ನೀವು ನಿದ್ದೆಗೆ ಜಾರುವಾಗ, ಒಂದು ಸಂಗತಿ ಸದಾ ನಿಮ್ಮ ಅರಿವಿನಲ್ಲಿ ಇರಬೇಕು – ಎಲ್ಲವೂ ಕನಸಿನ ಭಾಗ, ಎಲ್ಲವೂ, ಯಾವ ಕರಾರುಗಳಿಗೂ ಒಳಪಡದೇ ಎಲ್ಲವೂ ಕನಸಿನ ಭಾಗ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜುವಾಂಗ್-ತ್ಸೆ ಗೆ ಒಂದು ಕನಸು ಬಿತ್ತು
ಕನಸಲ್ಲಿ ಅವನು
ಬಣ್ಣ ಬಣ್ಣದ ಚಿಟ್ಟೆಯಾಗಿದ್ದ.
ಥಟ್ಟನೆ ಎದ್ದು ನೋಡಿಕೊಂಡಾಗ ಮಾತ್ರ
ಹಾಸಿಗೆಯಲ್ಲಿ
ಅದೇ ಮನುಷ್ಯ ಪ್ರಾಣಿ.
ನಾನು ಚಿಟ್ಟೆಯ ಕನಸು ಕಾಣುತ್ತಿರುವ
ಮನುಷ್ಯ ಪ್ರಾಣಿಯೋ?, ಅಥವಾ
ಮನುಷ್ಯನ ಕನಸು ಕಾಣುತ್ತಿರುವ
ಚಿಟ್ಟೆಯೋ?
ಶುರುವಾಯ್ತು ಜುವಾಂಗ್-ತ್ಸೆ ಗೆ
ಗೊಂದಲ.
ಯಾವುದು ನಿಮ್ಮ ಕೆರೆದ ಕಣ್ಣುಗಳ ಮುಂದೆ ನಡೆಯುತ್ತಿದೆಯೋ ಅದು ಕೂಡ ಕನಸಿನ ಭಾಗ. ಯಾವುದನ್ನು ನೀವು ಕಣ್ಣು ಮುಚ್ಚಿಕೊಂಡು ಕಾಣುತ್ತೀರೋ ಅದೂ ಕನಸಿನ ಭಾಗವೇ. ಬದುಕು ಕನಸುಗಳು ಎನ್ನುವ ಸಂಗತಿಗಳಿಂದ ತುಂಬಿಕೊಂಡಿರುವಂಥವು. ಇಂಥ ತಿಳುವಳಿಕೆಯಲ್ಲಿ, ವಾತಾವರಣದಲ್ಲಿ ನಿದ್ದೆಗೆ ಜಾರಿ; ಎಲ್ಲವೂ, ಯಾವ exception ಇಲ್ಲದೆ, ಎಲ್ಲವೂ ಕನಸಿನ ಭಾಗ ಎನ್ನುವ ತಿಳುವಳಿಕೆ ಸದಾ ನಿಮ್ಮ ನೆನಪಿನಲ್ಲಿರಲಿ. ಯಾವಾಗ ಎಲ್ಲವೂ ಕನಸಿನ ಭಾಗವೋ ಆಗ ಯಾವುದಕ್ಕೂ ಚಿಂತೆ ಮಾಡುವ ಕಾರಣವಿಲ್ಲ.
ಇದುವೇ “ಮಾಯೆ” ಎನ್ನುವ ಪರಿಕಲ್ಪನೆ. – ಜಗತ್ತು ಭ್ರಮೆಗಳಿಂದ ತುಂಬಿಕೊಂಡಿರುವಂಥದು. ಹಾಗೆಂದ ಮಾತ್ರ ಜಗತ್ತು ಎನ್ನುವುದು ಭ್ರಮೆ ಅಂತಲ್ಲ – ಅದಕ್ಕೆ ತನ್ನದೇ ಆದ ವಾಸ್ತವ ಇದೆ – ಆದರೆ ಇದು ನೀವು ನಿಮ್ಮೊಳಗೆ ಆಳವಾಗಿ ನೆಲೆಯಾಗಲು ಸಹಾಯ ಮಾಡುವ ಒಂದು ತಂತ್ರ. ಆಗ ನಿಮ್ಮನ್ನು ಯಾವುದೂ ಡಿಸ್ಟರ್ಬ್ ಮಾಡುವುದಿಲ್ಲ. ಯಾವಾಗ ಎಲ್ಲವೂ ಕನಸಿನ ಭಾಗವೋ ಆಗ ಡಿಸ್ಟರ್ಬ್ ಆಗುವುದು ಪಾಯಿಂಟ್ ಲೆಸ್. ಸುಮ್ಮನೇ ಯೋಚಿಸಿ, ಈ ಕ್ಷಣ ನೀವು ಎಲ್ಲವೂ ಕನಸು ಎಂದು ಥಿಂಕ್ ಮಾಡುತ್ತೀರಾದರೆ, ಈ ಮರಗಳು, ಈ ರಾತ್ರಿ, ರಾತ್ರಿಯ ಸದ್ದು ಎಲ್ಲವೂ ಕನಸಿನ ಭಾಗವಾದರೆ, ತಕ್ಷಣ ನೀವು ಇನ್ನೊಂದು ಜಗತ್ತಿಗೆ ಟ್ರಾನ್ಸಪೋರ್ಟ ಆಗುತ್ತೀರಿ. ಆ ಜಗತ್ತಿನಲ್ಲಿ ನೀವು ಮತ್ತು ನಿಮ್ಮ ಜೊತೆ ನಿಮ್ಮ ಕನಸು, ಆಗ ಚಿಂತೆ ಮಾಡಲು ಯೋಗ್ಯವಾದ ಯಾವ ಸಂಗತಿಯೂ ಇಲ್ಲ.
ಆದ್ದರಿಂದ ಇವತ್ತಿನಿಂದ ಮೊದಲು ಮಾಡಿ, ಈ ದೃಷ್ಟಿಕೋನವನ್ನಿಟ್ಟುಕೊಂಡು ನಿದ್ದೆಗೆ ಇಳಿಯಿರಿ. ಮತ್ತು ಮರುದಿನ ಮುಂಜಾನೆ ಕೂಡ ಎಲ್ಲವೂ ಕನಸಿನ ಭಾಗ ಎನ್ನುವುದು ಮೊದಲು ನಿಮ್ಮ ನೆನಪಿನಲ್ಲಿರಲಿ. ದಿನದಲ್ಲಿ ಹಲವಾರು ಬಾರಿ ಇದು ಪುನರಾವರ್ತನೆಗೊಳ್ಳಲಿ, ಮತ್ತು ಆಗ ಥಟ್ಟನೇ ನೀವು ನಿರಾಳತೆಯನ್ನು ಅನುಭವಿಸುತ್ತೀರಿ.
ಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.”
ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ ಔಷಧಿ ತಯಾರಿಸಿದ. ಪವಿತ್ರ ಗ್ರಂಥದ ಕೆಲವು ಮಂತ್ರಗಳನ್ನು ಉಚ್ಛರಿಸಿ ಆ ಔಷಧಿಗೆ ಶಕ್ತಿ ತುಂಬಿದ.
“ ನಸ್ರುದ್ದೀನ ತೊಗೋ, ಈ ಸಂಜೆ ಊಟಕ್ಕಿಂತ ಮುಂಚೆ ಅಲ್ಲಾಹ್ ನನ್ನು ಸ್ಮರಿಸುತ್ತ ಈ ಔಷಧಿ ಕುಡಿ. ನಿನ್ನ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಮುಂದೆ ಕತ್ತೆಯ ಕನಸುಗಳು ಬೀಳುವುದಿಲ್ಲ” ಹೇಳಿದ ವೈದ್ಯ .
“ ಕ್ಷಮಿಸಿ ವೈದ್ಯರೆ, ಈ ಔಷಧಿ ನಾಳೆ ಕುಡಿಯಲಾ” ಎಂದ ನಸ್ರುದ್ದೀನ.
“ ಯಾಕೆ? ಇವತ್ತಿಗೇನು ಸಮಸ್ಯೆ?” ವೈದ್ಯ ತಿರುಗಿ ಪ್ರಶ್ನೆ ಮಾಡಿದ .
“ ಏನಿಲ್ಲ ಇವತ್ತು ಕನಸಿನಲ್ಲಿ ಕತ್ತೆಯೊಂದಿಗೆ ಫೈನಲ್ ಕುಸ್ತಿ ಪಂದ್ಯ ಇದೆ “ ಉತ್ತರಿಸಿದ ನಸ್ರುದ್ದೀನ.
********************************

