ಹೀಗಾಗುತ್ತದೆ : ತಮ್ಮ ಸ್ವಭಾವ ಮತ್ತು ವರ್ತನೆಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಮತ್ತು ತಾವು ಯಾರು ಎನ್ನವುದನ್ನ ತಿಳಿದುಕೊಳ್ಳಲು ಉತ್ಸುಕರಾದ ಜನ ಸ್ವ ಕೇಂದ್ರಿಯತೆಯನ್ನು ಬೆಳೆಸಿಕೊಳ್ಳುತ್ತಾರೆ; ಇದು ಬಹಳ ಸ್ವಾಭಾವಿಕ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜೀಸಸ್ ಒಂದು ದ್ವಂದ್ವಾತ್ಮಕ ಅನಿಸಬಲ್ಲ
ಮಾತು ಹೇಳುತ್ತಾನೆ….
ನೀವು ಸಾಕಷ್ಟು ಹೊಂದಿರುವಿರಾದರೆ,
ನಿಮಗೆ ಇನ್ನಷ್ಟು ಹೆಚ್ಚು ಕೊಡಲಾಗುವುದು,
ಮತ್ತು ನಿಮ್ಮ ಬಳಿ ಸಾಕಷ್ಟು ಇಲ್ಲವಾದರೆ
ನಿಮ್ಮ ಹತ್ತಿರ ಇರುವ ಎಲ್ಲವನ್ನೂ
ವಾಪಸ್ ಪಡೆಯಲಾಗುವುದು.
ಇದು ಅಸಂಗತ, ಆ್ಯಂಟಿ ಕಮ್ಯುನಿಸ್ಟ್ ,
ಪ್ರತಿಗಾಮಿ ಅನಿಸಬಹುದು.
ಇದು ಸಾಮಾನ್ಯ ಅರ್ಥಶಾಸ್ತ್ರ ಅಲ್ಲ
ಕೇವಲ ಅವರು,
ಯಾರ ಬಳಿ ಸಾಕಷ್ಟಿದೆಯೋ
ಅವರಿಗೆ ಮಾತ್ರ ಇನ್ನಷ್ಟು ಒದಗಿಸಲಾಗುವುದು.
ಹಾಗೆಂದರೆ ಅವರು,
ಯಾರು ಹೆಚ್ಚು ಹೆಚ್ಚು ಆನಂದ ಹೊಂದುವರೋ,
ಆನಂದ ಇನ್ನಷ್ಟು ಇನ್ನಷ್ಟು ಅವರ ಪಾಲಾಗುವುದು.
ಬದುಕಿನ ಆನಂದವನ್ನು ಯಾರು
ಅನುಭವಿಸಲಾರರೋ
ಅವರಿಂದ ಇರುವ ಆನಂದವನ್ನೂ
ಕಸಿದುಕೊಳ್ಳಲಾಗುವುದು.
ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ
ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು.
ನೀವು ಹೆಚ್ಚು ಸಮಾಧಾನಿ ಆದಂತೆಲ್ಲ
ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು.
ನೀವು ಹೆಚ್ಚು ಹಂಚಿದಂತೆಲ್ಲ
ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಸೇರುವುದು.
ಆದರೆ ನೀವು ಹಂಚದೇ ಇರುವಿರಾದರೆ,
ಪ್ರೇಮಿಸದೇ ಹೋದರೆ,
ನಿಮ್ಮಲ್ಲಿ ಈಗಾಗಲೇ ಇರುವುದರ
ಮಾಹಿತಿ ಕೂಡ ನಿಮಗೆ ಇಲ್ಲವಾಗುವುದು,
ಆಗ ನಿಮ್ಮ ಬಳಿ ಇರುವುದು ಕೂಡ
ನಿರುಪಯುಕ್ತವಾಗುವುದು.
ಇದು ಬದುಕಿನ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ.
~ Hsin Hsin Ming
ಯಾವಾಗ ತುಂಬ ಸ್ವ ಕೇಂದ್ರೀಯತೆಯನ್ನು ಬೆಳೆಸಿಕೊಳ್ಳುತ್ತೀರೋ, ಆಗ ನಿಮ್ಮ ಸ್ವ ಕೇಂದ್ರೀಯತೆಯೇ ನಿಮ್ಮ ಕೊನೆಯ ತಡೆಗೋಡೆಯಾಗುತ್ತದೆ; ಇದನ್ನು ಬಿಟ್ಟು ಬಿಡಲೇಬೇಕು. ಇದರಲ್ಲಿ ಬದಲಾಯಿಸಬೇಕಾದದ್ದು ಏನೂ ಇಲ್ಲ, ಬದಲಾಗಿ ಇದಕ್ಕೆ ಬೇರೆ ಇನ್ನೇನನ್ನೋ ಸೇರಿಸಬೇಕಾಗಿದೆ, ಈ ಸೇರಿಸುವಿಕೆ ಸಮತೋಲನವನ್ನು ಸಾಧ್ಯ ಮಾಡುತ್ತದೆ.
ಬುದ್ಧ, ಧ್ಯಾನ ಮತ್ತು ಕಾರುಣ್ಯ ಎರಡಕ್ಕೂ ಜೊತೆ ಜೊತೆಯಾಗಿಯೇ ಒತ್ತು ನೀಡುತ್ತಿದ್ದ. ಯಾವಾಗ ನೀವು ಧ್ಯಾನದ ಮೂಲಕ ಆನಂದವನ್ನು ಅನುಭವಿಸುತ್ತೀರೋ ಆ ಕೂಡಲೇ ನೀವು ಆ ಆನಂದವನ್ನು ಸುತ್ತಲಿನ ಅಸ್ತಿತ್ವದೊಂದಿಗೆ ಹಂಚಿಕೊಳ್ಳಬೇಕು ಎಂದು ಬುದ್ಧ ಹೇಳುತ್ತಾನೆ. ಆ ಕೂಡಲೇ ನೀವು ಹೇಳಿ, “ನನ್ನ ಆನಂದವೇ ಇಡೀ ಅಸ್ತಿತ್ವವಾಗಲಿ”. ನೀವು ಈ ಆನಂದಕ್ಕೆ ಜೋತು ಬೀಳಬೇಡಿ, ಹಾಗೇನಾದರೂ ಮಾಡಿದಿರಾದರೆ ಅದು ನಿಮ್ಮೊಳಗೆ ಸೂಕ್ಷ್ಮ ಅಹಂ ಹುಟ್ಟು ಹಾಕುತ್ತದೆ. ಹಂಚಿಕೊಳ್ಳಿ, ಕೂಡಲೇ ಅದನ್ನು ಸುತ್ತ ಇರುವವರಿಗೆ ಕೊಟ್ಟು ನೀವು ಖಾಲೀ ಆಗಿಬಿಡಿ. ನಿರಂತರವಾಗಿ ಈ ಆನಂದವನ್ನು ಖಾಲೀ ಮಾಡುತ್ತಲೇ ಇರಿ, ಇದಕ್ಕೆ ಯಾವತ್ತೂ ಜೋತು ಬೀಳಬೇಡಿ. ಈ ಆನಂದಕ್ಕೆ ನೀವೇನಾದರೂ ಹಣಕ್ಕೆ ಜೋತು ಬೀಳುವ ಹಾಗೆ ಆನಂದ ಹೆಚ್ಚಾಗುವುದೆಂದು ಜೋತು ಬೀಳುವಿರಾದರೆ, ನೀವು ನಿಮ್ಮ ಅಹಂ ನ ಗಟ್ಟಿಗೊಳಿಸುತ್ತಲೇ ಹೋಗುತ್ತೀರಿ.
ಮತ್ತು ಈ ಎರಡನೇ ಬಗೆಯ ಅಹಂ ಮಹಾ ಅಪಾಯಕಾರಿ, ಏಕೆಂದರೆ ಇದು ಸೂಕ್ಷ್ಮವಾಗಿರುತ್ತದೆ, ನಿಷ್ಠೆಯಿಂದ ಕೂಡಿರುತ್ತದೆ ಹಾಗಾಗಿ ಮಹಾ ವಿಷಮಯವಾಗಿರುತ್ತದೆ.

