ಹಿಂತಿರುಗುವ ಪ್ರಶ್ನೆಯೇ ಇಲ್ಲ, ಮತ್ತು ಹಿಂತಿರುಗುವ ಅವಶ್ಯಕತೆಯೂ ಇಲ್ಲ. ನೀವು ಮುನ್ನಡೆಯಬೇಕು, ಹಿಂದೆ ಅಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದಾರಿ ಎಲ್ಲಿಗೆ ಕರದೊಯ್ಯಬಹುದು
ಎನ್ನುವ ಆತಂಕದಿಂದ ದೂರವಿರಿ.
ಬದಲಾಗಿ ನೀವು ಇಡಲು ಮುಂದಾಗುತ್ತಿರುವ
ಮೂದಲ ಹೆಜ್ಜೆಯ ಮೇಲೆ ಮಾತ್ರ
ಧ್ಯಾನವನ್ನು ಕೇಂದ್ರೀಕರಿಸಿ.
ಬದುಕಿನ ಪ್ರಯಾಣದಲ್ಲಿ
ಮೊದಲ ಹೆಜ್ಜೆ ಮಾತ್ರ ಅತ್ಯಂತ ಕಠಿಣ ಭಾಗ
ಅದನ್ನು ಸರಿಯಾಗಿ ನಿಭಾಯಿಸುವುದೊಂದೆ
ನಿಮ್ಮ ಮುಂದಿರುವ ಜವಾಬ್ದಾರಿ.
ಈ ಹೆಜ್ಜೆ ಇಟ್ಟಾದ ಮೇಲೆ
ಎಲ್ಲವನ್ನೂ
ಪ್ರಯಾಣದ ಸಹಜತೆಗೆ ಬಿಟ್ಟು ಬಿಡಿ
ಬಾಕಿ ಎಲ್ಲ ನಿಮ್ಮನ್ನು ಹಿಂಬಾಲಿಸುತ್ತದೆ.
ಹರಿವಿನ ಜೊತೆ ಹರಿಯಬೇಡಿ
ನೀವೇ ಹರಿವಾಗಿ.
~ ಶಮ್ಸ್
ನೀವು ಮತ್ತೆ ಮತ್ತೆ ಹಿಂತಿರುಗುವ ಬಗ್ಗೆ ಆಲೋಚನೆ ಮಾಡುತ್ತೀರಿ. ಹಿಂತಿರುಗುವ ಪ್ರಶ್ನೆಯೇ ಇಲ್ಲ, ಮತ್ತು ಹಿಂತಿರುಗುವ ಅವಶ್ಯಕತೆಯೂ ಇಲ್ಲ. ನೀವು ಮುನ್ನಡೆಯಬೇಕು, ಹಿಂದೆ ಅಲ್ಲ. ನೀವೇ ನಿಮ್ಮ ಬೆಳಕನ್ನು ಕಂಡುಕೊಳ್ಳಬೇಕು; ಮತ್ತು ಇದು ಸಾಧ್ಯ ಕೂಡ. ಹಿಂತಿರುಗುವ ಯಾವ ಸಾಧ್ಯತೆಯೂ ಇಲ್ಲ, ಹಾಗೇನಾದರೂ ಇದ್ದರೂ, ಆ ಹಳೆಯ ಅನುಭವಗಳು ನಿಮಗೆ ಈಗ ತೃಪ್ತಿಯನ್ನು ತಂದುಕೊಡಲಾರವು. ಆ ಅನುಭವಗಳು ಕೇವಲ ಪುನರಾವರ್ತನೆ, ಇವು ನಿಮಗೆ ಮೊದಲಿನ ಥ್ರಿಲ್ ಕೊಡಲಾರವು. ಮೊದಲು ನಿಮಗೆ ಸಿಕ್ಕ ಥ್ರಿಲ್ ಅವುಗಳ ಹೊಸತನದ ಕಾರಣವಾಗಿ ಸಾಧ್ಯವಾದದ್ದು. ಈಗ ನಿಮಗೆ ಅದೇ ಹಳೆಯ ಅನುಭವ ಗಳು ಆನಂದವನ್ನು ನೀಡಲಾರವು. ಆಗ ನೀವು ಹೇಳುತ್ತೀರಿ, “ ಈ ಅನುಭವ ನನಗೆ ಗೊತ್ತು, ಇದಕ್ಕಿಂತ ಹೆಚ್ಚಿನದೇನಿದೆ? ಇದರಲ್ಲಿ ಹೊಸದೇನಿದೆ?” ಮತ್ತು ಈ ಅನುಭವಗಳು ರಿಪೀಟ್ ಆಗತೊಡಗಿದಂತೆ ನೀವು ಬೋರ್ ಆಗುತ್ತೀರಿ.
ಜನ ಮುಂದೆ ಸಾಗಬೇಕು, ಮತ್ತು ಪ್ರತಿ ದಿನ ನಿಮಗಾಗಿ ಹೊಸ ಅನುಭವಗಳು ಕಾಯುತ್ತಿವೆ. ನಮ್ಮ ಸುತ್ತಲಿನ ಅಸ್ತಿತ್ವ ಎಷ್ಟು ನಾವಿನ್ಯತೆಯಿಂದ ಕೂಡಿದೆಯೆಂದರೆ, ನಿನಗೆ ದೊರೆಯುವ ಹೊಳಹುಗಳು ಯಾವತ್ತೂ ರಿಪೀಟ್ ಆಗುವುದಿಲ್ಲ. ಈ ಹೊಳಹುಗಳುಗೆ ಎಷ್ಟು ಲಕ್ಷ ಆಯಾಮಗಳುವೆಯೆಂದರೆ ಪ್ರತಿದಿನ ನಿಮಗೆ ಹೊಸ ದರ್ಶನ ಸಾಧ್ಯವಾಗುತ್ತದೆ – ಹಾಗಾಗಿ ಹಳೆಯದರ ಬಗ್ಗೆ ಯಾಕೆ ಚಿಂತಿಸಬೇಕು? ಇದರ ಯಾವ ಅವಶ್ಯಕತೆಯೂ ಇಲ್ಲ.
ಹಣ್ಣು ಹಣ್ಣು ಮುದುಕ, 99 ವರ್ಷ ವಯಸ್ಸಿನ ವಯೋವೃದ್ಧ ನಸ್ರುದ್ದೀನ್ ನನ್ನು ಪತ್ರಿಕೆಯ ಯುವ ವರದಿಗಾರನೊಬ್ಬ ಸಂದರ್ಶನ ಮಾಡಿ, ನಸ್ರುದ್ದೀನ್ ನ ಬದುಕು, ಸಾಧನೆಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡ. ಸಂದರ್ಶನ ಮುಗಿಸಿ ಬಿಳ್ಕೊಡುವಾಗ ವರದಿಗಾರ, ನಸ್ರುದ್ದೀನ್ ಗೆ ಶುಭಾಶಯ ಹೇಳಿದ.
“ ಮುಂದಿನ ವರ್ಷ ನಿನಗೆ ನೂರು ತುಂಬುತ್ತದೆ ದೇವರು ಮನಸ್ಸು ಮಾಡಿದರೆ ಮತ್ತೆ ನಿನ್ನ ಸಂದರ್ಶನ ಮಾಡಲು ಬರುತ್ತೇನೆ “
“ ದೇವರು ದೊಡ್ಡವನಿದ್ದಾನೆ ಯೋಚಿಸ ಬೇಡ, ಖಂಡಿತ ನಿನಗೇನೂ ಆಗುವುದಿಲ್ಲ. ಮುಂದಿನ ವರ್ಷ ನನ್ನ ನೂರನೇ ಹುಟ್ಟು ಹಬ್ಬಕ್ಕೆ ನೀನು ಬಂದೇ ಬರುತ್ತೀಯ “
ನಸ್ರುದ್ದೀನ್ ನಗುತ್ತ ಉತ್ತರಿಸಿದ.

