ನಿಮಗೆ ಮಾತನಾಡಬೇಕೆಂದು ಅನಿಸುತ್ತಿಲ್ಲವಾದರೆ – ಖಂಡಿತವಾಗಿಯೂ ನಿಮ್ಮಿಂದ ಸಹಜವಾಗಿ ಹೊರಬರದ ಒಂದೇ ಒಂದು ಮಾತನ್ನೂ ಆಡಬೇಡಿ. ಜನ ನಿಮ್ಮನ್ನು ಮೂರ್ಖರೆಂದು ತಿಳಿದುಕೊಳ್ಳುತ್ತಾರೆ ಎನ್ನುವ ಚಿಂತೆ ಬೇಡ. ಜನ ನಿಮ್ಮನ್ನು ಪೆದ್ದರೆಂದುಕೊಂಡರೆ ಅಂದುಕೊಳ್ಳಲಿ ಬಿಡಿ, ಇಂಥ ಪೆದ್ದತನವನ್ನು ಆನಂದಿಸಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಬಹಳಷ್ಟು ಸಮಸ್ಯೆಗಳು
ಶುರುವಾಗೋದೇ
ಭಾಷಾ ಶಾಸ್ತ್ರದಲ್ಲಿನ ಗೊಂದಲಗಳಿಂದಾಗಿ
ಮತ್ತು ಕೆಲವು
ಸಾಮಾನ್ಯ ತಪ್ಪು ತಿಳುವಳಿಕೆಗಳಿಂದಾಗಿ.
ಶಬ್ದಗಳನ್ನು
ಕೇವಲ ಅರ್ಥದ ಮುಖ ನೋಡಿ ಬಳಸಬೇಡಿ.
ಪ್ರೇಮದ ಅಖಾಡಾದಲ್ಲಿ ಕಾಲಿಟ್ಟಾಗ
ನಾವು ಕಲಿತಿರುವ ಭಾಷೆ
ಕಳೆದುಕೊಳ್ಳುತ್ತದೆ ತನ್ನ ಅಸ್ತಿತ್ವವನ್ನು.
ಯಾವುದನ್ನ ಶಬ್ದಗಳ ಮೂಲಕ
ಹೇಳಲಾಗುವುದಿಲ್ಲವೋ
ಅವನ್ನೆಲ್ಲ ಅರ್ಥಮಾಡಿಕೊಳ್ಳಲಾಗುತ್ತದೆ
ಮೌನದ ಮೂಲಕ.
~ ಶಮ್ಸ್
ಜನರ ಜೊತೆಗಿನ ನಿಜವಾದ ಸಮಸ್ಯೆಯೆಂದರೆ ಅವರು ಯಾಕೆ? ಏನು? ಎಂದು ತಿಳಿದುಕೊಳ್ಳದೇ ಸತತವಾಗಿ ಮಾತನಾಡುತ್ತ ಹೋಗುವುದು. ಅವರು ಮಾತನಾಡುತ್ತ ಹೋಗುವುದು ಏಕೆಂದರೆ ಅವರಿಗೆ ಮಾತು ನಿಲ್ಲಿಸುವುದು ಗೊತ್ತಿಲ್ಲದಿರುವುದು. ಆದರೆ ನಿಮಗೆ ಈ ಮೂರ್ಖತನದ ಬಗ್ಗೆ ಕೊಂಚವಾದರೂ ಅರಿವು ಇದ್ದರೆ, ಮತ್ತು ಇದು ನಿಮ್ಮ ಮೈಂಡ್ ಮೇಲೆ ಉಂಟು ಮಾಡುವ ಸಮಸ್ಯೆಯ ಬಗ್ಗೆ ಗೊತ್ತಿದ್ದರೆ, ನಿಮಗೆ ನಿಜವಾಗಿಯೂ ಹೇಳುವುದು ಏನೂ ಇಲ್ಲ ಎನ್ನುವುದು ಗೊತ್ತಿಲ್ಲದಿದ್ದರೆ ಆಗ ಇದೆಲ್ಲವೂ ಕ್ಷುಲ್ಲಕ ಅನಿಸುತ್ತದೆ, ಆಗ ನೀವು ಮಾತನಾಡಲು ಹಿಂಜರಿಯುತ್ತೀರಿ.
ಮೊದಮೊದಲು ನೀವು ನಿಮ್ಮ ಸಂಭಾಷಣಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನಿಮಗೆ ಅನಿಸಿದರೂ ಅದು ಹಾಗಲ್ಲ. ಹಾಗೆ ನೋಡಿದರೆ ಜನ ಮಾತನಾಡುವುದು ಸಂಭಾಷಣೆ ಮುಂದುವರೆಸಲು ಅಲ್ಲ ಸಂಭಾಷಣೆ ನಿಲ್ಲಿಸಲು. ಆದಷ್ಟು ಬೇಗ ನಿಮ್ಮಿಂದ ನಿಜವಾದ ಸಂಭಾಷಣೆ ಸಾಧ್ಯವಾಗುತ್ತದೆ. ಸ್ವಲ್ಪ ಕಾಯಿರಿ ಯಾವ ಒತ್ತಡಕ್ಕೂ ಸಿಲುಕಬೇಡಿ. ಮೌನದ ಬಗ್ಗೆ ಯಾವ ಚಿಂತೆಯೂ ಬೇಡ. ಈ ಬಗ್ಗೆ ಜನ ಯಾತೆ ಚಿಂತೆ ಮಾಡುತ್ತಾರೆಂದರೆ, ಇಡೀ ಸಮಾಜ ಮುಂದುವರೆಯುತ್ತಿರುವುದೇ ಮಾತಿನ ಮೂಲಕ, ಭಾಷೆಯ ಮೂಲಕ , ಮತ್ತು ಯಾರು ಚೆನ್ನಾಗಿ ಮಾತನಾಡುತ್ತಾರೋ ಅವರು ಸಮಾಜದ ನಾಯಕರುಗಳಾಗಿರುವುದು , ವಿದ್ವಾಂಸರೆಂದೆನಿಸಿಕೊಂಡಿರುವುದು, ರಾಜಕಾರಣಿಗಳಾಗಿರುವುದು, ಬರಹಗಾರರಾಗಿರುವುದು, ಆದರೆ ನೀವು ಚಿಂತೆ ಮಾಡಬೇಡಿ. ಮೌನ ಎನ್ನುವುದು ದೇವರ ಮೇಲಿನ ನಿಮ್ಮ ಹಿಡಿತ, ಒಮ್ಮೆ ನಿಮಗೆ ಮೌನದ ಮಹತ್ವ ಗೊತ್ತಾದರೆ, ನಿಮಗೆ ಏನು ಮಾತನಾಡಬೇಕು ಎನ್ನುವುದು ಅರಿವಾಗುತ್ತದೆ.
ಒಮ್ಮೆ ನೀವು ಮೌನದ ಆಳವನ್ನು ತಲುಪುವಿರಾದರೆ, ಆಗ ಮೊದಲ ಬಾರಿಗೆ ನಿಮ್ಮ ಮಾತುಗಳು ಅರ್ಥವನ್ನು ಕ್ಯಾರಿ ಮಾಡಲು ಶುರು ಮಾಡುತ್ತವೆ. ಆಗ ಅವು ಕೇವಲ ಖಾಲೀ ಮಾತುಗಳಲ್ಲ, ಅವು ಏನೋ ಒಂದು ಮೀರುವಿಕೆಯಿಂದ ತುಂಬಿಕೊಂಡಿವೆ. ಆಗ ಆ ಮಾತುಗಳಲ್ಲಿ ಕಾವ್ಯ ಇದೆ, ನೃತ್ಯ ಇದೆ. ಆಗ ನಿಮ್ಮ ಮಾತುಗಳು ನಿಮ್ಮ ಒಳ ಘನತೆಯನ್ನು ಹೊತ್ತು ಮುಂದುವರೆಯುತ್ತವೆ.
ಒಬ್ಬ ಪ್ರಸಿದ್ಧ ಧರ್ಮೋಪದೇಶಕನ ಗೌರವಾರ್ಥ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಅಲ್ಲಿದ್ದ ಅತಿಥಿಗಳೆಲ್ಲ ಅವತ್ತು ಧರ್ಮೋಪದೇಶಕ ಮಾಡಿದ ಉಪನ್ಯಾಸದ ಬಗ್ಗೆ ಹೊಗಳಿ ಮಾತನಾಡುತ್ತಿದ್ದರು. ಧರ್ಮೋಪದೇಶಕ, ಯಾವ ಮಾತೂ ಆಡದೇ ಸುಮ್ಮನೇ ಕುಳಿತಿದ್ದ ನಸ್ರುದ್ದೀನ್ ನನ್ನು ಮಾತನಾಡಿಸಿದ.
“ ನನ್ನ ಮಾತುಗಳು ನಿನಗೆ ಇಷ್ಟ ಆಗಲಿಲ್ಲವಾ ನಸ್ರುದ್ದೀನ್ “
“ ನಿಮ್ಮ ಮಾತು ಚೆನ್ನಾಗಿತ್ತು ಆದರೆ ಭಾಷಣ ಮುಗಿಸುವ ಮೂರು ಸುಂದರ ಜಾಗಗಳನ್ನು ಮಿಸ್ ಮಾಡಿಕೊಂಡು ನೀವು ಬಹಳ ಮುಂದೆ ಹೋಗಿಬಿಟ್ಟಿರಿ “
ನಸ್ರುದ್ದೀನ್ ತನ್ನ ಅಭಿಪ್ರಾಯ ಹೇಳಿದ.

