ಸಣ್ಣ ಸಣ್ಣ ಸಂಗತಿಗಳನ್ನೂ ಸಂಭ್ರಮಿಸಬೇಕು – ಮೆಲ್ಲಗೆ ಚಹಾ ಸಿಪ್ ಮಾಡುವುದನ್ನೂ ಸಂಭ್ರಮಿಸಬೇಕು. ಝೆನ್ ಜನರು Tea ceremony ಎನ್ನುವ ಸಂಪ್ರದಾಯವನ್ನೇ ಹುಟ್ಟುಹಾಕಿದ್ದಾರೆ. ಇದು ಈವರೆಗೆ ಸೃಷ್ಟಿಸಲಾಗಿರುವ ಎಲ್ಲ ಆಚರಣೆಗಳಲ್ಲಿ ಅತ್ಯಂತ ಸುಂದರವಾದದ್ದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಚಹಾಕ್ಕೆ
ನಿಮ್ಮನ್ನು ಕುಡಿಯಲು ಅವಕಾಶ ಮಾಡಿಕೊಡಿ,
ನಿಮ್ಮನ್ನು ಅನುಭವಿಸಲು ಸಾಧ್ಯ ಮಾಡಿ.
ಚಹಾ
ನಿಮ್ಮ ರುಚಿ ನೋಡಲಿ
ನಿಮ್ಮನ್ನು ಆಸ್ವಾದಿಸಲಿ
ನಿಮ್ಮನ್ನು ಅರ್ಥಮಾಡಿಕೊಳ್ಳಲಿ.
ಮುಗುಳ್ನಗುತ್ತ
ಹೋಗಿ ಚಹಾದ ಹೊಟ್ಟೆಯಲ್ಲಿ ಕುಳಿತುಕೊಳ್ಳಿ
ಚಹಾದ ಎಲೆಗಳಿಂದ ತೊಯ್ಯಿಸಿಕೊಳ್ಳಿ.
ನಿಮ್ಮ ಪ್ರಕೃತಿ ಚಹಾದ ಪ್ರಕೃತಿಯನ್ನು
ಭೇಟಿ ಮಾಡಲಿ.
ಚಹಾ ನಿಮ್ಮನ್ನು ಉಸಿರಾಡಲಿ,
ನೋಡಲಿ, ಕೇಳಲಿ, ಮುಟ್ಟಲಿ, ಮಾತಾಡಲಿ
ವಾಸನೆ ನೋಡಲಿ.
ಈಗ ನೀವು ನೀವಲ್ಲ, ಚಹಾ ಕೂಡ ಅಲ್ಲ
ಜಗತ್ತು ಕುಡಿಯುತ್ತಿದೆ ನಿಮ್ಮನ್ನು
ಸಮಾಧಾನದಿಂದ
~ Old Po
ಹಲವಾರು ಧರ್ಮಗಳಿವೆ ಮತ್ತು ಇವು ಹಲವಾರು ಆಚರಣೆಗಳನ್ನು ಸೃಷ್ಟಿಸಿಕೊಂಡಿವೆ. ಆದರೆ Tea ceremony ಯಲ್ಲಿ ನಿಧಾನವಾಗಿ ಚಹಾ ಗುಟಕರಿಸುವ ಮತ್ತು ಅದನ್ನು ಸಂಭ್ರಮಿಸುವಂಥ ಸುಂದರ ಆಚರಣೆ ಇನ್ನೊಂದಿಲ್ಲ! ಸುಮ್ಮನೇ ಅಡಿಗೆ ಮಾಡುವುದು ಮತ್ತು ಅದನ್ನು ಸಂಭ್ರಮಿಸುವುದು, ಬಾತ್ ಟಬ್ ನಲ್ಲಿ ಹಾಯಾಗಿ ಒರಗಿಕೊಂಡು ಸ್ನಾನ ಮಾಡುವುದು ಮತ್ತು ಅದನ್ನು ಸಂಭ್ರಮಿಸುವುದು ಅಥವಾ shower ಕೆಳಗೆ ನಿಂತು ಸ್ನಾನ ಮಾಡುವುದು ಮತ್ತು ಅದನ್ನು ಸಂಭ್ರಮಿಸುವುದು. ಇವು ಸಣ್ಣ ಸಣ್ಣ ಸಂಗತಿಗಳು – ಇವನ್ನು ನೀವು ಸಂಭ್ರಮಿಸುತ್ತ ಹೋದರೆ, ಈ ಎಲ್ಲ ಸಂಭ್ರಮಗಳ ಒಟ್ಟು ಮೊತ್ತ ದೇವರು ಎನ್ನುವುದು ನಿಮಗೆ ಗೊತ್ತಾಗುತ್ತದೆ. ದೇವರು ಯಾರು? ಎಂದು ನೀವು ನನ್ನ ಕೇಳುವಿರಾದರೆ ನಾನು ಹೇಳುತ್ತೇನೆ, ಆ ಎಲ್ಲ ಸಣ್ಣ, ನಿರಸ ಸಂಗತಿಗಳನ್ನು ನೀವು ಸಂಭ್ರಮಿಸುವುದರ ಒಟ್ಟು ಮೊತ್ತ ದೇವರೆಂದು.
ಒಬ್ಬ ಗೆಳೆಯ ಬಂದು ನಿಮ್ಮ ಕೈ ಹಿಡಿದುಕೊಳ್ಳುತ್ತಾನೆ ಎಂದುಕೊಳ್ಳಿ. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ, ದೇವರು ನಿಮ್ಮ ಗೆಳೆಯನ ರೂಪದಲ್ಲಿ ಬಂದಿದ್ದಾನೆ. ದಾರಿಯಲ್ಲಿ ಹೋಗುವಾಗ ಒಂದು ಮಗು ನಿಮ್ಮನ್ನು ನೋಡಿ ಮುಗುಳ್ನಗುತ್ತದೆ. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ, ಆ ಮಗುವನ್ನು ನೋಡಿ ನೀವು ಮುಗುಳ್ನಕ್ಕು ಬಿಡಿ. ದೇವರು ಆ ಮಗುವಿನ ಮೂಲಕ ನಿಮ್ಮನ್ನು ನೋಡಿ ಮುಗುಳ್ನಗುತ್ತಿದ್ದಾನೆ. ನೀವು ದಾರಿಯಲ್ಲಿ ಹೋಗುತ್ತಿರುವಾಗ ಪಕ್ಕದ ಗಾರ್ಡನ್ ನಿಂದ ಪರಿಮಳ ಹರಿದು ಬರುತ್ತಿದೆ. ಅಲ್ಲೇ ಒಂದು ಕ್ಷಣ ನಿಂತುಕೊಂಡು ಆ ಪರಿಮಳವನ್ನು ಆಸ್ವಾದಿಸಿ, ಆ ಪರಿಮಳಕ್ಕೆ ಕೃತಜ್ಞರಾಗಿರಿ. ಏಕೆಂದರೆ ದೇವರು ಸ್ವತಃ ಪರಿಮಳದ ರೂಪದಲ್ಲಿ ಬಂದು ನಿಮ್ಮನ್ನು ತಲುಪಿದ್ದಾನೆ.
ಪ್ರತೀ ಕ್ಷಣವನ್ನು ಸಂಭ್ರಮಿಸುವುದು ನಿಮಗೆ ಸಾಧ್ಯವಾಗಬಹುದಾದರೆ ನಿಮ್ಮ ಬದುಕು ಧಾರ್ಮಿಕ ಬದುಕಾಗುತ್ತದೆ. ಇದರ ಹೊರತಾಗಿ ಬೇರೆ ಯಾವ ಧಾರ್ಮಿಕತೆ ಇಲ್ಲ, ಯಾವ ಮಂದಿರ, ಮಸಿದಿ, ಚರ್ಚ ಗೆ ಹೋಗುವ ಅವಶ್ಯಕತೆಯಿಲ್ಲ. ಆಗ ನೀವು ಎಲ್ಲಿ ಇರುವಿರೋ ಅಲ್ಲಿಯೇ ದೇವಸ್ಥಾನ ಮತ್ತು ನೀವು ಏನು ಮಾಡುವಿರೋ ಅದೇ ಧರ್ಮ.
********************************

