ಪಾದಗಳ ಮೂಲಕ ಹೆಚ್ಚು ಹೆಚ್ಚು ಫೀಲ್ ಮಾಡಿ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನಾವು
ಒಬ್ಬರು, ಇನ್ನೊಬ್ಬರ ಕೈ ಹಿಡಿದುಕೊಂಡು
ನಿರಂತರವಾಗಿ ನಡೆಯುತ್ತಿದ್ದೆವೆ,
ಯಾವ ಮುಟ್ಟುವ, ಯಾವ ಹಿಂತಿರುಗುವ ಒತ್ತಡಗಳೂ ಇಲ್ಲದೆ.
ಸುಮ್ಮನೆ, ಸಮಾಧಾನದಿಂದ ಖುಶಿಯಾಗಿ.
ಇದು ಸಮಾಧಾನದ ನಡೆ, ಇದು ಖುಶಿಯ ಪ್ರಯಾಣ.
ಆಗಲೇ ನಾವು ಕಲಿತಿದ್ದು ;
ಇದು ಸಮಾಧಾನದ ನಡೆ ಅಲ್ಲ, ಸಮಾಧಾನವೇ ನಡೆಯೆಂದು.
ಇದು ಖುಶಿಯ ಪ್ರಯಾಣವಲ್ಲ, ಖುಶಿಯೇ ಒಂದು ಪ್ರಯಾಣ ಎನ್ನುವುದ.
ನಾವು ನಡೆಯುತ್ತಿರುವುದು ನಮಗಾಗಿಯಾದರೂ,
ಅದೇ ವೇಳೆ, ನಾವು ನಡೆಯುತ್ತಿರುವುದು ಸಮಸ್ತರಿಗಾಗಿ ಕೂಡ.
ಸದಾ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು,
ಪ್ರತೀ ಕ್ಷಣ ಸಮಾಧಾನವನ್ನು ಮುಟ್ಟುತ್ತ,
ಪ್ರತೀ ಗಳಿಗೆ ಖುಶಿಯನ್ನ ತಲುಪುತ್ತ.
ನಮ್ಮ ಪ್ರತೀ ಹೆಜ್ಜೆಯೊಂದಿಗೆ ಬೀಸುತ್ತಿದೆ ತಾಜಾ ತಂಗಾಳಿ,
ಪ್ರತೀ ಹೆಜ್ಜೆ ನಮ್ಮ ಪಾದಗಳ ಕೆಳಗೆ ಅರಳಿಸುತ್ತಿದೆ ಪರಿಮಳದ ಹೂವುಗಳ.
ನಿಮ್ಮ ಪಾದಗಳಿಂದ ಈ ಪೃಥುವಿಯನ್ನೊಮ್ಮೆ ಚುಂಬಿಸಿ,
ಅವಳ ಮೈಮೇಲೆ ಪ್ರೇಮ ಮತ್ತು ಖುಶಿಯ ಚಿತ್ತಾರಗಳ ಬಿಡಿಸಿ.
ಬದುಕಿನ ಬಗ್ಗೆ ನಮಗೆ ನಂಬಿಕೆ, ಭರವಸೆ ಹೆಚ್ಚಿದಂತೆಲ್ಲ
ಪೃಥುವಿಗೂ ಸಮಾಧಾನ, ಸಂಭ್ರಮ.
~ Thich Nhat Hanh
ಕೆಲವೊಮ್ಮೆ ಚಪ್ಪಲಿಯಿಲ್ಲದೇ ನೆಲದ ಮೇಲೆ ನಿಂತು ನೆಲದ, ತಂಪು, ಮೃದುತ್ವ, ಬೆಚ್ಚನೆಯ ಭಾವವನ್ನು ಫೀಲ್ ಮಾಡಿ. ಆ ಸಮಯದಲ್ಲಿ ನೆಲ ನಿಮಗೆ ಯಾವ ಭಾವವನ್ನು ಕೊಡುತ್ತಿದೆಯೋ ಆ ಭಾವವನ್ನು ಫೀಲ್ ಮಾಡಿ ಮತ್ತು ಅದಕ್ಕೆ ನಿಮ್ಮ ಮೂಲಕ ಹರಿಯಲು ಅವಕಾಶ ಮಾಡಿಕೊಡಿ. ಮತ್ತು ನಿಮ್ಮ ಎನರ್ಜಿ ನೆಲದೊಳಗೆ ಸೇರುವುದನ್ನು ಸಾಧ್ಯ ಮಾಡಿ. ನೆಲದೊಂದಿಗೆ ಸಂಪರ್ಕವನ್ನು ಜೋಡಿಸಿಕೊಳ್ಳಿ.
ಬಹುತೇಕ ಜನರು ಹೊಕ್ಕಳದ ವರೆಗೆ ಮಾತ್ರ ಉಸಿರಾಡುತ್ತಾರೆ, ಅದನ್ನು ದಾಟುವುದಿಲ್ಲ. ಆದ್ದರಿಂದ ಅವರ ಅರ್ಧಕ್ಕರ್ಧ ದೇಹ ಪ್ಯಾರಾಲೈಸ್ ಆಗಿರುತ್ತದೆ. ಆದ್ದರಿಂದ ಅವರ ಅರ್ಧ ಬದುಕು ಕೂಡ ಪ್ಯಾರಾಲೈಸ್ ಆಗಿರುತ್ತದೆ. ಆಗ ಹಲವಾರು ಸಂಗತಿಗಳು ಸಾಧ್ಯವಾಗುವುದಿಲ್ಲ…… ದೇಹದ ಕೆಳಗಿನ ಭಾಗ ಬೇರುಗಳಂತೆ ಕೆಲಸ ಮಾಡುತ್ತದೆ. ನಿಮ್ಮ ಕಾಲುಗಳು ನಿಮ್ಮ ಬೇರುಗಳಿದ್ದಂತೆ, ಅವು ನೆಲದೊಂದಿಗೆ ನಿಮ್ಮ ಸಂಪರ್ಕವನ್ನು ಸಾಧ್ಯ ಮಾಡುತ್ತವೆ. ಆದ್ದರಿಂದ ಜನ ನೆಲದೊಂದಿಗಿನ ತಮ್ಮ ಸಂಪರ್ಕ ಕಡಿದುಕೊಂಡು ದೆವ್ವಗಳಂತೆ ನೇತಾಡುತ್ತಿರುತ್ತಾರೆ. ಆದ್ದರಿಂದ ನಾವು ಪಾದಗಳ ವರೆಗೆ ಬದುಕಬೇಕು.
ಲಾವೋತ್ಸೇ ತನ್ನ ಶಿಷ್ಯರಿಗೆ ಹೇಳುತ್ತಿದ್ದ, “ನೀವು ನಿಮ್ಮ ಪಾದಗಳ ಕೆಳಗಿನಿಂದ ಉಸಿರಾಡುವವರೆಗೂ ನನ್ನ ಶಿಷ್ಯರಲ್ಲ”. ಹೌದು ಲಾವೋತ್ಸೇ ಸರಿಯಾಗಿ ಹೇಳುತ್ತಿದ್ದಾನೆ. ನಾವು ಪಾದಗಳ ಮೂಲಕ ಉಸಿರಾಡಬೇಕು. ನೀವು ಆಳವಾಗುತ್ತಿದ್ದಂತೆಯೇ ನಿಮ್ಮ ಉಸಿರಾಟವೂ ಆಳವಾಗುತ್ತದೆ. ನಿಮ್ಮ ಇರುವಿಕೆಯ ಸೀಮೆ, ನಿಮ್ಮ ಉಸಿರಾಟದ ಸೀಮೆಯವರೆಗೆ ಮಾತ್ರ ಎನ್ನುವ ಮಾತು ನಿಜ. ಯಾವಾಗ ನಿಮ್ಮ ಉಸಿರಾಟದ ಸೀಮೆ ವಿಸ್ತಾರವಾಗುತ್ತ ನಿಮ್ಮ ಪಾದಗಳನ್ನು ತಲುಪುತ್ತದೆಯೋ, ದೈಹಿಕ ಅರ್ಥದಲ್ಲಿ ಅಲ್ಲ ಮಾನಸಿಕ ಅರ್ಥದಲ್ಲಿ – ಆಗ ನೀವು ನಿಮ್ಮ ಇಡೀ ದೇಹವನ್ನು ನಿಮ್ಮದೆಂದು ಕ್ಲೇಮ್ ಮಾಡಬಹುದು. ಮೊದಲಬಾರಿಗೆ ನೀವು ಇಡಿಯಾಗಿದ್ದೀರ, ಒಂದು ಘಟಕದಂತೆ, ಎಲ್ಲವನ್ನೂ ಕೂಡಿಕೊಂಡು.

