ಜಾದೂ ಹೇಳಿದ ನೂರು ರೂಪಾಯಿ ಕಥೆ: ಗುಲ್ಜಾರ್

ಮೂಲ: ಗುಲ್ಜಾರ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಇದೆಲ್ಲ ನಡೆದದ್ದು ಜನ, ಸಾಹಿರ್ ನ ಪಾರ್ಥಿವ ಶರೀರವನ್ನ ಹೆಗಲ ಮೇಲೆ ಹೊತ್ತುಕೊಂಡು ಅಂತಿಮ ಯಾತ್ರೆಗೆ ತೆರಳುವ ಮುಂಚೆ. ಜಾದೂನೇ ಈ ಕಥೆ ನನಗೆ ಹೇಳಿದ್ದು.

ಸಾಹಿರ್ ಅಂದ್ರೆ ಗೊತ್ತಲ್ವ, ಸಾಹಿರ್ ಲುಧಿಯಾನ್ವಿ? “ಯೆ ಮೆಹಲೋಂ, ಯೆ ತಖ್ತೊಂ, ಯೆ ತಾಜೋಂ ಕಿ ದುನಿಯಾ..” ಪ್ಯಾಸಾ ಚಿತ್ರದ ಈ ಹಾಡನ್ನ ನೀವು ಕೇಳೇ ಕೇಳಿರ್ತೀರಿ. ಇಂಥ ನೂರಾರು ಅಮರ ಗೀತೆಗಳನ್ನು ಬರೆದವ.
ಜಾದೂ ಅಂದ್ರೆ, ಜಾವೇದ್ ಅಖ್ತರ್; ಜಂಝೀರ,ದೀವಾರ್, ಶೋಲೆ ಮುಂತಾದ ಅನೇಕ ಚಿತ್ರಗಳಿಗೆ ಸಲೀಂ ಜೊತೆಗೂಡಿ ಕಥೆ-ಚಿತ್ರ ಕಥೆ ಬರೆದವ, ನೂರಾರು ಅದ್ಭುತ ಗೀತೆಗಳನ್ನು ರಚಿಸಿದವ.

ಜಾವೆದ್ ನ ಜನ, ಪ್ರೀತಿಯಿಂದ ಜಾದೂ ಅನ್ನುತ್ತಾರೆ. ಅವನ ರಕ್ತದಲ್ಲೇ ಕಾವ್ಯ ಇದೆ. ಅವನು ಬೆಸೆದುಕೊಂಡಿರುವ ಸಂಬಂಧಗಳನ್ನೇ ನೋಡಿ, ಪ್ರಸಿದ್ಧ ಕವಿ ಜಾನ್ ನಿಸಾರ್ ಅಖ್ತರ್, ಅಪ್ಪ, ಸೋದರಮಾವ ಮಜಾಜ್, ತುಂಬ ಒಳ್ಳೆ ಕವಿ. ಜಾದೂಗೆ ಇಷ್ಟೇ ಸಾಕಾಗಲಿಲ್ಲ ಎಂಬಂತೆ ಮುಂದೆ ಶಬನಾ ಆಜ್ಮಿಯನ್ನು ಮದುವೆಯಾಗಿ ಕವಿ ಕೈಫಿ ಆಜ್ಮಿಯವರನ್ನೇ ಮಾವನಾಗಿಸಿಕೊಂಡ.

ಯಾಕೋ ಜಾವೇದ್ ಗೆ ಅಪ್ಪನ ತಲೆ ಕಂಡರಾಗುತ್ತಿರಲಿಲ್ಲ, ಅವ್ವ ಬದುಕಿರುವವರೆಗೂ ಹೇಗೋ ಸಹಿಸಿಕೊಂಡಿದ್ದ. ಆಮೇಲಂತೂ ಮಾತು ಮಾತಿಗೆ ಸಿಡಿದೇಳುತ್ತಿದ್ದ. ಹೀಗೆ ಅಪ್ಪನೊಡನೆ ಜಗಳವಾಡಿದಾಗಲೆಲ್ಲ ಓಡಿ ಹೋಗಿ ಸಾಹಿರ್ ನ ಮನೆ ಸೇರಿಕೊಂಡುಬಿಡುತ್ತಿದ್ದ. ಇವನ ಮುಖ ನೋಡಿದ ಕೂಡಲೇ ಸಾಹಿರ್ ಗೆ ಗೊತ್ತಾಗಿಬಿಡುತ್ತಿತ್ತು. ಮತ್ತೆ, ಅಪ್ಪ ಮಗನ ನಡುವೆ ಏನೋ ಹೊತ್ತಿಕೊಂಡಿದೆಯೆಂದು.

ಜಾವೆದ್ ನ ಮುಂಗೋಪ ಗೊತ್ತಿದ್ದ ಸಾಹಿರ್ ತನಗಿದೆಲ್ಲ ಗೊತ್ತು ಎಂಬುದರ ಸುಳಿವು ಬಿಟ್ಟುಕೊಡುತ್ತಿರಲಿಲ್ಲ. ಜಾವೇದ್ ನನ್ನು ಅವನ ಪಾಲಿಗೇ ಬಿಟ್ಟುಬಿಡುತ್ತಿದ್ದ, ಸ್ವಲ್ಪ ಸಮಯದ ನಂತರ ಅವನನ್ನು ಪ್ರೀತಿಯಿಂದ ಊಟಕ್ಕೇಳಿಸುತ್ತಿದ್ದ.

ಮೌನ ಹೀಗೆ ಮಾತು ಮುರಿದಾಗಲೆಲ್ಲ ಜಾವೇದ್, ಸಾಹಿರ್ ನನ್ನು ತಬ್ಬಿ ಅತ್ತುಬೀಡುತ್ತಿದ್ದ. ತನ್ನ ಅಪ್ಪ ಹಾಗೆ – ಹೀಗೆ, ಅಂತೆಲ್ಲ ಗೋಳಾಡುತ್ತಿದ್ದ.
ಒಮ್ಮೊಮ್ಮೆ ಸಾಹಿರ್ ಗೆ ಇದೆಲ್ಲ ಕಿರಿ ಕಿರಿ ಅನಿಸುತ್ತಿತ್ತು.
ಜಾದೂ “ಇವತ್ತು ಅಖ್ತರ್ ಸಾಹೇಬರು ಊಟಕ್ಕೆ ಬರುತ್ತಿದ್ದಾರೆ”

“ನನ್ನ ಅಪ್ಪ ತಾನೇ, ಈ ಮನುಷ್ಯ ನನ್ನ ಸಮಾಧಾನದಿಂದಿರಲು ಬಿಡುವುದೇ ಇಲ್ಲ ” ಎನ್ನುತ್ತಾ ಜಾದು ಜಾಗ ಖಾಲಿ ಮಾಡುತ್ತಿದ್ದ.

ಜಾದು, ಜಾನ್ ನಿಸಾರ್ ಸಾಹೇಬರ ಮಗನಾದರೂ ಅವನ ಸ್ವಭಾವವೇಲ್ಲ ಸೋದರಮಾವ ಮಜಾಜ್ ನ ಹಾಗೆ. ತುಂಬಾ ಮುಂಗೋಪಿ, ಇವನು ಹೀಗೇ ಅಂತ ಹೇಳೋದಕ್ಕೇ ಆಗುತ್ತಿರಲಿಲ್ಲ. ಇಂಥ ಹುಡುಗನನ್ನು ಸಾಹಿರ್, ಮಗನಂತೆ ಸಾಕಿದ, ಗೆಳೆಯನಂತೆ ಬೆಳೆಸಿದ.
ಜಾನ್ ನಿಸಾರ್ ಸಾಹೇಬರು ತನ್ನ ಮನೆಗೆ ಬರುವುದು ನಿಶ್ಚಯವಾದಾಗಲೆಲ್ಲ, ಸಾಹಿರ್, “ಜಾದೂ ಈರೋಸ್ ನಲ್ಲಿ ತುಂಬ ಒಳ್ಳೆ ಫಿಲ್ಮ್ ಬಂದಿದೆ ನೋಡು, ಮಿಸ್ ಮಾಡಬೇಡ” ಎಂದು ಜಾವೇದ್ ನ ಜೇಬಿಗೆ ಹಣ ತುರುಕುತ್ತಿದ್ದ. ತನ್ನ ಮನೆಯಲ್ಲಿ ಆಗಬಹುದಾಗಿದ್ದ ಅಪ್ಪ ಮಗನ ಯುದ್ಧ ತಪ್ಪಿಸುತ್ತಿದ್ದ.

ಯಾಕೋ ಒಮ್ಮೆ ಜಾದೂ, ಸಾಹಿರ್ ನ ಮೇಲೇ ಸಿಟ್ಟಿಗೆದ್ದ. “ನೀವೆಲ್ಲ ನನ್ನ ಅಪ್ಪನನ್ನು ಸುಂಸುಮ್ನೇ ಹೊಗಳ್ತಿರಾ ಇಲ್ಲ ಸಲ್ಲದ ಮಹತ್ವ ಕೊಡ್ತಿರಾ”

ಜಾವೇದ್ ನ ಆಪಾದನೆಗೆ ಸಾಹಿರ್ ನಕ್ಕುಬಿಟ್ಟ. “ನೋಡು ನೋಡು, ಅವನೂ ನಿನ್ನ ಹಾಗೇ ನಗುತ್ತಾನೆ, ಥೇಟ್ ನಿನ್ನ ಹಾಗೆ, ನೀವೆಲ್ಲ ಒಂದೇ.
ನನಗೆ ಯಾರೂ ಬೇಡ, ನೀನು, ಅವನು, ಯಾರೂ ಬೇಡ” ಎನ್ನುತ್ತ ಜಾವೇದ್, ಸಾಹಿರ್ ಮನೆಯ ಹೊಸ್ತಿಲು ದಾಟಿಬಿಟ್ಟ.

ಆಮೇಲೆ ಕೆಲ ದಿನ ಜಾದೂ ಯಾರ ಕೈಗೂ ಸಿಗಲಿಲ್ಲ. ಮೊದಲೇ ಮುಂಗೋಪಿ, ಜೊತೆಗೆ ಹುಚ್ಚು ಹರೆಯ ಬೇರೆ, ಸ್ವಲ್ಪ ಅತಿ ಎನ್ನಿಸುವ ಆತ್ಮಗೌರವ, ಎಲ್ಲಿ ಊಟ ಮಾಡಿದನೋ, ಎಲ್ಲಿ ಮಲಗಿದನೋ ದೇವರಿಗೂ ಕೂಡ ಗೊತ್ತಿದಿಯೋ ಇಲ್ವೊ ಗೊತ್ತಿಲ್ಲ.

ಸ್ವಲ್ಪ ದಿನ ಕಮಾಲ್ ಅಮ್ರೋಹಿ ಸಾಹೇಬರ ಸ್ಟುಡಿಯೋದಲ್ಲಿ ಕೆಲಸಕ್ಕಿದ್ದನಂತೆ. ದಿನವೇಲ್ಲ ಸ್ಟುಡಿಯೋದ ಫ್ಲೋರ ನಲ್ಲಿ ಕೆಲಸ ರಾತ್ರಿ ಅಲ್ಲೇ ಸ್ಟೋರ್ ರೂಂನಲ್ಲಿ ನಿದ್ದೆ. ಅದು ಹೇಗೋ ಸ್ಟೋರ್ ರೂಂನಲ್ಲಿ ಇವನ ಕೈಗೆ ಮಿನಾಕುಮಾರಿಯ ಎರಡು ಫಿಲ್ಮ್ ಫೇರ್ ಟ್ರೋಫಿಗಳು ಸಿಕ್ಕುಬಿಟ್ಟವು. ಮೀನಾಕುಮಾರಿ, ಕಮಾಲ್ ಸಾಹೇಬರ ಹೆಂಡತಿಯಾಗಿದ್ದವಳು. ಆಮೇಲೆ ಶುರುವಾಯಿತಲ್ಲ ದೊಡ್ಡ ನಿಲುವುಗನ್ನಡಿಯ ಮುಂದೆ ಇವನ ಏಕಪಾತ್ರಾಭಿನಯ!
ಟ್ರೋಫಿ ಹಿಡಿದು ಕನ್ನಡಿಯ ಮುಂದೆ ನಿಂತು ತಾನೇ ಪ್ರಶಸ್ತಿ ಅನೌನ್ಸ್ ಮಾಡಿಕೊಳ್ಳುವುದು, ತಾನೇ ನಾಟಕೀಯವಾಗಿ ಮೈ ಬಗ್ಗಿಸಿ ಟ್ರೋಫಿ ಪಡೆಯುವುದು, ಮುಂದೇ ತಾನೇ ಪ್ರೇಕ್ಷಕನಾಗಿ ಚಪ್ಪಾಳೆ ಹೊಡೆಯುವುದು. ಇದೆಲ್ಲ ಒಂದು ಕನಸು ಎಂದು ಜಾದೂ ಕೊನೆಗೂ ಒಪ್ಪಲೇ ಇಲ್ಲ.

ಮುಂದೆ ಹಲವಾರು ರಾತ್ರಿ ಈ ತಾಲೀಮನ್ನು ಜಾದೂ , ಅತ್ಯಂತ ಶ್ರದ್ಧೆಯಿಂದ ಮಾಡಿದ. ಮುಂದೆ ಕೆಲ ವರ್ಷಗಳ ನಂತರ ಫಿಲ್ಮ್ ಫೇರ್ ಪ್ರಶಸ್ತಿಗಳು ಅವನ ಹೆಸರಿಗೇ ಹರಿದು ಬಂದಾಗ, ಜಾದು ಇದನ್ನೆಲ್ಲ ತನ್ನ ಸಂದರ್ಶಕರ ಮುಂದೆ ಹಂಚಿಕೊಂಡಿದ್ದಿದೆ.

ಮುಂದೊಂದು ದಿನ ಜಾದೂ ಸಾಹಿರ್ ನ ಮನೆಯಲ್ಲಿ ಧಿಡೀರನೇ ಪ್ರತ್ಯಕ್ಷನಾದ. “ನಾನೇನೂ ಇಲ್ಲಿರಲಿಕ್ಕೆ ಬಂದಿಲ್ಲ, ನಾನು ಸ್ನಾನ ಮಾಡಬೇಕು ಅಷ್ಟೇ, ಅದೂ ನಿನ್ನ ಅಪ್ಪಣೆಯಿದ್ದರೆ ಮಾತ್ರ”

ಜಾವೇದನ ಮುಖ ಕಳೆಗುಂದಿದ್ದರೂ ದನಿಯಲ್ಲಿ ಸೊಕ್ಕಿಗೇನೂ ಕಡಿಮೆಯಿರಲಿಲ್ಲ. “ಆಗಲಿ ಹಾಗೇ ಮಾಡು, ಆಮೇಲೆ ಅಲ್ಲೊಂದಿಷ್ಟು ತಿಂಡಿ ಇದೆ, ತಿಂದು ಬಿಡು” ಸಾಹಿರ್ ನಸು ನಕ್ಕ.

“ಇಲ್ಲ, ನಾನೇನು ಇಲ್ಲಿ ತಿಂಡಿ ಹುಡುಕಿಕೊಂಡು ಬಂದಿಲ್ಲ, ಬೇರೆಲ್ಲಾದರೂ ತಿಂದೇನು, ನಿನ್ನ ಮನೆಯಲ್ಲಿ ಮಾತ್ರ ತಿನ್ನುವುದಿಲ್ಲ” ಜಾದೂ ಇನ್ನೂ ಧುಮುಗುಡುತ್ತಿದ್ದ.

ಜಾದೂ ಸ್ನಾನ ಮುಗಿಸಿ ಬರುವಷ್ಟರಲ್ಲಿ ಸಾಹಿರ್, ಡೈನಿಂಗ್ ಟೇಬಲ್ ಮೇಲೆ ನೂರು ರೂಪಾಯಿಯ ನೋಟೊಂದನ್ನು ಇಟ್ಟು ಮಾತುಗಳಿಗಾಗಿ ತಡಕಾಡುತ್ತಿದ್ದ.

ಜಾವೇದ್ ಎಂಥ ಉಗ್ರ ಅತ್ಮಾಭಿಮಾನಿ ಎಂಬುದು ಸಾಹಿರ್ ಗೆ ಚೆನ್ನಾಗಿ ಗೊತ್ತಿತ್ತು. ಕೊನೆಗೂ ಧೈರ್ಯ ಮಾಡಿದ, “ಜಾದೂ ಆ ಟೇಬಲ್ ಮೇಲೆ ನೂರು ರೂಪಾಯಿ ಇದೆ, ಇಟ್ಟುಕೊಂಡಿರು, ನನಗೆ ಬೇಕಾದಾಗ ಕೇಳುತ್ತೇನೆ”

ಅವತ್ತೂ ಕೂಡ ನೂರು ರೂಪಾಯಿಗೆ ಮುತ್ತು ರತ್ನ ಏನೂ ಬರುತ್ತಿರಲಿಲ್ಲ. ಆದರೂ ನೂರು ರೂಪಾಯಿ ಸಿಕ್ಕರೆ ಎಲ್ಲರೂ ಬ್ಯಾಂಕ್ ಗೆ ಇಲ್ಲ ಪೆಟ್ರೋಲ್ ಬಂಕ್ ಗೆ ಚಿಲ್ಲರೆ ಮಾಡಿಸಲು ಹೋಗುತ್ತಿದ್ದರು. ಅಷ್ಟು ಮಹತ್ವ ಇದ್ದೇ ಇತ್ತು ಅದಕ್ಕೆ.

ಯಾಕೋ ಜಾವೇದ್ ಅಂದು ಸಿಟ್ಟಾಗಲಿಲ್ಲ. “ಆಗಲಿ ಇಟ್ಟುಕೊಂಡಿರುತ್ತೇನೆ, ನನಗೆ ಮೊದಲ ಸಂಬಳ ಬಂದ ದಿನ ವಾಪಸ್ಸು ಮಾಡುತ್ತೇನೆ”
ಜಾದೂ ದನಿಯಲ್ಲಿ ಏನೋ ಉಪಕಾರ ಮಾಡಿದ ಭಾವವಿತ್ತು.

ಆಮೇಲೆ ಜಾವೇದ್ ಗೆಳೆಯ ಸಲೀಂ ಜೊತೆ ಕೆಲಸ ಶುರು ಮಾಡಿದ, ಅವರಿಬ್ಬರೂ ಸೇರಿ ಒಳ್ಳೊಳ್ಳೆ ಸಿನೇಮಾಗಳಿಗೆ ಸ್ಕ್ರಿಪ್ಟ್ ಮಾಡಿದರು. ಸಾವಿರಾರು ರೂಪಾಯಿ ಗಳಿಸಿದರು. ಕುಡಿದಾಗಲೆಲ್ಲ ಜಾವೇದ್, ಸಾಹಿರ್ ನಂತೆಯೇ ತೊದಲುತ್ತಿದ್ದ, ತನ್ನ ಅಪ್ಪನನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಆದರೂ ಯಾಕೋ ಜಾದೂ, ಆ ನೂರು ರೂಪಾಯಿ ಸಾಹಿರ್ ಗೆ ವಾಪಸ್ಸು ಕೊಡಲೇ ಇಲ್ಲ. ಸಾಹಿರ್ ” ನಿನ್ನ ನೂರು ರೂಪಾಯಿ ನನ್ನಲ್ಲಿ ಜೀರ್ಣವಾಗಿ ಹೋಗಿದೆ, ಮರೆತು ಬಿಡು ಅದನ್ನು” ಜಾವೇದ್ ಛೇಡಿಸುತ್ತಿದ್ದ.

“ನಿನ್ನಿಂದ ಅದನ್ನು ಹೇಗೆ ಪೀಕಿಸಬೇಕೆಂಬುದು ನನಗೆ ಚೆನ್ನಾಗಿ ಗೊತ್ತು, ನೀನು ಕಾಳಜಿ ಮಾಡಬೇಡ” ಸಾಹಿರ್ ನಗುತ್ತಿದ್ದ.

ಸಾಹಿರ್ ಗೆ ತುಂಬ ಜನ ಗೆಳೆಯರಿರಲಿಲ್ಲ, ಆದರೆ ಇದ್ದವರಿಗಾಗಿ ಮಾತ್ರ ಆತ ಪ್ರಾಣವನ್ನೇ ಬಿಡುತ್ತಿದ್ದ.
ಕುಡಿತ ಅವನನ್ನು ಕಿತ್ತು ತಿನ್ನುತ್ತಿತ್ತು. ಒಂದೆರಡು ಪೆಗ್ ಮುಗಿಯುತ್ತಲೇ ಕೆಟ್ಟದಾಗಿ ಬಯ್ಯಲು ಶುರು ಮಾಡುತ್ತಿದ್ದ.
ತನಗಾಗದವರನ್ನು ಬೆತ್ತಲೆ ಮಾಡಿಬಿಡುತ್ತಿದ್ದ. ಒಮ್ಮೆ ಗೆಳೆಯನೊಬ್ಬ ಕೇಳಿದ “ಯಾಕೋ ಸಾಹಿರ್, ಎರಡು ಪೆಗ್ ಆದ ಮೇಲೆ ಅಷ್ಟು ಕೆಟ್ಟದಾಗಿ ಬಿಹೇವ್ ಮಾಡ್ತೀಯಾ?”

“ಈ ವಿಸ್ಕಿ ಎಷ್ಟು ಕೆಟ್ಟದಾಗಿರತ್ತೆ ಗೊತ್ತಾ ಗೆಳೆಯ ನಿನಗೆ? ಕುಡಿಯುವಾಗ ಬಾಯಿಗೆ ಈ ಉಪ್ಪಿನಕಾಯಿ ಬೇಕೆ ಬೇಕು ಕಣೋ ” ಸಾಹಿರ್ ಮಾತು ತೇಲಿಸಿ ಬಿಡುತ್ತಿದ್ದ.

ಡಾ.ಕಪೂರ್ ಸಾಹಿರ್ ನ ಗೆಳೆಯರಷ್ಟೇ ಅಲ್ಲ ವೈದ್ಯರೂ ಆಗಿದ್ದರು. ಸ್ವತಃ ಹೃದಯ ರೋಗಿಯಾಗಿದ್ದರೂ ಸಾಹಿರ್ ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಸಾಹಿರ್ ತಮಾಷೆ ಮಾಡುತ್ತಿದ್ದ. “ಡಾ.ಕಪೂರ್, ನಾನು ನಿಮ್ಮ ಮನೆಗೆ ಬರುವುದು ನನ್ನ ಚೆಕ್ ಅಪ್ ಗೋ ಇಲ್ಲ ನಿಮ್ಮನ್ನು ನೋಡಿಕೊಳ್ಳಲೋ”

ಅವತ್ತು ಸಾಹಿರ್ ಡಾಕ್ಟರ ಮನೆಗೆ ಹೋಗಿದ್ದ, ಡಾ.ಕಪೂರ್ ಗೆ ಹುಶಾರಿರಲಿಲ್ಲ, ಹೃದಯತಜ್ಞ ಡಾ.ಸೇಠ್ ಬರುವವರಿದ್ದರು. ಸಾಹಿರ್, ಡಾ.ಕಪೂರ್ ರನ್ನು ಖುಶಿಯಾಗಿರಿಸಲು ಇಸ್ಪೀಟಿನ ಟ್ರಿಕ್ ಮಾಡಿ ತೋರಿಸುತ್ತಿದ್ದ.

ಡಾ.ಕಪೂರ್ ನೋಡ ನೋಡುತ್ತಿದ್ದಂತೆಯೇ ಸಾಹಿರ್ ನ ಮುಖದ ಸ್ನಾಯುಗಳು ಬಿಗಿಯತೊಡಗಿದವು
ಸಾಹಿರ್ ಕಷ್ಟ ಮುಚ್ಚಿಕೊಳ್ಳಲು ಹೆಣಗಾಡುತ್ತಿದ್ದ
ಡಾ.ಕಪೂರ್ ಗಾಬರಿಯಿಂದ ಕೂಗಿದರು “ಸಾಹಿರ್, ಸಾಹಿರ್”
ಸಾಹಿರ್, ಡಾ.ಕಪೂರ್ ರ ಹಾಸಿಗೆಯಲ್ಲೇ ಕುಸಿದ. ಅಷ್ಟರಲ್ಲೇ ಅಲ್ಲಿಗೆ ಡಾ.ಸೇಠ್ ಬಂದರು ಸಾಧ್ಯವಾದದ್ದೆಲ್ಲವನ್ನೂ ಮಾಡಿದರು ಆದರೆ ಸಾಹಿರ್ ಇಹಲೋಕ ತ್ಯಜಿಸಿಯಾಗಿತ್ತು.

ಡಾ.ಕಪೂರ್ ಗಾಬರಿಯಾದರು, ಸಾಹಿರ್ ನ ಡ್ರೈವರ ಅನ್ವರ್ ಓಡಿಬಂದು ಸಾಹಿರ್ ನ ಗೆಳೆಯರಿಗೆಲ್ಲ ಫೋನ್ ಮಾಡತೊಡಗಿದ. ಅವತ್ತು ಯಶ್ ಚೋಪ್ರಾ ಕಾಶ್ಮೀರದಲ್ಲಿದ್ದರು.

ಸುದ್ದಿ ತಿಳಿದ ಜಾದೂ ಕಂಗಾಲಾದ. ಅವನ ಡ್ರೈವರ್ ಅಂದು ರಜೆಯಲ್ಲಿದ್ದ. ಜಾದೂ ಟ್ಯಾಕ್ಸಿ ಬಾಡಿಗೆ ಮಾಡಿಕೊಂಡು ನೇರವಾಗಿ ಅಲ್ಲಿಗೆ ಧಾವಿಸಿದ. ಅದೇ ಟ್ಯಾಕ್ಸಿಯಲ್ಲಿ ಸಾಹಿರ್ ನ ದೇಹವನ್ನ ಅವನ ಸ್ವಂತ ಮನೆ “ಪರಛಾಯಿಯಾಂ” ಗೆ ಸಾಗಿಸಿದ ಅನ್ವರ್, ಟ್ಯಾಕ್ಸಿ ಡ್ರೈವರ್ ಎಲ್ಲ ಸೇರಿ ಸಾಹಿರ್ ನ ಶರೀರವನ್ನ ಬಂಗಲೆಯ ಫಸ್ಟ್ ಫ್ಲೋರ್ ಗೆ ಹೊತ್ತೊಯ್ದರು.

ಟ್ಯಾಕ್ಸಿಯಲ್ಲಿ ಜಾದೂ ಮೂಕನಾಗಿಬಿಟ್ಟಿದ್ದ. ಮನೆ ಸೇರಿದೊಡನೇ, ಸಾಹಿರ್ ನ ಶರೀರವನ್ನು ತಬ್ಬಿ ಒಂದೇ ಸವನೇ ಅಳತೊಡಗಿದ. ಕೋಪ ಮಾಡಿಕೊಳ್ಳಲಿಕ್ಕೆ ಇನ್ನು ಯಾರ ಮನೆಗೆ ಹೋಗುವುದು? ಜಾದೂ ಗರಬಡಿದವನಂತೆ ಕುಳಿತುಬಿಟ್ಟ

ಯಾರೋ ಹೇಳಿದರು, “ಕಳೆಬರದ ಕೈ ಕಾಲು ಮಡಚಿಬಿಡಿ ಹೊತ್ತಾದರೆ ದೇಹ ಸೆಟೆದುಕೊಂಡು ಬಿಡತ್ತೆ”

ಜಾದು ಅಳುತ್ತಲೇ ಎಲ್ಲ ಆಜ್ಞೆ ಪಾಲಿಸುತ್ತಿದ್ದ ಬೆಳಗಾಗುತ್ತಿದ್ದಂತೆ ಗೆಳೆಯರು, ನೆರೆ ಹೊರೆಯವರು ಬಂಧುಗಳು ಸೇರತೊಡಗಿದರು. ಎಲ್ಲರಿಗೂ ಕುಳಿತುಕೊಳ್ಳಲ್ಲಿಕ್ಕೆ ಖುರ್ಚಿ ಬೆಡ್ ಶೀಟ್ ವ್ಯವಸ್ಥೆ ಮಾಡಬೇಕಿತ್ತು. ಜಾದು ಅಳುತ್ತಲೇ ಎಲ್ಲ ನೋಡಿಕೊಳ್ಳುತ್ತಿದ್ದ.

ಶವ ಸಂಸ್ಕಾರದ ವ್ಯವಸ್ಥೆ ಮಾಡಲು ಜಾದು ಮೆಟ್ಟಲಿಳಿದು ಕೆಳಗೆ ಬಂದ. ನಿನ್ನೆ ರಾತ್ರಿ ಕರೆದುಕೊಂಡು ಬಂದಿದ್ದ ಟ್ಯಾಕ್ಸಿ ಡ್ರೈವರ್ ಇನ್ನೂ ಅಲ್ಲೆ ನಿಂತಿದ್ದನ್ನು ನೋಡಿ ಜಾವೇದ್ ಗೆ ಕಸಿವಿಸಿಯಾಯಿತು.

“ಮೊದಲೇ ನೆನಪಿಸಬಾರದಿತ್ತೆ ? ಕ್ಷಮಿಸು ಎಷ್ಟು ಹಣ ಕೊಡಬೇಕು ನಿನಗೆ ನಾನು?”

“ನನಗೇನೂ ಹಣ ಬೇಡ ಸಾಬ್, ದುಡ್ಡಿಗಾಗಿ ನಾನು ಇಲ್ಲಿ ನಿಂತಿಲ್ಲ.
ಇಷ್ಟೆಲ್ಲ ಆದ ಮೇಲೆ ರಾತ್ರಿ ಹೇಗೆ ಮನೆಗೆ ಹೋಗಿ ಮಲಗಿಕೊಳ್ಳಲಿ?” ಅಂತಃಕರುಣಿ ಡ್ರೈವರ್ ಸಣ್ಣ ದನಿಯಲ್ಲಿ ಹೇಳಿದ.

ಜಾದೂ ಜೇಬಿನಿಂದ ಪರ್ಸ್ ಹೊರತೆಗೆದ. “ಬೇಡ ಸರ್, ದಯವಿಟ್ಟು ಬೇಡ”. ಡ್ರೈವರ್ ತಲೆಅಲ್ಲಾಡಿಸುತ್ತ ನುಡಿದ.

ಜಾದೂ ಸಿಟ್ಟಿನಿಂದ ಕೂಗಿದ, “ಸುಮ್ಮನೆ ಇಟ್ಟುಕೊ ಈ ನೂರು ರೂಪಾಯಿ, ಇಟ್ಟುಕೊ ಅಂದ್ರೆ ಇಟ್ಟುಕೊಬೇಕು. ಕೊನೆಗೂ ಸಾಹಿರ್ ನನ್ನಿಂದ ಈ ನೂರು ರೂಪಾಯಿ ಇಸಿದುಕೊಂಡು ಬಿಟ್ಟ, ಸತ್ತರೂ ಬಿಡಲಿಲ್ಲ”

ಜಾದೂ ಚೂರು ಚೂರಾಗಿಬಿಟ್ಟಿದ್ದ. ದುಃಖದ ಕಟ್ಟೆ ಒಡೆದು ಒಂದೇ ಸವನೇ ಅಳತೊಡಗಿದ.

ಇದೆಲ್ಲ ನಡೆದದ್ದು ಜನ,
ಸಾಹಿರ್ ನ ಪಾರ್ಥಿವ ಶರೀರವನ್ನ
ಹೆಗಲ ಮೇಲೆ ಹೊತ್ತುಕೊಂಡು
ಅಂತಿಮ ಯಾತ್ರೆಗೆ ತೆರಳುವ ಮುಂಚೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.