ಈ ಎರಡೂ – ಸಾವು ಮತ್ತು ಬದುಕಿನ ಧ್ಯಾನಗಳು – ನಿಮಗೆ ಅಪಾರ ಸಹಾಯ ಮಾಡುತ್ತವೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ವಿದಾಯ,
ನಾನೂ ದಾಟುತ್ತಿದ್ದೆನೆ ಎಲ್ಲ ದಾಟುವಂತೆ,
ಹುಲ್ಲಿನ ಮೇಲೆ ನಿಂತ ಇಬ್ಬನಿಯಂತೆ.
-ಬಂಝಾನ್
ಶರತ್ಕಾಲದಲ್ಲಿ ಹುಲ್ಲು ಮತ್ತು ಗಿಡ ಮರಗಳ ಎಲೆ ಮೇಲೆ ನಿಂತ ಇಬ್ಬನಿ, ಸೂರ್ಯ ಪ್ರಖರನಾಗುತ್ತಿದ್ದಂತೆಯೇ ಆವಿಯಾಗುತ್ತದೆ. ಜಪಾನಿ ಕಾವ್ಯದಲ್ಲಿ ‘ಇಬ್ಬನಿ’ ಯನ್ನ ಬದುಕಿನ ಕ್ಷಣಿಕತೆಗೆ ಸಶಕ್ತ ರೂಪಕವಾಗಿ ಬಳಸಲಾಗುತ್ತದೆ. ಜಪಾನಿ ಮತ್ತು ಬೌದ್ಧ ಸಾಹಿತ್ಯದಲ್ಲಿ ಜಗತ್ತನ್ನು ಬಹುತೇಕ ‘ಇಬ್ಬನಿಯ ವಿಶ್ವ’ ಎಂದೇ ಬಣ್ಣಿಸಲಾಗುತ್ತದೆ.
(ಬಂಝಾನ್ ತೀರಿಕೊಂಡದ್ದು, ಎಂಟನೇ ತಿಂಗಳ ಹದಿನೈದನೆ ದಿನ, 1730 )
ರಾತ್ರಿ, ನೀವು ನಿದ್ದೆಗೆ ಜಾರುವ ಮುನ್ನ, ಹದಿನೈದು ನಿಮಿಷ ಈ ಧ್ಯಾನ ಮಾಡಿ. ಇದು ಸಾವಿನ ಧ್ಯಾನ. ನೆಲದ ಮೇಲೆ ಒರಗಿಕೊಂಡು ನಿಮ್ಮ ದೇಹವನ್ನು ರಿಲ್ಯಾಕ್ಸ್ ಮಾಡಿಕೊಳ್ಳಿ. ನೀವು ಸಾಯುತ್ತಿರುವ ಹಾಗೆ ಫೀಲ್ ಮಾಡಿಕೊಳ್ಳಿ, ನಿಮಗೆ ನಿಮ್ಮ ದೇಹವನ್ನು ಮೂವ್ ಮಾಡುವುದು ಸಾಧ್ಯವಾಗುತ್ತಿಲ್ಲ, ಏಕೆಂದರೆ ನೀವು ಸತ್ತು ಹೋಗಿದ್ದೀರಿ. ನೀವು ದೇಹದಿಂದ ಮಾಯವಾಗುತ್ತಿರುವ ಹಾಗೆ ಭಾವವನ್ನು ಸೃಷ್ಟಿ ಮಾಡಿಕೊಳ್ಳಿ. ಈ ಥರ ಹತ್ತು, ಹದಿನೈದು ನಿಮಿಷ ಮಾಡಿ, ವಾರದೊಳಗೆ ಈ ಅನುಭವ ನಿಮ್ಮೊಳಗೆ ಆಗುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಈ ರೀತಿ ಧ್ಯಾನ ಮಾಡುತ್ತ ನಿದ್ದೆಗೆ ನಿಮ್ಮನ್ನು ನೀವು ಒಪ್ಪಿಸಿಕೊಳ್ಳಿ. ಇದಕ್ಕೆ ಯಾವ ಅಡತಡೆಯೂ ಬರದ ಹಾಗೆ ನೋಡಿಕೊಳ್ಳಿ. ಧ್ಯಾನ, ನಿದ್ದೆಯಾಗಿ ಪರಿವರ್ತಿತವಾಗಲಿ, ಮತ್ತು ನಿದ್ದೆ ನಿಮ್ಮನ್ನು ತಾನೇ ಆವರಿಸಿಕೊಂಡರೆ, ನಿದ್ದೆಯೊಳಗೆ ಜಾರಿ ಹೋಗಿಬಿಡಿ.
ಮರುದಿನ ಮುಂಜಾನೆ, ನಿಮಗೆ ಎಚ್ಚರಾಗುತ್ತಿದೆ ಅನಿಸಿದಾಗ, ನಿಮ್ಮ ಕಣ್ಣು ತೆರೆಯಬೇಡಿ – ಬದುಕಿನ ಧ್ಯಾನ ಮಾಡಿ. ನೀವು ಹೆಚ್ಚು ಜೀವಂತವಾಗುತ್ತಿರುವ ಹಾಗೆ ಫೀಲ್ ಮಾಡಿಕೊಳ್ಳಿ, ಬದುಕು ಮರಳಿ ಬರುತ್ತಿದೆ ಮತ್ತು ನಿಮ್ಮ ಇಡೀ ದೇಹ ಜೀವಶಕ್ತಿ ಮತ್ತು ಎನರ್ಜಿಯಿಂದ ತುಂಬಿ ತುಳುಕುತ್ತಿದೆ. ನಿಧಾನವಾಗಿ ಹಾಸಿಗೆಯಲ್ಲಿ ಹೊರಳುತ್ತ ಮೂವ್ ಆಗಿ, ನಿಮ್ಮಕಣ್ಣು ಮುಚ್ಚಿಕೊಂಡಿರಲಿ. ಬದುಕು ನಿಮ್ಮೊಳಗೆ ಹರಿಯುತ್ತಿರುವ ಹಾಗೆ ಫೀಲ್ ಮಾಡಿಕೊಳ್ಳಿ. ನಿಮ್ಮ ದೇಹ flowing energy ಯಿಂದ ತುಂಬಿಕೊಂಡಿರುವ ಹಾಗೆ ಅನುಭವಿಸಿ, ಥೇಟ್ ಸಾವಿನ ಧ್ಯಾನಕ್ಕೆ ವಿರುದ್ಧವೆಂಬಂತೆ. ಹೀಗೆ ಬದುಕಿನ ಧ್ಯಾನ ಮಾಡುತ್ತ ಆಳವಾಗಿ ಉಸಿರಾಟ ಮುಂದುವರೆಸಿ, . ಸುಮ್ಮನೇ full energy ಯನ್ನು ನಿಮ್ಮೊಳಗೆ ಫೀಲ್ ಮಾಡಿ, ಪ್ರತೀ ಉಸಿರಿನೊಂದಿಗೆ ಬದುಕು ನಿಮ್ಮನ್ನು ಪ್ರವೇಶ ಮಾಡುತ್ತಿರುವಂತೆ. ಪೂರ್ಣತೆಯನ್ನ, ಆನಂದವನ್ನ, ಜೀವಂತಿಕೆಯನ್ನ ಫೀಲ್ ಮಾಡಿ. ಆಮೇಲೆ ಹದಿನೈದು ನಿಮಿಷದ ನಂತರ ಎದ್ದೇಳಿ.
ಈ ಎರಡೂ – ಸಾವು ಮತ್ತು ಬದುಕಿನ ಧ್ಯಾನಗಳು – ನಿಮಗೆ ಅಪಾರ ಸಹಾಯ ಮಾಡುತ್ತವೆ.
ಹಣ್ಣು ಹಣ್ಣು ಮುದುಕ, 99 ವರ್ಷ ವಯಸ್ಸಿನ ವಯೋವೃದ್ಧ ನಸ್ರುದ್ದೀನ್ ನನ್ನು ಪತ್ರಿಕೆಯ ಯುವ ವರದಿಗಾರನೊಬ್ಬ ಸಂದರ್ಶನ ಮಾಡಿ, ನಸ್ರುದ್ದೀನ್ ನ ಬದುಕು, ಸಾಧನೆಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡ. ಸಂದರ್ಶನ ಮುಗಿಸಿ ಬಿಳ್ಕೊಡುವಾಗ ವರದಿಗಾರ, ನಸ್ರುದ್ದೀನ್ ಗೆ ಶುಭಾಶಯ ಹೇಳಿದ.
“ ದೇವರು ಮನಸ್ಸು ಮಾಡಿದರೆ ಮುಂದಿನ ವರ್ಷ ನಿನಗೆ ನೂರು ತುಂಬುತ್ತದೆ ಮತ್ತೆ ನಿನ್ನ ಸಂದರ್ಶನ ಮಾಡಲು ಬರುತ್ತೇನೆ “
“ ದೇವರು ದೊಡ್ಡವನಿದ್ದಾನೆ ಯೋಚಿಸ ಬೇಡ, ಖಂಡಿತ ನಿನಗೇನೂ ಆಗುವುದಿಲ್ಲ. ಮುಂದಿನ ವರ್ಷ ನನ್ನ ನೂರನೇ ಹುಟ್ಟು ಹಬ್ಬಕ್ಕೆ ನೀನು ಬಂದೇ ಬರುತ್ತೀಯ “
ನಸ್ರುದ್ದೀನ್ ನಗುತ್ತ ಉತ್ತರಿಸಿದ.
*******************************

