ಕೆಲಸ ಒಳ್ಳೆಯದು ಆದರೆ ಅದು ಚಟ ಆಗಬಾರದು. ಬಹಳಷ್ಟು ಜನರು ತಮ್ಮ ಕೆಲಸವನ್ನು ನಶೆಯನ್ನಾಗಿ ಮಾಡಿಕೊಂಡಿದ್ದಾರೆ ಅದರಲ್ಲೇ ಕಳೆದುಹೋಗುವಂತೆ, ಕುಡುಕರು ಅಲ್ಕೋಹಾಲ್ ನಲ್ಲಿ ಕಳೆದುಹೋಗುವಂತೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜನರಿಗೆ ಮಾಡುವಿಕೆಯ ( doing) ಸಾಮರ್ಥ್ಯ ಎಷ್ಟು ಇರುತ್ತದೆಯೋ ಅಷ್ಟೇ ಸಾಮರ್ಥ್ಯ ಮಾಡದಿರುವಿಕೆಯಲ್ಲಿಯೂ ( non doing ) ಇರಬೇಕು. ಆಗ ಅವರು ಫ್ರೀ ಆಗಿ ಇರಬಹುದು. ಜನ ತಾವು ಕಠಿಣ ಕೆಲಸ ಮಾಡುವಾಗ ಅನುಭವಿಸುವ ಆನಂದ, ಪ್ರಶಾಂತತೆ, ಪರಿಪೂರ್ಣತೆ ಅವರಿಗೆ ತಾವು ಏನನ್ನೂ ಮಾಡದೇ ಸುಮ್ಮನೇ ಕುಳಿತುಕೊಂಡಾಗಲೂ ಸಾಧ್ಯವಾಗಬೇಕು; ಆಗ ಮಾತ್ರ ಅವರು ಫ್ಲೆಕ್ಸಿಬಲ್ ಆಗಬಹುದು.
ಎರಡು ಥರದ ಜನರಿದ್ದಾರೆ : ಕೆಲವರು ತಮ್ಮ ಆಲಸ್ಯಕ್ಕೆ ಅತಿಯಾಗಿ ಅಂಟಿಕೊಂಡವರು ಮತ್ತು ಇನ್ನೂ ಕೆಲವರು ತಮ್ಮ ಉದ್ಯೋಗಕ್ಕೆ ಅತಿಯಾಗಿ ಅಂಟಿಕೊಂಡವರು. ಇಬ್ಬರೂ ಸೆರೆಮನೆಯ ವಾಸಿಗಳು. ಜನರಿಗೆ ಒಂದು ರೀತಿಯಿಂದ ಇನ್ನೊಂದಕ್ಕೆ ಸರಾಗವಾಗಿ, ಪ್ರಯತ್ನರಹಿತವಾಗಿ ಮೂವ್ ಆಗುವುದು ಸಾಧ್ಯವಾಗಬೇಕು. ಆಗ ನಿಮಗೆ ನಿಮ್ಮ ಇರುವಿಕೆಯಲ್ಲಿ ಒಂದಿಷ್ಟು ಸ್ವಾತಂತ್ರ್ಯ, ಒಂದಿಷ್ಟು ಘನತೆ, ಒಂದಿಷ್ಟು ಸಹಜತೆ ಸಾಧ್ಯವಾಗುತ್ತದೆ.
ನಾನು ಕೆಲಸದ ವಿರುದ್ಧ ಇಲ್ಲ, ನಾನು ಯಾವುದರ ವಿರುದ್ಧವೂ ಇಲ್ಲ – ಆದರೆ ಯಾವುದೂ ವ್ಯಸನವಾಗಬಾರದು. ಇಲ್ಲವಾದರೆ ನೀವು ತೀವ್ರ ಗೊಂದಲದ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ನೀವು ಮಾಡುತ್ತಿರುವ ಕೆಲಸ ನಿಮ್ಮ ಉದ್ಯೋಗವಾಗಿರುವಾಗ , ನೀವು ಅದರ ಹಿಂದೆ ಅಡಗಿಕೊಂಡಿದ್ದೀರಿ, ಆಗ ಅದು ನಿಮಗೆ ರಿಪೀಟೇಟಿವ್ ಆದ ಯಾಂತ್ರಿಕ ಸಂಗತಿಯಾಗುತ್ತದೆ. ಆಗ ಕೆಲಸ ನಿಮಗೆ ಒಂದು ರೀತಿಯ ಗೀಳು ಆಗುತ್ತದೆ. ಕೆಲಸದ ದೆವ್ವ ನಿಮ್ಮನ್ನು ಆವರಿಸಿಕೊಂಡಂತೆ.
ಒಂದು ದಿನ, ನಸ್ರುದ್ದೀನ್ ನ ಅಮ್ಮ ಅವನನ್ನ ಹಾಸಿಗೆಯಿಂದ ಎಬ್ಬಿಸುವ ಪ್ರಯತ್ನ ಮಾಡಿದಳು.
“ ನಸ್ರುದ್ದೀನ್, ಬೇಗ ಏಳು ಸ್ಕೂಲಿಗೆ ಹೋಗಬೇಕು “
“ ಮೂರು ಕಾರಣಗಳಿಂದ ನನಗೆ ಸ್ಕೂಲ್ ಇಷ್ಟ ಇಲ್ಲ.
ಒಂದು, ಸ್ಕೂಲ್ ವಾತಾವರಣ ಡಲ್ ಆಗಿದೆ, ಎರಡನೇಯದು ಸ್ಕೂಲ್ ಲ್ಲಿ ಮಕ್ಕಳು ನನ್ನ ಅಣಕಿಸ್ತಾರೆ, ಮೂರನೇ ಕಾರಣ ನನಗೆ ಸ್ಕೂಲ್ ಅಂದ್ರೆ ಬೇಸರ. “
ನಸ್ರುದ್ದೀನ್ ಹಾಸಿಗೆಯಿಂದ ಏಳದೇ ಅಮ್ಮನಿಗೆ ಸಮಜಾಯಿಷಿ ಹೇಳಿದ.
“ ನಸ್ರುದ್ದೀನ್, ನೀನು ಸ್ಕೂಲ್ ಗೆ ಯಾಕೆ ಹೋಗಲೇ ಬೇಕು ಅನ್ನುವುದಕ್ಕೂ ಮೂರು ಕಾರಣಗಳಿವೆ. ಒಂದು ಅದು ನಿನ್ನ ಕರ್ತವ್ಯ, ಎರಡನೇಯ ಕಾರಣ ನಿನಗೆ ಈಗ 50 ವರ್ಷ ವಯಸ್ಸು ಮತ್ತು ಮೂರನೇಯದು ನೀನು ಸ್ಕೂಲಿನ ಹೆಡ್ ಮಾಸ್ಟರ್. “
ಅಮ್ಮ , ನಸ್ರುದ್ದೀನ್ ಹೊದ್ದುಕೊಂಡಿದ್ದ ಬೆಡ್ ಶೀಟ್ ಕಿತ್ತೆಸೆದಳು.

