ಹಳೆಯ ಪ್ರವೃತ್ತಿಗಳು, ಹಳೆಯ ಹವ್ಯಾಸಗಳು ಭವಿಷ್ಯಕ್ಕೂ ಎಳೆದುಕೊಂಡು ಹೋಗುತ್ತವೆ, ಭೂತಕ್ಕೂ ಹಿಂದಕ್ಕೆ ತಳ್ಳುತ್ತವೆ. ಇದು ನೆನಪಾದ ಕೂಡಲೇ ಸಧ್ಯದಲ್ಲಿ ರಿಲ್ಯಾಕ್ಸ್ ಮಾಡಿ~ ಓಶೋ ರಜನೀಶ್, ಕನ್ನಡಕ್ಕೆ; ಚಿದಂಬರ ನರೇಂದ್ರ
ಚಳಿಗಾಲದಲ್ಲಿ
ತುಂಬ ಆಯಾಸ ಮಾಡಿಕೊಳ್ಳುವುದು
ನನ್ನ ಅತ್ಯಂತ ಕೆಟ್ಟ ಚಟ.
ಅಪಾರ ಹಿಂಸೆಯಾಗುತ್ತೇನೆ ಸಂಗಾತಿಗಳಿಗೆ.
ನೀನು ಜೊತೆಗಿರದೇ ಹೋದರೆ
ಒಂದು ಹುಲ್ಲುಕಡ್ಡಿ ಕೂಡ ಹುಟ್ಟುವುದಿಲ್ಲ.
ಸ್ಪಷ್ಟತೆ ಕಳೆದುಕೊಳ್ಳುತ್ತೇನೆ,
ನನ್ನ ಮಾತುಗಳು
ಒಂದರಲ್ಲೊಂದು ಸಿಕ್ಕಿಹಾಕಿಕೊಂಡು
ಗೊಂದಲದ ಗೂಡಾಗುತ್ತವೆ.
ಕೆಟ್ಟ ನೀರನ್ನು ಶುದ್ಧವಾಗಿಸೋದು ಹೇಗೆ ?
ಮತ್ತೆ ನದಿಗೆ ವಾಪಸ್ಸು ಹರಿಸುವುದರ ಮೂಲಕ.
ಕೆಟ್ಟ ಹವ್ಯಾಸಗಳಿಂದ ಮುಕ್ತರಾಗೋದು ಹೇಗೆ ?
ಮತ್ತೆ ಆ ಹವ್ಯಾಸಗಳನ್ನು ನಿನಗೆ ಹಿಂತಿರುಗಿಸುವುದರ ಮೂಲಕ.
ನೀರು ಮತ್ತೆ
ರೂಢಿಯ ಸುಳಿಗೆ ಸಿಲುಕಿದಾಗ,
ಸುಳಿಯ ಆಳದಿಂದ ಸಮುದ್ರಕ್ಕೆ
ಸುರಂಗ ಕೊರೆಯಬೇಕು.
ಬೇರೆ ಯಾವ ದಾರಿಯಿಲ್ಲದೇ
ಭರವಸೆ ಕಳೆದುಕೊಂಡು
ತುಂಬ ನೋವು ನೀಡುವವರಿಗೆ ಮಾತ್ರ
ಇಲ್ಲೊಂದು ರಹಸ್ಯ ಔಷಧಿ,
ಆಶಾವಾದಿಗಳಿಗೆ ಈ ವಿಷಯ ಗೊತ್ತಾದರೆ
ಇದು ತಮಗೆ ಆದ ಅವಮಾನ ಎಂದು
ಅವರು ಭಾವಿಸಬಹುದು.
ನಿಮಗೆ ಸಾಕಾಗುವಷ್ಟು ಹೊತ್ತು
ನೀವು ಪ್ರೀತಿಸುವ ಗೆಳೆಯನ
ಕಣ್ಣಲ್ಲಿ ಕಣ್ಣಿಟ್ಟು ನೋಡಿ,
ಆ ಗೆಳೆಯ
ನಿಮ್ಮ ಹತ್ತಿರ ಬರುತ್ತಿದ್ದಾನೋ
ಅಥವಾ ನಿಮ್ಮಿಂದ ದೂರ ಹೋಗುತ್ತಿದ್ದಾನೋ
ಎನ್ನುವುದರ ಪರಿವೆಯಿಲ್ಲದೆ.
~ ರೂಮಿ
ಹಳೆಯ ಹವ್ಯಾಸಗಳ ಹಾಸ್ಯಾಸ್ಪದತೆಯ ಬಗ್ಗೆ ನಕ್ಕುಬಿಡಿ. ಇವುಗಳ ಜೊತೆ ಹೋರಾಡಿ ಎಂದು ನಾನು ಹೇಳುತ್ತಿಲ್ಲ. ಹೋರಾಟ ಮಾಡಿದಿರಾದರೆ ನೀವು ಆತಂಕವನ್ನು ಸೃಷ್ಟಿ ಮಾಡುತ್ತೀರಿ. ಇದನ್ನೆಲ್ಲ ಗಮನಿಸುತ್ತ ಸುಮ್ಮನೇ ನಕ್ಕುಬಿಡಿ ಎಂದು ಹೇಳುತ್ತಿದ್ದೇನೆ. ಭೂತದಲ್ಲಿಯೇ ಆಗಲಿ, ಭವಿಷ್ಯದಲ್ಲಿಯೇ ಆಗಲಿ, ಇವುಗಳ ಜೊತೆ ನೀವು ರೆಡ್ ಹ್ಯಾಂಡೆಡ್ ಆಗಿ ಸಿಕ್ಕುಬಿದ್ದಾಗ ಸುಮ್ಮನೇ ಜಾರಿಕೊಂಡು ಬಿಡಿ, ಹಾವು ತನ್ನ ಪೊರೆಯನ್ನು ಕಳಚಿದಂತೆ. ಇವುಗಳ ಜೊತೆ ಸಂಘರ್ಷದ ಅವಶ್ಯಕತೆಯಿಲ್ಲ. ಸಂಘರ್ಷ ಯಾವುದಕ್ಕೂ ಪರಿಹಾರವಲ್ಲ. ಅದು ಹೆಚ್ಚು ಬಿಕ್ಕಟ್ಟುಗಳನ್ನ ಸೃಷ್ಟಿ ಮಾಡಬಹುದು. ಇದನ್ನು ಅರ್ಥ ಮಾಡಿಕೊಳ್ಳಿ. ನಾಳೆ, ತನ್ನದೇ ಆದ ದಿಕ್ಕು ತೆಗೆದುಕೊಳ್ಳಬಹುದು, ಅದನ್ನು ಎದುರಿಸಲು ನೀವು ಇರಬೇಕಾಗುತ್ತದೆ. ಮತ್ತು ಅದು ನಾಳೆಯಾಗಿ ಬರುವುದಿಲ್ಲ; ಅದು ಯಾವಾಗಲೂ ಬರುವುದು ಇವತ್ತು ಆಗಿ. ಆದ್ದರಿಂದ ಸಧ್ಯದಲ್ಲಿ ಇರುವುದನ್ನು ಕಲಿಯಿರಿ.
ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು.
ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.
ಮಾಸ್ಟರ್ ನ ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ.
ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಟರ್ ಬಳಿ ಹೋಗಿ ಗಾರ್ಡನ್ ಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್ ನ ಅನುಮತಿ ಕೇಳಲು ನಿರ್ಧರಿಸಿದರು.
ಮರುದಿನ ಒಬ್ಬ ಶಿಷ್ಯ ಗಾರ್ಡನ್ ಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು.
“ ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ “ ಅವ ಸಿಟ್ಟಿನಿಂದ ಮಾತಾಡಿದ.
“ ನಿಲ್ಲು ನಿಲ್ಲು, ನೀನು ಮಾಸ್ಟರ್ ನ ಏನಂತ ಕೇಳಿದೆ” ಮೊದಲ ಶಿಷ್ಯ ಕೇಳಿದ.
“ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ “ ಎರಡನೇಯವ ಉತ್ತರಿಸಿದ.
“ ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ “
ಮೊದಲ ಶಿಷ್ಯ ನಕ್ಕು ಬಿಟ್ಟ.

