ನಾವೆಲ್ಲರೂ ಒಬ್ಬನೇ ಹಾಡುಗಾರನ ಬೇರೆ ಬೇರೆ ಹಾಡುಗಳು, ಒಬ್ಬನೇ ನೃತ್ಯಗಾರನ ಬೇರೆ ಬೇರೆ ಭಂಗಿಗಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತ
ಸದಾ ನಮ್ಮ ಕೆಲಸದಲ್ಲಿಯೇ ಮಗ್ನ.
ಮನುಷ್ಯನ ವಿಕಾಸ ಯಾವತ್ತಿದ್ದರೂ
ಪ್ರಗತಿಯಲ್ಲಿರುವ ಪ್ರಕ್ರಿಯೆ.
ಕೆಲಸ ನಿಧಾನವಾಗಿರಬಹುದು
ಆದರೆ ಮುಂದುವರೆಯುತ್ತಿದೆ ನಿರಂತರವಾಗಿ.
ಪ್ರತಿಯೊಬ್ಬ ಮನುಷ್ಯನೂ
ಪೂರ್ಣವಾಗಲು
ಕಾಯುತ್ತಿರುವ, ತಹತಹಿಸುತ್ತಿರುವ
ಅಪೂರ್ಣ ಕಲಾಕೃತಿಗಳು.
ಭಗವಂತ
ಪ್ರತೀ ಮನುಷ್ಯನನ್ನು
ಪ್ರತ್ಯೇಕ ಕಲಾಕೃತಿಯಂತೆ
ಅನನ್ಯವಾಗಿ ಚಿತ್ರಿಸುತ್ತಾನೆ.
ಮನುಷ್ಯತ್ವ
ಒಂದು ಸೂಕ್ಷ್ಮ ಕಲಾಪ್ರಕಾರ,
ಪ್ರತೀ ಚುಕ್ಕೆಯೂ
ಪೂರ್ಣ ಚಿತ್ರದ ಅತ್ಯಂತ ಮುಖ್ಯ ಭಾಗ.
~ ಶಮ್ಸ್
ಪ್ರತಿಯೊಂದು ಕೂಡ ದೇವರ ಹಾಡು : ಅನನ್ಯ, ವೈಯಕ್ತಿಕ, ಹೋಲಿಕೆಗೆ ನಿಲುಕದ, ಪುನರುಚ್ಚರಿಸಲು ಸಾಧ್ಯವಾಗದ, ಆದರೆ ಒಂದೇ ಮೂಲ ಸ್ರೋತದಿಂದ ಬಂದಂಥವು. ಪ್ರತಿಯೊಂದು ಹಾಡಿಗೂ ಅದರದೇ ರುಚಿ, ಪರಿಮಳ, ಅದರದೇ ಆದ ಚೆಲುವು, ಅದರದೇ ಆದ ಸಂಗೀತ, ಅದರದೇ ಆದ ಮಾಧುರ್ಯ ಇದ್ದಾಗಲೂ ಹಾಡುಗಾರ ಮಾತ್ರ ಒಬ್ಬನೇ. ನಾವೆಲ್ಲರೂ ಒಬ್ಬನೇ ಹಾಡುಗಾರನ ಬೇರೆ ಬೇರೆ ಹಾಡುಗಳು, ಒಬ್ಬನೇ ನೃತ್ಯಗಾರನ ಬೇರೆ ಬೇರೆ ಭಂಗಿಗಳು.
ಇದನ್ನು ಧ್ಯಾನ ಎಂದು ಪರಿಗಣಿಸಲು ಶುರು ಮಾಡಿ. ಆಗ ಎಲ್ಲ ಬಿಕ್ಕಟ್ಟುಗಳು ಮಾಯವಾಗುತ್ತವೆ, ಆಗ ಎಲ್ಲ ಅಸೂಯೆಗಳು ಮತ್ತು ಹಿಂಸೆ ಅಸಾಧ್ಯವಾಗುತ್ತವೆ, ಏಕೆಂದರೆ ಆಗ ಇಡೀ ಜಗತ್ತಿನಲ್ಲಿ ನಮ್ಮ ಪ್ರತಿಫಲನಗಳನ್ನು ಬಿಟ್ಟರೇ ಬೇರೆ ಏನೂ ಇಲ್ಲ. ನಾವೆಲ್ಲರೂ ಒಂದೇ ಮೂಲ ಸ್ರೋತಕ್ಕೆ ಒಳಪಟ್ಟಿದ್ದೇವೆಯಾದರೆ, ಥೇಟ್ ಸಮುದ್ರದ ಅಲೆಗಳಂತೆ, ಆಗ ಇಲ್ಲ, ಯಾವ ಬಿಕ್ಕಟ್ಟು, ಯಾವ ಸ್ಪರ್ಧೆ, ಯಾವ ಮೇಲು ಕೀಳಿನ ಭಾವ ಮತ್ತು ಇಂಥ ಅನೇಕ ಇತ್ಯಾದಿಗಳು. ಯಾರು ಮೇಲಲ್ಲ ಯಾರೂ ಕೀಳಲ್ಲ ; ಪ್ರತಿಯೊಬ್ಬರೂ ಕೇವಲ ಅವರು, ಅವರ ಹಾಗೆ.
ಪ್ರತಿಯೊಬ್ಬರೂ ಎಷ್ಟು ಅನನ್ಯವಾಗಿದ್ದಾರೆಂದರೆ, ಹಿಂದೆಯೂ ನಿಮ್ಮ ಥರ ಯಾರೂ ಇರಲಿಲ್ಲ, ಮುಂದೆಯೂ ನಿಮ್ಮ ಥರ ಯಾರಾದರೂ ಮತ್ತೆ ಬರುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ ಎರಡು ಬೇರೆ ಬೇರೆ ಕ್ಷಣಗಳಲ್ಲಿ ನೀವು ಕೂಡ ಒಂದೇ ಆಗಿ ಇರುವುದು ಸಾಧ್ಯವಿಲ್ಲ. ಇಂದಿನ ನೀವು ನಿನ್ನೆಯ ನೀವು ಅಲ್ಲ, ಇನ್ನು ನಾಳೆಯ ನಿಮ್ಮ ಬಗ್ಗೆ ಯಾರಿಗೆ ಗೊತ್ತು?
ಪ್ರತಿಯೊಂದು ಕೂಡ ಹರಿವು : ನಿರಂತರ ಬದಲಾವಣೆ, ಹರಿಯುತ್ತಿರುವ ನದಿ. ಹೆರಾಕ್ಲಿಟಸ್ ಹೇಳುತ್ತಾನೆ, ನೀವು ಒಂದೇ ನದಿಯಲ್ಲಿ ಎರಡು ಬಾರಿ ಕಾಲಿಡುವುದು ಸಾಧ್ಯವಿಲ್ಲ. ನಾನು ನಿಮಗೆ ಹೇಳುವುದೇನೆಂದರೆ, ಒಂದೇ ನದಿಯಲ್ಲಿ ನಿಮಗೆ ಒಮ್ಮೆ ಕೂಡ ಕಾಲಿಡುವುದು ಸಾಧ್ಯವಿಲ್ಲ, ಏಕೆಂದರೆ ನೀವು ನದಿಯಲ್ಲಿ ಕಾಲಿಡುತ್ತಿರುವ ಗಳಿಗೆಯಲ್ಲಿ ನದಿ ಬದಲಾಗುತ್ತಿದೆ. ಮತ್ತು ನದಿ ಬದುಕನ್ನು ಹೋಲುತ್ತದೆ.

