ಎದೆ ನೋವು ಒಳ್ಳೆಯದು. ಇದನ್ನು ಆನಂದಪೂರ್ಣವಾಗಿ ಸ್ವೀಕರಿಸಿ. ಇದಕ್ಕೆ ಅವಕಾಶ ಮಾಡಿಕೊಡಿ, ಹತ್ತಿಕ್ಕಲು ಹೋಗಬೇಡಿ. ಮೈಂಡ್ ನ ಸಹಜ ಸ್ವಭಾವವೆಂದರೆ ಯಾವುದೆಲ್ಲ ಯಾತನಾಮಯವೋ ಅದನ್ನೆಲ್ಲ ಹತ್ತಿಕ್ಕುವುದು. ಆದರೆ ಅದನ್ನು ಹತ್ತಿಕ್ಕುವ ಮೂಲಕ ನೀವು ಬೆಳೆಯುವ ಸಂಗತಿಯೊಂದನ್ನು ನಾಶ ಮಾಡುತ್ತಿದ್ದೀರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬುದ್ಧಿ ಮತ್ತು ಪ್ರೇಮದ ಸಂಯೋಜನೆ
ಬೇರೆ ಬೇರೆ ಧಾತುಗಳಿಂದ .
ಬುದ್ಧಿ ಜನರ ನಡುವೆ ಗಂಟು ಹಾಕುತ್ತದೆ
ಆದರೆ ಯಾವ ಅಪಾಯಕ್ಕೂ ತೆರೆದುಕೊಳ್ಳದಂತೆ.
ಆದರೆ ಪ್ರೇಮ ಹಾಗಲ್ಲ
ಅದು ಬಿಚ್ಚುತ್ತದೆ ಸಂಬಂಧಗಳಲ್ಲಿನ ಸಿಕ್ಕುಗಳನ್ನ
ಎಲ್ಲ ಅಪಾಯಗಳನ್ನೂ ಆಹ್ವಾನಿಸುತ್ತ.
ಬುದ್ದಿಯದು
ಯಾವಾಗಲೂ ಜಾಗರೂಕತೆಯ ಸ್ವಭಾವ
ಸಲಹೆ ನೀಡುವ ಹುಕಿ
ಉನ್ಮತ್ತ ಆನಂದದ ಬಗ್ಗೆ ಸದಾ ಹಿಂಜರಿಕೆ.
ಆದರೆ ಪ್ರೇಮಕ್ಕೆ ಅಪಾರ ಉತ್ಸಾಹ
ಅಪಾಯಗಳಿಗೆ ಎದೆಯೊಡ್ಡುವ ಹುರುಪು
ಬೆಂಕಿಯಲ್ಲಿ ಹಾರಿ ಬಂಗಾರವಾಗುವ ಉತ್ಕಟತೆ.
ಬುದ್ಧಿಯನ್ನು ಒಡೆಯುವುದು ಕಠಿಣ
ಆದರೆ ಪ್ರೇಮ ನಿರಾಯಾಸವಾಗಿ
ತನ್ನನ್ನು ತಾನು ಒಡೆದುಕೊಂಡು
ಅವಶೇಷವಾಗಬಲ್ಲದು.
ನಿಮಗೆ ಗೊತ್ತಿದೆ
ನಿಧಿ ಅಡಗಿರುವುದೆ ಅವಶೇಷಗಳಡಿಯಲ್ಲಿ
ಒಡೆದ ಹೃದಯ
ತನ್ನೊಳಗೆ ಬಚ್ಚಿಟ್ಟುಕೊಂಡಿದೆ
ಅಪಾರ ಸಂಪತ್ತು.
ಹೃದಯ ಇರೋದೇ ಒಡಿಯಲಿಕ್ಕಾಗಿ. ಇದರ ಉದ್ದೇಶವೇ , ಕರಗಿ ಕಣ್ಣೀರಾಗಿ ಮಾಯವಾಗಿಬಿಡುವುದು. ಹೃದಯ ಆವಿಯಾಗುತ್ತದೆ, ಮತ್ತು ಹೃದಯ ಆವಿಯಾದಾಗ, ಥೇಟ್ ಅದೇ ಹೃದಯ ಇದ್ದ ಜಾಗದಲ್ಲಿ ನಿಮಗೆ ನಿಜದ ಹೃದಯ ತೆರೆದುಕೊಳ್ಳುತ್ತದೆ.
ಹೃದಯ ಒಡೆಯಲೇಬೇಕು. ಒಮ್ಮೆ ಒಡೆದು ಚೂರಾದಾಗ, ತಕ್ಷಣ ನಿಮಗೆ ಆಳ ಹೃದಯದ ಪರಿಚಯವಾಗುವುದು. ಥೇಟ್ ಈರುಳ್ಳಿಯಂತೆ, ಸುಲಿದ ಹಾಗೆಲ್ಲ ಹೊಸ ಹೊಸ ಲೇಯರ್ ಗಳು ದೊರಕುವ ಹಾಗೆ.

