ಯಾವುದೂ ಮಿಸ್ ಆಗಿಲ್ಲ; ಎಲ್ಲವೂ ಹೇಗೆ ಇರಬೇಕಾಗಿದೆಯೋ ಹಾಗೆಯೇ ಇದೆ. ಪ್ರತಿಯೊಬ್ಬರು ಈಗಾಗಲೇ ಪರಿಪೂರ್ಣರು. ಪರಿಪೂರ್ಣತೆಯನ್ನು ಸಾಧಿಸಬೇಕಿಲ್ಲ, ಅದು ಈಗಾಗಲೇ ಇರುವಂಥದು. ನಿಮ್ಮನ್ನು ನೀವು ಒಪ್ಪಿಕೊಂಡ ಕ್ಷಣದಲ್ಲಿಯೇ ಅದು ಅನಾವರಣಗೊಳ್ಳುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮನ್ನು ನೀವು ಒಪ್ಪಿಕೊಳ್ಳದೇ ಹೋದರೆ, ನೀವು ನಿಮ್ಮ ನೆರಳನ್ನ, ಮರಿಚಿಕೆಯನ್ನ ಹಿಂಬಾಲಿಸುತ್ತಲೇ ಇರುತ್ತೀರಿ. ಅವು ದೂರ ಇರುವಾಗ ಮಾತ್ರ ನಿಮಗೆ ಬಹಳ ಸುಂದರವಾಗಿ ಕಾಣುತ್ತವೆ. ನೀವು ಹತ್ತಿರ ಬಂದಾಗ, ನಿಮಗೆ ಗೊತ್ತಾಗುತ್ತದೆ ಅಲ್ಲಿ ಮರಳಿನ ಹೊರತಾಗಿ ಬೇರೇನೂ ಇಲ್ಲ ಎನ್ನುವುದು, ಅಲ್ಲಿ ಇರುವುದು ಮರಿಚಿಕೆ ಮಾತ್ರ. ಆಗ ನೀವು ಮತ್ತೊಂದು ಮರಿಚಿಕೆಯ ಬೆನ್ನು ಹತ್ತುತ್ತೀರಿ. ಹೀಗೆಯೇ ಜನ ತಮ್ಮ ಬದುಕನ್ನ ವ್ಯರ್ಥ ಮಾಡಿಕೊಳ್ಳುತ್ತಾರೆ.
ಸುಮ್ಮನೇ ನೀವು ಇರುವ ಹಾಗೆ ನಿಮ್ಮನ್ನು ಒಪ್ಪಿಕೊಳ್ಳಿ. ಯಾವುದನ್ನೂ ಜಡ್ಜ್ ಮಾಡಬೇಕಿಲ್ಲ, ಯಾವುದನ್ನೂ ಖಂಡಿಸಬೇಕಿಲ್ಲ. ಪ್ರತಿಯೊಬ್ಬರೂ ಅನನ್ಯವಾಗಿರುವುದರಿಂದ, ಹೋಲಿಕೆಯ, ಜಡ್ಜ್ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಿಮ್ಮ ಹಾಗಿರುವ ಮನುಷ್ಯ ಹಿಂದೆಯೂ ಇರಲಿಲ್ಲ, ಮುಂದೆಯೂ ಇರುವುದು ಸಾಧ್ಯವಿಲ್ಲ ಆದ್ದರಿಂದ ಹೋಲಿಕೆ ವ್ಯರ್ಥ ವಿಷಯ. ನೀವು ಹೀಗೆಯೇ ಇರಬೇಕೆಂದು ಅಸ್ತಿತ್ವ ಬಯಸುತ್ತದೆ, ಆದ್ದರಿಂದಲೇ ನೀವು ಹೀಗಿದ್ದೀರಿ. ಅಸ್ತಿತ್ವದೊಂದಿಗೆ ಜಗಳ ಮಾಡಬೇಡಿ, ನಿಮ್ಮನ್ನೂ ನೀವು ಇಂಪ್ರೂವ್ ಮಾಡಿಕೊಳ್ಳುವ ಸಾಹಸಕ್ಕೆ ಇಳಿಯಬೇಡಿ, ಹಾಗೇನಾದರೂ ಮಾಡಿದಿರಾದರೆ ನೀವು ಗೊಂದಲವನ್ನು ಸೃಷ್ಟಿ ಮಾಡುತ್ತೀರಿ. ಹೀಗೆ ಮಾಡಿಯೇ ಜನ ತಮ್ಮ ಬದುಕನ್ನ ಗೊಂದಲದ ಗೂಡಾಗಿಸಿಕೊಂಡಿದ್ದಾರೆ.
ಆದ್ದರಿಂದ ನಾನು ಹೇಳುವುದು ಇಷ್ಟೇ : ನಿಮ್ಮನ್ನು ನೀವು ಒಪ್ಪಿಕೊಳ್ಳಿ. ಇದು ಕಠಿಣ, ಬಹಳ ಕಠಿಣ ಏಕೆಂದರೆ ಐಡಿಯಲಿಸ್ಟಿಕ್ ಮೈಂಡ್ ಯಾವಾಗಲೂ ತಕರಾರು ಮಾಡುತ್ತದೆ “ ನೀವು ಏನು ಮಾಡುತ್ತಿದ್ದೀರಿ? ನೀವು ಮಾಡುತ್ತಿರುವುದು ಸರಿ ಇಲ್ಲ . ನೀವು ಮಹಾನತೆಯನ್ನು ಸಾಧಿಸಬೇಕು, ನೀವು ಬುದ್ಧ ಆಗಬೇಕು ಅಥವಾ ಕ್ರಿಸ್ತ ಆಗಬೇಕು, ಏನು ಮಾಡುತ್ತಿದ್ದೀರಿ ನೀವು?” ಇತ್ಯಾದಿಯಾಗಿ.
ನಿಮ್ಮನ್ನು ನೀವು ಒಪ್ಪಿಕೊಳ್ಳಿ. ಈ ಒಪ್ಪಿಕೊಳ್ಳುವಿಕೆಯಲ್ಲಿಯೇ ಬುದ್ಧತ್ವ ಇದೆ.
ಇದು ಅತ್ಯಂತ ಮಹತ್ವದ ತಿಳುವಳಿಕೆ. ನೀನು ಬದುಕು ಅಷ್ಟೇ ಯಾವ ‘ಆಗುವ’ ಹಂಬಲಕ್ಕೂ ಬೀಳಬೇಡ. ‘ಬುದ್ಧತ್ವ’ ಇರುವ ಸ್ಥಿತಿ ‘ಆಗುವ’ ಪ್ರಕ್ರಿಯೆ ಅಲ್ಲ. ಬುದ್ಧ ಆಗುವುದು ಸಾಧ್ಯವೇ ಇಲ್ಲ. ನೀನು ಬುದ್ಧ ಅಥವಾ ಬುದ್ಧ ಅಲ್ಲ, ಇರುವ ಸ್ಥಿತಿಗಳು ಇವೆರಡೇ. ಸಾಮಾನ್ಯ ಕಲ್ಲು, ವಜ್ರ ಆಗುವುದು ಹೇಗೆ ಸಾಧ್ಯ? ಅದು ವಜ್ರ ಹೌದು ಅಥವಾ ಅಲ್ಲ ಇವೆರಡೇ ನಿಜಗಳು. ಇಲ್ಲಿ ‘ ಆಗುವಿಕೆ’ ಸಾಧ್ಯವಿಲ್ಲ. ಈಗ ನೀವು ನಿರ್ಧರಿಸಿ. ಈಗ ನೀವು ಏನಾಗಿರುವಿರೋ ಆ ಆಗಿರುವುದನ್ನ ಅರಿತುಕೊಂಡು ಸುಮ್ಮನಾಗಿ, ಆಗುವ ಎಲ್ಲ ಪ್ರಯತ್ನಗಳನ್ನ ಕೈಬಿಡಿ. ಈ ನಿಮ್ಮ ಇರುವಿಕೆಯನ್ನ ನೀವು ಅರ್ಥ ಮಾಡಿಕೊಂಡಾಗ ಎಲ್ಲ ಪ್ರಯತ್ನಗಳನ್ನು ಕೈಬಿಟ್ಟಾಗ ಶೂನ್ಯವನ್ನ ಪ್ರವೇಶ ಮಾಡುವಿರಿ.
ಒಳ್ಳೆಯದು, ಕೆಟ್ಟದ್ದು ಅಂತೇನಿಲ್ಲ. ದಾರಿ ಅಂತ ಯಾವುದಿಲ್ಲ. ದಾರಿ ಇದೆ ಎನ್ನುವುದಾದರೆ ಅಲ್ಲಿ ಯಾವುದೋ ಗುರಿ, ಯಾವುದೋ ಆಗುವಿಕೆಯ ಸಾಧ್ಯತೆ ಇದೆ. ದಾರಿ ಎಂದರೆ ಒಂದಿಷ್ಟು ದೂರ ಪ್ರಯಾಣ ಮಾಡಬೇಕು ಎಂದರ್ಥ. ದಾರಿ ಎಂದರೆ ನಿಮ್ಮ ಇರುವಿಕೆ ಮತ್ತು ಆಗುವಿಕೆಯ ನಡುವೆ ಅಂತರವಿದೆ. ನಾನು ಪ್ರಯಾಣ ಮಾಡಿ ನಿನ್ನ ಮುಟ್ಟುವುದಾದರೆ ದಾರಿ ಬೇಕು, ನೀವು ಪ್ರಯಾಣ ಮಾಡಿ ನನ್ನ ಮುಟ್ಟ ಬಯಸುವಿರಾದರೆ ದಾರಿ ಬೇಕು, ಆದರೆ ನನ್ನನ್ನೇ ನಾನು ತಲುಪಲು ಯಾವ ದಾರಿ ಬೇಕು ? ಇಲ್ಲಿ ಅಂತರದ ಪ್ರಶ್ನೆಯೇ ಇಲ್ಲ, ದಾರಿಯ ಸಾಧ್ಯತೆಯೇ ಇಲ್ಲ, ಯಾವ ಪ್ರಯತ್ನವೂ ಬೇಕಾಗಿಲ್ಲ.
ಝೆನ್ ಎಂದರೆ ನಮ್ಮನ್ನು ನಾವು ತಲುಪುವುದು ಆದ್ದರಿಂದಲೇ ಝೆನ್ Pathless path ಮತ್ತು Gateless gate. ನಮ್ಮನ್ನು ನಾವು ತಲುಪಲು ಯಾವ ಗೇಟ್ ದಾಟಬೇಕಾಗಿಲ್ಲ ಮತ್ತು ಈ ತಿಳುವಳಿಕೆಯೇ ಗೇಟ್ (Gateless gate). ನಮ್ಮನ್ನು ನಾವು ಮುಟ್ಟಲು ನಾವು ಯಾವ ಅಂತರವನ್ನೂ ಕ್ರಮಿಸಬೇಕಿಲ್ಲ, ಯಾವ ದಾರಿಯಲ್ಲೂ ನಡೆಯಬೇಕಿಲ್ಲ ಈ ತಿಳುವಳಿಕೆಯೇ ದಾರಿ (Pathless path).
ಝೆನ್ ನ ಉದ್ದೇಶವೇ ನಿಮ್ಮನ್ನು ನಿಮ್ಮ ನಿಜದಲ್ಲಿ ನೂಕುವುದು ಈ ಕೂಡಲೆ, ಯಾವ ಮುಂದೂಡುವಿಕೆ ಇಲ್ಲದೆ.

