ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮಿಯ ಖಾಸಗೀತನ
ತನ್ನ ಸುತ್ತ ಚಾಚಿಕೊಂಡಿರುವುದು
ಗೊತ್ತಾಯಿತೆಂದರೆ
ಪ್ರೇಮದಲ್ಲಿ ಮುಳುಗಿದವರಿಗೆ
ನಿದ್ದೆ ಸಾಧ್ಯವಾಗುವುದೇ ಇಲ್ಲ.
ಕೊಂಚ ಬಾಯಾರಿದ ಪ್ರೇಮಿ
ಸ್ವಲ್ಪ ಹೊತ್ತು ಮಲಗಬಹುದೇನೋ,
ಆದರೆ ಅವರಿಗೆ ನಿದ್ದೆಯಲ್ಲೂ
ನೀರಿನ ಕನಸು,
ತುಂಬಿ ಹರಿಯುವ ಹಳ್ಳದ ಪಕ್ಕ
ತಂಬಿಗೆ ತುಂಬ ನೀರು
ಅಥವಾ
ಆ ಇನ್ನೊಬ್ಬರ ಎದೆಯಿಂದ
ಚಿಮ್ಮುತ್ತಿರುವ ಆರ್ದ್ರ ಅಂತಃಕರಣ.
ಇಡೀ ರಾತ್ರಿ
ಈ ಅಪರೂಪದ ಸಂಭಾಷಣೆಗೆ ಕಿವಿಯಾಗಿರಿ,
ಇದೊಂದೇ ಕ್ಷಣ
ನಿಮಗೆ ದಕ್ಕಬಹುದಾದದ್ದು, ದಕ್ಕಬೇಕಾದದ್ದು.
~ ರೂಮಿ
ಪ್ರೀತಿಯ ದೇವರೊಬ್ಬನಿದ್ದಾನೆ ಎನ್ನುವ ಮಿಥ್ ಬಹಳ ಸುಂದರವಾದದ್ದು, ಇದು ಒಂದು ಪ್ರಚಂಡ ತಿಳುವಳಿಕೆ. ಆಗ ಇಬ್ಬರು ಪ್ರೇಮಿಗಳು ತಾವು ಸ್ವತಂತ್ರರಾಗಿರುತ್ತಲೇ ಈ ದೇವರಿಗೆ ಪೂರ್ಣವಾಗಿ ಶರಣಾಗಬಹುದು. ಯಾವಾಗ ನೀವು ಸ್ವತಂತ್ರರಾಗಿರುತ್ತೀರೋ ಆಗ ಅಲ್ಲೊಂದು ಚೆಲುವು ಇದೆ, ಇಲ್ಲವಾದರೆ ನೀವು ನೆರಳಾಗಿಬಿಡುತ್ತೀರ, ಅಥವಾ ನಿಮ್ಮ ಪಾರ್ಟನರ್ ನೆರಳಾಗಿ ಬಿಡುತ್ತಾರೆ. ನಿಮ್ಮ ಪಾರ್ಟನರ್ ನೆರಳಾಗಿಬಿಟ್ಟ ಕ್ಷಣದಲ್ಲಿಯೇ ನೀವು ಅವರೊಳಗಿನ ನಿಮ್ಮ ಆಸಕ್ತಿಯನ್ನು ಕಳೆದುಕೊಳ್ಳಲು ಶುರು ಮಾಡುತ್ತೀರಿ, ಯಾರು ತಾನೆ ನೆರಳನ್ನು ಪ್ರೀತಿಸುವುದು ಸಾಧ್ಯ? ನೀವು ನೆರಳಾಗಿಬಿಟ್ಟರೆ ನಿಮ್ಮ ಸಂಗಾತಿ ನಿಮ್ಮ ಮೇಲಿನ ತಮ್ಮ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ನಾವು ನಿಜದ ಮನುಷ್ಯರನ್ನು ಪ್ರೀತಿಸಲು ಬಯಸುತ್ತೇವೆ, ನೆರಳುಗಳನ್ನಲ್ಲ.
ಯಾರೂ, ಇನ್ನೊಬ್ಬರ ನೆರಳಾಗುವ ಅವಶ್ಯಕತೆಯಿಲ್ಲ. ಆಗ ನೀವು ನೀವಾಗಿರುತ್ತೀರ ಮತ್ತು ನಿಮ್ಮ ಸಂಗಾತಿ ಅವರು ಅವರಾಗಿರುತ್ತಾರೆ. ಹಾಗೆ ನೋಡಿದರೆ ಪ್ರೀತಿಯ ದೇವರಿಗೆ ಶರಣಾಗುವ ಮೂಲಕ ನೀವು ನಿಮ್ಮ ಅಥೆಂಟಿಸಿಟಿಯನ್ನ ಉಳಿಸಿಕೊಳ್ಳುತ್ತೀರ. ಮತ್ತು ನೀವು ಮೊದಲು ಬಾರಿ ಅಥೆಂಟಿಕ್ ಆದಾಗ, ಹಿಂದೆಂದಿಗಿಂತಲೂ ಹೆಚ್ಚು ಅಥೆಂಟಿಕ್ ಆಗಿರುತ್ತೀರಿ. ಇಬ್ಬರು ಅಥೆಂಟಿಕ್ ವ್ಯಕ್ತಿಗಳು ಪರಸ್ಪರ ಪ್ರೀತಿಸಬಹುದು, ಆಳವಾಗಿ ಪ್ರೀತಿಸಬಹುದು. ಮತ್ತು ನಂತರ ಹಿಂದೆ ಸರಿಯುವ ಯಾವ ಪ್ರಶ್ನೆ ಇಲ್ಲ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನೀವು ಪ್ರೀತಿಯ ದೇವರಿಗೆ ಶರಣಾದಾಗ, ನಿಮ್ಮ ಸಂಗಾತಿ ನಿಮ್ಮ ಜೊತೆ ಇರುತ್ತಾರೋ, ನಿಮ್ಮನ್ನು ಬಿಟ್ಟು ಹೋಗುತ್ತಾರೋ ಅಥವಾ ನೀವು ಅವರನ್ನು ಬಿಟ್ಟು ಹೋಗುತ್ತೀರೋ ಎನ್ನುವುದು ಮುಖ್ಯವಾಗುವುದಿಲ್ಲ. ಯಾವುದು ಮುಖ್ಯವೆಂದರೆ ನಿಮ್ಮ ನಡುವೆ ಪ್ರೀತಿ ಇರುವುದು. ನೀವು ಶರಣಾಗುವುದು ಪ್ರೀತಿಗೆ, ನಿಮ್ಮ ಸಂಗಾತಿಗಲ್ಲ. ಆದ್ದರಿಂದ ಪ್ರೀತಿಗೆ ಮೋಸವಾಗಬಾರದು ಅಷ್ಟೇ. ಪ್ರೇಮಗಳು ಬದಲಾಗಬಹುದು ಆದರೆ ಪ್ರೇಮ ಉಳಿದುಕೊಳ್ಳಬೇಕು. ಒಮ್ಮೆ ಇದು ನಿಮಗೆ ಅರ್ಥವಾಯಿತೆಂದರೆ ಮುಂದೆ ಯಾವ ಭಯವಿಲ್ಲ.

