ತಂತ್ರಜ್ಞಾನ ಕೊಡಮಾಡಿರುವ ಎಲ್ಲ gadget ಗಳೂ ನಿಮ್ಮ ಬಳಿ ಇವೆ, ಆದ್ದರಿಂದ ಇಂದು ನಿಮ್ಮ ಬಳಿ ಇಲ್ಲದಿರುವ ಏನನ್ನು ನಿಮಗೆ ನಾಳೆ ಕೊಡಬಹುದು? ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
ಭವಿಷ್ಯ ಫ್ಲಾಪ್ ಆಗುತ್ತಿದೆ, ಮತ್ತು ಭವಿಷ್ಯ ಫ್ಲಾಪ್ ಆಗುತ್ತಿದ್ದಂತೆಯೇ ಮಹಾ ಹತಾಶೆ ಹುಟ್ಟಿಕೊಳ್ಳುತ್ತಿದೆ. ಇಲ್ಲಿಯವರೆಗೆ ಜಗತ್ತು ಬಹಳ ಭರವಸೆಯೊಂದಿಗೆ ಬದುಕುತ್ತಿದೆ, ಆದರೆ ಥಟ್ಟನೇ ಭರವಸೆಗಳು ಕಾಣೆಯಾಗುತ್ತಿವೆ ಮತ್ತು ದುಗುಡ ನೆಲೆಯೂರುತ್ತಿದೆ ನನಗೆ ಇದು ಬಹಳ ಮುಖ್ಯ. ಮಾನವ ಪ್ರಜ್ಞೆಯಲ್ಲಿನ ಈ ಬಿಕ್ಕಟ್ಟು ನನಗೆ ಬಹಳ ಮಹತ್ತವದ್ದು. ಒಂದು, ಮಾನವ ಜನಾಂಗ ಈ ಭೂಮಿಯಿಂದ ಕಾಣೆಯಾಗಬೇಕು ಅಥವಾ, ಅದು ಪೂರ್ತಿ ಹೊಸದಾಗಿ ಮತ್ತೊಮ್ಮೆ ಹುಟ್ಟಬೇಕು. ಮತ್ತು ನನ್ನ ಕೆಲಸ, ಮಾನವ ಪ್ರಜ್ಞೆಗೆ ಹೊಸ ಹುಟ್ಟನ್ನು ಸಾಧ್ಯಮಾಡುವುದಾಗಿದೆ.
ಈ ಜಗತ್ತು ನಮ್ಮನ್ನು ಹತಾಶರನ್ನಾಗಿಸಿದೆ; ಮತ್ತು ಈ ಭೂಮಿಯ ಮೇಲೆ ನಾವು ಹಂಬಲಿಸುವಂಥದು ಈಗ ಏನೂ ಉಳಿದಿಲ್ಲ. ನಾವು ನೋಡುವಂಥದೂ ಏನೂ ಇಲ್ಲ ಕಾಣಲಾರದ್ದಕ್ಕಾಗಿ ಹಂಬಲಿಸಬೇಕಿದೆ. ಈಗ ಕಾಲ ಅರ್ಥಹೀನ ; ಕಾಲಾತೀತವನ್ನು ನಾವು ಪ್ರವೇಶಿಸಬೇಕಿದೆ. ಈಗ ಸಾಧಾರಣ ನಿರಸ ಬದುಕು ತನ್ನ ಚಾರ್ಮ ಕಳೆದುಕೊಂಡಿದೆ; ಅದು ತನ್ನ ಎಲ್ಲ ಖುಶಿಯನ್ನ ಕಳೆದುಕೊಂಡಿದೆ. ನಾವು ಎಲ್ಲ ಬಯಕೆಗಳನ್ನೂ ಪೂರೈಸಿಕೊಂಡುಬಿಟ್ಟಿದ್ದೇವೆ ಮತ್ತು ಸಾಧ್ಯವಾಗಿರುವ ಎಲ್ಲ ಬಯಕೆಗಳಿಂದ ನಾವು ತೃಪ್ತರಾಗಿಲ್ಲ. ಈಗ ನಿಜವಾದ ಅತೃಪ್ತಿ ನಮ್ಮದಾಗಿದೆ, ಮತ್ತು ನಿಜವಾದ ಅತೃಪ್ತಿಯನ್ನು ಅನುಭವಿಸುವುದು ಮಹಾ ಅನುಗ್ರಹದಂತೆ.
ಒಮ್ಮೆ ಮುಲ್ಲಾ ನಸ್ರುದ್ದೀನ, ರೈಲು ಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಗೆ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ, ಚೀಲಗಳಲ್ಲಿ ತನ್ನ ಟಿಕೇಟ್ ಹುಡುಕತೊಡಗಿದ.
ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆ ಮಾಡಿದ.
“ ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ? “
“ ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟ ಅಲ್ಲಿ ಸಿಗದಿದ್ದರೆ ನನ್ನ ಎಲ್ಲ ಭರವಸೆಯೂ ನಾಶವಾಗಿ ಬಿಡುತ್ತದಲ್ಲ “
ಮುಲ್ಲಾ ಉತ್ತರಿಸಿದ.

