ಒಂದು ದಿನ, ಈ ದಿಗಂತದಿಂದೀಚೆ ಇದು ಸಾಧ್ಯವಾಗುತ್ತದೆ, ನಾನು ನೋಡೇ ನೋಡುತ್ತೇನೆ. ಯಾವುದೇ ಕ್ಷಣದಲ್ಲಿ ಸೂರ್ಯೋದಯವಾಗಬಹುದು. ಆದರೆ ನೋಡಲು ಸಿದ್ಧರಾಗಿರಿ, ಜಿಗಿಯುತ್ತಲೇ ಇರಿ; ನಿದ್ದೆ ಹೋಗಿಬಿಡಬೇಡಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರೋ ಒಬ್ಬರು Rothschild ನ ಕೇಳಿದರು, “ನೀನು ಹೇಗೆ ಶ್ರಿಮಂತನಾದದ್ದು?” ಅವನು ಉತ್ತರಿಸಿದ, “ನಾನು ಯಾವಾಗಲೂ ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೆ, ಮತ್ತು ಆ ಅವಕಾಶ ಎದುರಾದಾಗ, ನಾನು ಸುಮ್ಮನೇ ಅದನ್ನು ಜಿಗಿದು ಅಪ್ಪಿಕೊಂಡೆ”.
“ನಾವೂ ಅವಕಾಶಕ್ಕಾಗಿ ಕಾಯುತ್ತಲೇ ಇರುತ್ತೇವೆ, ಅದು ತಪ್ಪಿದ ಮೇಲಷ್ಟೇ ನಮಗೆ ಅದು ಬಂದು ಹೋಗಿರುವುದು ಗೊತ್ತಾಗುತ್ತದೆ. ಇದು ಎಷ್ಟು ಅಪರೂಪವೆಂದರೆ ಅವಕಾಶ ಎದುರಾದಾಗ ನಾವು ಅದನ್ನು ಜಿಗಿದು ಅಪ್ಪಿಕೊಳ್ಳುವಷ್ಟರಲ್ಲಿಯೇ ಅದು ನಮ್ಮನ್ನು ದಾಟಿ ಹೋಗಿ ಬಿಟ್ಟಿರುತ್ತದೆ” ಆ ವ್ಯಕ್ತಿ ತನ್ನ ಸಮಸ್ಯೆ ಹೇಳಿದ.
ಆ ವ್ಯಕ್ತಿಯ ಮಾತಿಗೆ Rothschild ನಕ್ಕು ಉತ್ತರಿಸಿದ, “ ಯಾವಾಗಲೂ ಸಿದ್ಧವಾಗಿರಿ, ಇಲ್ಲವಾದರೆ ಅವಕಾಶವನ್ನು ನೀವು ಮಿಸ್ ಮಾಡಿಕೊಂಡುಬಿಡುತ್ತೀರಿ. ಆದ್ದರಿಂದಲೇ ನಾನು ಸದಾ ಜಿಗಿಯುತ್ತ ನನ್ನ ತುದಿಗಾಲ ಮೇಲೆ ಇರುತ್ತೇನೆ. ಅವಕಾಶ ಬರಬಹುದು ಅಥವಾ ಬರದೇ ಇರಬಹುದು ಅದು ಮುಖ್ಯ ಅಲ್ಲ, ಆದರೆ ನಾವು ಸದಾ ಸಿದ್ಧರಾಗಿರಬೇಕು ಅಷ್ಟೇ . ಅದು ಆಗಮಿಸಿದಾಗ ಅವಕಾಶ ನಮ್ಮನ್ನು, ಅದರ ಯೋಚನೆಯಲ್ಲಿ ಮುಳುಗಿರುವುದನ್ನು ಕಂಡರೆ ಅದು ನಮಗಾಗಿ ಕಾಯುವುದಿಲ್ಲ. ನಾವು ಅದನ್ನು ಮಿಸ್ ಮಾಡಿಕೊಂಡು ಬಿಡುತ್ತೇವೆ”.
ಸದಾ ಸಿದ್ಧರಾಗಿರಿ – ಧ್ಯಾನ ಎಂದರೆ ಇದೇ, ಬೇರೇನೂ ಅಲ್ಲ. ನಾವು ಸದಾ ಸಿದ್ಧರಾಗಿರುವಾಗ ಯಾವಾಗ ಅವಕಾಶ ಬಂದರೂ ಅಲ್ಲೊಂದು ಕಾಕತಾಳೀಯ ಸಂಭವಿಸಬಹುದು. ಏನೋ ಒಂದು ಕ್ಲಿಕ್ ಆಗುತ್ತದೆ. ಇದು ಸಂಭವಿಸುವಿಕೆಯೇ ಹೊರತು, ಮಾಡುವಿಕೆ ಅಲ್ಲ. ಆದರೆ ಸಿದ್ಧರಾಗಿಲ್ಲದಿರುವಾಗ ನೀವು ಇದನ್ನು ಮಿಸ್ ಮಾಡಿಕೊಂಡು ಬಿಡುತ್ತೀರ. ಹೀಗೆ ಸದಾ ಸಿದ್ಧರಾಗಿರುವುದು ಕೆಲವೊಮ್ಮೆ ಕಠಿಣ, ಕೆಲವೊಮ್ಮೆ ಬೋರಿಂಗ್. ಆದರೆ ಬೇರೆ ದಾರಿ ಇಲ್ಲ.
ಒಂದು ಪುರಾತನ ಕಥೆ ನೆನಪಾಗುತ್ತಿದೆ.
ಒಂದು ಹರೆಯದ ಫಿಲಾಸೊಫಿಕಲ್ ಮನಸ್ಸಿನ ಮೀನು, ತನ್ನ ಜೊತೆಯಿದ್ದ ಇನ್ನೊಂದು ಮೀನನ್ನು ಪ್ರಶ್ನೆ ಮಾಡಿತು, “ ನಾವು ಸಮುದ್ರದ ಬಗ್ಗೆ ಎಷ್ಟೆಲ್ಲ ಕೇಳಿದ್ದೇವೆ, ಎಲ್ಲಿದೆ ಈ ಸಮುದ್ರ?, ನಾನು ಒಮ್ಮೆ ನೋಡಬೇಕು ಈ ಸಮುದ್ರವನ್ನ.”
ಸುತ್ತಲಿನ ಎಲ್ಲ ಮೀನುಗಳು, “ ನಮಗೂ ಗೊತ್ತಿಲ್ಲ, ನಾವೂ ಒಮ್ಮೆ ನೋಡಬೇಕು ಈ ಸಮುದ್ರವನ್ನ” ಎಂದು ಉತ್ತರಿಸಿದವು.
ಈ ಯುವ ಮೀನುಗಳ ಮಾತುಕತೆಯನ್ನ ಗಮನಿಸಿದ ಒಂದು ವಯಸ್ಸಾದ ಮೀನು, ಆ ಫಿಲಾಸೊಫಿಕಲ್ ಮೀನನ್ನು ಪಕ್ಕಕ್ಕೆ ಕರೆದು ಹೇಳಿತು, “ ಸಮುದ್ರ ಬೇರೆಲ್ಲೂ ಇಲ್ಲ, ನಮ್ಮ ಸುತ್ತ ಇರುವುದೇ ಸಮುದ್ರ, ನಾವು ಈಗ ಇರೋದು ಅದರಲ್ಲಿಯೇ, ನಾವು ಹುಟ್ಟೋದು, ಬದುಕೋದು, ಸಾಯೋದು ಎಲ್ಲ ಈ ಸಮುದ್ರದಲ್ಲಿಯೇ, ಇದೇ ಸಮುದ್ರ.”
ನಾನು ನಿಮಗೆ ಹೇಳೋದು ಇದನ್ನೇ. ಇದು ನಮಗೂ ಅನ್ವಯಿಸುವ ಸತ್ಯ. ನಾವು ದೈವತ್ವದಲ್ಲಿಯೇ ಹುಟ್ಟಿರುವುದು, ದೈವತ್ವದಲ್ಲಿಯೇ ಬದುಕುತ್ತಿರುವುದು, ದೈವತ್ವದಲ್ಲಿಯೇ ಸಾವು ನಮಗೆ ಎದುರಾಗುತ್ತದೆ.
ನಾವು ಗಮನಿಸಬೇಕಾದದ್ದು ಏನೆಂದರೆ, ಇಂಥಹ ಒಂದು ಅದ್ಭುತ ಬದುಕಿನ ಅನುಭವವನ್ನ ನಾವು ನಿದ್ರಾವಸ್ಥೆಯಲ್ಲಿ ದಾಟುತ್ತಿದ್ದೇವೋ ಅಥವಾ ಸಂಪೂರ್ಣ ಪ್ರಜ್ಞೆಯಲ್ಲಿ ದಾಟುತ್ತಿದ್ದೇವೋ ಎನ್ನುವುದನ್ನ ಮಾತ್ರ.
ಇಂಥ ಒಂದು ಅರಿವನ್ನು ನಮಗೆ ಸಾಧ್ಯ ಮಾಡಿಕೊಡುವುದು ಧ್ಯಾನ. ಒಮ್ಮೆ ನಮಗೆ ಈ ಅರಿವು ಸಾಧ್ಯವಾದಾಗ, ನಮ್ಮ ಸುತ್ತ ಇರುವ ಎಲ್ಲವೂ ದೈವತ್ವದ ಸಮುದ್ರ. ಈ ಬದುಕು, ಈ ಪ್ರಜ್ಞೆ ಎಲ್ಲವೂ ಡಿವೈನ್. ಈ ದಿವ್ಯ ಎಲ್ಲ ರೂಪಗಳಲ್ಲೂ ಕಾಣಿಸಿಕೊಳುತ್ತದೆ, ಗುಲಾಬಿಗಳಲ್ಲಿ, ಕಮಲದ ಹೂಗಳಲ್ಲಿ, ಗಿಡ ಮರಗಳಲ್ಲಿ, ನದಿ ಸಾಗರ ಝರಿಗಳಲ್ಲಿ, ಪ್ರತಿಯೊಂದು ಪ್ರಾಣಿಯಲ್ಲಿ ದೈವತ್ವ ತುಂಬಿಕೊಂಡಿದೆ. ಬದುಕು ಎಲ್ಲಿದೆಯೋ ಅಲ್ಲೆಲ್ಲ ದೈವತ್ವ ಇದೆ.
ನಾವು ಬದುಕುತ್ತಿರುವುದೇ ದೈವತ್ವದ ಸಮುದ್ರದಲ್ಲಿ. ಆದ್ದರಿಂದ ದೈವತ್ವವನ್ನು ಬೇರೆಲ್ಲೂ ಹುಡುಕಲು ಹೋಗಬೇಡಿ. ನಿಮ್ಮ ಒಳಗನ್ನೊಮ್ಮೆ ಪ್ರಜ್ಞಾಪೂರ್ವಕವಾಗಿ ಗಮನಿಸಿ. ಅದು ದೈವತ್ವ ನಿಮಗೆ ಲಭ್ಯವಾಗಬಹುದಾದ ಅತ್ಯಂತ ಹತ್ತಿರದ ಜಾಗ.

