ಒಮ್ಮೆ ಉಸಿರಾಟ ಸರಿಯಾಗಿ ಬಿಟ್ಟರೆ ಮುಂದೆ ಬಾಕಿ ಎಲ್ಲವೂ ತಾನೇ ತಾನಾಗಿ ಸರಿಯಾಗಿ ಬಿಡುತ್ತದೆ. ಉಸಿರಾಟವೇ ಬದುಕು. ಆದರೆ ಜನ ಇದನ್ನು ನಿರ್ಲಕ್ಷ ಮಾಡುತ್ತಾರೆ, ಅವರು ಈ ಬಗ್ಗೆ ಗಮನ ಹರಿಸುವುದಿಲ್ಲ. ಮತ್ತು ಉಸಿರಾಟದ ಬದಲಾವಣೆಯೊಂದಿಗೆ ಆಗಬೇಕಾಗಿರುವ ಬಾಕಿ ಎಲ್ಲ ಬದಲಾವಣೆಯೂ ಸಾಧ್ಯವಾಗಿಬಿಡುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಉಸಿರು,
ಬದುಕು ಮತ್ತು ಪ್ರಜ್ಞೆಗಳ
ನಡುವಿನ ಸೇತುವೆ,
ದೇಹ ಮತ್ತು ಮನಸ್ಸುಗಳ
ನಡುವಿನ ಕೊಂಡಿ.
ಮನಸ್ಸು ಚೆಲ್ಲಾಪಿಲ್ಲಿಯಾದಾಗಲೆಲ್ಲ
ಉಸಿರಿನ ಬೆನ್ನೇರಿ
ಮನಸ್ಸನ್ನು ಇಡಿಯಾಗಿಸಿಕೊಳ್ಳಿ.
ಮನಸ್ಸು ಸುಮ್ಮನಾದ
ಖಾಲಿಯಲ್ಲಿ ಮಾತ್ರ
ತುಂಬಿಕೊಳುತ್ತದೆ ಬದುಕು.
~ Thich Nhat Hanh
ಪ್ರತಿಯೊಬ್ಬರೂ ತಪ್ಪಾಗಿ ಉಸಿರಾಡುತ್ತಾರೆ ಏಕೆಂದರೆ, ಇಡೀ ಸಮಾಜ ತಪ್ಪು ಕಂಡಿಷನ್ ಗಳ ಮೇಲೆ, ತಪ್ಪು ಕಲ್ಪನೆಗಳ ಮೇಲೆ, ತಪ್ಪು ದೃಷ್ಟಿಕೋನಗಳ ಮೇಲೆ ಕಟ್ಟಲ್ಪಟ್ಟಿದೆ. ಉದಾಹರಣೆಗೆ, ಒಂದು ಸಣ್ಣ ಮಗು ಅಳುತ್ತಾ ಇದೆ ಮತ್ತು ಅದರ ತಾಯಿ ಅಳದಿರುವಂತೆ ಮಗುವಿಗೆ ಹೇಳುತ್ತಿದ್ದಾಳೆ. ಈಗ ಮಗು ಏನು ಮಾಡಬೇಕು? ಆಗ ಅದು ತನ್ನ ಉಸಿರನ್ನು ಹಿಡಿದುಕೊಳ್ಳುತ್ತದೆ. ಏಕೆಂದರೆ ಅಳದಿರಲು ಸಾಧ್ಯವಾಗುವಂತೆ ಮಾಡುವ ವಿಧಾನ ಅದೊಂದೇ. ನೀವು ನಿಮ್ಮ ಉಸಿರನ್ನು ಹಿಡಿದುಕೊಂಡರೆ ಎಲ್ಲವೂ ನಿಂತು ಹೋಗುತ್ತದೆ : ಅಳು, ಕಣ್ಣೀರು ಎಲ್ಲವೂ. ಮುಂದೆ ಮಗು ಇದನ್ನೇ ಮುಂದುವರೆಸುತ್ತದೆ – ಕೋಪ ಮಾಡಿಕೊಳ್ಳಬೇಡ, ಅಳಬೇಡ, ಇದನ್ನು ಮಾಡಬೇಡ, ಅದನ್ನು ಮಾಡಬೇಡ ಎಲ್ಲಕ್ಕೂ.
ಇದರಿಂದ ಮಗು ಕಲಿಯುವುದೇನೆಂದರೆ, ತಾನು ಬಹಳ ನಿಧಾನವಾಗಿ ಉಸಿರಾಡಿದಾಗ ಎಲ್ಲವನ್ನೂ ನಿಯಂತ್ರಣ ಮಾಡಬಹುದು. ಮಗು ಪರಿಪೂರ್ಣವಾಗಿ, ಇಡೀ ಯಾಗಿ ಉಸಿರಾಡಿದಾಗ, ಎಲ್ಲ ಮಕ್ಕಳು ಹುಟ್ಟುವಾಗ ಉಸಿರಾಡುವಂತೆ, ಅದು ವೈಲ್ಡ್ ಆಗುತ್ತದೆ. ಆದ್ದರಿಂದಲೇ ಮಗು ತನ್ನನ್ನು ತಾನು ಹಿಡಿದಿಟ್ಟುಕೊಳ್ಳುತ್ತದೆ.
ಎಲ್ಲ ಮಕ್ಕಳೂ ತಮ್ಮ ಗುಪ್ತಾಂಗಗಳೊಂದಿಗೆ ( genitals) ಆಟ ಆಡುತ್ತವೆ, ಏಕೆಂದರೆ ಆ ಅನುಭವ ಅವಕ್ಕೆ ಸುಖಕರವಾದದ್ದು. ಮಕ್ಕಳಿಗೆ ಈ ಸಾಮಾಜಿಕ ನಿರ್ಬಂಧ, ಕಟ್ಚು ಪಾಡು ಮುಂತಾದ ಮೂರ್ಖತನಗಳ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಅದರ ತಂದೆ ತಾಯಿ ಹೀಗೆ ಮಾಡದಂತೆ ಮಗುವಿನ ಮೇಲೆ ಒತ್ತಾಯ ಹೇರುತ್ತಾರೆ. ಇಂಥ ಖಂಡನೆ ಅವರ ಕಣ್ಣುಗಳಲ್ಲಿಯೇ ವ್ಯಕ್ತವಾಗುತ್ತದೆ. ಆಗ ಮಗುವಿಗೆ ಶಾಕ್ ಆಗುತ್ತದೆ, ಮತ್ತು ಅದು ಗಾಬರಿಯಲ್ಲಿ ಆಳವಾಗಿ ಉಸಿರಾಡುವುದನ್ನ ನಿಲ್ಲಿಸುತ್ತದೆ. ಏಕೆಂದರೆ ಅದರ ಆಳ ಉಸಿರಾಡುವಿಕೆ ಅದರ ಗುಪ್ತಾಂಗಗಳಿಗೆ ಒಳಗಿನಿಂದಲೇ ಸಂದೇಶ ನೀಡುತ್ತಿರುತ್ತದೆ. ಆಗ ಮಗು ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡು ಆಳ ಉಸಿರಾಟವನ್ನು ನಿಲ್ಲಿಸುತ್ತದೆ, ಬಹಳ ಹಗುರವಾಗಿ ಉಸಿರಾಡಲು ಶುರು ಮಾಡುತ್ತದೆ ಮತ್ತು ಗುಪ್ತಾಂಗಗಳ ಜೊತೆಗಿನ ಸಂಪರ್ಕವನ್ನು ಕಡಿದುಕೊಳ್ಳುತ್ತದೆ. ಎಲ್ಲ ದಮನಕಾರಿ ( repressive) ಸಮಾಜಗಳು ಹಗುರವಾಗಿ ಉಸಿರಾಡುವ ಸಮಾಜಗಳು. ಯಾರಿಗೆ ಲೈಂಗಿಕತೆಯ ಬಗ್ಗೆ ದಮನಕಾರಿ ಮನೋಭಾವ ಇಲ್ಲವೋ ಅಂಥ ಜನರು ಮಾತ್ರ ಪರಿಪೂರ್ಣವಾಗಿ ಉಸಿರಾಡುತ್ತಾರೆ. ಅವರ ಉಸಿರಾಟ ಸುಂದರವಾದದ್ದು; ಅದು ಸಂಪೂರ್ಣ ಮತ್ತು ಇಡೀ ಯಾದದ್ದು. ಅವರು ಪ್ರಾಣಿಗಳ ಹಾಗೆ ಉಸಿರಾಡುತ್ತಾರೆ, ಅವರು ಮಕ್ಕಳ ಹಾಗೆ ಉಸಿರಾಡುತ್ತಾರೆ.
ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ.
ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ
ಮಾಸ್ಟರ್ : ಯಾಕೆ? ಏನು ವಿಷಯ?
ಯುವಕ : ನಾನು ದೇವರನ್ನು ಹುಡುಕಬೇಕು
ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ.
ಕೆಲ ನಿಮಿಷಗಳಾಗುತ್ತಿದ್ದಂತೆಯೇ, ಯುವಕನಿಗೆ ಉಸಿರುಗಟ್ಟತೊಡಗಿತು, ಅವ ಒದ್ದಾಡತೊಡಗಿದ.
ಆಗ ಮಾಸ್ಟರ್, ಯುವಕನ ಮುಖವನ್ನು ನೀರಿನಿಂದ ಹೊರ ತೆಗೆದ. ಯುವಕ ಏದುಸಿರು ಬಿಡುತ್ತ ಜೋರು ಜೋರಾಗಿ ಕೆಮ್ಮತೊಡಗಿದ.
ಮಾಸ್ಟರ್ : ಈಗ ಹೇಳು, ನೀರಿನಲ್ಲಿ ನಿನ್ನ ಮುಖ ಮುಳುಗಿದ್ದಾಗ, ನಿನಗೇನು ಬೇಕೇ ಬೇಕು ಅನಿಸಿತ್ತು?
ಯುವಕ : ಗಾಳಿ, ಗಾಳಿ ಬೇಕನಿಸಿತ್ತು ಮಾಸ್ಟರ್.
ಮಾಸ್ಟರ್ : ಹಾಗಾದರೆ ಈಗ ವಾಪಸ್ ಹೋಗು, ಯಾವಾಗ ನಿನಗೆ ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯ ಅನಿಸುತ್ತದೆಯೋ, ಆಗ ಬಾ. ದೇವರ ಬಗ್ಗೆ ಆಗ ಮಾತಾಡೋಣ.

