ಪ್ರೀತಿ ಮತ್ತು ಸ್ವಾತಂತ್ರ್ಯ – ಇದು ಮಾನವ ಜನಾಂಗದ ಇಡಿಯಾದ ಸಮಸ್ಯೆ. ಮಾನವ ಜನಾಂಗದ ಭಾಷೆಯಲ್ಲಿ ಈ ಎರಡೂ ಪದಗಳು ಅತ್ಯಂತ ಮುಖ್ಯವಾದ ಪದಗಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮಗೆ
ಇದು ಗೊತ್ತಿರಲಿ….
ಪ್ರೇಮಿಗಳಿಗೆ ಯಾವ ಧರ್ಮದಲ್ಲೂ
ಶೃದ್ಧೆಯಿರುವುದಿಲ್ಲ.
ಈ ಪ್ರೇಮ ಧರ್ಮದಲ್ಲಿ
ನಂಬಿಕೆಯಿಲ್ಲ, ದ್ರೋಹವಿಲ್ಲ,
ಗೆಳೆಯರಿಲ್ಲ, ಕಾಫೀರರಿಲ್ಲ,
ಕಾರಣವಿಲ್ಲ
ನಾನೆಂಬುದಿಲ್ಲ, ನೀನೆಂಬುದಿಲ್ಲ
ಹೃದಯ, ಆತ್ಮ
ಉಹೂಂ ಯಾವುದೂ ಇಲ್ಲ.
ಪ್ರೇಮಿಗಳೇ
ನಿಮ್ಮ ಪ್ರೇಮವನ್ನೊಮ್ಮೆ
ಖಾತ್ರಿ ಮಾಡಿಕೊಳ್ಳಿ.
– ರೂಮಿ
ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಸುಲಭ – ಪ್ರೀತಿಯನ್ನು ಆಯ್ಕೆ ಮಾಡಿಕೊಂಡು ಸ್ವಾತಂತ್ರ್ಯವನ್ನು ಡ್ರಾಪ್ ಮಾಡುವುದು – ಆಗ ಸ್ವಾತಂತ್ರ್ಯ ನಿಮ್ಮನ್ನು ಬೆಂಬಿಡದೇ ಕಾಡುವುದು, ಮತ್ತು ಅದು ನಿಮ್ಮ ಪ್ರೀತಿಯನ್ನು ನಾಶ ಮಾಡುವುದು. ಆಗ ಪ್ರೀತಿ, ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುವಂತೆ ತೋರುವುದು , ಪ್ರೀತಿಗೆ ಶತ್ರುವಿನಂತೆ, ಪ್ರೀತಿಗೆ ವಿರೋಧಾತ್ಮಕವೆಂಬಂತೆ. ಸ್ವಾತಂತ್ರ್ಯವನ್ನು ಹೇಗೆ ಬಿಟ್ಟುಬಿಡಲಿಕ್ಕಾಗುತ್ತದೆ? ಸಾಧ್ಯವಿಲ್ಲ, ಪ್ರೀತಿಗಾಗಿ ಕೂಡ. ಸ್ವಾತಂತ್ರ್ಯವಿಲ್ಲದಾಗ ಪ್ರೀತಿಯೂ ನಿಮಗೆ ಬೇಸರ ಮೂಡಿಸುವುದು ಮತ್ತು ಆಗ ನೀವು ಇನ್ನೊಂದು ಅತಿಗೆ ಮೂವ್ ಆಗುತ್ತೀರಿ.
ಒಂದು ದಿನ ನೀವು ಪ್ರೀತಿಯನ್ನು ಬಿಟ್ಟು ಸ್ವಾತಂತ್ರ್ಯದೆಡೆಗೆ ಹೋಗುತ್ತೀರಿ. ಆದರೆ ಪ್ರೀತಿಯಿಲ್ಲದೇ ಸ್ವತಂತ್ರವಾಗಿರುವುದು ಹೇಗೆ ಸಾಧ್ಯ? ಪ್ರೀತಿ ಬಹಳ ದೊಡ್ಡ ಅವಶ್ಯಕತೆ. ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದು ಬಹುತೇಕ ಒಂದು ಅಧ್ಯಾತ್ಮಿಕ ಉಸಿರಾಟ. ದೇಹ, ಉಸಿರಾಟವಿಲ್ಲದೇ ಬದುಕುವುದು ಸಾಧ್ಯವಿಲ್ಲ, ಮತ್ತು ಆತ್ಮಕ್ಕೆ ಪ್ರೀತಿಯಿಲ್ಲದೇ ಬದುಕು ಇಲ್ಲ.
ಹೀಗೆ ಜನ ಪೆಂಡ್ಯೂಲಮ್ ನಂತೆ ಒಂದು ತುಂದಿಯಿಂದ ಇನ್ನೊಂದು ತುದಿಗೆ ನೇತಾಡುತ್ತಿರುತ್ತಾರೆ, ಪ್ರೀತಿಯಿಂದ ಸ್ವಾತಂತ್ರ್ಯಕ್ಕೆ ಮತ್ತು ಸ್ವಾತಂತ್ರ್ಯದಿಂದ ಪ್ರೀತಿಗೆ. ಹೀಗೆಯೇ ಜೀವನ ಚಕ್ರ ಹಲವಾರು ಬದುಕುಗಳಿಂದ ತಿರುಗುತ್ತಿದೆ. ಯಾವಾಗ ಮನುಷ್ಯ ಪ್ರೀತಿ ಮತ್ತು ಸ್ವಾತಂತ್ರ್ಯದ ನಡುವೆ ಸಮನ್ವಯವನ್ನು ಸಾಧಿಸುತ್ತಾನೋ ಆಗ ಅವನ ಬಿಡುಗಡೆ ಸಾಧ್ಯವಾಗುತ್ತದೆ. ಈ ದ್ವಂದ್ವವನ್ನು ಆಯ್ಕೆ ಮಾಡಿಕೊಳ್ಳಿ. ದ್ವಂದ್ವ ನಿಮಗೆ ಸಾಧ್ಯ ಮಾಡಿರುವ ಪರ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಇಡೀ ದ್ವಂದ್ವವನ್ನು ಆಯ್ಕೆ ಮಾಡಿಕೊಳ್ಳಿ. ಒಂದನ್ನೇ ಆಯ್ಕೆ ಮಾಡಿಕೊಳ್ಳಬೇಡಿ ಎರಡನ್ನೂ ಆಯ್ಕೆ ಮಾಡಿಕೊಳ್ಳಿ; ಎರಡನ್ನೂ ಒಟ್ಟಿಗೆ ಆಯ್ಕೆ ಮಾಡಿಕೊಳ್ಳಿ. ಪ್ರೀತಿಯೊಳಗೆ ಪ್ರವೇಶ ಮಾಡಿ ಸ್ವಾತಂತ್ರ್ಯವನ್ನು ನಿಮ್ಮದಾಗಿಸಿಕೊಳ್ಳಿ. ಸದಾ ಸ್ವತಂತ್ರರಾಗಿರಿ, ಯಾವತ್ತೂ ನಿಮ್ಮ ಸ್ವಾತಂತ್ರ್ಯವನ್ನು ಪ್ರೀತಿಯ ವಿರುದ್ಧ ಎತ್ತಿ ಕಟ್ಟಬೇಡಿ.

