ಬದುಕಿಗೆ ಯಾವುದು ಅವಶ್ಯಕವೋ ಅದನ್ನು ಖಂಡಿತ ಮಾಡಿ ಆದರೆ ಅದರಿಂದ ಪ್ರತ್ಯೇಕವಾಗಿರಿ. ಅದು ಬದುಕಿನ ಪರಿಧಿಯ ಮೇಲೆ ಸಾಧ್ಯವಾಗಲಿ; ಕೇಂದ್ರ ಯಾವುದಕ್ಕೂ ಅಂಟಿಕೊಳ್ಳದಿರಲಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪೂರ್ಣವಾಗಬೇಕಾದರೆ, ಚೂರುಚೂರಾಗು.
ನೇರವಾಗಬೇಕಾದರೆ, ಬಾಗು, ಮಣಿ.
ತುಂಬಿಕೊಳ್ಳಬೇಕಾದರೆ, ಖಾಲಿಯಾಗು.
ಮತ್ತೆ ಹುಟ್ಟಬೇಕಾದರೆ ಮೂದಲು ಸತ್ತು ನೋಡು
ಕಳೆದುಕೊಂಡವ ಶ್ರೀಮಂತ, ಕೂಡಿಟ್ಟವ ತಬ್ಬಿಬ್ಬು.
ಅಂತೆಯೇ ಸಂತ
ಒಂದನ್ನು ಮುಂದಿಟ್ಟುಕೊಂಡು
ಇನ್ನೊಂದನ್ನು ಒರೆಗೆ ಹಚ್ಚುತ್ತಾನೆ.
ಅವ ಪರದೆಯ ಹಿಂದೆ ಇರುವುದರಿಂದ
ಜನ ಅವನ ಬೆಳಕನ್ನು ಮಾತ್ರ ಕಾಣುತ್ತಾರೆ.
ಸ್ವಂತ ಸಮರ್ಥನೆಗೆ ಇಳಿಯುವದಿಲ್ಲವಾದ್ದರಿಂದ
ತಾನೇ ಸ್ವತಃ ಪ್ರಮಾಣವಾಗಿದ್ದಾನೆ.
ತನ್ನ ಬಗ್ಗೆ ಮಾತಾಡುವದಿಲ್ಲವಾದ್ದರಿಂದ
ಜನರ ದನಿಯಾಗಿದ್ದಾನೆ.
ಸ್ಪರ್ಧೆಗಳಿಂದ ದೂರವಿರುವುದರಿಂದ
ಸೋಲು ಗೆಲುವುಗಳಿಂದ ಮುಕ್ತನಾಗಿದ್ದಾನೆ.
“ ಪೂರ್ಣವಾಗಬೇಕಾದರೆ ಚೂರುಚೂರಾಗು “
ಎಂಬ ಪುರಾತನ ಸೂರಿಗಳ ನುಡಿ
ಬರೀ ಒಣ ಉಪದೇಶವಲ್ಲ.
ಪೂರ್ಣವಾಗುವುದೆಂದರೆ
ತಾವೋಗೆ ಮರಳುವುದು
~ ಲಾವೋತ್ಸೇ
ಬದುಕಿಗೆ ಅವಶ್ಯಕವಾದವುಗಳನ್ನು ಮಾಡಲೇ ಬೇಕು, ಜನ ಅವನ್ನು ಮಾಡುತ್ತಲೇ ಹೋಗುತ್ತಾರೆ, ಆದರೆ ಇವುಗಳಿಂದ ಡಿಸ್ಟರ್ಬ್ ಆಗುವ ಅವಶ್ಯಕತೆಯಿಲ್ಲ. ಒಮ್ಮೆ ಈ ತಿಳುವಳಿಕೆ ಸಾಧ್ಯವಾಯಿತೆಂದರೆ, ನೀವು ಪ್ರಶಾಂತವಾಗಿ, ನಿಮ್ಮನ್ನು ಯಾವ ಕಲುಷಿತತೆಗೆ ಗುರಿ ಮಾಡಿಕೊಳ್ಳದೇ ಎಲ್ಲೂ ಇರಬಹುದು, ಯಾವ ಕೆಲಸವನ್ನೂ ಮಾಡಬಹುದು.
ಆದರೆ ಸಮಸ್ಯೆಯೆಂದರೆ, ಶತಮಾನಗಳಿಂದ ನಮಗೆ ಒಳ್ಳೆಯದನ್ನು ಮಾಡು ಕೆಟ್ಟದ್ದನ್ನು ಮಾಡಬೇಡ, ಅದನ್ನು ಮಾಡು ಇದನ್ನು ಮಾಡಬೇಡ ಎಂದು ಹೇಳಿಕೊಡಲಾಗಿದೆ. ನಮಗೆ ಅಳವಡಿಸಿಕೊಳ್ಳಲು, ಬೇಕು-ಬೇಡ ಗಳ ಲಿಸ್ಟ್ ಕೊಡಲಾಗಿದೆ. ಆದರೆ ನನಗೆ ನೀವು ಏನು ಮಾಡುತ್ತೀರಿ ಎನ್ನುವುದರ ಬಗ್ಗೆ ಆಸ್ಥೆ ಇಲ್ಲ, ನನ್ನ ಇಡೀ ಕಾಳಜಿ ಇರುವುದು ನಿಮ್ಮ ಇರುವಿಕೆಯ ( being) ಬಗ್ಗೆ.
ನೀವು ಪ್ರಶಾಂತವಾಗಿದ್ದರೆ, ಆನಂದದಿಂದಿದ್ದರೆ, ಕೇಂದ್ರಿತ (centred) ಆಗಿದ್ದರೆ, ಯಾವುದನ್ನ ಮಾಡಬೇಕೋ ಅದನ್ನು ಮಾಡಿ, ಯಾವ ಸಮಸ್ಯೆ ಇಲ್ಲ. ಆದರೆ ನೀವು centred ಆಗಿಲ್ಲವಾದರೆ, ನೀವು ಪೂರ್ತಿ ಸಂಯೋಜಿತ (integrated) ಆಗಿಲ್ಲವಾದರೆ, ಸಂಗ್ರಹಿತ (collected) ಆಗಿಲ್ಲವಾದರೆ, ಧ್ಯಾನಸ್ಥರಾಗಿಲ್ಲವಾದರೆ, ನೀವು ಒಳ್ಳೆಯದನ್ನು ಮಾಡಿದರೂ ಅದರಿಂದ ಯಾವ ಸಹಾಯವಾಗುವುದಿಲ್ಲ. ಆದ್ದರಿಂದ ಒಳ್ಳೆಯದನ್ನು ಮಾಡುತ್ತಲೇ ಇರುವ ಎಷ್ಟೋ ಜನರಿಂದ ಯಾವ ಸಹಾಯವೂ ಆಗುವುದಿಲ್ಲ. ಆತ್ಯಂತಿಕವಾಗಿ ಇದೆಲ್ಲವೂ ತೊಂದರೆಯನ್ನೇ ಉಂಟು ಮಾಡುತ್ತದೆ.
ಆದ್ದರಿಂದ ನಮ್ಮ ಒತ್ತು ಇರಬೇಕಾದದ್ದು ಮಾಡುವಿಕೆಯ (doing) ಮೇಲೆ ಅಲ್ಲ, ಇರುವಿಕೆಯ (being) ಮೇಲೆ. ಮತ್ತು ಇರುವಿಕೆ ಎನ್ನುವುದು ಸಂಪೂರ್ಣ ವಿಭಿನ್ನ ವಿದ್ಯಮಾನ. ನೀವು ಇಂಜಿನಿಯರೋ, ವೈದ್ಯರೋ, ವಕೀಲರೋ, ರಾಜಕಾರಣಿಯೋ, ವೇಶ್ಯೆಯರೋ ಯಾವುದೂ ಮ್ಯಾಟರ್ ಆಗುವುದಿಲ್ಲ ; ನೀವು ಏನು ಮಾಡುತ್ತಿರುವುರೋ ಅದು ಮ್ಯಾಟರ್ ಆಗುವುದಿಲ್ಲ. ಯಾವುದು ಮುಖ್ಯವಾಗುತ್ತದೆಯೆಂದರೆ ನೀವು ನಿಮ್ಮ ಇರುವಿಕೆಯಲ್ಲಿ centred ಆಗಿದ್ದೀರೋ ಇಲ್ಲವೋ ಎನ್ನುವುದು ಮಾತ್ರ. ಇದು ಬಹಳಷ್ಟು ಸಂಗತಿಗಳ ಮೇಲೆ ಪರಿಣಾಮ ಬೀರುತ್ತದೆ.

