ಕಷ್ಟಗಳು ಯಾವತ್ತೂ ಇದ್ದೇ ಇರುತ್ತವೆ, ಅವು ಬದುಕಿನ ಭಾಗ. ಮತ್ತು ಕಷ್ಟಗಳು ಇರುವುದು ಒಳ್ಳೆಯದು ಏಕೆಂದರೆ ಅವು ಬೆಳವಣಿಗೆಗೆ ಕಾರಣ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .
ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.
ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.
ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು
~ ರೂಮಿ
ಕಷ್ಟಗಳು ಬದುಕಿನ ಸವಾಲುಗಳು. ಅವು ನಿಮ್ಮನ್ನು ಕ್ರಿಯೆಗೆ, ಆಲೋಚನೆಗೆ ಪ್ರಚೋದಿಸುತ್ತವೆ, ಅವುಗಳನ್ನು ಮೀರುವ ದಾರಿಗಳನ್ನು ಹುಡುಕಲು ಒತ್ತಾಯ ಮಾಡುತ್ತವೆ. ಈ ಪ್ಪಯತ್ನ ಬಹಳ ಮುಖ್ಯ. ಆದ್ದರಿಂದ ಈ ಕಷ್ಟಗಳನ್ನು ಹಾರೈಕೆಗಳೆಂದು ಪರಿಗಣಿಸಿ.
ಕಷ್ಟಗಳಿಲ್ಲದೇ ನಮ್ಮ ಬದುಕಿಗೆ ಸವಾಲುಗಳಿಲ್ಲ. ದೊಡ್ಡ ಕಷ್ಟಗಳು ಬರುತ್ತಿವೆಯೆಂದರೆ, ಅಸ್ತಿತ್ವ ನಿಮ್ಮ ಬೆಳವಣಿಗೆಗಾಗಿ ಸವಾಲುಗಳನ್ನು ಒಡ್ಡುತ್ತಿದೆ. ಹೆಚ್ಚು ಕಷ್ಟಗಳಿಗೆ ನೀವು ಪರಿಹಾರ ಕಂಡುಕೊಂಡಂತೆಲ್ಲ ಹೆಚ್ಚು ಹೆಚ್ಚು ಸವಾಲುಗಳು ನಿಮಗೆ ಎದುರಾಗುತ್ತವೆ. ಕೇವಲ ಕೊನೆಯ ಕ್ಷಣದಲ್ಲಿ ಮಾತ್ರ ಕಷ್ಟಗಳು ಮಾಯವಾಗುತ್ತವೆ, ಆದರೆ ಆ ಕೊನೆಯ ಕ್ಷಣ ಕೂಡ ಕಷ್ಟಗಳ ಕಾರಣವಾಗಿಯೇ ಬರುವಂಥದು. ಆದ್ದರಿಂದ ಯಾವ ಕಷ್ಟಗಳನ್ನೂ ನಕಾರಾತ್ಮಕವಾಗಿ ಪರಿಗಣಿಸಬೇಡಿ. ಅವುಗಳಲ್ಲಿ ಏನಾದರೊಂದು ಸಕಾರಾತ್ಮಕತೆಯನ್ನ ಹುಡುಕಿ.
ನಿಮ್ಮ ಕಷ್ಟಗಳಿಗೆ ಅಡ್ಡಗಾಲಾಗಿರುವ ಬಂಡೆಗಲ್ಲೇ ನಿಮ್ಮ ಯಶಸ್ಸಿಗೆ ಅಡಿಪಾಯವಾಗಬಹುದು. ನಿಮ್ಮ ದಾರಿಯಲ್ಲಿ ಕಲ್ಲುಗಳಿರದೇ ಹೋದರೆ ನೀವು ಯಾವತ್ತೂ ಎಚ್ಚರವಾಗಿರುವುದಿಲ್ಲ. ಮತ್ತು ಈ ಕಷ್ಟಗಳನ್ನು ಮೀರುವ ಹಾಗು ಅವನ್ನು ನಿಮ್ಮ ಯಶಸ್ಸಿನ ಕಾರಣವಾಗಿಸಿಕೊಳ್ಳುವ ಪ್ರಕ್ರಿಯೆಯೇ ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರಗು ನೀಡುವುದು. ಆದ್ದರಿಂದ ಬದುಕಿನ ಬಗ್ಗೆ ನೀವು ಸೃಜನಶೀಲವಾಗಿ ಯೋಚನೆ ಮಾಡಿದಾಗೆಲ್ಲ ಪ್ರತಿಯೊಂದೂ ನಿಮಗೆ ಉಪಯೋಗಕಾರಿಯಾಗಿ, ನಿಮಗೆ ಬಳುವಳಿಯಾಗಿ ಪರಿಣಮಿಸುವುದು. ಆಗ ಯಾವುದೂ ಅರ್ಥಹೀನವಲ್ಲ.

