ಪುನರಾವರ್ತನೆ ಎನ್ನುವುದು ಇಲ್ಲವೇ ಇಲ್ಲ. ಅಸ್ತಿತ್ವ ಯಾವತ್ತೂ ತಾಜಾ, ಸಂಪೂರ್ಣವಾಗಿ ಫ್ರೆಶ್ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬುದ್ಧಿ ಮತ್ತು ಪ್ರೇಮದ ಸಂಯೋಜನೆ
ಬೇರೆ ಬೇರೆ ಧಾತುಗಳಿಂದ .
ಬುದ್ಧಿ ಜನರ ನಡುವೆ ಗಂಟು ಹಾಕುತ್ತದೆ
ಆದರೆ ಯಾವ ಅಪಾಯಕ್ಕೂ ತೆರೆದುಕೊಳ್ಳದಂತೆ.
ಆದರೆ ಪ್ರೇಮ ಹಾಗಲ್ಲ
ಅದು ಬಿಚ್ಚುತ್ತದೆ ಸಂಬಂಧಗಳಲ್ಲಿನ ಸಿಕ್ಕುಗಳನ್ನ
ಎಲ್ಲ ಅಪಾಯಗಳನ್ನೂ ಆಹ್ವಾನಿಸುತ್ತ.
ಬುದ್ದಿಯದು
ಯಾವಾಗಲೂ ಜಾಗರೂಕತೆಯ ಸ್ವಭಾವ
ಸಲಹೆ ನೀಡುವ ಹುಕಿ
ಉನ್ಮತ್ತ ಆನಂದದ ಬಗ್ಗೆ ಸದಾ ಹಿಂಜರಿಕೆ.
ಆದರೆ ಪ್ರೇಮಕ್ಕೆ ಅಪಾರ ಉತ್ಸಾಹ
ಅಪಾಯಗಳಿಗೆ ಎದೆಯೊಡ್ಡುವ ಹುರುಪು
ಬೆಂಕಿಯಲ್ಲಿ ಹಾರಿ ಬಂಗಾರವಾಗುವ ಉತ್ಕಟತೆ.
ಬುದ್ಧಿಯನ್ನು ಒಡೆಯುವುದು ಕಠಿಣ
ಆದರೆ ಪ್ರೇಮ ನಿರಾಯಾಸವಾಗಿ
ತನ್ನನ್ನು ತಾನು ಒಡೆದುಕೊಂಡು
ಅವಶೇಷವಾಗಬಲ್ಲದು.
ನಿಮಗೆ ಗೊತ್ತಿದೆ
ನಿಧಿ ಅಡಗಿರುವುದೆ ಅವಶೇಷಗಳಡಿಯಲ್ಲಿ
ಒಡೆದ ಹೃದಯ
ತನ್ನೊಳಗೆ ಬಚ್ಚಿಟ್ಟುಕೊಂಡಿದೆ
ಅಪಾರ ಸಂಪತ್ತು.
~ ಶಮ್ಸ್
ಪ್ರತಿ ದಿನವೂ ವಿಭಿನ್ನ, ಮತ್ತು ಕೆಲವೊಮ್ಮೆ ನಿಮಗೆ ಒಂದು ದಿನ ಮತ್ತು ಇನ್ನೊಂದರ ನಡುವೆ ವ್ಯತ್ಯಾಸ ಕಾಣಿಸುತ್ತಿಲ್ಲವಾದರೆ, ನಿಮ್ಮ ಗಮನಿಸುವಿಕೆ ಸರಿಯಾಗಿಲ್ಲ. ಯಾವತ್ತೂ ಏನೂ ಪುನರಾವರ್ತನೆಗೊಳ್ಳುವುದಿಲ್ಲ. ಪುನರಾವರ್ತನೆ ಎನ್ನುವುದು ಇಲ್ಲವೇ ಇಲ್ಲ. ಅಸ್ತಿತ್ವ ಯಾವತ್ತೂ ತಾಜಾ, ಸಂಪೂರ್ಣವಾಗಿ ಫ್ರೆಶ್. ಆದರೆ ಭೂತದ ಕಣ್ಣಿನಿಂದ ನೋಡಿದಾಗ, ಸಂಗ್ರಹಿತ ಆಲೋಚನೆಗಳ ಹಿನ್ನೆಲೆಯಲ್ಲಿ ನೋಡಿದಾಗ ನಿಮಗೆ ಪುನರಾವರ್ತನೆ ಎನ್ನುವುದು ಸ್ವಾಭಾವಿಕ ಅನಿಸುತ್ತದೆ. ಆದ್ದರಿಂದಲೇ ನಾನು ಹೇಳುವುದು ನಿಮ್ಮ ಮೈಂಡ್ ನಿಮ್ಮ ಬೋರಡಂ ನ ಮೂಲ ಸ್ರೋತ. ಏಕೆಂದರೆ ನಿಮ್ಮ ಮೈಂಡ್ ಯಾವತ್ತೂ ಬದುಕಿನ ತಾಜಾತನವನ್ನು ನಿಮ್ಮೆದುರು ಅನಾವರಣಗೊಳಿಸುವುದಿಲ್ಲ. ಅದು ಒಂದು ಸಿದ್ಧ ಮಾದರಿಯಲ್ಲಿ ಬದುಕನ್ನು ಗಮನಿಸುತ್ತ ಹೋಗುತ್ತದೆ.
ಬದುಕು ಪುನರಾವರ್ತನೆಗೊಳ್ಳುತ್ತಿದೆ ಎಂದು ನಿಮಗೆ ಅನಿಸುತ್ತಿದ್ದರೆ, ಅದು ನಿಜವಾದ ಬದುಕಲ್ಲ, ಅದು ನಿಮ್ಮ ಮೈಂಡ್ ನ ಕಪಟ. ಮೈಂಡ್ ಎಲ್ಲವನ್ನೂ ನಿರಸಗೊಳಿಸುತ್ತದೆ, ಒಂದೇ ಆಯಾಮಕ್ಕೆ ಸೀಮಿತಗೊಳಿಸುತ್ತದೆ. ಆದರೆ ಬದುಕಿಗೆ ಮೂರು ಆಯಾಮಗಳು ; ಬದುಕು ಬಣ್ಣಗಳಿಂದ ಕೂಡಿದ್ದು.
ಮೈಂಡ್ ಕೆಲಸ ಮಾಡುವುದು ಕೇವಲ ಕಪ್ಪು ಬಿಳುಪುನಲ್ಲಿ ಆದರೆ ಬದುಕು ಕಾಮನಬಿಲ್ಲಿನ ಹಾಗೆ. ಕಪ್ಪು ಮತ್ತು ಬಿಳುಪಿನ ನಡುವೆ ಬೆಳಕು ಮತ್ತು ಬಣ್ಣಗಳ ಲಕ್ಷಾಂತರ ಸೂಕ್ಷ್ಮ ವ್ಯತ್ಯಾಸಗಳಿವೆ. ಬದುಕು yes ಮತ್ತು no ಗಳ ನಡುವೆ ವಿಭಜಿತವಾಗಿಲ್ಲ. ಆದರೆ ಮೈಂಡ್ ಹಾಗೆ ವಿಭಜಿತವಾಗಿದೆ. ಮೈಂಡ್ ಪೂರ್ಣ ಅರಿಸ್ಟೊಟಲಿಯನ್ ಆದರೆ ಬದುಕು ಹಾಗಲ್ಲ.
ಒಂದು ದಿನ ಶಿಷ್ಯ ಮೊಂಡೈ, ಮಾಸ್ಟರ್ ಹೈಕೂಯಿನ್ ನ ಪ್ರಶ್ನೆ ಮಾಡಿದ.
ಮಾಸ್ಟರ್, ಓಫುರೋ (ವಿಶೇಷ ಜಪಾನೀ ಸ್ನಾನ ) ಗಾಗಿ ಪ್ರತಿದಿನ ನಾನು ಒಂದು ಗಂಟೆ ವ್ಯಯ ಮಾಡುತ್ತೇನೆ ಆದರೂ ನನಗೆ ಸಮಾಧಾನವಿಲ್ಲ, ಸಿಕ್ಕಾಪಟ್ಟೆ ಬೆವರು ಬರುತ್ತದೆ, ಒಂದು ವಿಶೇಷ ಹೊಳಹೂ ಹೊಳೆಯುವುದಿಲ್ಲ. ಈ ಓಫುರೋ ಝೆನ್ ಸಾಧಕನಿಗೆ ಅವಶ್ಯಕವೆ?
“ ಪ್ರಾಚೀನ ಗ್ರೀಸ್ ನಲ್ಲಿ ಆರ್ಕಿಮಿಡಿಸ್ ಗೆ ಸ್ನಾನ ಮಾಡುವಾಗಲೇ ಜ್ಞಾನೋದಯವಾಗಿತ್ತು, ಬಹುಶಃ ನಿನ್ನ ನೀರಿನ ಬಿಸಿ ಜಾಸ್ತಿ ಇರಬೇಕು. ಸರಿ ಮಾಡಿಕೋ “ ಮಾಸ್ಟರ್ ಹೈಕೂಯಿನ್ ಉತ್ತರಿಸಿದ.
ಮರುದಿನ ಶಿಷ್ಯ ಮೊಂಡೈ ಮತ್ತೆ ಮಾಸ್ಟರ್ ಹೈಕೂಯಿನ್ ನನ್ನು ಈ ಕುರಿತು ಪ್ರಶ್ನೆ ಮಾಡಿದ, “ ಮಾಸ್ಟರ್, ಇವತ್ತು ನೀರಿನ ಬಿಸಿ ಕಡಿಮೆ ಮಾಡಿಕೊಂಡಿದ್ದೆ ಆದರೂ ಪ್ರಯೋಜನವಾಗಲಿಲ್ಲ ಇವತ್ತೂ ಯಾವ ವಿಶೇಷ ಹೊಳಹು ನನಗೆ ಸಿಗಲಿಲ್ಲ. ದಯವಿಟ್ಟು ಇನ್ನೇನಾದರೂ ಬದಲಾಯಿಸಬೇಕೆ ಹೇಳಿ “
“ ಓಹ್ ಹೌದಾ ಹಾಗಾದರೆ ನೀನು ಸ್ನಾನ ಮಾಡುವವನನ್ನು ಬದಲಾಯಿಸಿ ನೋಡು “ ಮಾಸ್ಟರ್ ಹೈಕೂಯಿನ್ ಉತ್ತರಿಸಿದ.

