ಜೋಕ್ ಮಾಡುವುದು ಹೇಗೆ, ನಗುವುದು ಹೇಗೆ, ಖುಶಿಯಾಗಿರುವುದು ಹೇಗೆ ಎನ್ನುವುದನ್ನ ನಾವು ಕಲಿಯುತ್ತೇವೆ. ಇಡೀ ಸಮಾಜ ಹೀಗೆಯೇ ಸಂಭ್ರಮದತ್ತ ಹೆಜ್ಜೆ ಹಾಕುವುದು. ಆದರೆ ಪ್ರತಿಯೊಬ್ಬರೂ ತಮ್ಮೊಳಗೆ ಆಳ, ಕರಾಳ ರಾತ್ರಿಯನ್ನು ಕ್ಯಾರಿ ಮಾಡುತ್ತಿದ್ದಾರೆ, ಮತ್ತು ಯಾರಿಗೂ ಈ ಬಗ್ಗೆ ಅರಿವಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಈಗ ತಾನೇ
ಧ್ಯಾನ ಕಲಿಯಲು ಶುರುಮಾಡಿದವ
ಕೆಟ್ಟ ಕನಸು ಬಿದ್ದ
ಬೇಟೆ ನಾಯಿಯಂತೆ ಕಾಣಿಸುತ್ತಾನೆ.
– Chogyam Trungpa
ನೀವು ಧ್ಯಾನದ ಸ್ಥಿತಿಯನ್ನು ಪ್ರವೇಶಿಸಿದಾಗ ನಿಮಗೆ ಮೊದಲು ಎದುರಾಗುವುದು ಆತ್ಮದ ಕರಾಳ ರಾತ್ರಿ. ಇದನ್ನು ನೀವು ಯಾವ ತೊಂದರೆ ಇಲ್ಲದೇ ದಾಟಿ ಮುಂದುವರೆಯುವಿರಾದರೆ, ಮೊದಲ ಬಾರಿಗೆ ನಿಮಗೆ ಗೊತ್ತಾಗುತ್ತದೆ, ನಿಮ್ಮ ಖುಶಿ ನಿಜದ ಖುಶಿಯಲ್ಲ. ಆಗ ನೀವು ನಿಮ್ಮ ಸುಳ್ಳು ಖುಶಿಯನ್ನು ದಾಟಿ, ನಿಜದ ದುಃಖವನ್ನು ಭೇಟಿ ಮಾಡುತ್ತೀರ. ಮತ್ತು ಈ ನಿಜದ ದುಃಖದ ನಂತರವಷ್ಟೇ ನೀವು ನಿಜದ ಖುಶಿಯನ್ನು ಭೇಟಿ ಮಾಡಲಿದ್ದೀರಿ. ಆಗ ನಿಮಗೆ ಗೊತ್ತಾಗುತ್ತದೆ ನಿಮ್ಮ ಸುಳ್ಳು ಖುಶಿ, ನಿಜದ ದುಃಖಕ್ಕಿಂತ ಕಡೆಯಾದದ್ದೆಂದು. ಏಕೆಂದರೆ ನಿಮ್ಮ ನಿಜದ ದುಃಖದಲ್ಲಿ ಕೊನೆಪಕ್ಷ ವಾಸ್ತವ ಇದೆ. ನೀವು ದುಃಖಿತರಾಗಿದ್ದೀರಿ – ಆದರೆ ನಿಜವಾಗಿ, ನೀವು ಸಿನ್ಸಿಯರ್ ಆಗಿ ದುಃಖಿತರಾಗಿದ್ದರೆ, ಆ ದುಃಖ ಕೂಡ ನಿಮ್ಮನ್ನು ಫಲವತ್ತಾಗಿಸುವುದು.
ಅಂಥ ದುಃಖ ನಿಮಗೆ ಆಳ ಒಳನೋಟವನ್ನು ಲಭ್ಯ ಮಾಡುವುದು. ಅದು ನಿನಗೆ ಬದುಕಿನ ಬಗ್ಗೆ, ಬದುಕಿನ ಅಸಂಖ್ಯಾತ ಸಾಧ್ಯತೆಗಳ ಬಗ್ಗೆ, ಮತ್ತು ಹ್ಯೂಮನ್ ಮೈಂಡ್ ನ ಮಿತಿಗಳ ಬಗ್ಗೆ, ಸುತ್ತಲಿನ ಅನಂತತೆಯನ್ನು ಎದುರಿಸುತ್ತಿರುವ ಮಾನವ ಪ್ರಜ್ಞೆಯ ಕುಬ್ಜತೆಯ ಬಗ್ಗೆ, ಸದಾ ಸಾವಿನಿಂದ ಸುತ್ತುವರೆದಿರುವ ಬದುಕಿನ ದುರ್ಬಲತೆಯ ಬಗ್ಗೆ ಅರಿವು ಮೂಡಿಸುವುದು. ನಿಜವಾಗಿ ನೀವು ದುಃಖಿತರಾಗಿರುವಾಗ ನಿಮಗೆ ಈ ಎಲ್ಲದರ ಕುರಿತಾಗಿ ಅರಿವು ಮೂಡುವುದು. ಆಗ ನಿಮಗೆ ಗೊತ್ತಾಗುತ್ತದೆ ಬದುಕು ಕೇವಲ ಬದುಕಲ್ಲ ಅದು ಸಾವು ಕೂಡ ಎನ್ನುವುದು.
ನೀವು ನಿಜದ ಖುಶಿಯನ್ನು ಅನುಭವಿಸಬೇಕಾದರೆ, ಸುಮ್ಮನೇ ಖುಶಿಯಾಗಿರುವ ನಾಟಕ ಮಾಡುವುದನ್ನು ನಿಲ್ಲಿಸಿ. ಯಾವಾಗ ದುಃಖ ಆಗಮಿಸುವುದೋ ಅದು ಡಾರ್ಕ ಆಗುವುದು ಮತ್ತು ತೀಕ್ಷ್ಣಗೊಳ್ಳುವುದು ನಿಮ್ಮ ಗಮನಕ್ಕೆ ಬರುತ್ತದೆ. ಆದರೆ ಯಾವಾಗ ಕತ್ತಲು ತೀವ್ರವಾಗಿರುತ್ತದೆಯೋ ಆಗ ಬೆಳಗು ಬಹಳ ಹತ್ತಿರದಲ್ಲಿರುತ್ತದೆ. ಒಮ್ಮೆ ಕತ್ತಲೆಯೊಡನೆಯ ನಿಮ್ಮ ಹೋರಾಟ ನಿಂತಾಗ, ಒಮ್ಮೆ ಅದನ್ನು ನೀವು ಒಪ್ಪಿಕೊಂಡಾಗ, ಅದು ನಿಮ್ಮಲ್ಲಿ ಆಳವಾದ ಮೌನವನ್ನು ಸಾಧ್ಯಮಾಡುತ್ತದೆ. ಹೌದು ಇದು ದುಃಖ ನಿಜ ಆದರೆ ಸತ್ಯವಾಗಿರುವುದರಿಂದ ಸುಂದರವೂ ಆಗಿದೆ. ರಾತ್ರಿಗೂ ತನ್ನದೇ ಆದ ಸೌಂದರ್ಯವಿದೆ, ಮತ್ತು ಯಾರು ರಾತ್ರಿಯ ಚೆಲುವನ್ನು ಗಮನಿಸುವುದರಿಂದ ವಂಚಿತರಾಗುತ್ತಾರೋ ಅವರು ಬದುಕಿನ ಬಹಳಷ್ಟನ್ನು ಮಿಸ್ ಮಾಡಿಕೊಳ್ಳುತ್ತಾರೆ.

