ಮಕ್ಕಳಂತೆ ( Child like ) ಓಶೋ 365 #Day241


ಧ್ಯಾನ ಮಾಡುತ್ತೀರಾದರೆ ನೀವು ಮಕ್ಕಳಂತೆ ಆಗುವ ಸಾಧ್ಯತೆ ಹೆಚ್ಚು. ಕೊಂಚ ಧ್ಯಾನ ಸಾಧ್ಯವಾದರೂ ನೀವು ತಾಜಾತನವನ್ನು ಅನುಭವಿಸಲು ಶುರು ಮಾಡುತ್ತೀರಿ.  ಮತ್ತು ಇದರೊಂದಿಗೆಯೇ ಬರುತ್ತದೆ ಒಂದು ರೀತಿಯ ಬೇಜವಾಬ್ದಾರಿ – ಬೇಜವಾಬ್ದಾರಿ ಎಂಥಹದೆಂದರೆ ನೀವು ಇನ್ನೊಬ್ಬರ ಉತ್ಕಟತೆಯನ್ನು ಈ ಮುಂದೆ ಪರಿಗಣಿಸುವುದಿಲ್ಲ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನನ್ನ ಪ್ರಕಾರ, ಮಕ್ಕಳಂತೆ ಆಗುವುದು ಬಹಳ ದೊಡ್ಡ ಜವಾಬ್ದಾರಿ. ನಿಮಗೆ ನಿಮ್ಮ ಕುರಿತಾದ ಜವಾಬ್ದಾರಿ ಹೆಚ್ಚಾಗುತ್ತದೆ, ಆದರೆ ನೀವು ನಿಮ್ಮ ಮುಖವಾಡಗಳನ್ನು ಕಳೆದುಕೊಳ್ಳಲು ಶುರು ಮಾಡುತ್ತೀರಿ. ಬೇರೆಯವರಿಗೆ ನಿಮ್ಮ ಈ ರೀತಿ ಡಿಸ್ಟರ್ಬ್ ಮಾಡುತ್ತದೆ ಏಕೆಂದರೆ, ಅವರಿಗೆ ನಿಮ್ಮಿಂದ ನಿರೀಕ್ಷೆಗಳಿದ್ದವು, ಮತ್ತು ನೀವು ಅವರ ಬೇಡಿಕೆಗಳನ್ನು ಪೂರೈಸುತ್ತಿದ್ದಿರಿ. ಈಗ ಅವರು ನೀವು ಬೇಜವಾಬ್ದಾರರಾಗಿದ್ದೀರೆಂದು ಆರೋಪ ಮಾಡುತ್ತಿದ್ದಾರೆ. ಈಗ ನೀವು ಅವರ ನಿಯಂತ್ರಣದಲ್ಲಿ ಇಲ್ಲದಿರುವುದರಿಂದ ಅವರು ಈ ಆರೋಪವನ್ನು ಮಾಡುತ್ತಿದ್ದಾರೆ. ನೀವು ಈಗ ಹೆಚ್ಚು ಫ್ರೀ ಆಗಿದ್ದೀರಿ. ನಿಮ್ಮ ಈ ವರ್ತನೆಯನ್ನು ಖಂಡಿಸುವ ಸಲುವಾಗಿ ಅವರು ನಿಮ್ಮನ್ನು ಚೈಲ್ಡಿಶ್ ಎಂದೂ ಬೇಜವಾಬ್ದಾರಿ ಎಂದೂ ದೂರುತ್ತಿದ್ದಾರೆ.

ಆದರೆ ಈಗ ನೀವು ಹೆಚ್ಚು ಸ್ವತಂತ್ರರಾಗುತ್ತಿದ್ದೀರಿ, ಹೆಚ್ಚು ಜವಾಬ್ದಾರರಾಗುತ್ತಿದ್ದೀರಿ – ಆದರೆ ಜವಾಬ್ದಾರಿ ಎಂದರೆ ಪ್ರತಿಕ್ರಿಯಿಸುವ ಸಾಮರ್ಥ್ಯ. ಇದು ನೀವು ಪೂರೈಸಬೇಕಾದ ಕರ್ತವ್ಯ ಎನ್ನುವ ರೀತಿಯಲ್ಲಿ ಅಲ್ಲ. ಇದು responsiveness, ಇದು ಸಂವೇದನಶೀಲತೆ. ಆದರೆ ನೀವು ಹೆಚ್ಚು ಸಂವೇದನಾಶೀಲರಾದಂತೆಲ್ಲ , ಬಹಳಷ್ಟು ಜನ ನೀವು ಬೇಜವಾಬ್ದಾರರಾಗುತ್ತಿದ್ದೀರಿ ಎಂದು ಥಿಂಕ್ ಮಾಡಲು ಶುರು ಮಾಡುತ್ತಾರೆ. ಇದನ್ನು ನೀವು ಸ್ವೀಕರಿಸಬೇಕಾಗುತ್ತದೆ, ಏಕೆಂದರೆ ಅವರ ಆಸಕ್ತಿಗಳು, ಹೂಡಿಕೆಗಳು ಇನ್ನು ತೃಪ್ತಿಗೊಳ್ಳುವ ಸಾಧ್ಯತೆ ಇಲ್ಲ. ಬಹಳಷ್ಟು ಬಾರಿ ನೀವು ಅವರ ನಿರೀಕ್ಷೆಗಳನ್ನು ಪೂರ್ಣ ಮಾಡಲಾರಿರಿ. ಆದರೆ ಯಾರೂ ಇಲ್ಲಿ ಬೇರೆಯವರು ನಿರೀಕ್ಷೆಗಳನ್ನು ಪೂರ್ಣ ಮಾಡಲು ಇಲ್ಲ.

ಝೆನ್ ಮಾಸ್ಟರ್ ರ್ಯೊಕನ್ ಗೆ (Ryokan) ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳೊಡನೆ ಎಷ್ಟು ಒಂದಾಗಿದ್ದನೆಂದರೆ ತಾನೇ ಸ್ವತಃ ಮಗುವಾಗಿಬಿಟ್ಟಿದ್ದ. ಅವ ಜೀಸಸ್ ಹೇಳುವ ಮಗುವಿನಂಥ ಮನುಷ್ಯ. ರ್ಯೊಕನ್ , ಮನುಷ್ಯರು ಇಷ್ಟು ಮುಗ್ಧರಾಗಿರಬಲ್ಲರು ಎಂಬುದನ್ನ ನಂಬಲು ಸಾಧ್ಯವಾಗದಷ್ಟು ಮುಗ್ಧ ಮನುಷ್ಯ. ಅವನೊಳಗೆ ಒಂದಿನಿತೂ ಕಪಟ, ಒಂದಿಷ್ಟೂ ಜಾಣತನವಿರಲಿಲ್ಲ. ಅವನನ್ನು ಪುಟ್ಟ ಹುಚ್ಚ ಎಂದೇ ಸುತ್ತಲಿನ ಜನ ಗುರುತಿಸುತ್ತಿದ್ದರು.

ಮಕ್ಕಳೊಡನೆ ಆಟ ಆಡುವುದು ರ್ಯೊಕನ್ ನ ಅತ್ಯಂತ ಪ್ರೀತಿಯ ಹವ್ಯಾಸಗಳ್ಳಲ್ಲೊಂದು. ಒಂದು ದಿನ ರ್ಯೊಕನ್ ಮಕ್ಕಳೊಡನೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ. ಅಂದು ಅವನದು ಅಡಗಿಕೊಳ್ಳುವ ಪಾಳಿ. ರ್ಯೊಕನ್ ಓಡಿ ಹೋಗಿ ಹೊಲದಲ್ಲಿನ ಹುಲ್ಲಿನ ಬಣಿವೆಯೊಳಗೆ ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡ. ಮಕ್ಕಳು ಹುಡುಕಿ ಹುಡುಕಿ ಸುಸ್ತಾದರು, ಕತ್ತಲಾಗುತ್ತ ಬಂದದ್ದರಿಂದ ಮಕ್ಕಳೆಲ್ಲ ತಮ್ಮ ತಮ್ಮ ಮನೆಗೆ ಹೋಗಿಬಿಟ್ಟರು. ಆದರೆ ಇದ್ಯಾವುದೂ ಗೊತ್ತಿರದ ರ್ಯೊಕನ್ ಹುಲ್ಲಿನ ಬಣಿವೆಯೊಳಗೆ ಬಚ್ಚಿಟ್ಟುಕೊಂಡು ಆಟ ಮುಂದುವರೆಸಿದ್ದ. ಮರುದಿನ ಮುಂಜಾನೆ ಹೊಲದ ಕೆಲಸಕ್ಕೆ ಬಂದ ರೈತ, ಬಣಿವೆಯಲ್ಲಿ ಅಡಗಿಕೊಂಡು ಕುಳಿತಿದ್ದ ರ್ಯೊಕನ್ ನನ್ನು ಗಮನಿಸಿ ಜೋರಾಗಿ ಕೂಗಿದ,

“ ಮಾಸ್ಟರ್ ರ್ಯೊಕನ್ ಇಲ್ಲೇನು ಮಾಡುತ್ತಿದ್ದೀಯ ? “

ರ್ಯೊಕನ್ ಓಡಿ ಬಂದು ರೈತನ ಬಾಯಿ ಮುಚ್ಚಿದ,

“ ಮೆತ್ತಗೆ ಮಾತಾಡು ಮಕ್ಕಳು ಕೇಳಿಸಿಕೊಂಡುಬಿಟ್ಟಾರು. ಈ ಸಲ ನಾನು ಗೆಲ್ಲುವುದು ಖಚಿತ. ಮಕ್ಕಳೊಡನೆ ಬೆಟ್ಸ್ ಕಟ್ಟಿದ್ದೇನೆ. “

ಇಡೀ ರಾತ್ರಿ ಆಟ ಬಿಟ್ಟುಹೋದ ಮಕ್ಕಳಿಗಾಗಿ ಹುಲ್ಲಿನ ಬಣಿವೆಯಲ್ಲಿ ಕಾಯುತ್ತಿದ್ದ ಮಾಸ್ಟರ್ ರ್ಯೊಕನ್. ಇಂಥ ಮುಗ್ಧತೆ ಝೆನ್. ಇಂಥ ಮುಗ್ಧತೆ ದಿವ್ಯವಾದದ್ದು, ಇದಕ್ಕೆ ಒಳ್ಳೆಯದು ಕೆಟ್ಟದ್ದು ಎನ್ನುವ ಭೇದಭಾವವಿಲ್ಲ. ಈ  ಜಗತ್ತು ಆ ಜಗತ್ತು ಎನ್ನುವ ತಾರತಮ್ಯವಿಲ್ಲ. ಇಂಥ ಮುಗ್ಧತೆಯೇ ಜಗತ್ತನ್ನು ಕಾಯುವ ಸಾಚಾತನ. ಮತ್ತು ಇಂಥ ಸಾಚಾತನವೇ ಧರ್ಮದ ಮೂಲ ತಿರುಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.