೇ ಸಂಭವಿಸುವ ಧ್ಯಾನ ಮಾತ್ರ ನಿಜವಾದ ಧ್ಯಾನ. ಇದರಲ್ಲಿ ನಮ್ಮ ಪ್ರಯತ್ನ ಏನಿಲ್ಲ. ಇಲ್ಲಿ ನಾವು ಮಾಡಬಹುದಾದದ್ದು ಏನಾದರೂ ಇದ್ದರೆ, ಧ್ಯಾನ ತಾನೇ ತಾನಾಗಿ ಸಂಭವಿಸುತ್ತಿರುವಾಗ, ಅದಕ್ಕೆ ಅಡ್ಡಿಯಾಗದಿರುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ಮ್ಯಾನೇಜ್ ಮಾಡಬಹುದಾದ ಧ್ಯಾನ, ಕೇವಲ ಮೈಂಡ್ ಗೇಮ್. ಇಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿರುವುದು ನಿಮ್ಮ ಮೈಂಡ್; ಇಲ್ಲಿ ಧ್ಯಾನ ಮಾಡುತ್ತಿರುವುದು ನಿಮ್ಮ ಮೈಂಡ್. ಆದರೆ ಈ ಧ್ಯಾನ ನಿಮ್ಮನ್ನು ಮೈಂಡ್ ನ ಆಚೆ ಕರೆದುಕೊಂಡು ಹೋಗುವುದಿಲ್ಲ. ಹೇಗೆ ಸಾಧ್ಯ ಹೇಳಿ? ಧ್ಯಾನವನ್ನು ಮೈಂಡ್ ಮಾಡುತ್ತಿದೆಯಾದ್ದರಿಂದ ಅದನ್ನು ಮೈಂಡ್ ಮ್ಯಾನ್ಯುಪುಲೇಟ್ ಮಾಡಬಹುದು, ಹಾಗೆ ನಿಯಂತ್ರಿಸುವುದು ನಿಮ್ಮ ಮೈಂಡ್ ನ ಕೈಯಲ್ಲಿದೆ.
ನಿಮ್ಮ ಕೈಯಲ್ಲಿ, ನಿಮ್ಮ ನಿಯಂತ್ರಣದಲ್ಲಿ ಸಾಧ್ಯವಾಗದ ಧ್ಯಾನ ಮಾತ್ರ ನಿಜವಾದ ಧ್ಯಾನ, ನಿಜ ಧ್ಯಾನದಲ್ಲಿ ನೀವು ಧ್ಯಾನದ ಹತೋಟಿಯಲ್ಲಿರುವಿರಿ. ಆದರೆ ಧ್ಯಾನದ ಟೆಕ್ನಿಕ್ ಗಳು ಉಪಯೋಗಕ್ಕೆ ಬರುತ್ತವೆ. ಅವು ನಿಮ್ಮನ್ನು ಹತಾಶೆಯ ತುಟ್ಟ ತುದಿಗೆ ಕರೆದೊಯ್ಯುತ್ತವೆ. ಅವು ನಿಮ್ಮನ್ನು ಭರವಸೆರಹಿತ ಸ್ಥಿತಿಗೆ ಕರೆದೊಯ್ಯುತ್ತವೆ. ಅವು ನಮ್ಮನ್ನು ಎಲ್ಲಿಯವರೆಗೆ ಕರೆದೊಯ್ಯುತ್ತವೆ ಎಂದರೆ, ಈ ವಿಷವೃತ್ತವನ್ನು ನೋಡಿ ನೀವು ದುಗುಡದಲ್ಲಿ ಗೊತ್ತುಮಾಡಿಕೊಳ್ಳುತ್ತೀರಿ, ಇದು ನಿಮ್ಮನ್ನು ಎಲ್ಲಿಗೂ ಕರೆದೊಯ್ಯಲಾರದೆಂದು. ಮತ್ತೆ ಮತ್ತೆ ನೀವು ಈ ಹತಾಶೆಯ ಬಿಂದುವನ್ನು ತಲುಪುತ್ತೀರಿ, ಮತ್ತೆ ಮತ್ತೆ ನಿಮ್ಮ ಮೈಂಡ್ ಗೆ ಮರಳುತ್ತೀರಿ. ಒಂದು ದಿನ, ನಿಮಗೆ ಈ ಒಳನೋಟ ಹೊಳೆಯುತ್ತದೆ, ನಿಮ್ಮ doing ನಿಜವಾಗಿ ನಿಮ್ಮ un doing ಎನ್ನುವುದು. ಆ ಕ್ಷಣದಲ್ಲಿಯೇ ಎಲ್ಲ ಅಂಟಿಕೊಳ್ಳುವಿಕೆಯಿಂದ ನೀವು ಬಿಡುಗಡೆಗೊಳ್ಳುತ್ತೀರಿ.
ಆಗ ಎಲ್ಲ doing ಮಾಯವಾಗುತ್ತದೆ, ಎಲ್ಲ ಪ್ರಯತ್ನಗಳು ಮಾಯವಾಗುತ್ತವೆ, ಏನೋ ಒಂದು ಎಲ್ಲ ಮೀರುವಿಕೆಯಿಂದ (beyond) ಕೆಳಗಿಳಿಯುತ್ತದೆ. ಇದು ಬಿಡುಗಡೆ. ಇದರ ಒಂದು ಚೂರು ನೋಟ ಸಾಕು. ನೀವು ಮೊದಲಿನ ಹಾಗೆ ಇರುವುದಿಲ್ಲ, ಇರುವುದು ಸಾಧ್ಯವೂ ಆಗುವುದಿಲ್ಲ.
ಒಬ್ಬ ಯುವ ಸನ್ಯಾಸಿಗೆ ಧ್ಯಾನಕ್ಕೆ ಕೂತಾಗಲೆಲ್ಲ ಒಂದು ಜೇಡ ತನ್ನ ಎದುರು ಇಳಿದು ಬಂದಂತೆ ಭಾಸವಾಗತೊಡಗಿತು. ದಿನ ಕಳೆದಂತೆಲ್ಲ ಜೇಡ ದೊಡ್ಡದಾಗುತ್ತ ಹೋಯಿತು. ತೀವ್ರ ಆತಂಕಕ್ಕೊಳಗಾದ ಸನ್ಯಾಸಿ ತನ್ನ ಗುರುವಿನ ಮುಂದೆ ತನ್ನ ಸಂದಿಗ್ಧತೆಯನ್ನು ತೋಡಿಕೊಂಡ
“ ಮಾಸ್ಟರ್, ಧ್ಯಾನಕ್ಕೆ ಕೂರುವಾಗ ಒಂದು ಚೂರಿ ಇಟ್ಟುಕೊಳ್ಳುತ್ತೇನೆ , ಈ ಸಲ ಬರಲಿ ಆ ಜೇಡ, ಮುಗಿಸಿಬಿಡುತ್ತೇನೆ “ ಎಂದ.
ಒಂದು ನಿಮಿಷ ಧ್ಯಾನಿಸಿ, ಗುರುಗಳು ಉತ್ತರಿಸಿದರು,
“ ಬೇಡ, ಚೂರಿ ಬೇಡ, ಬದಲಾಗಿ ಒಂದು ಸುಣ್ಣದ ಕಡ್ಡಿ ಇಟ್ಟುಕೊ, ಜೇಡ ಬಂದಾಗ ಅದರ ಹೊಟ್ಚೆಯ ಮೇಲೆ X ಗರುತು ಮಾಡು “
ಮರುದಿನ ಸನ್ಯಾಸಿ ಧ್ಯಾನಕ್ಕೆ ಕುಳಿತ. ಜೇಡ ಮತ್ತೆ ಕಾಣಿಸಿಕೊಂಡಾಗ, ಗುರುಗಳು ಹೇಳಿದಂತೆ ಸುಣ್ಣದ ಕಡ್ಡಿಯಿಂದ ಅದರ ಹೊಟ್ಟೆಯ ಮೇಲೆ X ಗುರುತು ಮಾಡಿದ.
ಧ್ಯಾನದ ನಂತರ ಗುರುಗಳ ಬಳಿ ಹೋಗಿ ನಡೆದ ಸಂಗತಿಯನ್ನು ಹೇಳಿಕೊಂಡ.
ಗುರುಗಳು ಅವನಿಗೆ ಅಂಗಿ ಬಿಚ್ಚಲು ಹೇಳಿದರು.
ಅವನ ಹೊಟ್ಟೆಯ ಮೇಲೆ X ಗುರುತಿತ್ತು.

