ಮುಂಜಾವು ಬಹಳ ನಾಜೂಕಾದದ್ದು ( fragile), ಮತ್ತು ಆಗ ಸೂರ್ಯನ ಕಿರಣಗಳು ಅಷ್ಟು ಶಕ್ತಿಶಾಲಿಯಾಗಿರುವುದಿಲ್ಲ. ಆದರೆ ಅವು ಸಮಯದ ಜೊತೆ ಗಟ್ಟಿಗೊಳ್ಳುತ್ತ ಹೋಗುತ್ತವೆ . ಅವನ್ನು ಪೋಷಿಸಬೇಕಾಗಿದೆ, ಫಲವತ್ತಾಗಿಸಬೇಕಾಗಿದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸೂಲಗಿತ್ತಿಗೆ ಚೆನ್ನಾಗಿ ಗೊತ್ತು.
ಹೆರಿಗೆ ಬೇನೆ ಶುರುವಾಗದ ಹೊರತು
ಮಗು ಹೊರ ಬರುವ ದಾರಿ
ಪೂರ್ತಿಯಾಗಿ ತೆರೆದುಕೊಳ್ಳುವುದಿಲ್ಲ
ಮತ್ತು ತಾಯಿ, ಮಗುವಿಗೆ ಜನ್ಮ ನೀಡುವುದು
ಸಾಧ್ಯವಾಗುವುದಿಲ್ಲ.
ಪ್ರತೀ ಹೊಸ ಹುಟ್ಟಿನ ದಾರಿ
ಯಾತನೆ ಮತ್ತು ಸಂಕಷ್ಟಗಳ ಮೂಲಕವೇ,
ಹೇಗೆ ಗಟ್ಟಿಯಾಗಲು ಮಡಿಕೆ
ಬೆಂಕಿಯ ಶಾಖ ಹಾಯ್ದು ಬರಬೇಕೋ ಹಾಗೆ.
ನೋವು ಮಾತ್ರ
ಪ್ರೇಮವನ್ನು ಪರಿಪೂರ್ಣವಾಗಿಸಬಲ್ಲದು.
~ ಶಮ್ಸ್
ಈ ಕ್ಷಣದಿಂದ ನಿಮ್ಮನ್ನು ನೀವು ನವಜಾತ ಶಿಶು ಎಂದುಕೊಳ್ಳಲು ಶುರು ಮಾಡಿ. ರಾತ್ರಿ ಮುಗಿದು ಹೋಗಿದೆ ಮತ್ತು ನೀವು ಹೊಸ ಮುಂಜಾವಿಗೆ ಹುಟ್ಟಿದ್ದೀರಿ. ಎಲ್ಲ ಅಷ್ಟು ಸುಲಭ ಅಲ್ಲ, ಏಕೆಂದರೆ ನಿಮ್ಮ ಮೇಲಿನ ಭೂತಕಾಲದ ಹಿಡಿತ ಆಳವಾಗಿದೆ. ಮುಂಜಾವು ಬಹಳ ನಾಜೂಕಾದದ್ದು ( fragile), ಮತ್ತು ಆಗ ಸೂರ್ಯನ ಕಿರಣಗಳು ಅಷ್ಟು ಶಕ್ತಿಶಾಲಿಯಾಗಿರುವುದಿಲ್ಲ. ಆದರೆ ಅವು ಸಮಯದ ಜೊತೆ ಗಟ್ಟಿಗೊಳ್ಳುತ್ತ ಹೋಗುತ್ತವೆ . ಅವನ್ನು ಪೋಷಿಸಬೇಕಾಗಿದೆ, ಫಲವತ್ತಾಗಿಸಬೇಕಾಗಿದೆ. ಮತ್ತು ಭೂತಕಾಲದ ಜೊತೆ ಗುರುತಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಿ. ಯಾವುದಾದರೂ ಹಳೆಯ ಹವ್ಯಾಸ ಸತಾಯಿಸುತ್ತಿದೆಯಾದರೆ ಸುಮ್ಮನೇ ಅದನ್ನು ವಾಚ್ ಮಾಡಿ. ಇದು ಬೇರೆ ಯಾರಿಗೋ ಸಂಬಂಧಿಸಿದ್ದು ಎಂದು ದೂರ ಇದ್ದುಬಿಡಿ, ಪೋಸ್ಟಮ್ಯಾನ್ ಪತ್ರವನ್ನು ತಪ್ಪು ವಿಳಾಸಕ್ಕೆ ತಲುಪಿಸಿದಂತೆ. ಇದು ನಿಮಗೆ ಸಂಬಂಧಿಸಿದ್ದಲ್ಲ ಆದ್ದರಿಂದ ಅದನ್ನು ನೀವು ಪೋಸ್ಟ್ ಆಫೀಸ್ ಗೆ ಮರಳಿಸಿಬಿಡಿ.
ಆದರೆ ತನ್ನ ಹಳೆಯ ಹವ್ಯಾಸದ ಕಾರಣವಾಗಿ ಮೈಂಡ್ ನಂಬುತ್ತ ಹೋಗುತ್ತದೆ ಏಕೆಂದರೆ, ವಿಳಾಸ ಬದಲಾಗಿರುವುದು ಗೊತ್ತಾಗಲು ಮೈಂಡ್ ಗೆ ಸಮಯ ಬೇಕು. ಮೈಂಡ್ ಬಹಳ ಸಾವಕಾಶವಾಗಿ ಕಾರ್ಯನಿರ್ವಹಿಸುತ್ತದೆ; ಮತ್ತು ಅಪ್ರಜ್ಞೆ (unconscious) ಇನ್ನೂ ನಿಧಾನವಾಗಿ ಮೂವ್ ಆಗುತ್ತದೆ. ದೇಹ ಬಹಳ ಜಡವಾದದ್ದು, ಪ್ರತಿಯೊಂದಕ್ಕೂ ಅದರದ್ದೇ ಆದ ಕಾಲದ ಚೌಕಟ್ಟು ಇದೆ.

