ಬಯಕೆ, ಯಾವಾಗ ತುಡಿತವಾಗುತ್ತದೆಯೆಂದರೆ, ಯಾವಾಗ ನೀವು ಅದಕ್ಕಾಗಿ ಎಲ್ಲ ರಿಸ್ಕ್ ಗೆ ಸಿದ್ಧರಾಗುವಾಗ. ಬಯಕೆಗಳು ಹಲವಾರು ಆದರೆ ತುಡಿತ ಮಾತ್ರ ಒಂದು, ಏಕೆಂದರೆ ಅದು ನಿಮ್ಮ ಸಂಪೂರ್ಣ ಎನರ್ಜಿಯನ್ನು ಬಯಸುತ್ತದೆ.
ಅದು ನೀವು ನೀವಾಗಿರುವ ನಿಮ್ಮ ಇಡಿಯನ್ನು ಬಯಸುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನನಗೆ
ನಿನ್ನ ಗಳಿಕೆಗಿಂತ
ಅದರ ಹಿಂದಿರುವ
ತುಡಿತ ಮುಖ್ಯ.
~ ಖಲೀಲ್ ಜಿಬ್ರಾನ್
ಇಲ್ಲಿ ನೀವು ನಿಮ್ಮ ಯಾವ ಭಾಗವನ್ನೂ ತಡೆ ಹಿಡಿಯುವ ಹಾಗಿಲ್ಲ, ನೀವು ಯಾವ ಜಾಗರೂಕತೆಯಿಂದ, ಜಾಣತನದಿಂದ, ಲೆಕ್ಕಾಚಾರದಲ್ಲಿ ನಿಮ್ಮ ತುಡಿತದೆಡೆ ಚಲಿಸುವ ಹಾಗಿಲ್ಲ. ಅದು ಒಂದು ಹುಚ್ಚು ಜಿಗಿತವಾಗಿರಬೇಕು. ಜನ ತುಂಬ ವಿಭಜಿತರಾಗಿದ್ದಾರೆ : ಒಬ್ಬರು ನಿಮ್ಮನ್ನು ಉತ್ತರಕ್ಕೆ ಎಳೆಯುತ್ತಿದ್ದರೆ ಇನ್ನೊಬ್ಬರು ದಕ್ಷಿಣಕ್ಕೆ, ಮತ್ತು ನಿಮ್ಮ ಬಯಕೆಗಳು ನಿಮ್ಮನ್ನು ಎಲ್ಲ ದಿಕ್ಕುಗಳಲ್ಲಿ ಎಳೆದಾಡುತ್ತಿವೆ, ನಿಮ್ಮನ್ನು ಹುಚ್ಚನನ್ನಾಗಿಸುತ್ತ.
ಆದ್ದರಿಂದ ಜನ ಎಲ್ಲಿಗೂ ಹೋಗಿ ಮುಟ್ಟುವುದಿಲ್ಲ – ಇದು ಸಾಧ್ಯವಿಲ್ಲ – ಏಕೆಂದರೆ ನಿಮ್ಮ ಒಂದೊಂದು ಭಾಗವೂ ಒಂದೊಂದು ದಿಕ್ಕಿನೆಡೆ ನಿಮ್ಮನ್ನು ಎಳೆದಾಡುತ್ತಿದೆ. ಹೇಗೆ ನೀವು ನಿಮ್ಮ ಗುರಿ ಮುಟ್ಟುವುದು ಸಾಧ್ಯ? ಏನನ್ನಾದರೂ ತಲುಪಬೇಕಾದರೆ, ನಿಮ್ಮ ಪೂರ್ಣತೆಯ ಅವಶ್ಯಕತೆಯಿದೆ. ಆದ್ದರಿಂದ ಜನ ಎಳೆದಾಡುವುದನ್ನು ನೀವು ಕಾಣುತ್ತೀರಿ. ಅವರಲ್ಲಿ ಬದುಕಿನ ಕುರಿತಾದ ಯಾವ ತೀವ್ರತೆಯೂ ಇಲ್ಲ; ಇದು ಸಾಧ್ಯವಿಲ್ಲ. ಅವರ ಜೀವಂತಿಕೆ ಹಲವಾರು ದಿಕ್ಕುಗಳಲ್ಲಿ ಸೋರಿ ಹೋಗುತ್ತಿದೆ – ಅವರಲ್ಲಿ ಪೂರ್ಣ ಜೀವಶಕ್ತಿ ಇಲ್ಲ.
ಆದರೆ ಈ ತುಡಿತ ಆನಂದಮಯ ವಾಗಿರಬೇಕು; ಇದನ್ನು ಯಾರೂ ಗಂಭೀರವಾಗಿ ಮಾಡಬಾರದು, ಏಕೆಂದರೆ ಗಂಭೀರರಾದ ಕ್ಷಣದಲ್ಲಿಯೇ , ನೀವು ಒತ್ತಡಕ್ಕೊಳಗಾಗುತ್ತೀರಿ. ತುಡಿತ ತೀವ್ರವಾಗಿರಬೇಕೇ ಹೊರತು ಒತ್ತಡಕ್ಕೊಳಗಾಗಿರಬಾರದು. ಅದು playful ಆಗಿರಬೇಕು, ಅದು ಉತ್ಸಾಹದಾಯಕವಾಗಿರಬೇಕು, ಅದು ನಗು, ಹಾಡು, ಕುಣಿತದಿಂದ ತುಂಬಿಕೊಂಡಿರಬೇಕು. ಇದು ಕೇವಲ ಕರ್ತವ್ಯವಾಗಿರಬಾರದು. ಇಲ್ಲಿ ದೇವರನ್ನು ಮೆಚ್ಚಿಸುವ , ಇನ್ನೊಬ್ಬರನ್ನು ಮೆಚ್ಚಿಸುವ ಪ್ರಶ್ನೆ ಇಲ್ಲ, ನೀವು ನಿಮ್ಮ ಇಚ್ಛೆಗನುಗುಣವಾಗಿ ಬದುಕುತ್ತಿದ್ದೀರಿ ಅಷ್ಟೇ; ಆದ್ದರಿಂದಲೇ ನೀವು ಆನಂದದಿಂದಿರುವುದು. ನೀವು ಬದುಕನ್ನು ಬಾಳಲು ಆಯ್ಕೆ ಮಾಡಿಕೊಂಡಿರುವ ದಾರಿ ಇದು, ನೀವು ಜ್ವಾಲೆಯಂತೆ ಉರಿಯಬಯಸಿರುವ ರೀತಿ ಇದು….. ಆದರೆ ಇದು ನರ್ತಿಸುತ್ತಿರುವ ಜ್ವಾಲೆಯಾಗಿರಬೇಕು.

