ಇಣುಕು ಮಹಾಶಯರು (Peeping Toms): ಓಶೋ 365  #Day 237



ಜನ ಸಂಪೂರ್ಣವಾಗಿ ನಿಷ್ಕ್ರಿಯ ( passive ) ಆಗಿದ್ದಾರೆ. ನೀವು ಸಂಗೀತ ಕೇಳುತ್ತೀರಿ, ಪುಸ್ತಕಗಳನ್ನು ಓದುತ್ತೀರಿ, ಸಿನೇಮಾ ನೋಡುತ್ತೀರಿ – ಆದರೆ ಈ ಯಾವುದರಲ್ಲೂ ನೀವು ಭಾಗಿಯಾಗಿಲ್ಲ, ಸುಮ್ಮನೇ ಪ್ರೇಕ್ಷಕರಾಗಿದ್ದೀರಿ. ಇಡೀ ಮಾನವ ಜನಾಂಗವೇ ಪ್ರೇಕ್ಷಕತನದ ಮಟ್ಟಕ್ಕೆ ಇಳಿದುಬಿಟ್ಟಿದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

********************

ಇದು ಹೇಗೆಂದರೆ ಯಾರೋ ಪ್ರೇಮಿಸುತ್ತಿರುವುದನ್ನು ನೀವು ಹೊರಗಿನಿಂದ ನೋಡುತ್ತಿದ್ದೀರಿ. ಇಡೀ ಮಾನವ ಜನಾಂಗವೇ Peeping Tom ಗಳಾಗಿ ಬದಲಾಗಿಬಿಟ್ಟಿದೆ. ಬೇರೆಯವರು ಮಾಡುತ್ತಿರುವುದನ್ನು ನೀವು ನೋಡುತ್ತಿದ್ದೀರಿ.  ಹೌದು ನೀವು ಕ್ರಿಯೆಯ ಹೊರಗಿರುವಿರಿ, ಕ್ರಿಯೆಯಲ್ಲಿ ನಿಮ್ಮ ಭಾಗವಹಿಸುವಿಕೆ ಇಲ್ಲ, ಬದ್ಧತೆ ( commitment) ಇಲ್ಲ, ಆದ್ದರಿಂದ ಯಾವ ಅಪಾಯವೂ ಇಲ್ಲ, ಯಾವ ಪ್ರಯೋಜನವೂ ಇಲ್ಲ. ಆದರೆ ಬೇರೆ ಇಬ್ಬರು ಪ್ರೇಮಿಸುವುದನ್ನು ನೋಡಿ ಹೇಗೆ ನೀವು ಪ್ರೇಮವನ್ನು ಅರ್ಥ ಮಾಡಿಕೊಳ್ಳುತ್ತೀರಿ?  ನನ್ನ ಭಾವನೆ ಏನೆಂದರೆ, ಜನ ತಾವು ಸ್ವತಃ ಪ್ರೇಮಿಸುತ್ತಿರುವಾಗಲೂ ಕೇವಲ ಪ್ರೇಕ್ಷಕರಾಗಿದ್ದಾರೆ. ಜನ ಲೈಟ್ ಆನ್ ಮಾಡಿಕೊಂಡು, ಕನ್ನಡಿಗಳನ್ನು ಇಟ್ಟುಕೊಂಡು, ಕೆಲವೊಮ್ಮೆ ಕ್ಯಾಮೆರಾಗಳ ಮುಂದೆ ತಾವು ಪ್ರೇಮಿಸುತ್ತಿರುವ ಚಿತ್ರಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ. ಇದು ಅವರ peeping tom ಸ್ವಭಾವದ ಕಾರಣವಾಗಿ. ಅವರಿಗೆ ತಾವು ಪ್ರೇಮಿಸುತ್ತಿರುವ ಚಿತ್ರಗಳನ್ನೂ ನೋಡುವ ಆಸೆ.

ಆದರೆ ನೀವು ಸ್ವತಃ ಸಂಪೂರ್ಣವಾಗಿ, ಕ್ರಿಯಾತ್ಮಕವಾಗಿ ಪ್ರೇಮದಲ್ಲಿ ಭಾಗವಹಿಸಿದಾಗ ತರ್ಕವನ್ನು ಮೀರಿದ ಸಂಗತಿಗಳು ಘಟಿಸಲಾರಂಭಿಸುತ್ತವೆ. ಪ್ರೇಮಿಸುವಾಗ ಕಾಡು ಪ್ರಾಣಿಗಳ ಹಾಗೆ ಸಂಪೂರ್ಣ ಭಾಗವಹಿಸುವಿಕೆ ಇರಬೇಕು. ನೀವು ಸಂಗೀತವನ್ನು ಕೇಳುತ್ತ ಡಾನ್ಸ್ ಮಾಡಲು ಶುರು ಮಾಡುವಿರಾದರೆ, ಸಂಗೀತ ಡಾನ್ಸ್ ಆಗಿ ಬದಲಾವಣೆಗೊಂಡಿದೆ ಮತ್ತು ಇದಕ್ಕೆ ಯಾವ ತರ್ಕವನ್ನೂ ಜೋಡಿಸಲಾಗುವುದಿಲ್ಲ. ತರ್ಕ ಕೇವಲ ಪ್ರೇಕ್ಷಕನ ಪಾತ್ರ ವಹಿಸುತ್ತದೆ ; ಅದು ಎಂದೂ participant ಆಗುವುದಿಲ್ಲ. ಇದು ಸುರಕ್ಷಿತ, ಅಪಾಯದಿಂದ ಹೊರತಾದ ಜಾಗದಿಂದ ಎಲ್ಲ ನೋಡುವಂತೆ.

ಆದ್ದರಿಂದ ಪ್ರತಿದಿನ ಯೋಚನೆ ಮಾಡದೇ ಮಾಡಬಹುದಾದ ಸಂಗತಿಗಳನ್ನು ಹುಡುಕಿ. ನೆಲದ ಮೇಲೊಂದು ತೆಗ್ಗು ತೋಡಿ. ಸೂರ್ಯನ ಬಿಸಿಲಲ್ಲಿ ಬೆವರುತ್ತ ತೆಗ್ಗು ತೋಡಿ. ಕೇವಲ ತೆಗ್ಗು ತೋಡುವವರಾಗಿ. Infact ತೆಗ್ಗು ತೋಡುವವರಲ್ಲ, ತೆಗ್ಗು ತೋಡುವಿಕೆಯಾಗಿ. ಅದರೊಳಗೆ ಸಂಪೂರ್ಣವಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಪಾರ್ಟಿಸಿಪಂಟ್ ಆಗಿ, ಆಗ ಥಟ್ಟನೇ ನಿಮಗೆ ಹೊಸ ಶಕ್ತಿಯೊಂದು ಹುಟ್ಟಿಕೊಳ್ಳುತ್ತಿರುವುದರ ಅನುಭವವಾಗುತ್ತದೆ.

ನಸ್ರುದ್ದೀನ್ ಮತ್ತು ಅವನ ಗೆಳೆಯ ನ್ಯೂಡ್ ಕ್ಲಬ್ ಇರುವ ರಸ್ತೆಯನ್ನು ದಾಟಿ ಹೋಗುತ್ತಿದ್ದರು. ಕ್ಲಬ್ ನಲ್ಲಿ ಜೋರು ಸದ್ದು ಕೇಳಿಸಿದ್ದರಿಂದ ಗೆಳೆಯ,  ನಸ್ರುದ್ದೀನ್ ಗೆ ಗೇಟ್ ಹತ್ತಿರ ಹೋಗಿ ಒಳಗೆ ನೋಡಲು ಹೇಳಿದ. ನ್ಯೂಡ್ ಕ್ಲಬ್ ನ ಗೇಟ್ ಮೆಲ್ಲಗೆ ಸರಿಸಿ ನಸ್ರುದ್ದೀನ್ ಒಳಗಿನ ವಿದ್ಯಮಾನ ಗಮನಿಸಿ ಸ್ನೇಹಿತನಿಗೆ ಮಾಹಿತಿ ಕೊಟ್ಟ.

“ ಒಳಗೆ ಎಲ್ಲ ಬೆತ್ತಲೆಯಾಗಿದ್ದಾರೆ “

“ ಗಂಡಸರೋ ಹೆಂಗಸರೋ? “ ಗೆಳೆಯ ಕುತೂಹಲದಿಂದ ಕೇಳಿದ.

“ ಗೊತ್ತಾಗಲ್ಲಿಲ್ಲ, ಯಾರೂ ಬಟ್ಟೆ ಹಾಕಿಕೊಂಡಿರಲಿಲ್ಲ “
ನಸ್ರುದ್ದೀನ್ ಇನ್ನೊಸೆಂಟಾಗಿ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.