ಹೊಸತು ( The New): ಓಶೋ 365 #Day217

ಬದಲಾವಣೆಯೇ ಬದುಕು ಎನ್ನುವುದನ್ನ ಸದಾ ನೆನಪಿನಲ್ಲಿಡಿ. ಪ್ರತಿ ಸಂದರ್ಭದಲ್ಲೂ ಹೊಸತಿಗೆ ಲಭ್ಯವಾಗಿರಿ ~ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ದಾರಿ ಎಲ್ಲಿಗೆ ಕರದೊಯ್ಯಬಹುದು
ಎನ್ನುವ ಆತಂಕದಿಂದ ದೂರವಿರಿ.
ಬದಲಾಗಿ ನೀವು ಇಡಲು ಮುಂದಾಗುತ್ತಿರುವ
ಮೂದಲ ಹೆಜ್ಜೆಯ ಮೇಲೆ ಮಾತ್ರ
ಧ್ಯಾನವನ್ನು ಕೇಂದ್ರೀಕರಿಸಿ.

ಬದುಕಿನ ಪ್ರಯಾಣದಲ್ಲಿ
ಮೊದಲ ಹೆಜ್ಜೆ ಮಾತ್ರ ಅತ್ಯಂತ ಕಠಿಣ ಭಾಗ
ಅದನ್ನು ಸರಿಯಾಗಿ ನಿಭಾಯಿಸುವುದೊಂದೆ
ನಿಮ್ಮ ಮುಂದಿರುವ ಜವಾಬ್ದಾರಿ.

ಈ ಹೆಜ್ಜೆ ಇಟ್ಟಾದ ಮೇಲೆ
ಎಲ್ಲವನ್ನೂ
ಪ್ರಯಾಣದ ಸಹಜತೆಗೆ ಬಿಟ್ಟು ಬಿಡಿ
ಬಾಕಿ ಎಲ್ಲ ನಿಮ್ಮನ್ನು ಹಿಂಬಾಲಿಸುತ್ತದೆ.

ಹರಿವಿನ ಜೊತೆ ಹರಿಯಬೇಡಿ
ನೀವೇ ಹರಿವಾಗಿ.

~ ಶಮ್ಸ್

ಯಾವಾಗ ಜನ ಹಳೆಯದಕ್ಕೆ ಅಂಟಿಕೊಳ್ಳುತ್ತಾರೋ ಆಗ ಬದಲಾವಣೆ ನಿಂತು ಹೋಗುತ್ತದೆ. ಯಾವತ್ತೂ ಬದಲಾವಣೆ ಹೊಸದರ ಜೊತೆಗೂಡಿ ಬರುತ್ತದೆ. ಹಳೆಯದರ ಜೊತೆ ಯಾವ ಬದಲಾವಣೆಯೂ ಇಲ್ಲ. ಆದರೆ ಜನ ಹಳೆಯದಕ್ಕೆ ಅಂಟಿಕೊಳ್ಳುತ್ತಾರೆ ಏಕೆಂದರೆ, ಅಲ್ಲಿ ಅವರಿಗೆ ಸುರಕ್ಷತೆಯ, ಆರಾಮದ, ಪರಿಚಯದ ಅನುಭವವಿರುತ್ತದೆ. ಅದನ್ನು ನೀವು ಈಗಾಗಲೇ ಬದುಕಿಬಿಟ್ಟಿರುವುದರಿಂದ ಅದರ ಬಗ್ಗೆ ನಿಮಗೆ ಗೊತ್ತಿದೆ, ಅದರಲ್ಲಿ ನೀವು ಪ್ರಾವಿಣ್ಯತೆವನ್ನು ಗಳಿಸಿಕೊಂಡಿದ್ದೀರ, ಅದರ ಬಗ್ಗೆ ತಿಳುವಳಿಕೆಯನ್ನ ಹೊಂದಿದ್ದೀರ. ಆದರೆ ಹೊಸದರ ಬಗ್ಗೆ ನೀವು ಅಜ್ಞಾನಿಗಳು. ಹೊಸದರ ಜೊತೆ ನೀವು ತಪ್ಪುಗಳನ್ನ ಮಾಡಬಹುದು; ಹೊಸದು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಏನೋ? ಆದ್ದರಿಂದ ನಿಮಗೆ ಭಯ ಮತ್ತು ಈ ಭಯದ ಕಾರಣವಾಗಿ ನೀವು ಹಳೆಯದಕ್ಕೆ ಅಂಟಿಕೊಂಡಿದ್ದೀರ. ಮತ್ತು ಹಳೆಯದಕ್ಕೆ ಅಂಟಿಕೊಂಡಾಗಿನಿಂದಲೇ ನೀವು ನದಿಯಂತೆ ಹರಿಯುವುದನ್ನ ನಿಲ್ಲಿಸಿಬಿಟ್ಟಿದ್ದೀರ.

ಸದಾ ಹೊಸದಕ್ಕೆ ಲಭ್ಯವಾಗಿರಿ. ಹಳೆಯದರಿಂದ ದೂರವಾಗುತ್ತ ಹೋಗಿ. ಹಳೆಯದು ಮುಗಿದು ಹೋಗಿದೆ! ನಿನ್ನೆ ನಿನ್ನೆಯೇ, ಮತ್ತೆಂದೂ ಅದು ಮರಳಿ ಬಾರದು. ನೀವು ಅದಕ್ಕೆ ಅಂಟಿಕೊಂಡರೆ ನೀವೂ ಮರೆಯಾಗಿ ಹೋಗಿಬಿಡುತ್ತೀರ. ಅದು ನಿಮ್ಮ ಗೋರಿಯಾಗಿ ಬಿಡುತ್ತದೆ. ನಿಮ್ಮ ಹೃದಯವನ್ನು ಹೊಸತಿಗೆ ಮುಕ್ತವಾಗಿ ತೆರೆದುಕೊಳ್ಳಿ. ಮುಳುಗುತ್ತಿರುವ ಸೂರ್ಯನಿಗೆ ಬೈ ಹೇಳಿ, ಉದಯಿಸುತ್ತಿರುವ ಸೂರ್ಯನನ್ನು ಸ್ವಾಗತಿಸಿ. ಹಳೆಯದಕ್ಕೆ ಕೃತಜ್ಞರಾಗಿರಿ ಆದರೆ ಅದಕ್ಕೆ ಅಂಟಿಕೊಳ್ಳಲು ಹೋಗಬೇಡಿ.

ಇದನ್ನು ನೆನಪಿಡುವಿರಾದರೆ, ನಿಮ್ಮ ಬದುಕು ಬೆಳವಣಿಗೆ ಹೊಂದುತ್ತ, ಪ್ರಬುದ್ಧವಾಗುತ್ತ ಹೋಗುತ್ತದೆ. ಪ್ರತೀ ಹೊಸ ಹೆಜ್ಜೆ, ಪ್ರತೀ ಹೊಸ ಸಾಹಸ, ಹೊಸ ಶ್ರೀಮಂತಿಕೆಯನ್ನು ತರುತ್ತದೆ. ಯಾವಾಗ ನಿಮ್ಮ ಇಡೀ ಬದುಕು ಚಲನಶೀಲವಾಗಿರುತ್ತದೆಯೋ ಆಗ, ಮರಣ ಸನ್ನಿಹಿತವಾಗುವವರೆಗೆ ನೀವು ಎಷ್ಟು ಶ್ರೀಮಂತಿಕೆಯನ್ನ ಹೊಂದಿರುತ್ತೀರೆಂದರೆ ಮತ್ತು ಆತ್ಯಂತಿಕದ ಬಗ್ಗೆ ಎಷ್ಟು ಪ್ರಚಂಡ ತಿಳುವಳಿಕೆಯನ್ನ ಹೊಂದಿರುತ್ತೀರೆಂದರೆ, ಸಾವಿಗೂ ಕೂಡ ಇವನ್ನು ನಿಮ್ಮಿಂದ ಕಸಿದುಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ಸಾವು ಕೇವಲ ಯಾರು ಬದುಕನ್ನ ಬಾಳೇ ಇಲ್ಲವೋ ಅಂಥ ಸೋಮಾರಿಗಳಿಗೆ ಮಾತ್ರ ಬರುತ್ತದೆ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.