ಹೊರಗಿನ ಒತ್ತಡ ಹೆಚ್ಚಾಗಿದ್ದಾಗ, ಧ್ಯಾನವನ್ನು ನೇರವಾಗಿ ಪ್ರವೇಶಿಸುವುದು ಕಷ್ಟಕರವಾಗಬಹುದು. ಆದ್ದರಿಂದ ಧ್ಯಾನಕ್ಕಿಂತ 15 ನಿಮಿಷ ಮೊದಲು ಬೇರೆ ಏನನ್ನಾದರೂ ಮಾಡಿ, ಆ ಒತ್ತಡವನ್ನು ತೆಗೆದುಹಾಕಲು ~ ಓಶೋ ರಜನೀಶ್ ; ಕನ್ನಡಕ್ಕೆ: ಚಿದಂಬರ ನರೇಂದ್ರ
ಮೀನಿನ ಬಲೆಯ ಕೆಲಸ
ಮೀನು ಹಿಡಿಯುವುದು ಮಾತ್ರ
ಮೀನು ಸಿಕ್ಕ ಮೇಲೆ
ಬಲೆಗೆ ಏನು ಕೆಲಸ?
ಶಬ್ದ ದ ಉದ್ದೇಶವೇ
ವಿಷಯ ತಿಳಿಸುವುದು
ವಿಷಯ ತಿಳಿದ ಮೇಲೆ
ಶಬ್ದಗಳಿಗೇನು ಕೆಲಸ?
ಶಬ್ದಗಳನ್ನು ಮರೆತ ಮನುಷ್ಯ
ಎಲ್ಲಿ ಸಿಗುತ್ತಾನೆ?
ಕೊಂಚ ಮಾತಾಡಬೇಕಲ್ಲ
ಅವನೊಂದಿಗೆ.
~ ಜುವಾಂಗ್-ತ್ಸೆ
ಆ 15 ನಿಮಿಷ ಸುಮ್ಮನೇ ಮೌನವಾಗಿ ಕುಳಿತುಕೊಂಡು ಇಡೀ ಜಗತ್ತನ್ನು ಒಂದು ಕನಸು ಎನ್ನುವಂತೆ ಯೋಚನೆ ಮಾಡಿ – ಅದು ಕನಸೂ ಹೌದು! ಇಡೀ ಜಗತ್ತು ಒಂದು ಕನಸು ಎನ್ನುವಂತೆ, ಮತ್ತು ಅಲ್ಲಿ ಯಾವ ಮಹತ್ವದ್ದೂ ಇಲ್ಲ ಎನ್ನುವಂತೆ ಥಿಂಕ್ ಮಾಡಿ.
ಮತ್ತು ಎರಡನೇಯದಾಗಿ ನಿಮಗೆ ನೆನಪಿರಲಿ, ಆದಷ್ಟು ಬೇಗ ಎಲ್ಲವೂ ಮಾಯವಾಗಿ ಬಿಡಲಿದೆ – ನೀವೂ ಕೂಡ. ನೀವು ಯಾವಾಗಲೂ ಇಲ್ಲಿ ಇರಲಿಲ್ಲ, ನೀವು ಯಾವಾಗಲೂ ಇಲ್ಲಿ ಇರುವುದಿಲ್ಲ. ಹಾಗಾಗಿ ಇಲ್ಲಿ ಯಾವುದೂ ಶಾಶ್ವತವಲ್ಲ. ಮತ್ತು ಮೂರನೇಯದಾಗಿ, ನೀವು ಕೇವಲ ಸಾಕ್ಷಿ ಮಾತ್ರ. ಇದು ಕೇವಲ ನಿಮ್ಮ ಮುಂದಿನಿಂದ ಸರಿದು ಹೋಗುತ್ತಿರುವ ಕನಸು ಮಾತ್ರ, ಒಂದು ಫಿಲ್ಮ್ ಮಾತ್ರ. ಈ ಮೂರು ಸಂಗತಿಗಳು ನಿಮಗೆ ನೆನಪಿರಲಿ – ಈ ಇಡೀ ಜಗತ್ತು ಒಂದು ಕನಸು ಮತ್ತು ಎಲ್ಲವೂ ಸರಿದು ಹೋಗಲಿವೆ, ನೀವು ಕೂಡ. ಸಾವು ಸನ್ನಿಹಿತವಾಗುತ್ತಿದೆ ಮತ್ತು ವಾಸ್ತವ ಎಂದರೆ ಅದು ಕೇವಲ ಸಾಕ್ಷಿ ಮಾತ್ರ, ಹಾಗಾಗಿ ನೀವು ಕೇವಲ ಸಾಕ್ಷಿ ಮಾತ್ರ. ದೇಹವನ್ನು ರಿಲ್ಯಾಕ್ಸ್ ಮಾಡಿಕೊಳ್ಳಿ , 15 ನಿಮಿಷಗಳವರೆಗೆ ಕೇವಲ ಸಾಕ್ಷಿಯಾಗಿ, ಆ ನಂತರ ಧ್ಯಾನ ಮಾಡಿ. ಆಗ ನಿಮಗೆ ಧ್ಯಾನಕ್ಕಿಳಿಯುವುದು ಸುಲಭವಾಗುತ್ತದೆ ಮತ್ತು ನಿಮಗೆ ಯಾವ ತೊಂದರೆಯೂ ಎದುರಾಗುವುದಿಲ್ಲ.
ಆದರೆ ಯಾವಾಗಲಾದರೂ ನಿಮಗೆ ಈ ಧ್ಯಾನ ತುಂಬ ಸರಳ ಅನಿಸತೊಡಗಿದಾಗ, ಧ್ಯಾನವನ್ನು ನಿಲ್ಲಿಸಿ ; ಇಲ್ಲವಾದರೆ ಧ್ಯಾನ ಕೇವಲ ನಿಮಗೆ ಚಾಳಿಯಾಗಿ ಬಿಡುತ್ತದೆ. ಇದನ್ನು ಕೇವಲ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ, ಯಾವಾಗ ಧ್ಯಾನವನ್ನು ಪ್ರವೇಶಿಸುವುದು ಕಷ್ಟಕರವಾಗಿರುತ್ತದೆಯೋ ಆಗ ಮಾತ್ರ ಉಪಯೋಗ ಮಾಡಬೇಕು. ನೀವು ಪ್ರತಿದಿನ ಮಾಡುವಿರಾದರೆ, ಅದು ತನ್ನ ಪರಿಣಾಮವನ್ನು ಕಳೆದುಕೊಳ್ಳುತ್ತದೆ, ಮತ್ತು ಅದು ತನ್ನ ಕೆಲಸ ಮಾಡುವುದಿಲ್ಲ. ಆದ್ದರಿಂದ ಇದನ್ನು ಕೇವಲ ಔಷಧಿಯಂತೆ ಬಳಸಿ. ಯಾವಾಗ ಸಂಗತಿಗಳು ಹತೋಟಿ ಮೀರಿ ಹೋಗುತ್ತಿರುತ್ತವೆಯೋ, ಆಗ ಇದನ್ನು ಪರಿಪೂರ್ಣವಾಗಿ ಮಾಡಿ, ಇದು ನಿಮ್ಮ ಎದುರಿಗಿನ ಅಡತಡೆಗಳನ್ನು ನಿವಾರಿಸುವುದು ಮತ್ತು ನಿಮಗೆ ರಿಲ್ಯಾಕ್ಸ್ ಆಗಲು ಸಹಾಯ ಮಾಡುವುದು.
ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ.
ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ
ಮಾಸ್ಟರ್ : ಯಾಕೆ? ಏನು ವಿಷಯ?
ಯುವಕ : ನಾನು ದೇವರನ್ನು ಹುಡುಕಬೇಕು
ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ.
ಕೆಲ ನಿಮಿಷಗಳಾಗುತ್ತಿದ್ದಂತೆಯೇ, ಯುವಕನಿಗೆ ಉಸಿರುಗಟ್ಟತೊಡಗಿತು, ಅವ ಒದ್ದಾಡತೊಡಗಿದ.
ಆಗ ಮಾಸ್ಟರ್, ಯುವಕನ ಮುಖವನ್ನು ನೀರಿನಿಂದ ಹೊರ ತೆಗೆದ. ಯುವಕ ಏದುಸಿರು ಬಿಡುತ್ತ ಜೋರು ಜೋರಾಗಿ ಕೆಮ್ಮತೊಡಗಿದ.
ಮಾಸ್ಟರ್ : ಈಗ ಹೇಳು, ನೀರಿನಲ್ಲಿ ನಿನ್ನ ಮುಖ ಮುಳುಗಿದ್ದಾಗ, ನಿನಗೇನು ಬೇಕೇ ಬೇಕು ಅನಿಸಿತ್ತು?
ಯುವಕ : ಗಾಳಿ, ಗಾಳಿ ಬೇಕನಿಸಿತ್ತು ಮಾಸ್ಟರ್.
ಮಾಸ್ಟರ್ : ಹಾಗಾದರೆ ಈಗ ವಾಪಸ್ ಹೋಗು, ಯಾವಾಗ ನಿನಗೆ ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯ ಅನಿಸುತ್ತದೆಯೋ, ಆಗ ಬಾ. ದೇವರ ಬಗ್ಗೆ ಆಗ ಮಾತಾಡೋಣ.
********************************

