ಮಗು ಹುಟ್ಟಿದಾಗ ಅದರ ಮೊದಲ ಆಹಾರ, ಮೊದಲ ಪ್ರೇಮ ಎರಡೂ ಒಂದೇ, ಅದು ಆ ಮಗುವಿನ ತಾಯಿ. ಹಾಗಾಗಿ ಇಲ್ಲಿ ಆಹಾರ ಮತ್ತು ಪ್ರೇಮದ ನಡುವೆ ಆಳವಾದ ಸಂಬಂಧವಿದೆ ; ಹಾಗೆ ನೋಡಿದರೆ ಆಹಾರ ಮೊದಲು ಮತ್ತು ಪ್ರೇಮ ನಂತರ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬೀಜ ಬಿತ್ತು,
ನಿನ್ನ ಹೃದಯವೇ ಅರಳುತ್ತದೆ.
ಪ್ರೀತಿಸು,
ಭಗವಂತನಿಗೆ ಗೊತ್ತಾಗಲಿ
“ಆಹ್!
ಆ ದೇಹದಲ್ಲಿ ಹರಿಯುತ್ತಿರುವ
ರಕ್ತ ನನ್ನದೇ,
ನಾನು ಆ ಆತ್ಮವನ್ನ
ಕಾಫಿ ತಿಂಡಿಗಾದರೂ
ಕರೆಯಲೇಬೇಕು”
ಹಾಡು,
ಇದೊಂದೇ ಹಸಿವಿನಿಂದ
ನರಳುತ್ತಿರುವ ಈ ಜಗತ್ತಿಗೆ
ಬೇಕಾಗಿರುವ ಆಹಾರ.
ಮುಕ್ತವಾಗಿ ನಗು,
ಇದೊಂದೇ ಪರಿಶುದ್ಧವಾದ
ಶಬ್ದ.
– ಹಾಫಿಜ್
ಮೊದಲ ದಿನ ಮಗುವಿಗೆ ಪ್ರೀತಿಯ ಬಗ್ಗೆ ಗೊತ್ತಿರುವುದಿಲ್ಲ. ಅದಕ್ಕೆ ಗೊತ್ತಿರುವುದು ಆಹಾರದ ಭಾಷೆ ಮಾತ್ರ. ಆಹಾರ, ಪ್ರಾಣಿಗಳ ಸಹಜ ಪ್ರಾಚೀನ ಭಾಷೆ. ಮಗು ಹಸಿವಿನೊಂದಿಗೆ ಹುಟ್ಟಿರುತ್ತದೆ; ಮಗುವಿಗೆ ಆಹಾರ ತಕ್ಷಣ ಬೇಕು. ಮಗುವಿಗೆ ಸ್ವಲ್ಪ ಸಮಯದ ವರೆಗೆ ಪ್ರೀತಿಯ ಅವಶ್ಯಕತೆ ಇಲ್ಲ – ಪ್ರೀತಿಯ ತುರ್ತು ಅವಶ್ಯಕತೆ ಇಲ್ಲ. ಪ್ರೀತಿಯ ಹೊರತಾಗಿಯೂ ಇಡೀ ಬದುಕು ಬಾಳಬಹುದು, ಆದರೆ ಆಹಾರದ ಹೊರತಾಗಿ ಸಾಧ್ಯವಿಲ್ಲ ಇದು ತೊಂದರೆ.
ನಿಧಾನವಾಗಿ ಮಗುವಿಗೆ ಹೊತ್ತಾಗುತ್ತದೆ, ಯಾವಾಗೆಲ್ಲ ತಾಯಿ ಪ್ರೇಮಮಯಿಯಾಗಿದ್ದಾಳೋ ಆವಾಗೆಲ್ಲ ಆಕೆ ಒಂದು ವಿಶಿಷ್ಟ ರೀತಿಯಲ್ಲಿ ಮೊಲೆಯುಣಿಸುತ್ತಾಳೆ. ಆಕೆ ಪ್ರೇಮಮಯಿಯಾಗಿರದಿದ್ದಾಗ, ಆಕೆ ಕೋಪದಲ್ಲಿರುವಾಗ ಅವಳು ಮಗುವಿಗೆ ಹಾಲುಣಿಸುವುದರಲ್ಲಿ ಅನಾಸಕ್ತಳಾಗಿರುತ್ತಾಳೆ ಅಥವಾ ಕೆಲವೊಮ್ಮೆ ಅವಳು ಹಾಲುಣಿಸುವುದೇ ಇಲ್ಲ. ಹಾಗಾಗಿ ಮಗುವಿಗೆ ಗೊತ್ತಾಗುತ್ತದೆ, ತಾಯಿ ಪ್ರೇಮಮಯಿಯಾಗಿರುವಾಗ, ಆಕೆ ಹಾಲುಣಿಸುವಾಗ ತನಗೆ ಪ್ರೀತಿ ಲಭ್ಯವಾಗುತ್ತದೆಯೆಂದು. ಇದು ಮಗುವಿನಲ್ಲಿರುವ ಅಪ್ರಜ್ಞಾಪೂರ್ವಕ ಅರಿವು.
ಯಾವಾಗ ಪ್ರೇಮದ ಬದುಕನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರೋ ಆಗ ನೀವು ಹೆಚ್ಚು ಹೆಚ್ಚು ತಿನ್ನುತ್ತೀರಿ. ಆಹಾರ ನಿಮಗೆ ಪ್ರೇಮದ ಪರ್ಯಾಯವಾಗುತ್ತದೆ. ಆಹಾರದ ಕುರಿತಾದ ಸಂಗತಿಗಳು ಬಹಳ ಸರಳ, ಏಕೆಂದರೆ ಆಹಾರ ಒಂದು dead thing. ನೀವು ಆಹಾರವನ್ನು ತಿನ್ನುತ್ತಾ ಹೋಗಬಹುದು. ಆಹಾರ, ನನ್ನ ತಿನ್ನಬೇಡಿ ಎಂದು ನಿಮಗೆ ಹೇಳುವುದಿಲ್ಲ. ಆಹಾರದ ಜೊತೆ ನೀವು ಮಾಸ್ಟರ್ ಆಗಬಹುದು. ಆದರೆ ಪ್ರೇಮದ ವಿಷಯದಲ್ಲಿ ಹಾಗಲ್ಲ, ಅಲ್ಲಿ ನೀವು ಮಾಸ್ಟರ್ ಆಗುವುದು ಸಾಧ್ಯವಿಲ್ಲ. ಆದ್ದರಿಂದ ನಾನು ಹೇಳುತ್ತೇನೆ ಆಹಾರದ ಬಗ್ಗೆ ಕಾಳಜಿ ಮಾಡಬೇಡಿ. ಪ್ರೇಮದ ಬಗ್ಗೆ ಗಮನ ಹರಿಸಿ. ನೀವು ಪ್ರೇಮದಲ್ಲಿ ಒಳಗೊಂಡಿರುವಾಗ ತಕ್ಷಣ ನಿಮಗೆ ಹೊತ್ತಾಗುತ್ತದೆ ಈಗ ನೀವು ಹೆಚ್ಚು ತಿನ್ನುತ್ತಿಲ್ಲ ಎನ್ನುವುದು, ಇದನ್ನು ಗಮನಿಸಿದ್ದೀರಾ? ಖುಶಿಯಾಗಿದ್ದಾಗ ನೀವು ಹೆಚ್ಚು ತಿನ್ನುವುದಿಲ್ಲ. ಖುಶಿಯಾಗಿರುವ ಮನುಷ್ಯ ಎಷ್ಟು ತೃಪ್ತನಾಗಿರುತ್ತಾನೆಂದರೆ, ಅವನು ತನ್ನೊಳಗೆ ಖಾಲೀತನವನ್ನು ಅನುಭವಿಸುವುದೇ ಇಲ್ಲ. ಖುಶಿಯಾಗಿರದ ಮನುಷ್ಯ ತನ್ನ ಖಾಲೀತನವನ್ನ ಆಹಾರದಿಂದ ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಾನೆ.
ನಸ್ರುದ್ದೀನ್ ನ ಕಾರು ಹತೋಟಿ ತಪ್ಪಿ ಒಂದು ತಗ್ಗಿನಲ್ಲಿ ಇಳಿದು ನಿಂತಿತ್ತು. ಸುತ್ತ ಕತ್ತಲೆಯಾಗುತ್ತಿತ್ತು. ನಸ್ರುದ್ದೀನ್ ಕಾರ್ ಮೇಲೆ ಎತ್ತಲು ಬಹಳ ಕಷ್ಟ ಪಡುತ್ತಿದ್ದ. ಅದೇ ಹೊತ್ತಿಗೆ ಅಲ್ಲಿಂದ ಹಾಯ್ದು ಹೋಗುತ್ತಿದ್ದ ಹತ್ತಿರದ ಹಳ್ಳಿಯ ಮನುಷ್ಯ ನಸ್ರುದ್ದೀನ್ ನ ಸ್ಥಿತಿ ನೋಡಿ ಕನಿಕರದಿಂದ ಮಾತನಾಡಿದ.
“ ಕಾರನ್ನ ಆಮೇಲೆ ಎತ್ತಿದರಾಯ್ತು, ನಮ್ಮ ಮನೆ ಹತ್ತಿರದಲ್ಲೇ ಇದೆ ಬಾ ಮೊದಲು ಊಟ ಮಾಡು “
“ ನಾನು ನಿಮ್ಮ ಮನೆಯಲ್ಲಿ ಊಟ ಮಾಡಿದರೆ, ನನ್ನ ಹೆಂಡತಿಗೆ ಇಷ್ಟ ಆಗಲಿಕ್ಕಿಲ್ಲ “
ನಸ್ರುದ್ದೀನ್ ಹಳ್ಳಿಯವನ ಮನೆಗೆ ಊಟಕ್ಕೆ ಹೋಗಲು ಅನುಮಾನಿಸಿದ
ಆದರೆ ಹಳ್ಳಿಯವ ಒತ್ತಾಯ ಮಾಡಿ ನಸ್ರುದ್ದೀನ್ ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿದ. ಊಟ ಮಾಡಿದ ನಸ್ರುದ್ದೀನ್ ಹಳ್ಳಿಯವನಿಗೆ ಧನ್ಯವಾದ ಹೇಳಿ ವಾಪಸ್ ಹೋಗಲು ತಯಾರಾದ,
“ ಊಟ ಬಹಳ ಚೆನ್ನಾಗಿತ್ತು ತುಂಬ ಧನ್ಯವಾದ, ಆದರೂ ನಾನು ನಿಮ್ಮ ಮನೆಯಲ್ಲಿ ಊಟ ಮಾಡಿದ್ದು ನನ್ನ ಹೆಂಡತಿಗೆ ಇಷ್ಟ ಆಗಲಿಕ್ಕಿಲ್ಲ “
“ ಊಟ ಮಾಡಿದೆಯಲ್ಲ ಹೋಗಲಿ ಬಿಡು ಈಗ ಯಾಕೆ ಆ ಮಾತು ? ಹೌದು ನಿನ್ನ ಹೆಂಡತಿ ಎಲ್ಲಿರೋದು ಈಗ ? “
ಹಳ್ಳಿಯವ ವಿಚಾರಿಸಿದ.
“ ಅಲ್ಲೇ ಕಾರು ಜಾರಿರುವ ತಗ್ಗಿನಲ್ಲಿ “
ನಸ್ರುದ್ದೀನ್ ಸಣ್ಣ ದನಿಯಲ್ಲಿ ಉತ್ತರಿಸಿದ.
*******************************

