ಬದುಕಿಗೆ ಹಾಡಾಗುವ ಸಾಧ್ಯತೆ ಇದೆ, ಆದರೆ ಇದನ್ನು ಜನ ಮಿಸ್ ಮಾಡಿಕೊಂಡು ಬಿಡಬಹುದು; ಇದು ಅನಿವಾರ್ಯವೇನಲ್ಲ. ಸಾಧ್ಯತೆ ಇದೆ ಖಂಡಿತ, ಆದರೆ ಇದನ್ನ ಸಾಧ್ಯಮಾಡಿಕೊಳ್ಳಬೇಕು. ಬಹಳಷ್ಟು ಜನ ಯೋಚಿಸುವುದೇನೆಂದರೆ, ಅವರು ಹುಟ್ಟಿದಾಗಲೇ ಎಲ್ಲವೂ ಮುಗಿದುಹೋಗಿಬಿಟ್ಟಿತ್ತು. ಆದರೆ ಯಾವುದು ಮುಗಿದು ಹೋಗಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರವಾದಿಗೊಂದು
ಸಾಕ್ಷಾತ್ಕಾರವಾಯಿತು.
“ನೀನು ಸದಾ
ಪ್ರೇಮಿಗಳ ಸಹವಾಸದಲ್ಲಿರು
ಆಗ ಮಾತ್ರ
ನಿನ್ನೊಳಗಿನ ಬೆಂಕಿ
ಈ ವಿಶ್ವವನ್ನು ಬೆಚ್ಚಗಿಡುತ್ತದೆ.
ಅಕಸ್ಮಾತ್ ಬೆಂಕಿಯ ಮೇಲೆ
ಬೂದಿ ಕುಳಿತುಕೊಂಡರೆ
ಕೆಲವರು
ಸುಟ್ಟು ಸಾಯುತ್ತಾರೆ
ಇನ್ನೂ ಕೆಲವರು ಸಾಯುತ್ತಾರೆ
ಚಳಿಯಿಂದ ನಡುಗಿ.
– ರೂಮಿ.
ಒಬ್ಬರು ಹುಟ್ಟಿದಾಗ, ಅವರಿಗೆ ಸಂಬಂಧಿತ ಸಂಗತಿಗಳು ಶುರುವಾಗುತ್ತವೆ, ಇದು ಕೇವಲ ಶುರುವಾತು ಮಾತ್ರ. ನಿಮ್ಮ ಇಡೀ ಬದುಕಿನಲ್ಲಿ ಲಕ್ಷಾಂತರ ಬಾರಿ ನಿಮ್ಮ ಹುಟ್ಟು ಆಗಬೇಕಾಗುತ್ತದೆ : ನೀವು ಮತ್ತೆ ಮತ್ತೆ ಮತ್ತೆ ಹುಟ್ಟ ಬೇಕಾಗುತ್ತದೆ.
ಜನರಿಗೆ ಇಂಥ ಸಾಧ್ಯತೆ ಇದೆ, ಎಷ್ಟೊಂದು ಅಂಶಗಳು; ಅವರಿಗೆ ಹಲವಾರು ಆಯಾಮಗಳಿವೆ. ಆದರೆ ಜನ ತಮ್ಮ ಅಸ್ತಿತ್ವವನ್ನು ಶೋಧಿಸುವುದಿಲ್ಲ , ಹಾಗಾಗಿ ಬದುಕು ದುಃಖದಿಂದಲೇ, ಬಡತನದಿಂದಲೇ ತುಂಬಿಕೊಂಡಿರುತ್ತದೆ. ಇದು ನಿಜವಾದ ಬಡತನ. ಹೊರಗಿನ ಬಡತನ ಅಂಥ ದೊಡ್ಡ ಸಮಸ್ಯೆಯೇನಲ್ಲ ; ಇದು ಬಗೆಹರಿಯುತ್ತದೆ. ತಾಂತ್ರಿಕತೆ ಎಷ್ಟು ಮುಂದುವರೆದಿದೆಯೆಂದರೆ, ಆದಷ್ಟು ಬೇಗ ಬಡತನ ಭೂಮಿಯಿಂದ ಮಾಯವಾಗಿಬಿಡಲಿದೆ; ಈಗ ಆ ಸಮಯ ಹತ್ತಿರವಾಗಿದೆ. ನಿಜವಾದ ಸಮಸ್ಯೆಯೆಂದರೆ ಒಳಗಿನ ಬಡತನದ್ದು. ಶ್ರೀಮಂತರು ಕೂಡ ಈ ಒಳಗಿನ ಬಡತನದಿಂದ ನರಳುತ್ತಿದ್ದಾರೆ. ಅವರ ದೇಹ ಆಹಾರದಿಂದ ತುಂಬಿ ತುಳುಕುತ್ತಿದ್ದರೆ, ಆತ್ಮ ಹಸಿವೆಯಿಂದ ನರಳುತ್ತಿದೆ. ಅವರು ಇನ್ನೂ ಬದುಕಿನ ಹಾಡನ್ನು ಕೇಳಿಸಿಕೊಂಡಿಲ್ಲ, ಈ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಅವರು ಹೇಗೂ ಭೂಮಿಯ ಮೇಲೆ ಬದುಕುತ್ತಿದ್ದಾರೆ, ಹೇಗೋ ಬದುಕನ್ನ ಮ್ಯಾನೇಜ್ ಮಾಡುತ್ತಿದ್ದಾರೆ, ಅಲ್ಲಿ ಯಾವ ಖುಶಿಯೂ ಇಲ್ಲ.
ಅದ್ಭುತ ಹಾಡಿನ ಸಾಧ್ಯತೆ ಇದೆ, ಅಪಾರ ಶ್ರೀಮಂತಿಕೆಯ ಸಾಧ್ಯತೆಯಿದೆ, ಆದರೆ ಇದನ್ನು ಶೋಧಿಸುವ ಕೆಲಸ ಶುರುವಾಗಬೇಕು. ಮತ್ತು ಬದುಕಿನ ಹಾಡನ್ನು ಶೋಧಿಸುವ ಅತ್ಯುತ್ತಮ ಮಾರ್ಗವೆಂದರೆ ಪ್ರೇಮಿಸುವುದು ; ಇದು ಅತ್ಯುತ್ತಮ ವಿಧಾನ. ಹೇಗೆ ತರ್ಕ, ವಿಜ್ಞಾನದ ಅತ್ಯುತ್ತಮ ವಿಧಾನವೋ ಹಾಗೆಯೇ ಪ್ರೇಮ, ಆತ್ಮದ ಶೋಧನೆಯ ಅತ್ಯುತ್ತಮ ವಿಧಾನ. ಹೇಗೆ ತರ್ಕ, ನಿಮಗೆ ವಿಜ್ಞಾನದ ಆಳವನ್ನು ಶೋಧಿಸಲು ಸಹಾಯ ಮಾಡುತ್ತದೆಯೋ ಹಾಗೆಯೇ, ಪ್ರೇಮ ನಿಮ್ಮ ಪ್ರಜ್ಞೆಯ ಆಳವನ್ನು ಶೋಧಿಸಲು ನೆರವಾಗುತ್ತದೆ. ನೀವು ಪ್ರಜ್ಞೆಯ ಆಳವನ್ನು ಹೆಚ್ಚು ಹೆಚ್ಚು ಪ್ರವೇಶ ಮಾಡಿದಂತೆಲ್ಲ ಹೊಸ ಹೊಸ ಹಾಡುಗಳು ಅನಾವರಣಗೊಳ್ಳುವವು. ಯಾವಾಗ ನೀವು ಅಸ್ತಿತ್ವದ ಕೇಂದ್ರವನ್ನು ಪ್ರವೇಶಿಸುತ್ತೀರೋ ಆಗ ನಿಮ್ಮ ಬದುಕು ಸಂಭ್ರಮವಾಗುತ್ತದೆ, ಭರ್ಜರಿ ಸಂಭ್ರಮ.
ಚೈನಾ ದೇಶದಲ್ಲಿ ಒಬ್ಬ ಮುದುಕಿಯಿದ್ದಳು. ಸುಮಾರು ಇಪ್ಪತ್ತು ವರ್ಷಗಳಿಂದ ಆಕೆ ಸನ್ಯಾಸಿಯೊಬ್ಬನ ಯೋಗಕ್ಶೇಮ ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಗುಡಿಸಲು ಕಟ್ಚಿಸಿ ಕೊಟ್ಟಿದ್ದಳು. ಅವನು ಧ್ಯಾನ ಮಾಡುವಾಗ ಅವನ ಸಕಲ ಬೇಕು ಬೇಡಗಳ ಬಗ್ಗೆ ನಿಗಾ ವಹಿಸುತ್ತಿದ್ದಳು.
ಹೀಗಿರುವಾಗ ಮುದುಕಿಗೆ ಸನ್ಯಾಸಿಯನ್ನು ಅವನ ಧ್ಯಾನ, ಅಧ್ಯಾತ್ಮದ ವಿಷಯವಾಗಿ ಪರೀಕ್ಷಿಸುವ ಮನಸ್ಸಾಯಿತು. ಆಕೆ ಒಬ್ಬ ಸುಂದರ ಯುವತಿಯನ್ನು ಕರೆಸಿ, ಸನ್ಯಾಸಿಯನ್ನು ಅಪ್ಪಿಕೊಂಡು, ಉತ್ತೇಜಿಸುವಂತೆ ಮನವಿ ಮಾಡಿದಳು.
ಯುವತಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಅವನನನ್ನು ಅಪ್ಪಿಕೊಂಡು “ ಮುಂದೇನು “ ಎಂದು ಕೇಳಿದಳು.
“ ಚಳಿಗಾಲದ ಕೊರೆಯುವ ಬಂಡೆಯ ಮೇಲೆ, ಹಳೆಯ ಮರವೊಂದು ಮತ್ತೆ ಚಿಗಿತು ಕೊಳ್ಳುತ್ತದೆ. ಎಲ್ಲೂ ಅನ್ಯೋನ್ಯತೆಗೆ ಜಾಗವಿಲ್ಲ”
ಸನ್ಯಾಸಿ ಕಾವ್ಯಮಯವಾಗಿ ಉತ್ತರಿಸಿದ.
ಯುವತಿ ನಡೆದ ಸಂಗತಿಯನ್ನೆಲ್ಲ ಮುದುಕಿಗೆ ವಿವರಿಸಿದಳು. ಮುದುಕಿಗೆ ಭಯಂಕರ ಸಿಟ್ಟು ಬಂತು. “ ನಿನ್ನ ಬಯಕೆಗಳ ಬಗ್ಗೆ, ಅಗತ್ಯದ ಬಗ್ಗೆ ಅವನು ವಿಚಾರ ಮಾಡಲಿಲ್ಲ, ನಿನ್ನ ಸ್ಥಿತಿಯ ಬಗ್ಗೆ ಕಾರಣ ಕೇಳಲಿಲ್ಲ. ಅವನು ನಿನ್ನ ಉತ್ತೇಜನಕ್ಕೆ ಪ್ರತಿಕ್ರಿಯಿಸಬೇಕಿರಲಿಲ್ಲ ಆದರೆ ನಿನ್ನ ಬಗ್ಗೆ , ನಿನ್ನ ಸ್ಥಿತಿಯ ಬಗ್ಗೆ ಸಹಾನೂಭೂತಿಯಿಂದ ವರ್ತಿಸಬೇಕಿತ್ತು”
ಎನ್ನುತ್ತಾ ಮುದುಕಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಗುಡಿಸಲಿಗೆ ಬೆಂಕಿ ಹಚ್ಚಿಬಿಟ್ಟಳು.

