ನಿಮ್ಮೊಳಗೆ ಯಾವ ಬಯಕೆಯೂ ಇಲ್ಲವಾದಲ್ಲಿ, ಮತ್ತು ಮುಂದೆ ಏನಾಗಬಹುದೆಂಬ ಯಾವ ಕಲ್ಪನೆಯೂ ನಿಮ್ಮಲ್ಲಿ ಇಲ್ಲವಾದಾಗ ಮಾತ್ರ ಸಂಗತಿಗಳು ಸಂಭವಿಸಲು ಶುರು ಆಗುವವು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬದುಕಿನಲ್ಲಿ ಏನೇ ಘಟಿಸಿದರೂ,
ಎಂಥ ಸಂಕಟದ ಸಮಯಗಳು ಎದುರಾದರೂ,
ದಯವಿಟ್ಟು
ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ.
ಎಲ್ಲ ಬಾಗಿಲುಗಳು
ಸಂಪೂರ್ಣವಾಗಿ ಮುಚ್ಚಿದ್ದರೂ,
ಭಗವಂತ
ಕೇವಲ ನಿನಗಾಗಿ ಎಂದೇ
ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ.
ಅವನ ಅಪಾರ ಕರುಣೆಯನ್ನು ಸ್ಮರಿಸು !
ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ
ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ.
ಆದರೆ ತನಗೆ
ಕೊಡಲಾಗಿರುವುದರ ಬಗ್ಗೆ ಮಾತ್ರ ಅಲ್ಲ
ನಿರಾಕರಿಸಿದ್ದರ ಬಗ್ಗೆ ಕೂಡ
ಸೂಫಿ ಕೃತಜ್ಞ.
~ ಶಮ್ಸ್
ಯಾವ ಜನರೊಳಗೆ ಮಹಾ ಬಯಕೆಗಳು ತುಂಬಿಕೊಂಡಿರುತ್ತವೆಯೋ ಅವರೊಳಗೆ ಎಂದೂ ಕೃತಜ್ಞತಾ ಭಾವ ತುಂಬಿಕೊಂಡಿರುವುದಿಲ್ಲ. ಏಕೆಂದರೆ ಏನೇ ಸಂಭವಿಸುದರೂ ಅದು ನಿಮ್ಮ ಮಹಾ ಬಯಕೆಗಳಿಗೆ ಹೋಲಿಸಿದರೆ ಬಹಳ ಸಣ್ಣದು. ಆಗ ನಿಮ್ಮೊಳಗೆ ಕೃತಜ್ಞತೆ ಸಾಧ್ಯವಾಗುವುದಿಲ್ಲ, ಮತ್ತು ಈ ಕಾರಣವಾಗಿಯೇ ದೊಡ್ಡದಾಗಿ ಸಂಭವಿಸಬೇಕಾಗಿದ್ದ ಯಾವುದೂ ಸಂಭವಿಸುವುದಿಲ್ಲ. ಏಕೆಂದರೆ ಕೃತಜ್ಞತೆಯ ಹೊರತಾಗಿ ಯಾವುದೂ ಸಂಭವಿಸುವುದಿಲ್ಲ. ಆದ್ದರಿಂದ ಈಗ ನೀವು ವಿಷವೃತ್ತದಲ್ಲಿ ಸಿಕ್ಕಿಹಾಕಿಕೊಂಡಿರುವಿರಿ : ನಿಮ್ಮ ಬಯಕೆಗಳು ದೊಡ್ಡವಾಗಿರುವುದರಿಂದ ನಿಮ್ಮ ಕೃತಜ್ಞತಾ ಭಾವ ಚಿಕ್ಕದು. ಏನೇ ಸಂಭವಿಸಿದರೂ ಅದು ನಿಮ್ಮ ಗಮನಕ್ಕೆ ಬರುವುದಿಲ್ಲ, ನೀವು ಅದನ್ನು ಕಡೆಗಣಿಸಿಬಿಡುತ್ತೀರಿ. ಮತ್ತು ನೀವು ಹೆಚ್ಚು ಹೆಚ್ಚು ಕ್ಲೋಸ್ಡ್ ಆಗುತ್ತ ಹೋಗುತ್ತೀರಿ.
ನಿಮ್ಮೊಳಗೆ ಯಾವ ಬಯಕೆಯೂ ಇಲ್ಲವಾದಲ್ಲಿ, ಮತ್ತು ಏನಾಗಬಹುದೆಂಬ ಯಾವ ಕಲ್ಪನೆಯೂ ಇಲ್ಲವಾದಾಗ ಮಾತ್ರ ಸಂಗತಿಗಳು ಸಂಭವಿಸಲು ಶುರು ಆಗುವವು. ಆ ಸಂಗತಿಗಳು ಮೊದಲೂ ಸಂಭವಿಸುತ್ತಿದ್ದವು ಆದರೆ ಅವು ಈಗ ನಿಮ್ಮ ಗಮನಕ್ಕೆ ಬರುತ್ತಿವೆ ಅಷ್ಟೇ. ನಿಮ್ಮ ನಿರೀಕ್ಷೆಯಿಲ್ಲದಿರುವಾಗಲೂ ಸಂಭವಿಸಿದ ಸಂಗತಿಗಳ ಬಗ್ಗೆ ನಿಮಗೆ ಪ್ರಚಂಡ ಥ್ರಿಲ್. ಸಾವಿರ ಡಾಲರ್ ಗಳು ನಿನಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ನೀವು ನಡೆಯುತ್ತಿರುವಾಗ , ಕೇವಲ 10 ಡಾಲರ್ ನಿಮ್ಮ ಕಣ್ಣಿಗೆ ಬಿದ್ದರೆ ನಿಮಗಾಗುವ ನಿರಾಶೆ ಅಷ್ಟಿಷ್ಟಲ್ಲ. ಆದರೆ ನಿಮಗೆ 1000 ಡಾಲರ್ ಗಳ ನಿರೀಕ್ಷೆ ಇಲ್ಲದಿದ್ದಾಗ, ಆ 10 ಡಾಲರ್ ಕಂಡೊಡನೆ ನೀವು ಕುಣಿದು ಕುಪ್ಪಳಿಸುತ್ತೀರಿ, ಮತ್ತು ಕೃತಜ್ಞತಾ ಭಾವ ನಿಮ್ಮನ್ನು ತುಂಬಿಕೊಳ್ಳುತ್ತದೆ. ಮತ್ತು ಮುಂದೆ ಅದೇ ಹತ್ತು ಡಾಲರ್ ಮೂಲದಿಂದ ನಿಮಗೆ ಮಿಲಿಯನ್ ಡಾಲರ್ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೃತಜ್ಞತೆಯಿರುವಾಗ ನೀವು ಅವಕಾಶಗಳಿಗೆ ತೆರೆದುಕೊಂಡಿರುತ್ತೀರಿ.
ಒಮ್ಮೆ ಗೆಳೆಯ ಸಾಲ ಕೇಳಿಕೊಂಡು ನಸ್ರುದ್ದೀನ್ ನ ಬಳಿ ಬಂದ. ತನಗೆ ಈಗ ಹಣದ ಬಹಳ ಅವಶ್ಯಕತೆಯಿದೆ ಎಂದೂ ಎರಡು ವಾರಗಳ ಬಳಿಕ ಹಣ ವಾಪಸ್ಸು ಕೊಡುವುದಾಗಿಯೂ ಕೇಳಿಕೊಂಡ.
ಗೆಳೆಯ, ಸಾಲ ವಾಪಸ್ಸು ಕೊಡುವ ಮಾತನ್ನ ನಂಬಲು ನಸ್ರುದ್ದೀನ್ ಗೆ ಸುತರಾಂ ಸಾಧ್ಯವಾಗಲಿಲ್ಲ, ಆದರೂ ಗೆಳೆಯನಿಗೆ ಹಣ ಕೊಟ್ಟು ಕಳುಹಿಸಿದ.
ಎರಡು ವಾರಗಳ ಬಳಿಕ ಗೆಳೆಯ, ನಸ್ರುದ್ದೀನ್ ನ ಸಾಲ ವಾಪಸ್ಸು ಮಾಡಿದ. ನಸ್ರುದ್ದೀನ್ ಗೆ ಬಹಳ ಆಶ್ಚರ್ಯವಾಯಿತು.
ಕೆಲ ದಿನಗಳ ನಂತರ, ಗೆಳೆಯ ಮತ್ತೆ ಬಂದು ನಸ್ರುದ್ದೀನ್ ನ ಹತ್ತಿರ ಸಾಲ ಕೇಳಿದ, ಕಳೆದ ಬಾರಿ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ಸು ಮಾಡಿದ್ದನ್ನ ನಸ್ರುದ್ದೀನ್ ಗೆ ನೆನಪಿಸಿದ.
“ ಈ ಸಲ ನಿನಗೆ ಸಾಲ ಕೊಡುವುದು ಸಾಧ್ಯವಿಲ್ಲ. ಕಳೆದ ಬಾರಿ ನೀನು ಸಾಲ ವಾಪಸ್ ಮಾಡುವುದಿಲ್ಲ ಎಂದು ನಾನು ನಂಬಿದ್ದೆ. ಆದರೆ ಸಾಲ ವಾಪಸ್ ಮಾಡಿ ನೀನು ನನ್ನ ನಂಬಿಕೆಗೆ ದ್ರೋಹ ಮಾಡಿದ್ದೀಯ. ಇನ್ನೊಮ್ಮೆ ಮೋಸ ಹೋಗಲು ನಾನು ತಯಾರಿಲ್ಲ “
ನಸ್ರುದ್ದೀನ್, ಗೆಳೆಯನಿಗೆ ಸಾಲ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದ.

