ಧ್ಯಾನದ ಬಗ್ಗೆ ಒಂದು ಸಂಗತಿಯನ್ನು ಸದಾ ನೆನಪಿನಲ್ಲಿಡಬೇಕು : ಇದು ಬಹಳ ದೂರದ ಪ್ರಯಾಣ, ಮತ್ತು ಇದಕ್ಕೆ ಯಾವ ಶಾರ್ಟ ಕಟ್ ಇಲ್ಲ. ಯಾರಾದರೂ ಶಾರ್ಟ ಕಟ್ ಇದೆಯೆಂದು ನಿಮಗೆ ಹೇಳುತ್ತಿದ್ದಾರಾದರೆ, ಅವರು ನಿಮಗೆ ಮೋಸ ಮಾಡುತ್ತಿದ್ದಾರೆ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಧ್ಯಾನ
ಯಾರನ್ನೋ, ಯಾವುದನ್ನೋ
ಒಲಿಸಿಕೊಳ್ಳುವ ಪ್ರಯತ್ನವಲ್ಲ.
ಧ್ಯಾನ
ನಿಮ್ಮ ನಿಜದ ಹಾಜರಾತಿಯನ್ನು
ನಿಮಗೆ ಅರ್ಪಿಸಿಕೊಳ್ಳುವ ವಿಧಾನ
ಪ್ರತೀ ಕ್ಷಣ.
Thich Nhat Hanh
ಧ್ಯಾನ ಬಹಳ ಕಾಲ ತೆಗೆದುಕೊಳ್ಳುವ ಪ್ರಯಾಣ ಏಕೆಂದರೆ ಇದರಿಂದ ಸಾಧ್ಯವಾಗುವ ಬದಲಾವಣೆ ಆಳವಾದದ್ದು ಮತ್ತು ಹಲವಾರು ಕಾಲದ ರೂಟಿನ್, ಹವ್ಯಾಸಗಳು, ಬಯಕೆಗಳು, ಆಲೋಚನೆಗಳು ಮತ್ತು ಬೌದ್ಧಿಕ ರಚನೆಯನ್ನು ಮುರಿದು ಸಾಧ್ಯವಾಗುವಂಥದು. ಇವನ್ನೆಲ್ಲ ಧ್ಯಾನದ ಮೂಲಕ ಡ್ರಾಪ್ ಮಾಡಬೇಕಾಗಿದೆ. ಇದು ಬಹುತೇಕ ಅಸಾಧ್ಯವಾದರೂ ಸಾಧ್ಯವಾಗುತ್ತದೆ.
ಧ್ಯಾನಿಯಾಗುವುದು ಜಗತ್ತಿನಲ್ಲಿ ಒಂದು ಅತ್ಯಂತ ದೊಡ್ಡ ಜವಾಬ್ದಾರಿ. ಇದು ಸುಲಭ ಅಲ್ಲ. ಇದು ತಕ್ಷಣ ಆಗುವಂಥದಲ್ಲ. ಆದ್ದರಿಂದ ಶುರುವಾತಿನಿಂದಲೂ ಈ ಕುರಿತು ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಆಗ ನೀವು ಹತಾಶೆಯಿಂದ ತಪ್ಪಿಸಿಕೊಳ್ಳುತ್ತೀರಿ. ನಿರೀಕ್ಷೆಗಳಿಲ್ಲದಾಗ ನೀವು ಯಾವಾಗಲೂ ಖುಶಿಯಾಗಿರುತ್ತೀರಿ ಏಕೆಂದರೆ, ಇಲ್ಲಿ ಸಂಗತಿ ಬಹಳ ನಿಧಾನಗತಿಯಲ್ಲಿ ಮುಂದುವರೆಯುತ್ತವೆ.
ಧ್ಯಾನ ಸೀಸನಲ್ ಹೂವು ಅಲ್ಲ, ಕೆಲ ಋತುವಿನಲ್ಲಿ ಮಾತ್ರ ಅರಳುವ ಹೂವು ಅಲ್ಲ. ಇದು ಬಹಳ ದೊಡ್ಡ ಮರ, ಇದರ ಬೇರುಗಳು ನೆಲದಲ್ಲಿ ಹರಡಿಕೊಳ್ಳಲು ಸಾಕಷ್ಟು ಸಮಯ ಬೇಕು.
ಧ್ಯಾನ ಎನ್ನುವುದು ಪ್ರತಿದಿನದ ಸ್ನಾನದಂತೆ. ಒಮ್ಮೆ ಸ್ನಾನ ಮಾಡಿದರೆ ಧೂಳು ಮಾಯವಾಗಿಬಿಡುವುದಿಲ್ಲ, ಪ್ರತಿದಿನ ಮತ್ತೆ ಮತ್ತೆ ಸ್ನಾನ ಮಾಡಬೇಕಾಗುತ್ತದೆ. ಹಾಗೆಯೇ ಧ್ಯಾನ ನಿಮ್ಮ ಬದುಕಿನ ಭಾಗವಾಗಬೇಕು. ಊಟಮಾಡುವಾಗ, ಕೆಲಸಮಾಡುವಾಗ, ನಿದ್ದೆ ಮಾಡುವಾಗ ಧ್ಯಾನ ನಿಮ್ಮ ಸಹಜ ಸಹಯೋಗಿಯಾಗಬೇಕು. ಪ್ರತಿದಿನ ಕನಿಷ್ಟ ಎರಡು ಹೊತ್ತಾದರೂ ನಿಮ್ಮ ಮೈಂಡ್ ನ ಸ್ವಚ್ಛತೆ ನಡೆಯಬೇಕು.
ಧ್ಯಾನಕ್ಕೆ ಮೊದಲನೇಯ ಅತ್ಯುತ್ತಮ ಸಮಯ, ಮುಂಜಾನೆ. ನೀವು ಹೊಸ ಜಗತ್ತನ್ನು ಪ್ರವೇಶಿಸಲು ಸಿದ್ಧರಾಗುತ್ತಿರುವಾಗ. ನಿಮ್ಮ ಮೈಂಡ್ ನ ಪಾರದರ್ಶಕತೆಯನ್ನ ಸ್ಪಷ್ಟವಾಗಿಸಿಕೊಳ್ಳಲು, ತಪ್ಪುಗಳನ್ನ ಮಾಡದೇ ಇರಲು, ಸುತ್ತ ಕೆಟ್ಟ ಆಲೋಚನೆಗಳು ಸುಳಿಯದೇ ಇರಲು, ಅಹಂ ನ ಭಾವಗಳು ಹುಟ್ಟಿಕೊಳ್ಳದಿರಲು, ನಿಮ್ಮನ್ನು ನೀವು ತಯಾರು ಮಾಡಿಕೊಳ್ಳಲು ಧ್ಯಾನ ಸಹಾಯ ಮಾಡುತ್ತದೆ. ಧ್ಯಾನ ನಿಮ್ಮ ಮೈಂಡ್ ನ ಶುದ್ಧಗೊಳಿಸಿ ದಿನದ ದೈನಂದಿನ ಜಗತ್ತಿಗೆ ಕಳುಹಿಸಿಕೊಡುತ್ತದೆ.
ಧ್ಯಾನಕ್ಕೆ ಮತ್ತೊಂದು ಉತ್ತಮ ಸಮಯ ಎಂದರೆ ರಾತ್ರಿ, ನೀವು ನಿದ್ದೆಗೆ ಜಾರುವ ಮುನ್ನ. ಇಡೀ ದಿನ ನಿಮ್ಮ ಮೈಂಡ್ ನ ಆವರಿಸಿಕೊಂಡಿರುವ ಧೂಳನ್ನ ನೀವು ಧ್ಯಾನದ ಮೂಲಕ ಸ್ವಚ್ಛ ಮಾಡಿಕೊಂಡಾಗ, ಗಾಢ ನಿದ್ರೆ ಸಾಧ್ಯವಾಗುತ್ತದೆ.
ಧ್ಯಾನ ನಿಮ್ಮೊಳಗೆ ಪ್ರಶಾಂತ ಶಕ್ತಿಯನ್ನು ಹುಟ್ಟು ಹಾಕುತ್ತದೆ. ಆಗ ನೀವು ಬೇರೆಯದೇ ಆದ ರೀತಿಯಲ್ಲಿ ಜಗತ್ತನ್ನು ಎದುರುಗೊಳ್ಳುತ್ತೀರಿ, ಯಾವ ದ್ವಂದ್ವಗಳಿಲ್ಲದಂತೆ, ಯಾವ ಆಕ್ರಮಣಶೀಲತೆಯಿಲ್ಲದೆ, ಪೂರ್ಣ ಸೌಹಾರ್ದದಲ್ಲಿ ನೀವು ಬದುಕನ್ನ ಪ್ರವೇಶ ಮಾಡುತ್ತೀರಿ. ಈ ಸ್ಥಿತಿಯಲ್ಲಿ ಯಾರಾದರೂ ನಿಮ್ಮನ್ನು ದ್ವೇಷ ಮಾಡುತ್ತಾರಾದರೆ, ಆ ಎನರ್ಜಿಯನ್ನೂ ನೀವು ಪ್ರೇಮವಾಗಿ ಬದಲಾಯಿಸಿಕೊಂಡು ಮತ್ತಷ್ಟು ಗಟ್ಟಿಗೊಳ್ಳುತ್ತೀರಿ.
ಶಿಷ್ಯ, ಝೆನ್ ಮಾಸ್ಟರ್ ಗೆ ಪ್ರಶ್ನೆ ಹಾಕಿದ,
” ಮಾಸ್ಟರ್ ಜ್ಞಾನೋದಯ ಪಡೆಯಲು ಎಷ್ಟು ಸಮಯ ಬೇಕು? “
“ಏಳು ವರ್ಷ” ಮಾಸ್ಟರ್ ಉತ್ತರಿಸಿದ.
” ಕಷ್ಟ ಪಟ್ಟು ಸಾಧನೆ ಮಾಡಿದರೆ ? ”
ಶಿಷ್ಯ ಮತ್ತೆ ಪ್ರಶ್ನೆ ಕೇಳಿದ.
” ಹದಿನಾಲ್ಕು ವರ್ಷ” ಮಾಸ್ಟರ್ ಉತ್ತರಿಸಿದ.

