ಅವಶ್ಯಕ ಕೇಡು ( Necessary Evil ): ಓಶೋ 365 #Day 229

ಕುರುಡರ ಜೋತೆ ಇರುವಾಗ, ನೀವು ಕುರುಡರಾಗಿಯೇ ಇರಿ. ನೀವು ಇಡೀ ಜಗತ್ತನ್ನು ಬದಲಾಯಿಸಲಾರಿರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ



ಇಡೀ ಬ್ರಹ್ಮಾಂಡ ಅಡಗಿರುವುದು
ಒಬ್ಬನೇ  ಒಬ್ಬ ಮನುಷ್ಯನಲ್ಲಿ,
ಮತ್ತು ಅದು ನೀನು.

ನೀನು ಸುತ್ತ ಕಾಣುತ್ತಿರುವ ಎಲ್ಲವೂ,
ನಿನಗೆ ಇಷ್ಟ ಆಗದ ಸಂಗತಿಗಳನ್ನೂ ಒಳಗೊಂಡು,
ನೀನು ತಿರಸ್ಕಾರದಿಂದ, ಅಸಹ್ಯವಾಗಿ ಕಾಣುವ
ಜನರನ್ನೂ ಸೇರಿಸಿ,
ಎಲ್ಲ ಒಂದಿಲ್ಲ ಒಂದು ಮಟ್ಟದಲ್ಲಿ
ನಿನ್ನೊಳಗೇ ಮನೆ ಮಾಡಿದ್ದಾರೆ.

ಸೈತಾನನಿಗಾಗಿ ಹೊರಗೆಲ್ಲೂ ಹುಡುಕಬೇಡ.

ನೀನು ನಿನ್ನನ್ನು ಪೂರ್ಣವಾಗಿ, ಪ್ರಾಮಾಣಿಕವಾಗಿ,
ಧೈರ್ಯದಿಂದ ಎದುರಗೊಂಡಾಗ,

ಸೈತಾನ, ಎಲ್ಲಿಂದಲೋ ಅಚಾನಕ್ ಆಗಿ ಬಂದು
ನಿನ್ನ ಮೇಲೆ ಆಕ್ರಮಣ ಮಾಡುವ
ಅಸಾಧಾರಣ ಶಕ್ತಿಯಲ್ಲ.
ಬದಲಾಗಿ, ನಿನ್ನೊಳಗೇ ಅಡಗಿಕೊಂಡಿರುವ
ಸಾಮಾನ್ಯ ದನಿ.

~ ಶಮ್ಸ್

ಬ್ಯುರೊಕ್ರಸಿ ( ಅಧಿಕಾರಶಾಹಿ) ಇದೆ ನನಗೆ ಗೊತ್ತು. ಅದು ಅವಶ್ಯಕ ಕೂಡ ಏಕೆಂದರೆ ಜನರದು ಬೇಜವಾಬ್ದಾರಿಯ ಸ್ವಭಾವ. ಹಾಗಾಗಿ ಬ್ಯುರೊಕ್ರಸಿ, ಕಾನೂನು, ಪೋಲೀಸು ಈ ಯಾವುದನ್ನೂ ಕೂಡಲೇ ತೆಗೆದು ಹಾಕುವ ದಾರಿ ಇಲ್ಲ. ಈ ಎಲ್ಲದರ ಹೊರತಾಗಿ ಬದುಕುವುದು ಅಸಾಧ್ಯವಾಗಿಬಿಡುತ್ತದೆ. ಇದು ಒಂದು ಅವಶ್ಯಕ ಕೇಡು. ಜಾಗೃತರಾಗಿರದ, ಇನ್ನೂ ಗಾಢ ನಿದ್ದೆಯಲ್ಲಿರುವ, ಗೊರಕೆ ಹೊಡೆಯುತ್ತಿರುವ ಜನರೊಡನೆ ಬದುಕುವುದನ್ನ ನಾವು ಕಲಿಯಬೇಕು. ಇದು ನಿಮ್ಮನ್ನು ಡಿಸ್ಟರ್ಬ್ ಮಾಡಬಹುದು ಆದರೆ ಇದರ ಹೊರತಾಗಿ ಬೇರೆ ದಾರಿ ಇಲ್ಲ.

ಬಹಳೆಂದರೆ ನಾವು , ಸಮಾಜ ನಮ್ಮ ಮೇಲೆ ಹೊರೆಸಿರುವ ಕಟ್ಟುಪಾಡುಗಳನ್ನ ಇನ್ನೊಬ್ಬರ ಮೇಲೆ ಹೊರೆಸಬಾರದು ಅಷ್ಟೇ. ಇನ್ನೊಬ್ಬರ ಮೇಲೆ ಈ ಒತ್ತಾಯವನ್ನು ವರ್ಗಾಯಿಸುವುದು ಬೇಡ. ನಿಮ್ಮ ಗಂಡ/ ಹೆಂಡತಿ, ಮಕ್ಕಳು, ಗೆಳೆಯರು ಈ ಯಾರ ಮೇಲೂ ನಿಮ್ಮ ಮೇಲಿರುವ ಕಟ್ಟುಪಾಡುಗಳನ್ನ ವರ್ಗಾಯಿಸಬೇಡಿ. ಇದಷ್ಟೇ ನಾವು ಮಾಡಬಹುದಾದದ್ದು. ಆದರೆ ನೀವು ಈ ಸಮಾಜದಲ್ಲಿ, ಸಮಾಜದ ನಿಯಮಗಳನ್ನು ಪಾಲಿಸುತ್ತ ಬದುಕಬೇಕು.

ಆದ್ದರಿಂದ ಈ ರೀತಿನೀತಿಗಳನ್ನು ಖಂಡಿಸುತ್ತ ಕುಳಿತುಬಿಡಬೇಡಿ. ಇವುಗಳ ಅವಶ್ಯಕತೆ / ಅನವಶ್ಯಕತೆಯನ್ನು ಅರ್ಥಮಾಡಿಕೊಳ್ಳಿ. ನಮಗೆ ಅವಶ್ಯಕವಾಗಿರುವ ಹಲವಾರು ಕೇಡುಗಳು ಇವೆ. ನಮ್ಮ ಆಯ್ಕೆ ಸರಿ ಮತ್ತು ತಪ್ಪುಗಳ ನಡುವೆ ಇಲ್ಲ. ವಾಸ್ತವ ಬದುಕಿನಲ್ಲಿ ನಮ್ಮ ಆಯ್ಕೆ ಆಗಬೇಕಾಗಿರುವುದು ಹೆಚ್ಚು ಕೇಡು ಮತ್ತು ಕಡಿಮೆ ಕೇಡುಗಳ ನಡುವೆ, ದೊಡ್ಡ ತಪ್ಪು ಮತ್ತು ಸಣ್ಣ ತಪ್ಪುಗಳ ನಡುವೆ.

ಕೆಡುಕಿನ ಅಧಿಪತಿ ಮಾರ ತನ್ನ ಸೇವಕರೊಡನೆ ಭಾರತ ದೇಶದ ಹಳ್ಳಿಯೊಂದರ ಮೂಲಕ ಹಾಯ್ದು ಪ್ರಯಾಣ ಮಾಡುತ್ತಿದ್ದ.

ಹೀಗೆ ಪ್ರಯಾಣ ಮಾಡುವಾಗ,  ಧ್ಯಾನದಲ್ಲಿ ತಲ್ಲೀನನಾಗಿದ್ದ ಒಬ್ಬ ಮನುಷ್ಯ ಅವನ ಕಣ್ಣಿಗೆ ಬಿದ್ದ. ಅವರು ನೋಡ ನೋಡುತ್ತಿದ್ದಂತೆಯೇ, ಧ್ಯಾನಿಯ ಮುಖ ಪ್ರಖರ ತೇಜಸ್ಸಿನಿಂದ ಹೊಳೆಯತೊಡಗಿತು.

ಯಾಕೆ ಆ ಮನುಷ್ಯನ ಮುಖದ ಸುತ್ತ ಈ ದಿವ್ಯ ಪ್ರಭಾವಳಿ ಎಂದು ಸೇವಕರು ಮಾರನನ್ನು ಕೇಳಿದರು.

“ ಅವನು ಈಗ ತಾನೇ ಸತ್ಯವೊಂದನ್ನು ಕಂಡು ಕೊಂಡಿದ್ದಾನೆ” ಮಾರ ಉತ್ತರಿಸಿದ.

“ಓ ! ಕೆಡಕಿನ ಅಧಿಪತಿ, ಅವನು ಸತ್ಯವೊಂದನ್ನು ಕಂಡುಕೊಂಡಿದ್ದಾನೆ ಎಂದರೆ ನಿನಗೆ ಇನ್ನು ಚಿಂತೆ ಶುರು “
ಸೇವಕನೊಬ್ಬ ಕೇಳಿದ.

“ ಬಹುತೇಕ ಸತ್ಯವನ್ನು ಕಂಡುಕೊಂಡ ಜನ ಮರು ಘಳಿಗೆಯಲ್ಲೇ ಅದರಿಂದ ನಂಬಿಕೆಯೊಂದನ್ನು ಹುಟ್ಟು ಹಾಕುತ್ತಾರೆ, ಹಾಗಾಗಿ ನನಗೇನು ಭಯವಿಲ್ಲ “

ಮಾರ ನಗುತ್ತ ಉತ್ತರಿಸಿದ.

*********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.