ಕಲ್ಪನೆ ( Imagination): ಓಶೋ 365 #Day 253


ಕಲ್ಪನೆಗಳನ್ನು ಯಾವತ್ತೂ ನಿರಾಕರಿಸಬೇಡಿ. ಮನುಷ್ಯರಲ್ಲಿ ಇರುವ ಏಕೈಕ ಸೃಜನಶೀಲ ಭಾಗ, ಏಕೈಕ ಕಾವ್ಯಾತ್ಮಕ ಭಾಗ ಎಂದರೆ ಇದೊಂದೇ. ಹಾಗಾಗಿ ಇದನ್ನು ಯಾವತ್ತೂ ನಿರಾಕರಿಸಬಾರದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಈ ಜಗತ್ತಿನಲ್ಲಿ
ಒಬ್ಬರು, ಇನ್ನೊಬ್ಬರ ಹಾಗಿಲ್ಲ.
ಒಂದು ಹೃದಯದ ಹಾಗೆ
ಇನ್ನೊಂದು ಹೃದಯ ಮಿಡಿಯುವುದಿಲ್ಲ.
ಎಲ್ಲ ಭಗವಂತನ ಕಲ್ಪನೆ
ಸಮಸ್ತವೂ ವಿಭಿನ್ನ,
ಪ್ರತಿಯೊಂದೂ ಅನನ್ಯ.

ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ
ಸೃಷ್ಟಿಮಾಡುವ  ಹುಕಿ
ಭಗವಂತನದ್ದಾಗಿದ್ದರೆ
ಆತ ಹಾಗೆ ಮಾಡಬಹುದಾಗಿತ್ತು
ಮಾಡುತ್ತಿದ್ದ ಕೂಡ.
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.

ನಮ್ಮ ನಡುವಿನ ವ್ಯತ್ಯಾಸವನ್ನು
ಅವಮಾನಿಸುವುದು
ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು
ಇನ್ನೊಬ್ಬರ ಮೇಲೆ ಹೇರುವುದು,

ಭಗವಂತನ ಪವಿತ್ರ ಯೋಜನೆಯನ್ನು
ಅವಮಾನಿಸಿದಂತೆ

~ ಶಮ್ಸ್

ನಿರಾಕರಿಸಿದಾಗ, ಕಲ್ಪನೆ ಅತ್ಯಂತ ಸೇಡಿನ ಪಾತ್ರ ವಹಿಸುತ್ತದೆ. ನಿರಾಕರಿಸಿದಾಗ, ಇದು ದುಸ್ವಪ್ನ ವಾಗುತ್ತದೆ. ನಿರಾಕರಿಸಿದಾಗ ಇದು ಮಾರಕವಾಗುತ್ತದೆ. ಇಲ್ಲವಾದರೆ ಇದು ಯಾವಾಗಲೂ ಸೃಜನಶೀಲ, ಸೃಜನಶೀಲತೆಯ ಹೊರತಾಗಿ ಇದು ಬೇರೇನೂ ಅಲ್ಲ. ಆದರೆ ನಿರಾಕರಿಸಿದಾಗ, ದೂರಮಾಡಿದಾಗ ಮಾತ್ರ ನೀವು ನಿಮ್ಮ ಮತ್ತು ನಿಮ್ಮ ಸೃಜನಶೀಲತೆಯ ನಡುವೆ ಬಿಕ್ಕಟ್ಟನ್ನು ಹುಟ್ಟುಹಾಕುತ್ತೀರಿ ಮುಂದೆ ನೀವು ನಿಮ್ಮ ಸೃಜನಶೀಲತೆಯ ಕಳೆದುಕೊಳ್ಳುತ್ತೀರಿ.

ವಿಜ್ಞಾನಕ್ಕೆ ಯಾವತ್ತೂ ಕಲೆಯ ವಿರುದ್ಧ ಗೆಲುವಿಲ್ಲ, ತರ್ಕ ಯಾವತ್ತೂ ಪ್ರೇಮದ ವಿರುದ್ಧ ಗೆಲುವು ಸಾಧಿಸುವುದಿಲ್ಲ. ಇತಿಹಾಸ, ಪುರಾಣದ ಎದುರು ಸೋಲೊಪ್ಪಿಕೊಳ್ಳುತ್ತದೆ ಮತ್ತು ವಾಸ್ತವ, ಕನಸುಗಳ ಎದುರು ಕೈ ಚೆಲ್ಲುತ್ತದೆ. ಆದ್ದರಿಂದ ನಿಮ್ಮೊಳಗೇನಾದರೂ ಕಲ್ಪನೆಯ ವಿರುದ್ಧದ  ಐಡಿಯಾಗಳಿದ್ದರೆ ಕೂಡಲೇ ಡ್ರಾಪ್ ಮಾಡಿ. ಇದು anti-imagination ಕಾಲ. ಜನರಿಗೆ ವಾಸ್ತವಾದಿಗಳಾಗಲು, ನೈಜವಾಗಿರಲು, ಪ್ರಯೋಗವಾದಿಗಳಾಗಲು  ಪಾಠ ಹೇಳಿಕೊಡಲಾಗಿದೆ. ಜನ ಹೆಚ್ಚು ಹೆಚ್ಚು ಕನಸುಗಳನ್ನು ಕಾಣಬೇಕು, ಹೆಚ್ಚು ಹೆಚ್ಚು ಮಕ್ಕಳಹಾಗಿರಬೇಕು, ಆನಂದಿಂದ ತುಂಬಿಕೊಂಡಿರಬೇಕು. ಭಾವೋನ್ಮಾದವನ್ನು ಸೃಷ್ಟಿ ಮಾಡಲು ಜನ ಸಶಕ್ತರಾಗಿರಬೇಕು. ಮತ್ತು ಈ ಮೂಲಕವೇ ನೀವು ನಿಮ್ಮ ಮೂಲ ಸ್ರೋತವನ್ನು ತಲುಪುತ್ತೀರಿ.

ದೇವರು, ಪ್ರಚಂಡ ಕಲ್ಪನಾಶೀಲ ವ್ಯಕ್ತಿ, ಅವನು ಸೃಷ್ಟಿಸಿರುವ ಈ ಜಗತ್ತನ್ನೊಮ್ಮೆ ನೋಡಿ ! ಇಂಥ ಅದ್ಭುತವನ್ನು ಸೃಷ್ಟಿಸಿದವ ಮಹಾ ಕನಸುಗಾರನೇ ಆಗಿರಬೇಕು. ಎಷ್ಟೊಂದು ಬಣ್ಣಗಳು, ಎಷ್ಟೊಂದು ಹಾಡುಗಳು ಇಲ್ಲಿ.  ಇಡೀ ಅಸ್ತಿತ್ವವೇ ಕಾಮನಬಿಲ್ಲು. ಇದು ಆಳ ಕಲ್ಪನೆಗಳ ಮೂಲಕವೇ ಸಾಧ್ಯವಾಗಿಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.