ಹೇಗೆ ಸಂಬಂಧ ಬೆಳೆಸಬೇಕೆನ್ನುವುದು ನಿಮಗೆ ಗೊತ್ತಿದ್ದಾಗ – ವಸ್ತುಗಳೊಂದಿಗೆ ಕೂಡ – ನಿಮ್ಮ ಇಡೀ ಬದುಕು ಬದಲಾಗುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತನಲ್ಲಿ
ಕಳಂಕವಿಲ್ಲ, ದೋಷವಿಲ್ಲ,
ಆತ ಪರಿಪೂರ್ಣ.
ಹೀಗಾಗಿ ಯಾವ ಸವಾಲುಗಳೂ ಇಲ್ಲ
ಇಂಥವನನ್ನು ಪ್ರೀತಿಸುವುದಕ್ಕೆ.
ಸಮಸ್ಯೆ ಎದುರಾಗೋದೇ
ನಮ್ಮ ಜೊತೆ ಇರುವ ಸಂಗಾತಿಗಳನ್ನು
ಅವರ ಎಲ್ಲ ಶಕ್ತಿ, ದೌರ್ಬಲ್ಯ,
ಅಪೂರ್ಣತೆಗಳೊಂದಿಗೆ
ಅವರು ಇದ್ದ ಹಾಗೇ
ಪ್ರೀತಿಸಲು ಮುಂದಾದಾಗ.
ನೆನಪಿರಲಿ,
ನಮಗೆ ಯಾವುದನ್ನು ಪ್ರೀತಿಸುವ ಸಾಮರ್ಥ್ಯವಿರುತ್ತದೆಯೋ
ನಾವು ಅದನ್ನು ಮಾತ್ರ
ತಿಳಿದುಕೊಳ್ಳಬಲ್ಲೆವು ಪೂರ್ತಿಯಾಗಿ.
ಬೇರೆ ಯಾವ ತಿಳುವಳಿಕೆಯೂ ಇಲ್ಲ
ಪ್ರೇಮದ ಹೊರತಾಗಿ.
ಭಗವಂತನ ಸೃಷ್ಟಿಯನ್ನು
ಪ್ರೀತಿಸುವುದ ಕಲಿಸುವತನಕ
ನಾವು ಭಗವಂತನನ್ನು
ಪ್ರೇಮಿಸುವುದೂ ಸಾಧ್ಯವಿಲ್ಲ
ತಿಳಿದುಕೊಳ್ಳುವುದಂತೂ
ಇನ್ನೂ ದೂರದ ಮಾತು.
~ ಶಮ್ಸ್ ತಬ್ರೀಝಿ
ನೀವು ನಿಮ್ಮ ಶೂ ಗಳನ್ನು ಧರಿಸಿದಾಗ, ನೀವು ಆ ಶೂ ಗಳೊಂದಿಗೆ ಫ್ರೆಂಡ್ಲೀಯಾಗಿ ರಿಲೇಟ್ ಆಗಬಹುದು, ಅಥವಾ ಅವುಗಳೊಂದಿಗೆ ಅಸಡ್ಡೆ ಯಿಂದಿರಬಹುದು, ಅಥವಾ ಅವುಗಳೊಂದಿಗೆ ಹಗೆತನವನ್ನು ಬೆಳೆಸಿಕೊಳ್ಳಬಹುದು. ಆದರೆ ನಿಮ್ಮ ಯಾವ ಭಾವದಿಂದಲೂ ಶೂ ಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಇದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ.
ಪ್ರೇಮಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳಬೇಡಿ. ಶೂ ಗಳನ್ನು ಧರಿಸುವಾಗಲೂ ಪ್ರೇಮದಿಂದ ವ್ಯವಹರಿಸಿ. ತುಂಬು ಪ್ರೇಮದ ಆ ಕ್ಷಣಗಳು ಮುಂದೆ ನಿಮಗೆ ಸಹಕಾರಿಯಾಗಲಿವೆ. ವಸ್ತುಗಳೊಂದಿಗೆ ಅವು ಮನುಷ್ಯರೆಂಬಂತೆ ರಿಲೇಟ್ ಆಗಿ. ಆದರೆ ಜನ ಇದಕ್ಕೆ ವಿರುದ್ಧವಾಗಿ ವ್ಯವಹರಿಸುತ್ತಾರೆ. ಅವರು ಮನುಷ್ಯರೊಂದಿಗೆ ಕೂಡ ವಸ್ತುಗಳೆಂಬಂತೆ ರಿಲೇಟ್ ಆಗುತ್ತಾರೆ. ಆಗ ಗಂಡ ವಸ್ತುವಾಗುತ್ತಾನೆ, ಮಗು ವಸ್ತುವಾಗುತ್ತದೆ, ಹೆಂಡತಿ ವಸ್ತುವಾಗುತ್ತಾಳೆ, ತಂದೆ ತಾಯಿ ವಸ್ತುವಾಗುತ್ತಾರೆ.
ಇವರು ಜೀವಂತ ಮನುಷ್ಯರು ಎನ್ನುವುದನ್ನ ಜನ ಮರೆತುಬಿಡುತ್ತಾರೆ. ಅವರು, ಇವರನ್ನ ಬಳಸುತ್ತಾರೆ, ಮ್ಯಾನುಪ್ಯುಲೇಟ್ ಮಾಡುತ್ತಾರೆ. ಆದರೆ ನೀವು ವಸ್ತುಗಳೊಂದಿಗೆ ಕೂಡ ಅವು ಮನುಷ್ಯರೆಂಬಂತೆ ರಿಲೇಟ್ ಆಗಬಹುದು. ಖುರ್ಚಿಯೊಂದಿಗೆ ಕೂಡ ನೀವು ಒಂದು ಬಗೆಯ ಪ್ರೇಮ ಸಂಬಂಧವನ್ನು ಬೆಳೆಸಬಹುದು, ಹಾಗೆಯೇ ಮರಗಳ ಜೊತೆಗೆ, ಹಕ್ಕಿಗಳ ಜೊತೆಗೆ, ಪ್ರಾಣಿಗಳ ಜೊತೆಗೆ ಮತ್ತು ಜನರ ಜೊತೆಗೆ ಕೂಡ.
ಯಾವಾಗ ನಿಮ್ಮ ರಿಲೇಟ್ ಆಗುವ ಕ್ವಾಲಿಟಿ ಬದಲಾಗುತ್ತದೆಯೋ, ಆಗ ಇಡೀ ಅಸ್ತಿತ್ವ ವ್ಯಕ್ತಿತ್ವವನ್ನು ಸಾಧಿಸಿಕೊಳ್ಳುತ್ತದೆ. ನಂತರ ಯಾವುದೂ ಬೇರೆಯಲ್ಲ, ಯಾವುದರ ಕುರಿತೂ ಅಸಡ್ಡೆಯಲ್ಲ – ಆಗ ವಿಶಿಷ್ಟ ಆತ್ಮೀಯತೆ ಹುಟ್ಟಿಕೊಳ್ಳುತ್ತದೆ.

