ಮೃದು ಯಾವತ್ತೂ ಕಠಿಣವನ್ನು ಮೀರಿ ನಿಲ್ಲುತ್ತದೆ. ಮೃದು ಜೀವಂತವಾದರೆ, ಕಠಿಣ ಮೃತವಾದದ್ದು. ಮೃದು ಹೂವಿನಂತಾದರೆ, ಕಠಿಣ ಕಲ್ಲಿನಂತೆ. ಕಠಿಣ ಶಕ್ತಿಶಾಲಿಯಂತೆ ಕಾಣುತ್ತದೆಯಾದರೂ ಅದರಲ್ಲಿ ಜೀವಶಕ್ತಿಯಿಲ್ಲ. ಮೃದು ದುರ್ಬಲ, ನಾಜೂಕಿನಂತೆ ಅನಿಸುತ್ತದೆಯಾದರೂ ಅದು ಜೀವಂತಿಕೆಯಿಂದ ತುಂಬಿ ತುಳುಕುತ್ತಿದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮನುಷ್ಯ ಹುಟ್ಟಾ ಮೃದು
ಸತ್ತಾಗ ಮಾತ್ರ, ಬಿರುಸು, ಗಡಸು.
ಗಿಡ,ಮರ,ಹೂ,ಬಳ್ಳಿಗಳೂ ಹಾಗೇ, ಕೋಮಲ, ನಮ್ರ
ಬಾಡಿದಾಗ, ಬರಡಾದಾಗ ಮಾತ್ರ, ಒರಟು, ಪೆಡಸು.
ಅಂತೆಯೇ, ಸೆಟೆದವರು, ಬಾಗದವರು
ಸಾವಿನ ಹರಿಕಾರರು,
ನಮ್ರರು, ಒಗ್ಗಿಕೊಳ್ಳುವವರು
ಬದುಕಿನ ವಾರಸುದಾರರು.
ಸೆಟೆದವು, ಒಣಗಿದವನ್ನ ಮುರಿಯುವುದು ಸುಲಭ
ಬಗ್ಗುವವು, ಹಸಿರಾದವು ಬಾಳುತ್ತವೆ ಬಹುಕಾಲ.
~ ಲಾವೋತ್ಸೇ
ಯಾವುದೆಲ್ಲ ಜೀವಂತವಾಗಿದೆಯೋ ಅದೆಲ್ಲವೂ ನಾಜೂಕಾಗಿದೆ, ಮತ್ತು ಬದುಕಿನ ಕ್ವಾಲಿಟಿ ಹೆಚ್ಚಾದಂತೆಲ್ಲ ಅದು ನಾಜೂಕಾಗುತ್ತ ಹೋಗುತ್ತದೆ. ಅಥವಾ ನೀವು ಬದುಕಿನ ಆಳವನ್ನು ಪ್ರವೇಶ ಮಾಡಿದಂತೆಲ್ಲ ಮೃದುವಾಗುತ್ತ ಹೋಗುತ್ತೀರಿ. ಅತ್ಯಂತ ಒಳ ತಿರುಳು ಮಾತ್ರ ಸಂಪೂರ್ಣವಾಗಿ ಮೃದುವಾಗಿದೆ.
ಇದು ಲಾವೋತ್ಸೆಯ ತಾವೋ ತಿಳುವಳಿಕೆಯ ಸಾರ. ಮೃದುವಾಗಿರಿ, ನೀರಿನಂತಾಗಿರಿ; ಬಂಡೆಗಲ್ಲಿನಂತಾಗಬೇಡಿ. ನೀರು ಬಂಡೆಯ ಮೇಲೆ ಧುಮುಕುತ್ತದೆ. ಕೊನೆಗೂ ಗೆಲ್ಲುವುದು ನೀರು ಎನ್ನುವುದನ್ನು ಕಲ್ಪಿಸಿಕೊಳ್ಳುವುದು ಯಾರಿಗಾದರೂ ಅಸಾಧ್ಯವೇ. ಬಂಡೆಗಲ್ಲು ಎಷ್ಟು ಶಕ್ತಿಶಾಲಿ, ಎಷ್ಟು ಆಕ್ರಮಣಕಾರಿ ಅನಿಸುತ್ತದೆ ಮತ್ತು ನೀರು ತೀರ ನಿಷ್ಕ್ರೀಯ. ನೀರು ಬಂಡೆಯ ಮೇಲೆ ಗೆಲುವು ಸಾಧಿಸುವುದು ಹೇಗೆ ಸಾಧ್ಯ. ಮೃದು, ಕಾಠಿಣ್ಯವನ್ನು ಭೇದಿಸುತ್ತ ಹೋದಂತೆಲ್ಲ ಕೊನೆಗೆ ಬಂಡೆ ಮಾಯವಾಗಿ ಹೋಗುತ್ತದೆ.
ಆದ್ದರಿಂದ ಈ ತಿಳುವಳಿಕೆ ಯಾವತ್ತೂ ನಿಮ್ಮ ನೆನಪಿನಲ್ಲಿರಲಿ. ನೀವು ಕಠಿಣರಾಗುತ್ತಿದ್ದೀರಿ ಎಂದು ನಿಮಗೆ ಅನಿಸಿದ ಕೂಡಲೇ ಯಾವ ಪರಿಣಾಮಗಳಿಗೂ ಅಂಜದೇ, ರಿಲ್ಯಾಕ್ಸ್ ಆಗಿ, ಮೃದು ಆಗಿ. ನಿಮಗೆ ಸೋಲಾದರೂ, ಕ್ಷಣಿಕ ಹಾನಿಯಾದರೂ, ಚಿಂತೆ ಮಾಡಬೇಡಿ ಮೃದುವಾಗುವುದನ್ನ ಮುಂದುವರೆಸಿ. ಕೊನೆಯಲ್ಲಿ ಗೆಲುವು ನಿಮ್ಮದೇ ಆಗಲಿದೆ.
ಮಾಸ್ಟರ್ ಬಾಂಕಿಯ ಪ್ರವಚನಗಳಿಗೆ ಬರೀ ಅವನ ಶಿಷ್ಯರಷ್ಟೇ ಅಲ್ಲ ಸುತ್ತಮುತ್ತಲಿನ ಊರುಗಳ ಎಲ್ಲಾ ಸ್ತರದ ಜನರೂ ಸೇರುತ್ತಿದ್ದರು.
ಬಾಂಕಿ, ತನ್ನ ಪ್ರವಚನದಲ್ಲಿ ಸಂಕೀರ್ಣ ಬೌದ್ಧ ಸೂತ್ರಗಳನ್ನು ಬಳಸುತ್ತಿರಲಿಲ್ಲ ಬದಲಾಗಿ ಸರಳವಾಗಿ ಝೆನ್ ಬಳಕೆಯನ್ನು ನೇರವಾಗಿ ಸಾಮಾನ್ಯ ಜನರಿಗೆ ಮುಟ್ಟುವಂತೆ ವಿವರಿಸುತ್ತಿದ್ದ.
ಅವನ ಸಭೆಗಳಿಗೆ ಸೇರುತ್ತಿದ್ದ ಅಪಾರ ಜನಸಂಖ್ಯೆಯನ್ನು ಕಂಡು ಆ ಊರಿನ ದೇವಸ್ಥಾನದ ಮುಖ್ಯ ಅರ್ಚಕನಿಗೆ ತಂಬಾ ಸಿಟ್ಟು ಬರುತ್ತಿತ್ತು. ಅವನ ಹತ್ತಿರ ಬರುತ್ತಿದ್ದ ಸುಮಾರು ಜನ ಈಗ ಬಾಂಕಿಯ ಪ್ರವಚನ ಕೇಳಲು ಹೋಗುತ್ತಿದ್ದರು.
ಒಂದು ದಿನ ಅರ್ಚಕ, ಬಾಂಕಿಯ ಸಭೆಗೆ ಬಂದು ಅವನನ್ನು ವಾಗ್ವಾದಕ್ಕೆ ಆಹ್ವಾನಿಸಿದ,
“ ಬಾಂಕಿ, ಇಲ್ಲಿ ಕುಳಿತಿರುವವರಿಗೆಲ್ಲ ನೀನು ಮೋಡಿ ಮಾಡಿದ್ದೀ. ಆದ್ದರಿಂದ ಅವರು ನಿನ್ನ ಮಾತು ಕೇಳುತ್ತಾರೆ. ನಿನ್ನ ಮಾತುಗಳಿಗೆ ಅಂಥ ಶಕ್ತಿ ಇದ್ದರೆ, ನಾನು ನಿನ್ನ ಮಾತು ಕೇಳುವಂತೆ ಮಾಡು ನೋಡೋಣ “
ಬಾಂಕಿ ಪ್ರೀತಿಯಿಂದ ಅರ್ಚಕನನ್ನು ಮಾತಾಡಿಸಿದ.
ಬಾಂಕಿ : ಗುರುಗಳೇ, ಇಲ್ಲಿ ಮೇಲೆ ಬನ್ನಿ ಸಾಧ್ಯವಾದರೆ ನಿಮ್ಮ ಪಂಥವನ್ನು ಸ್ವೀಕರಿಸುತ್ತೇನೆ
ಅರ್ಚಕ ಎಲ್ಲ ಜನರನ್ನು ನೂಕಿಕೊಂಡು ವೇದಿಕೆಯ ಹತ್ತಿರ ಹೋದ.
ಬಾಂಕಿ : ಇಲ್ಲಿ ಮೇಲೆ ಬನ್ನಿ , ನನ್ನ ಎಡಕ್ಕೆ ಕುಳಿತುಕೊಳ್ಳಿ.
ಅರ್ಚಕ ವೇದಿಕೆಯನ್ನೇರಿ ಎಡ ಭಾಗದಲ್ಲಿ ಕುಳಿತುಕೊಂಡ.
ಬಾಂಕಿ : ಓಹ್ ! ಅಲ್ಲಿ ಬೇಡ, ನನ್ನ ಬಲಕ್ಕೆ ಕುಳಿತುಕೊಳ್ಳಿ ಮಾತಿಗೆ ಅನುಕೂಲವಾಗುವುದು.
ಅರ್ಚಕ ಎದ್ದು ಬಾಂಕಿಯ ಬಲಕ್ಕೆ ಹೋಗಿ ಕುಳಿತುಕೊಂಡ.
ಬಾಂಕಿ : ನೋಡಿ, ನೀವು ತುಂಬ ಒಳ್ಳೆಯ ಮನುಷ್ಯರ ಹಾಗೆ ಕಾಣುತ್ತೀರಿ. ನನ್ನ ಎಲ್ಲ ಮಾತುಗಳನ್ನು ನಮ್ರತೆಯಿಂದ ಪಾಲಿಸಿದಿರಿ. ಈಗ ಹೋಗಿ ಕೆಳಗೆ ಕುಳಿತು ಪ್ರವಚನ ಕೇಳಿ.

